ಗುರುವಾರ , ಜೂನ್ 24, 2021
23 °C

‘ಅನೈತಿಕ ಪೊಲೀಸುಗಿರಿ ’ ಕಾಲದ ಯುವ ಮತದಾರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಶಶಿಕಲಾ (ನಿಜ ಹೆಸರಲ್ಲ) ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿ. ಮೊದಲ ಬಾರಿಗೆ ಮತ ಚಲಾಯಿಸುವ ಉತ್ಸಾಹ ಈಕೆ­ಯದ್ದು. ಆಧಾರ್ ಕಾರ್ಡ್ ಬಂದಿದೆ, ಇನ್ನೇನು ಮತದಾರರ ಗುರುತಿನ ಚೀಟಿಯೂ ಸಿಗಲಿದೆ.ಫೇಸ್‌ಬುಕ್‌ನಲ್ಲಿ ತನಗಿಷ್ಟ­ವಾದುದನ್ನೆಲ್ಲಾ ಸ್ಟೇಟಸ್ ಮೆಸೇಜ್ ಆಗಿ ಪರಿವರ್ತಿಸುತ್ತಿದ್ದ ಈ ಯುವತಿ ಇತ್ತೀಚೆಗೆ ಖಾತೆಯನ್ನೇ ನಿಷ್ಕ್ರಿಯಗೊಳಿಸ­ಬೇಕಾಯಿತು. ಇದಕ್ಕೆ ಕಾರಣವಾದದ್ದು ಈಕೆಯ ಗೆಳೆಯರ ಪಟ್ಟಿಯಲ್ಲಿದ್ದ ಕೆಲವು ಮುಸ್ಲಿಂ ಯುವಕರ ಹೆಸರುಗಳು ಹಾಗೂ ಅವರಲ್ಲಿ ಕೆಲವರು ಶಶಿಕಲಾಗೆ ಟ್ಯಾಗ್ ಮಾಡಿದ ಕೆಲವು ‘ರಾಜಕೀಯ ಸ್ಟೇಟಸ್’ಗಳು.ಅರ್ಜುನ್ ಪ್ರಕಾಶ್ (ನಿಜ ಹೆಸರಲ್ಲ) ವೈದ್ಯಕೀಯ ವಿದ್ಯಾರ್ಥಿ. ಒಂದು ದಿನ ಕಾಲೇಜಿನಿಂದ ಹಿಂದಿರುಗುತ್ತಿದ್ದಾಗ ಬೈಕ್ ತಡೆದ ಕೆಲವರು ‘ಮುಸ್ಲಿಂ ಹುಡುಗಿಯರ ಜೊತೆ ಮಾತನಾಡಿ­ದರೆ ಕೈಕಾಲು ಮುರಿಯುತ್ತೇವೆ’ ಎಂದು ಬೆದರಿಕೆ ಹಾಕಿದರು. ಅರ್ಜುನ್ ಚರ್ಚೆಗಿಳಿಯದೆ ಕಪಾಳಕ್ಕೆ ಎರಡೇಟು ತಿಂದು ಸುಮ್ಮನಾದುದರಿಂದ ಪ್ರಕರಣ ಕೊನೆಗೊಂಡಿತು. ಅಂದಿನಿಂದ ಅರ್ಜುನ್ ಬೈಕ್‌ನಲ್ಲಿ ಓಡಾಡುತ್ತಿಲ್ಲ. ಕಾಲೇಜು ಬಸ್ಸಿನಲ್ಲಷ್ಟೇ ಓಡಾಟ. ಪೊಲೀಸರಿಗೇಕೆ ದೂರು ಕೊಡಲಿಲ್ಲ ಎಂಬ ಪ್ರಶ್ನೆಗೆ ಈ ಯುವಕನ ಉತ್ತರ  ‘ವೈದ್ಯಕೀಯ ಪದವಿ ಮುಗಿಸುವುದು ನನ್ನ ಮುಖ್ಯ ಆದ್ಯತೆ’ ಪರಿಚಿತರ ಮೂಲಕ ವಿವಿಧ ಕಾಲೇಜು ವಿದ್ಯಾರ್ಥಿಗಳ ಬಳಿ ಮಾತನಾಡುತ್ತಾ ಹೋದರೆ ಇಂಥ ಅನೇಕ ಪ್ರಕರಣಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ.