ಸೋಮವಾರ, ಜನವರಿ 27, 2020
15 °C

‘ಅಲೆ’, ‘ಅಸಹನೆ’ ನಡುವೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಗೂರು ರಾಮಚಂದ್ರಪ್ಪ ಅವರ ‘ಮೋದಿ ಮೋಡಿ ನಿಜಕ್ಕೂ ನಡೆದಿ­ದೆಯೇ?’ (ಸಂಗತ, ಡಿ. 18) ಲೇಖನ ಓದಿದ ಮೇಲೆ ನಿರಾಸೆಯಾಯಿತು. ಪ್ರಬುದ್ಧ ಲೇಖಕ­ರಾಗಿ, ಚರ್ಚಿಸುವ ವಿಷಯದ ಬಗ್ಗೆ ವಸ್ತುನಿಷ್ಠ­ವಾಗಿ ವಿಶ್ಲೇಷಿಸುವ ಔದಾರ್ಯ ಹೊಂದಿರಬಹು­ದೆಂಬ ನಿರೀಕ್ಷೆ ಹುಸಿಯಾಯಿತು.

ಅಂಕಿಅಂಶಗಳು ವಾದಸರಣಿಗಳಲ್ಲಿ ಯಾವಾಗಲೂ ನಮಗೆ ಅನು­ಕೂಲಕರ ವಾದಕ್ಕೆ ಒತ್ತುಕೊಟ್ಟು ಬೇರೆಯದನ್ನು ಮರೆಮಾಚಲು ಸಹಾಯಕವಾಗುತ್ತವೆ. ಅದಕ್ಕೆಂದೇ ಆಂಗ್ಲ ವಿಶ್ಲೇಷಕನೊಬ್ಬ ‘statistics are like bikinis, they reveal interesting parts while conceal the vital one’ ಎಂದು ವ್ಯಂಗ್ಯವಾಗಿ ಹೇಳಿದ್ದಾನೆ.



ದೆಹಲಿ ವಿಧಾನಸಭೆ ಚುನಾವಣೆ ವಿಷಯಕ್ಕೆ ಬಂದರೆ ಕಳೆದ ಮೂರು ಬಾರಿಯಿಂದಲೂ ಬಿ.ಜೆ.ಪಿ. ಅಲ್ಲಿ ಅಧಿಕಾರದಲ್ಲಿರಲಿಲ್ಲ ಹಾಗೂ ಅಲ್ಲಿ ಈ ಹಿಂದೆ ಮುಖ್ಯವಾಗಿ ನೇರ ಸ್ಪರ್ಧೆ ಇರುತ್ತಿತ್ತು. ಆಮ್‌ ಆದ್ಮಿ ಪಕ್ಷದಿಂದ (ಎಎಪಿ) ತ್ರಿಕೋನ ಸ್ಪರ್ಧೆ ಉಂಟಾಯಿತು. ನೇರ ಸ್ಪರ್ಧೆ ಮತ್ತು ತ್ರಿಕೋನ ಸ್ಪರ್ಧೆಯ ನಡುವೆ ಮತ ಗಳಿಕೆಯ ಶೇಕಡ ಪ್ರಮಾಣದಲ್ಲಿ ವ್ಯತ್ಯಯ ಸಹಜವೇ.

ಮೇಲಾಗಿ ಮೋದಿ ಅವರು ರಾಷ್ಟ್ರ ರಾಜಕಾರಣಕ್ಕೆ  ಧುಮುಕುವ ಮುಂಚೆ ಅಲ್ಲಿ ಬಿಜೆಪಿ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಕಳೆದ ನಾಲ್ಕು–ಐದು ತಿಂಗಳ ಹಿಂದಿನ ಜನಾಭಿಪ್ರಾಯ ಬಿಂಬಿಸುವ ವರದಿಗಳನ್ನು ನೋಡಿದರೆ ತಿಳಿಯು­ತ್ತದೆ. ಬಹುಶಃ ಮೋದಿ ರಂಗಪ್ರವೇಶವಾಗಿರ­ದಿದ್ದಲ್ಲಿ ಎಎಪಿ ನಿರಾಯಾಸವಾಗಿ ಅಧಿಕಾರಕ್ಕೆ ಬರುತ್ತಿತ್ತು ಎಂಬುದು ಮಾಧ್ಯಮಗಳಲ್ಲೇ ಚರ್ಚಿತ­ವಾದ ವಿಷಯ. ಅಲ್ಲಿ ಸಂಘಟನೆ ಇನ್ನೂ ಸ್ವಲ್ಪ ಬಲವಾಗಿದ್ದಲ್ಲಿ, ಸ್ಥಳೀಯ ಸಮಸ್ಯೆಗಳಿಗೆ ಎಎಪಿ ಅಂತಹ ಬದಲೀ ಆಯ್ಕೆಯಿದ್ದಿರದಿದ್ದಲ್ಲಿ ಬಿಜೆಪಿ ಪೂರ್ಣ ಬಹುಮತ ಗಳಿಸುತ್ತಿತ್ತು ಎಂಬುದನ್ನು ಎಲ್ಲಾ ವಿಶ್ಲೇಷಕರೂ ಒಪ್ಪುತ್ತಾರೆ.



