ಮಂಗಳವಾರ, ಜೂನ್ 15, 2021
22 °C

‘ಅಸಭ್ಯವಾಗಿ ವರ್ತಿಸಿದ ಸಚಿವ ಡಿ.ಕೆ.ಶಿವಕುಮಾರ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಚಿವ ಡಿ.ಕೆ. ಶಿವಕುಮಾರ್ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ನನ್ನ ಶರ್ಟ್‌ನಲ್ಲಿ ಅಡಗಿಸಿಟ್ಟಿದ್ದ ಗುಂಡಿಯ ರೂಪದ ಕ್ಯಾಮೆರಾ ಮತ್ತು ಸಲಕರಣೆಗಳನ್ನು ತಾವೇ ಹೊರತೆಗೆಯಲು ಯತ್ನಿಸಿದರು’ ಎಂದು ನ್ಯೂಸ್9 ಸುದ್ದಿವಾಹಿನಿಯ ವರದಿಗಾರ್ತಿ ಶ್ವೇತಾ ಪ್ರಭು ಆರೋಪಿಸಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತ­ನಾಡಿದ ಅವರು, ‘ಆ ಸಂದರ್ಭ­ದಲ್ಲಿ ಸಚಿವರನ್ನು ಅವರ ಬೆಂಬಲಿಗರು ತಡೆದಾಗ ಎಲ್ಲರೆದುರು ನನ್ನ ಶರ್ಟ್‌ನ ಗುಂಡಿ ಬಿಚ್ಚಿ ಕ್ಯಾಮೆರಾ ಹೊರತೆಗೆ­ಯುವಂತೆ ತಮ್ಮ ಬೆಂಬಲಿಗರಿಗೆ ಹೇಳಿದರು’ ಎಂದರು.ಕಣ್ಣುಗಳು ಮಾತ್ರ ಕಾಣುವಂತೆ ದುಪಟ್ಟಾದಿಂದ ತಮ್ಮ ಮುಖವನ್ನು ಮರೆ ಮಾಡಿಕೊಂಡಿದ್ದ ಅವರು,  ‘ವೈಯ­ಕ್ತಿಕ ಜೀವನ ಮತ್ತು ಭವಿಷ್ಯಕ್ಕೆ ಧಕ್ಕೆ­ಯಾ­ಗುತ್ತದೆ ಎಂಬ ಕಾರಣದಿಂದ ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದೇನೆ’ ಎಂದರು.ವಾಹಿನಿಯ ವರದಿಗಾರ ಶ್ರೇಯಸ್ ಮಾತನಾಡಿ, ‘ಭದ್ರತಾ ಏಜೆನ್ಸಿ ನಡೆಸುತ್ತಿ­ರುವ ನನ್ನ ಮೇಲೆಯೇ ಕುಟುಕು ಕಾರ್ಯಾಚರಣೆ ನಡೆಸುತ್ತೀರಾ? ನಿಮ್ಮ ಗುರುತು ಇಟ್ಟುಕೊಂಡಿದ್ದೇನೆ. ಚುನಾ­ವಣೆ ಬಳಿಕ ನಿಮ್ಮನ್ನು ನೋಡಿಕೊಳ್ಳು­ತ್ತೇನೆ ಎಂದು ಸಚಿವರು ಬೆದರಿಕೆ ಹಾಕಿದರು’ ಎಂದು ಆರೋಪಿಸಿದರು.‘ಘಟನೆ ಸಂದರ್ಭದಲ್ಲಿ ಸಚಿವರ ಮನೆಯಲ್ಲಿದ್ದ ಅವರ ಸುಮಾರು 70 ಬೆಂಬಲಿಗರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ನಮ್ಮ ಮೇಲೆ ಹಲ್ಲೆ ನಡೆಸಿದರು. ಆಗ ಅಲ್ಲಿಯೇ ಇದ್ದ ಎಸಿಪಿ ಸಿದ್ದರಾಮಯ್ಯ ಮತ್ತಿತರ ಪೊಲೀಸ್‌ ಸಿಬ್ಬಂದಿ ನಮ್ಮ ರಕ್ಷಣೆಗೆ ಬರಲಿಲ್ಲ. ಇಡೀ ಘಟನಾವಳಿ ಸೆರೆಯಾಗಿರುವ ಕ್ಯಾಮೆರಾ  ಮತ್ತು ಮೆಮೊರಿ ಕಾರ್ಡ್ ಸದಾಶಿವ­ನಗರ ಪೊಲೀಸ್ ಠಾಣೆಯಲ್ಲಿದೆ’ ಎಂದರು.ಕುಟುಕು ಕಾರ್ಯಾಚರಣೆಯ ವಿವರ­ಗಳನ್ನು ಕುರಿತು ಪತ್ರಕರ್ತರು ಪ್ರಶ್ನಿಸಿ­ದಾಗ, ‘ಪ್ರಕರಣದ ವಿಚಾರಣೆ ನ್ಯಾಯಾ­ಲಯದಲ್ಲಿರು­ವುದರಿಂದ ಆ ಬಗ್ಗೆ ಏನೂ ಹೇಳಲಾಗುವುದಿಲ್ಲ’ ಎಂದರು.‘ಸಚಿವರು ಮತ್ತು ಅವರ ಬೆಂಬಲಿಗರ ವಿರುದ್ಧ ದೂರು ನೀಡಿ­ದರೂ ಪೊಲೀಸರು ಪ್ರಕರಣ ದಾಖಲಿಸಿಲ್ಲ. ಪೊಲೀಸರು ನಮ್ಮೊಂದಿಗೆ ಸಭ್ಯವಾಗಿ ನಡೆದುಕೊಂಡರೂ ದೂರಿಗೆ ಸ್ಪಂದಿಸುತ್ತಿಲ್ಲ’ ಎಂದರು.‘ಕುಟುಕು ಕಾರ್ಯಾಚರಣೆಯ ಹಿಂದೆ ಸಾರ್ವಜನಿಕ ಹಿತಾಸಕ್ತಿಯ ಹೊರತಾಗಿ ಬೇರೆ ಯಾವುದೇ ದುರುದ್ದೇಶವಿರಲಿಲ್ಲ. ನಾವು ಯಾವ ಪಕ್ಷದ ಪರವಾಗಿಯೂ ಕೆಲಸ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.