ಶಶಿಕಲಾ ತನ್ನ ಫೇಸ್‌ಬುಕ್ ಖಾತೆಯನ್ನು ನಿಷ್ಕ್ರಿಯಗೊಳಿಸುವ ತೀರ್ಮಾನ ಕೈಗೊಂಡ­ದ್ದರ ಹಿಂದೆಯೂ ಓದು ಮುಗಿಸುವ ಆದ್ಯತೆ ಇದೆ. ಪ್ರತಿಭಟಿಸಲು ಹೊರಟರೆ ಸಮಸ್ಯೆ ಮತ್ತಷ್ಟು ಸಂಕೀರ್ಣ­ವಾಗುತ್ತದೆ ಎಂದು ಮನೆಯವರೇ ಸಲಹೆ ಕೊಟ್ಟರಂತೆ. ಇದೊಂದು ವಿವಾದವಾಗಿಬಿಟ್ಟರೆ ಕಾಲೇಜಿನಲ್ಲಿಯೂ ತೊಂದರೆಗಳು ಎದುರಾಗಬಹುದು ಎಂದು ಆಕೆ ಭಾವಿಸಿದ್ದು ಮಂಗಳೂರಿನ ಇಂದಿನ ಸ್ಥಿತಿಗೆ ಹಿಡಿದ ಕನ್ನಡಿ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಳ್ಯ ಕ್ಷೇತ್ರವೊಂದನ್ನು ಹೊರತು ಪಡಿಸಿದರೆ ಉಳಿದೆಲ್ಲಾ ಏಳು ಕ್ಷೇತ್ರಗಳಲ್ಲಿಯೂ ಬಿಜೆಪಿಯ ಅಭ್ಯರ್ಥಿಗಳು ಸೋತಿದ್ದನ್ನು ತಥಾಕಥಿತ ಹಿಂದೂ ಸಂಘಟನೆಗಳ ‘ಅನೈತಿಕ ಪೊಲೀಸುಗಿರಿ’ಯ ಹಿನ್ನೆಲೆಯಲ್ಲಿ ಅರ್ಥೈಸಲಾಗುತ್ತಿತ್ತು.ಇದೊಂದು ನಿತ್ಯದ ಕಿರಿಕಿರಿಯಾಗಿ ಪರಿಣ­ಮಿಸಿದ್ದರಿಂದ ಜನರು ಬಿಜೆಪಿಯನ್ನು ನಿರಾಕರಿಸಿ­ದ್ದಾ­ರೆಂದು ವಿಶ್ಲೇಷಿ­ಸಲಾಗಿತ್ತು. ಇದೇ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಸಚಿವರು ‘ಅನೈತಿಕ ಪೊಲೀಸುಗಿರಿ’ ಯನ್ನು ಮಟ್ಟ ಹಾಕುವ ಮಾತನಾಡಿದ್ದರು. ಇದೆಲ್ಲಾ ಆಗಿ ಒಂದು ವರ್ಷ ಕಳೆಯುತ್ತಾ ಬಂದಿದ್ದರೂ ಪರಿಸ್ಥಿತಿಯಲ್ಲಿ ಬದಲಾವಣೆ­ಯೇನೂ ಬಂದಿಲ್ಲ.ದಕ್ಷಿಣ ಕನ್ನಡದ ಅನೈತಿಕ ಪೊಲೀಸುಗಿರಿಯ ಪ್ರಮಾಣವನ್ನು ನೋಡಿದರೆ ಇಲ್ಲಿ ಇದೊಂದು ಚುನಾವಣಾ ವಿಷಯ ಎಂದು ಯಾರಿಗಾದರೂ ಅನ್ನಿಸಿಬಿಡುತ್ತದೆ. ಆದರೆ ಇಲ್ಲಿನ ಪ್ರಮುಖ ಅಭ್ಯರ್ಥಿಗಳಾದ ಕಾಂಗ್ರೆಸ್‌ನ ಜನಾರ್ದನ ಪೂಜಾರಿ ­ಮತ್ತು  ಬಿಜೆಪಿಯ ನಳಿನ್ ಕುಮಾರ್ ಕಟೀಲು ಅವರ ಮಟ್ಟಿಗೆ ಮಾತ್ರ ಇದು ‘ಕೆಲವು ಪ್ರತ್ಯೇಕ ಘಟನೆಗಳು ಮಾತ್ರ’.‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಜನಾರ್ದನ ಪೂಜಾರಿಯವರು ‘ಇವು ಕೆಲವು ಘಟನೆಗಳು ಮಾತ್ರ. ಪೊಲೀಸರು ಇವುಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ನಮ್ಮ ಸರ್ಕಾರ ಈ ವಿಷಯದಲ್ಲಿ ಸರಿಯಾಗಿಯೇ ವರ್ತಿಸುತ್ತಿದೆ. ಇದನ್ನೊಂದು ದೊಡ್ಡ ವಿಚಾರವಾಗಿ ನೋಡುವ ಅಗತ್ಯವಿಲ್ಲ. ಎಲ್ಲಾ ಸಮುದಾಯಗಳಲ್ಲಿಯೂ ಶಾಂತಿ ಕಾಪಾಡುವುದು ನನ್ನ ಉದ್ದೇಶ. ಕಳೆದ ಐದು ವರ್ಷಗಳಿಂತ ನಾನಿಲ್ಲಿಯೇ ಕುಳಿತು ಕಾರ್ಯ ನಿರ್ವಹಿಸಿದ್ದರ ಫಲವಾಗಿ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಯಶಸ್ಸು ಪಡೆಯಿತು. ಈಗಲೂ ಸಂಭವಿಸುವುದು ಅದುವೇ.’ ಎನ್ನುತ್ತಾರೆ.ನಳಿನ್ ಕುಮಾರ್ ಕಟೀಲು ಕೂಡಾ ‘ಇವು ಕೆಲವು ಪ್ರತ್ಯೇಕ ಘಟನೆಗಳು ಮಾತ್ರ. ಕೆಲವೊಮ್ಮೆ ಬಹುಸಂಖ್ಯಾತರಿಗೆ ನೋವಾ­ಗುವ ಪ್ರಸಂಗ ಬಂದಾಗ ಕೆಲವರು ಹೀಗೆ ಪ್ರತಿಕ್ರಿಯಿಸಿರ­ಬಹುದು. ಪೊಲೀಸರು ಅವರ ವಿರುದ್ಧ ಕಠಿಣ ಕ್ರಮ ಕೈಗೊ­ಳ್ಳಲಿ. ಪೊಲೀಸ್ ವ್ಯವಸ್ಥೆ ಕಾಂಗ್ರೆಸ್ ಆಡಳಿತದಲ್ಲಿ ದುರ್ಬಲ­ಗೊಂಡಿರುವುದರಿಂದ ಇದು ಸಂಭವಿಸುತ್ತಿದೆ. ಜಿಲ್ಲೆಯೂ ಸೇರಿದಂತೆ ದೇಶವ್ಯಾಪಿಯಾಗಿರುವ ಮೋದಿ ಅಲೆ ಬಿಜೆಪಿ ಈಗಾಗಲೇ ಗೆದ್ದಿರುವುದನ್ನು ಸೂಚಿಸುತ್ತಿದೆ’ ಎನ್ನುತ್ತಾರೆ.