ಛತ್ತೀಸಗಡದ ನಕ್ಸಲ್‌ಪೀಡಿತ ಬಸ್ತರ್ ವಲಯ­ದಲ್ಲಿ ಕಾಂಗ್ರೆಸ್ ನಾಯಕರ ಹತ್ಯೆ­ಯಿಂದಾಗಿ ಉಂಟಾದ ಅನುಕಂಪದ ಅಲೆ ಕೆಲವು ಕ್ಷೇತ್ರಗಳಲ್ಲಿ ಆಡಳಿತ ಪಕ್ಷಕ್ಕೆ ಹೊಡೆತ ನೀಡಿರುವು­ದನ್ನು ಕಡೆಗಣಿಸಲಾಗದು. ಈ ಅಂಶ ಪರಿ­ಗಣಿ­ಸಿಯೇ ಮೊದಲ ಹಂತದ ಮತದಾನದ ನಂತರ ಎಚ್ಚೆತ್ತುಕೊಂಡ ಬಿಜೆಪಿ, ಮೋದಿಯವ­ರನ್ನು ಇನ್ನಷ್ಟು ಬಳಸಿಕೊಂಡು ಆಗಬಹುದಾಗಿದ್ದ ನಷ್ಟ­ವನ್ನು ಸರಿದೂಗಿಸಿಕೊಂಡಿತೆಂಬುದು ಮಾಧ್ಯ­ಮ­ಗಳಲ್ಲಿಯೇ ವರದಿಯಾಗಿದೆ.

ಇಲ್ಲಿಯೂ  ಆಡ­ಳಿತ ವಿರೋಧಿ ಅಲೆ ಕೆಲಮಟ್ಟಿಗಾದರೂ ಕೆಲಸ ಮಾಡಿರುತ್ತದೆ. ಆದರೆ ಅದು ಅಧಿಕಾರ ಕಳೆ­ದು­ಕೊಳ್ಳುವಷ್ಟು ಆಗದಂತೆ ಮೋದಿ ಅಲೆ ಕೆಲಸ ಮಾಡಿದೆ ಎಂಬುದನ್ನು ಏಕೆ ಒಪ್ಪ­ಬಾರದು?  ಮಧ್ಯಪ್ರದೇಶದಲ್ಲಿ ಉಮಾ ಭಾರತಿ ನೇತೃತ್ವದ ಪಕ್ಷ ಬಿಜೆಪಿಯಲ್ಲಿ ವಿಲೀನವಾಗಿ­ದ್ದರಿಂದ ಆ ಮತಗಳು ಬಿಜೆಪಿಗೆ ಬಂದಿರಬಹುದು ಎಂಬ ಆಂಶವನ್ನು ಒಪ್ಪಬಹುದಾದರೂ, ವಿಲೀನ­ವಾದ ಪಕ್ಷದ ಎಲ್ಲಾ ಮತಗಳೂ ಸಾರಾಸಗಟಾಗಿ ವರ್ಗವಾಗುವುದಿಲ್ಲ ಎಂಬ ಅಂಶವನ್ನು ನೆನಪಿಟ್ಟು ಕೊಳ್ಳಬೇಕು.

ಆದರೆ ಇಲ್ಲಿ ಲೇಖಕರು ಉದ್ದೇಶ­ಪೂರ್ವಕವಾಗಿಯೋ, ತಪ್ಪು ತಿಳಿವಳಿಕೆ­ಯಿಂದಲೋ ಅಂಕಿಅಂಶದ ವಿಷಯದಲ್ಲಿ ಎಡವಿದ್ದಾರೆ. ೨೦೦೮ರಲ್ಲಿ  ಉಮಾಭಾರತಿ ಅವರು ಭಾರತೀಯ ಜನಶಕ್ತಿ ಎಂಬ ಹೊಸ ಪಕ್ಷ ಕಟ್ಟಿ ಚುನಾವಣೆಯಲ್ಲಿ ಸ್ಪರ್ಧಿಸಿ ಶೇ ೪.೭ ಮತ ಗಳಿಸಿ ಐದು ಸ್ಥಾನ ಮಾತ್ರ ಪಡೆದಿದ್ದರು.

