ಸೋಮವಾರ, ಜೂನ್ 21, 2021
27 °C

‘ಅಭಿವೃದ್ಧಿಯ ಯಾವುದೇ ಲಕ್ಷಣಗಳಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಧನಪುರ್, ಗುಜರಾತ್ (ಪಿಟಿಐ): ‘ಗುಜರಾತ್‌ ಮುಖ್ಯಮಂತ್ರಿ ಹೇಳಿರುವ ಅಭಿವೃದ್ಧಿಯ ಯಾವುದೇ  ಲಕ್ಷಣಗಳು ರಾಜ್ಯದಲ್ಲಿ ಗೋಚರಿಸಿಲ್ಲ’ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಅರವಿಂದ್ ಕೇಜ್ರಿವಾಲ್‌ ಬುಧವಾರ ಟೀಕಿಸಿದರು.

ಉತ್ತರ ಗುಜರಾತ್‌ನಲ್ಲಿ ಕೆಲವು ಗ್ರಾಮಗಳನ್ನು ಭೇಟಿ ಮಾಡಿದ ಬಳಿಕ  ಅವರು ಮಾತನಾಡಿದರು.

ಮೋದಿ ಅವರು ಹೇಳುವಂತೆ ರಾಜ್ಯದ ಜನರಿಗೆ ಆರೋಗ್ಯ, ನೀರು,  ವಿದ್ಯುತ್‌ ಹಾಗೂ ಶಿಕ್ಷಣ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆಯೇ ಎಂಬುದನ್ನು ‘ಖಚಿತಪಡಿಸಿಕೊಳ್ಳಲು’ ಗುಜರಾತ್‌ನಲ್ಲಿ ನಾಲ್ಕು ದಿನಗಳ ಪ್ರವಾಸ ಹಮ್ಮಿಕೊಂಡಿರುವ ದೆಹಲಿಯ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್‌  ಮೊದಲ ದಿನವಾದ ಬುಧವಾರ ಅಹಮದಾಬಾದ್‌ ನಗರದಿಂದ ಉತ್ತರ ಗುಜರಾತಿನವರೆಗೆ ಪಯಣಿಸಿದರು. ದಾರಿಯಲ್ಲಿ ಹಲವು ಗ್ರಾಮಗಳ ಜನತೆಯೊಂದಿಗೆ ಸಂವಾದ ನಡೆಸಿದರು. ಹಿಂದುಳಿದ ಪ್ರದೇಶಗಳಲ್ಲಿರುವ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿದರು. ಕೆಲವು ಚಿಕ್ಕ ಭಾಷಣಗಳನ್ನೂ ಮಾಡಿದ ಅವರು, ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳನ್ನು ತಿರಸ್ಕರಿಸುವಂತೆ ಕರೆ ನೀಡಿದರು.

ಬಂಧನ,ಬಿಡುಗಡೆ: ಗುಜರಾತ್‌ನಲ್ಲಿ ನಾಲ್ಕು ದಿನಗಳ ಪ್ರವಾಸಕ್ಕೆ ಬಂದಿಳಿದ ಕೇಜ್ರಿವಾಲ್‌ ಅವರಿಗೆ ತಡೆಯೊಡ್ಡಿದ ಪೋಲಿಸರು ಉತ್ತರ ಗುಜರಾತ್‌ನಲ್ಲಿರುವ ರಾಧನಪುರ್‌  ಠಾಣೆಗೆ ಕರೆದೊಯ್ದರು. ಅರ್ಧ ಗಂಟೆಯ ನಂತರ ತೆರಳಲು ಅವರಿಗೆ ಅನುಮತಿ ನೀಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್‌,  ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ತಮ್ಮ ಗುಜರಾತ್‌ ಭೇಟಿಯನ್ನು ತಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

‘ಮೇಲಾಧಿಕಾರಿಗಳ ಆದೇಶಗಳ ಮೇರೆಗೆ ಪೊಲೀಸರು ವರ್ತಿಸಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲೂ ಕೇಜ್ರಿವಾಲ್‌ ಅವರನ್ನು ತಡೆಯುವಂತೆ ಎಲ್ಲಾ ಡಿಎಸ್‌ಪಿಗಳಿಗೆ ಸೂಚಿಸಲಾಗಿತ್ತು ಎಂಬುದು ನಮಗೆ ಬೆಳಿಗ್ಗೆಯೇ ತಿಳಿದು ಬಂದಿತ್ತು. ಮೋದಿ ಅವರು ಕೆಲವು ಜನರನ್ನು ಕಪ್ಪು ಧ್ವಜ ಸಹಿತ ಕಳುಹಿಸುತ್ತಿದ್ದಾರೆ. ನಮಗೆ ಗೊತ್ತು ಅವರು ಇಂತಹ ಉಪಾಯ ಮಾಡುತ್ತಾರೆ’ ಎಂದೂ ಕೇಜ್ರಿವಾಲ್‌ ಜರಿದರು.

ಇನ್ನು, ಎಎಪಿ ರಾಜ್ಯ ಘಟಕದ ಸಂಚಾಲಕ ಸುಖ್‌ದೇವ್‌ ಪಟೇಲ್‌ ಪ್ರತಿಕ್ರಿಯಿಸಿ, ಕೇಜ್ರಿವಾಲ್‌ ಅವರನ್ನು ವಶಕ್ಕೆ ಪಡೆಯಲಾಗಿತ್ತು  ಆರೋಪಿಸಿದರು. ಆದರೆ ಇದನ್ನು ಅಲ್ಲಗಳೆದ ಪೋಲಿಸರು, ಇಂದು (ಬುಧವಾರ) ಚುನಾವಣೆ ವೇಳಾ ಪಟ್ಟಿ ಪ್ರಕಟಣೆಯೊಂದಿಗೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಆ ಬಗ್ಗೆ ಅವರಿಗೆ ‘ವಿವರಣೆ’ ನೀಡಿರುವುದಾಗಿ ತಿಳಿಸಿದರು.

‘ರಾಜ್ಯದಲ್ಲಿ ‘ರಾಮ’ರಾಜ್ಯ ಇದೆ. ಶಿಕ್ಷಣ ಸುಧಾರಿಸಿದೆ, ಆರೋಗ್ಯ ಸಮಸ್ಯೆಗಳು ಪರಿಹಾರಗೊಂಡಿವೆ. ಭ್ರಷ್ಟ್ರಾಚಾರ ಅಂತ್ಯ ಕಾಣುತ್ತಿದೆ.. ಎಂದು ಗುಜರಾತ್‌ ಸರ್ಕಾರ ಹಾಗೂ ಮಾಧ್ಯಮಗಳು ಹೇಳುತ್ತವೆ. ಅದಕ್ಕೆ ನಾವು ಗುಜರಾತ್‌ನಲ್ಲಿ ಏನು ಸುಧಾರಣೆಯಾಗಿದೆ ಎಂಬುದನ್ನು ನೋಡಲು ಬಂದೆವು’ ಎಂದು ಬುಧವಾರ ಬೆಳಿಗ್ಗೆ ಗುಜರಾತ್‌ ವಿಮಾನ ನಿಲ್ದಾಣದಲ್ಲಿ ಕೇಜ್ರಿವಾಲ್ ಹೇಳಿದ್ದರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.