ಶ್ರೀರಾಮ ಸೇನೆಯ ಕಾರ್ಯಕರ್ತರು 2009ರ ಜನವರಿ­ಯಲ್ಲಿ ನಡೆಸಿದ ಪಬ್ ದಾಳಿ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಇದಾದ ಮೇಲೆ ಜುಲೈ 2012ರಲ್ಲಿ ನಡೆದ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ದಾಳಿಯೂ ಸುದ್ದಿಯಾಗಿತ್ತು. ಇತ್ತೀಚೆಗೆ ದೊಡ್ಡ ಸುದ್ದಿ ಮಾಡಿದ ಮತ್ತೊಂದು ಘಟನೆ­ಯೆಂದರೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗೆ ಸೇರಿದವರೆಂದು ಹೇಳಿಕೊಳ್ಳುವ ಗುಂಪೊಂದು ವಿಟ್ಲದ ಪತ್ರಕರ್ತರೊಬ್ಬರ ಮೇಲೆ ನಡೆಸಿದ ಮಾರಣಾಂತಿಕ ಹಲ್ಲೆ. ಇವೆಲ್ಲವೂ ರಾಜ್ಯ ಮಟ್ಟದಲ್ಲಿ ಸುದ್ದಿ ಮಾಡಿದ ಘಟನೆಗಳು. ಇವುಗಳ ಹೊರತಾಗಿಯೂ ಪ್ರತಿನಿತ್ಯ ಇಂಥ ಹಲವು ಸಣ್ಣ ಪುಟ್ಟ ಘಟನೆಗಳಿಲ್ಲಿ ಮಾಮೂಲು.ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಂಘಟನೆಯ ಸುರೇಶ್ ಭಟ್ ಅವರು 2013ರಲ್ಲಿ ನಡೆದ ಈ ಬಗೆಯ ಘಟನೆಗಳ ಪಟ್ಟಿಯೊಂದನ್ನು ರೂಪಿಸಿದ್ದಾರೆ. ಇದರಂತೆ ಒಟ್ಟು 121 ಈ ಬಗೆಯ ಘಟನೆಗಳು ನಡೆದಿವೆ. ಈ ‘ಅನೈತಿಕ ಪೊಲೀಸುಗಿರಿ’ಯ ವ್ಯಾಪ್ತಿ ‘ಮತಾಂತರ ತಡೆ’ಯ ನೆಪದಿಂದ ಆರಂಭಿಸಿ ಭಿನ್ನ ಜಾತಿ–ಧರ್ಮಗಳ ಗಂಡು ಹೆಣ್ಣು ಪರಸ್ಪರ ಮಾತನಾಡುವುದನ್ನು ತಡೆಯುವುದು, ಗೋ ಸಾಗಣೆಯನ್ನು ತಡೆಯುವುದು ಇತ್ಯಾದಿಗಳ ತನಕ ವ್ಯಾಪಿಸಿದೆ. ಈ ಪಟ್ಟಿಯಲ್ಲಿರುವ ಘಟನೆಗಳೆಲ್ಲವೂ ಪತ್ರಿಕೆಗಳಲ್ಲಿ ಸುದ್ದಿಯಾಗಿ­ರು­ವಂಥವು. ಹೀಗೆ ಪತ್ರಿಕೆಯಲ್ಲಿ ಸುದ್ದಿಯಾಗದ ಘಟನೆಗಳು, ಸೋಷಿಯಲ್ ಮೀಡಿಯಾ ಗೂಂಡಾಗಿರಿ ಪ್ರಕರಣಗಳ ಸಂಖ್ಯೆ ಇನ್ನೂ ದೊಡ್ಡದಿದೆ.ಈ ಬಗೆಯ ‘ಅನೈತಿಕ ಪೊಲೀಸುಗಿರಿ’ಯ ಮುಖ್ಯ ಬಲಿ­ಪಶುಗಳು ವಿದ್ಯಾರ್ಥಿಗಳು ಮತ್ತು ಯುವ ಉದ್ಯೋಗಿಗಳು. ಭಿನ್ನ ಮತ–ಧರ್ಮಗಳಿಗೆ ಸೇರಿದ ಯುವಕ–ಯುವತಿಯರು ಸಾರ್ವಜನಿಕ ಸ್ಥಳಗಳಲ್ಲಿ ಕುಶೋಲಪರಿ ಮಾತನಾಡುವುದಕ್ಕೂ ಹೆದರಿಕೊಳ್ಳಬೇಕಾದ ಪರಿಸ್ಥಿತಿ ಇಲ್ಲಿದೆ ಎಂದರೆ ಅದು ಅತಿಶಯೋಕ್ತಿ ಅಲ್ಲ.