ಲೇಖಕರು ತಿಳಿಸಿರುವಂತೆ ಶೇ ೨೮ ಅಲ್ಲ. ಶೇ ೨೮ ಮತ ಪಡೆದ ಪಕ್ಷವೊಂದು ಕೇವಲ ಐದು ಸ್ಥಾನ ಪಡೆಯುವುದು ಅಸಂಭವನೀಯ ಎಂಬುದು ಲೇಖಕರ ಗಮನಕ್ಕೆ ಬರಬೇಕಿತ್ತು. ಮೋದಿಯವ­ರನ್ನು ಹೀಗಳೆಯುವ ಭರದಲ್ಲಿ ಇದು ಮರೆತು­ಹೋಗಿರಬೇಕು. ಒಂದು ವೇಳೆ ಆ ಮತಗಳು ಮಾತೃ ಪಕ್ಷಕ್ಕೇ ಹೋಗಿರಬಹುದಾದರೂ ಮೂರನೆಯ ಬಾರಿಗೆ ಮರು ಆಯ್ಕೆ ಬಯಸಿದ್ದ ಪಕ್ಷ ಹಿಂದೆ ಗಳಿಸಿದ್ದಕ್ಕಿಂತ ೨೨ ಸ್ಥಾನಗಳನ್ನು ಹೆಚ್ಚಿಗೆ ಪಡೆಯಬೇಕಾದರೆ ಮುಖ್ಯಮಂತ್ರಿ ಅವರ ಜನಪ್ರಿಯತೆಯ ಜೊತೆಗೆ ಬೇರೆ ‘ಅಲೆ’ಗಳೂ ಕೆಲಸ ಮಾಡಿರಬೇಕೆಂಬುದು, ಅಂಕಿಅಂಶಗಳ, ವಿಶ್ಲೇಷಕರ ಪಾಂಡಿತ್ಯದ ಆಸರೆಯಿಲ್ಲದೇ ಮೇಲ್ನೋಟಕ್ಕೆ ಕಾಣಬಹುದಾದ ಅಂಶ.

ಇನ್ನು ರಾಜಸ್ತಾನದಲ್ಲಿ ಮಾತ್ರ ಬೇರೆ ಬೇರೆ ಕಾರಣಗಳ ಹೊರತಾಗಿಯೂ ಮೋದಿ ಅಲೆ ಸ್ವಲ್ಪ ಕೆಲಸ ಮಾಡಿರಬಹುದೆಂಬ ಅಂಶವನ್ನು ಲೇಖಕರು ಒಪ್ಪಿಕೊಳ್ಳುವ ಔದಾರ್ಯವನ್ನು ತೋರಿಸಿರುವು­ದಕ್ಕೆ ಅಭಿನಂದಿಸಲೇಬೇಕು. ತಮಗೆ ಸರಿ­ಹೊಂದದ ಬೌದ್ಧಿಕ ಅಭಿಪ್ರಾಯ, ಆಲೋಚನೆ­ಗಳಿಗೆ ಜನರು ಮಾರುಹೋಗುತ್ತಿದ್ದಾರೆ ಎಂಬ ಕಟುಸತ್ಯವನ್ನು ಅರಗಿಸಿಕೊಳ್ಳಲು ಕಷ್ಟಪಡುವ ಈ ಬುದ್ಧಿಜೀವಿ ವರ್ಗದ ಅಸಹನೆ ಬಗ್ಗೆ ನಮ್ಮ ಸಹಾನುಭೂತಿ ಇದೆ.

–ಅ.ಸು.ರವೀಂದ್ರ, ಶಿವಮೊಗ್ಗ.