ಪ್ರತಿನಿತ್ಯವೂ ನಡೆಯುವ ಈ ಘಟನೆ­ಗಳಿಂದಾಗಿ ಎಲ್ಲಾ ಪಾಲಕರೂ ಮಕ್ಕಳಿಕೆ ‘ಎಚ್ಚರಿಕೆಯ’ ಪಾಠ ಹೇಳಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಪೊಲೀಸು, ದೂರು ಎಂದು ಹೋದರೆ ಅದಕ್ಕೆ ದೊರೆಯುವ ಆಯಾಮವೇ ಮತ್ತೊಂದಾಗಿಬಿಡುತ್ತದೆ. ದಿನದ ಎಲ್ಲಾ ಹೊತ್ತಿನಲ್ಲಿಯೂ ಸುದ್ದಿಗಾಗಿ ತವಕಿಸುವ ಮಾಧ್ಯಮಗಳ ಈ ದಿನಗಳಲ್ಲಿ ತಮ್ಮ ಮನೆಯ ಮಕ್ಕಳ ಹೆಸರು ಅಲ್ಲಿ ಕಾಣಿಸಿಕೊಂಡರೆ ಎಂಬ ಭಯ ಪಾಲಕರದ್ದು.ಈ ಅನೈತಿಕ ಪೊಲೀಸುಗಿರಿಯಲ್ಲಿ ‘ಹಿಂದೂ ಪರ ಸಂಘಟನೆ’­ಗಳು ಸಕ್ರಿಯವಾಗಿರುವಂತೆಯೇ ‘ಮುಸ್ಲಿಮರ ಪ್ರತಿಷ್ಠೆ ಕಾಪಾಡುವ’ ಸಂಘಟನೆಗಳೂ ಇವೆ. ಅನೈತಿಕತೆ ಯಾವತ್ತೂ ಧರ್ಮಾತೀತ ಎಂಬುದಕ್ಕೆ ಇದೂ ಸಾಕ್ಷಿ. ಹಿಂದೂ ಪರ ಸಂಘಟನೆಯದೆಂದು ಹೇಳಿಕೊಳ್ಳುವ ಫೇಸ್‌ಬುಕ್ ಪುಟ­ವೊಂದು ‘ಅನ್ಯಧರ್ಮೀಯರ ಮಾಹಿತಿ ಒದಗಿಸಿದರೆ ಅವರಿಗೆ ಪಾಠ ಕಲಿಸುವ’ ಭರವಸೆಯನ್ನೂ ನೀಡುತ್ತಿದೆ.ಕಣ್ಣಿಗೆ ರಾಚು­ವಂಥ ಇಂಥ ಹಲವು ಉದಾಹರಣೆಗಳಿದ್ದರೂ ರಾಜಕೀಯ ಪಕ್ಷಗಳು ಮಾತ್ರ ಇವನ್ನು ಪ್ರತ್ಯೇಕ ಘಟನೆಗಳಾಗಿಯಷ್ಟೇ ನೋಡಲು ಇಚ್ಛಿಸುತ್ತಿವೆ. ಜನರ ನಿತ್ಯದ ತೊಂದರೆಯೊಂದನ್ನು ಎರಡು ಭಿನ್ನ ಸೈದ್ಧಾಂತಿಕ ನೆಲೆಗಟ್ಟಿನ ಪಕ್ಷಗಳೂ ಒಂದೇ ಬಗೆಯಲ್ಲಿ ಗ್ರಹಿಸುವ ವಿಪರ್ಯಾಸ ದಕ್ಷಿಣ ಕನ್ನಡ ಜಿಲ್ಲೆ­ಯದ್ದು. ಇದು ಶಶಿಕಲಾ ಮತ್ತು ಅರ್ಜುನ್‌ರಂಥ ಯುವಕರಿಗೆ ರಾಜಕಾರಣದ ಬಗ್ಗೆಯೇ ಅಸಹ್ಯ ಹುಟ್ಟುವಂತೆ ಮಾಡುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.