ವಿಶ್ಲೇಷಣೆಗಳ ದಿಕ್ಕು ಬದಲು


ಬಿಜೆಪಿ, ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ ಬಳಿಕ ಇಡೀ ರಾಷ್ಟ್ರದ ರಾಜಕೀಯ ವಿದ್ಯಮಾನಗಳ ದಿಕ್ಕೇ ಬದಲಾಗಿದೆ. ಮಾತ್ರವಲ್ಲ, ರಾಜಕೀಯ ವಿಶ್ಲೇಷಣೆಗಳ ದಿಕ್ಕು ಕೂಡಾ ಬದಲಾಗುತ್ತಿದೆ. ರಾಹುಲ್‌ ಗಾಂಧಿ v/s ನರೇಂದ್ರ ಮೋದಿ ಎಂದು ಮಾಧ್ಯಮಗಳಲ್ಲಿಯೂ ಚರ್ಚೆ ನಡೆಯು­ತ್ತಿದೆ. ಇದು ಒಂದು ಬಗೆಯಲ್ಲಿ ವಿಚಿತ್ರವಾಗಿ ಕಾಣುತ್ತಿದೆ. ಇಲ್ಲಿ ರಾಹುಲ್  ಅವರಿಗಿಂತ ಮೋದಿಗೆ ಹೆಚ್ಚು ಪ್ರಚಾರ ಸಿಗುತ್ತಿದೆ ಎಂಬುದು ಬೇರೆ ಮಾತು.



ಬಿಜೆಪಿ ನಾಯಕರು ಮೋದಿ ಬಗ್ಗೆ ಜನರಲ್ಲಿ ಹುಟ್ಟಿಸುತ್ತಿರುವ ಭ್ರಮೆ ನಿಜಕ್ಕೂ ಹೆದರಿಕೆ ಹುಟ್ಟಿಸುವಂತಹದ್ದು. ಅವರೇನೂ ರಾಷ್ಟ್ರ ನಾಯಕ­ರಲ್ಲ. ಒಂದು ರಾಜ್ಯದ ಮುಖ್ಯಮಂತ್ರಿ ಅಷ್ಟೇ. ಆದರೆ ಬಿಜೆಪಿಯಲ್ಲಿನ ಬದಲಾದ ರಾಜ­ಕೀಯ ವಿದ್ಯಮಾನಗಳು ಅವರನ್ನು ಇಲ್ಲಿವರೆಗೂ ತಂದು ನಿಲ್ಲಿಸಿವೆ ಅಷ್ಟೇ.



ಮೋದಿ ಅವರನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ಬಳಿಕ ದೇಶದ ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಅವರ ಅಲೆ ಅಷ್ಟೇನೂ ಕೆಲಸ ಮಾಡಿಲ್ಲವೆಂಬ ಬರಗೂರು ರಾಮಚಂದ್ರಪ್ಪ ಅವರ   ವಾದವನ್ನು ಒಪ್ಪಿಕೊಳ್ಳಲೇಬೇಕು. ಈ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಒಟ್ಟಾರೆ ಮತ ಗಳಿಕೆ ಪ್ರಮಾಣ ಹೆಚ್ಚಾಗಬೇಕಿತ್ತು.  ಮೋದಿ ಅವರ ಪ್ರಭಾವ ಈ ಚುನಾವಣೆಯಲ್ಲಿ ಅಷ್ಟಾಗಿ ಕೆಲಸ ಮಾಡಿಲ್ಲ.

ಹಾಗೆ ನೋಡಿದರೆ ದೆಹಲಿಯಲ್ಲಿ ಬಿಜೆಪಿಯ ಮತಗಳಿಕೆ ಪ್ರಮಾಣ ಆ ಪಕ್ಷದ ನಾಯಕರಿಗೇ ತೃಪ್ತಿದಾಯಕವಲ್ಲ. ದೆಹಲಿಯಲ್ಲಿ ಮೋದಿ ಮೋಡಿ ನಡೆದಿಲ್ಲ. ಬಿಜೆಪಿ  ಮತ್ತು ಕಾಂಗ್ರೆಸ್ ವಿರುದ್ಧದ ರಾಜಕೀಯದ ನೇತೃತ್ವ ವಹಿಸಿದ್ದ ಅರವಿಂದ್‌ ಕ್ರೇಜಿವಾಲ್ ಅವರೇ ದೆಹಲಿಯ ನಿಜ­ವಾದ ನಾಯಕ. ದೆಹಲಿಯ ಫಲಿತಾಂಶ ಎಲ್ಲಾ ರಾಜಕೀಯ ಪಕ್ಷಗಳಿಗೂ ಒಂದು ಪಾಠವಾಗ­ಬೇಕು.

-–ಮೇಘ ಗಂಗಾಧರ ನಾಯ್ಕ ಚಿತ್ರದುರ್ಗ

ಪ್ರತಿಕ್ರಿಯಿಸಿ (+)