ಭಾನುವಾರ, ಜೂನ್ 13, 2021
26 °C

‘ಆಧುನಿಕ ಕೃಷಿ ಮಾಹಿತಿಗೆ ಟ್ಯಾಬ್ಲೆಟ್‌ ಸಹಾಯಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ರೈತರಲ್ಲಿ ಸಾಂಖ್ಯಿಕ  (ಡಿಜಿಟಲ್‌) ಸಾಕ್ಷರತೆ ಹೆಚ್ಚಿಸುವ ಸದ್ದುದ್ದೇಶದಿಂದ ಟ್ಯಾಬ್ಲೆಟ್‌ ನೀಡಲಾಗು ತ್ತಿದ್ದು, ಆಧುನಿಕ ಕೃಷಿ ಮಾಹಿತಿ ಪಡೆದು ಕೊಳ್ಳಲು ಟ್ಯಾಬ್ಲೆಟ್‌ ಸಹಾಯಕವಾಗ ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್‌.ಪಾಟೀಲ ಹೇಳಿದರು.ಬಾಗಲಕೋಟೆಯ ಬಾಪೂಜಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ಬೆಂಗಳೂರಿನ ವರ್ಚ್ಯುಕ್ಸ್ ಐ.ಟಿ. ಸಲ್ಯೂಶನ್ಸ್‌ (Virtuex IT Solutions) ಸಹಭಾಗಿತ್ವದಲ್ಲಿ ನವ ನಗರದ ಕಲಾಭವನದಲ್ಲಿ ಮಂಗಳವಾರ ಬಾಗಲಕೋಟೆ ಮತ್ತು ವಿಜಾಪುರ ಜಿಲ್ಲೆಯ ರೈತರಿಗೆ ಉಚಿತ ಟ್ಯಾಬ್ಲೆಟ್‌ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕ ವಾಗಿ ಮಾತನಾಡಿದರು.ಭಾರತೀಯ ರೈತ ಸಶಕ್ತನಾಗುವ ವರೆಗೆ ದೇಶಕ್ಕೆ ಭವಿಷ್ಯಕ್ಕೆ ಭವಿಷ್ಯವಿಲ್ಲ, ಕೃಷಿ ಕ್ಷೇತ್ರ ಕಡೆಗಣನೆಯಾದರೆ ದೇಶ ಅವನತಿಯಾದಂತೆ. ಮಾಹಿತಿ ತಂತ್ರಜ್ಞಾನ ಬಳಸಿಕೊಳ್ಳುವ ಮೂಲಕ ರೈತರು ಸಶಕ್ತರಾಗಬೇಕು ಎಂದು ಹೇಳಿದರು.

ಎಲ್ಲ ವಿಜ್ಞಾನಗಳಿಗಿಂತ ಕೃಷಿ ವಿಜ್ಞಾನ ಕಠಿಣವಾದ ವಿಜ್ಞಾನವಾಗಿದೆ. ಉದ್ದ ಹರವಿ, ಅಡ್ಡ ಬಿತ್ತುವುದಕ್ಕೆ ಇಂದು ಕೃಷಿ ಸೀಮಿತವಾಗಿಲ್ಲ. ದಡ್ಡರು ಕೃಷಿ ಮಾಡುವ ಕಾಲ ಇದಲ್ಲ, ಬುದ್ದಿವಂತಿಕೆ ಅಗತ್ಯವಾಗಿದೆ ಎಂದರು.ಇಂದಿನ ದಿನಮಾನದಲ್ಲಿ ಯಾರಿಗೆ ಕಂಪ್ಯೂಟರ್‌ ಮತ್ತು ಅಂತರ್ಜಾಲದ ಬಗ್ಗೆ ಜ್ಞಾನವಿಲ್ಲವೊ ಅವರೇ ಅನಕ್ಷರಸ್ಥರು ಎಂಬಂತಾಗಿದೆ, , ಐಟಿ, ಬಿಟಿ ಕ್ಷೇತ್ರದ ಸಂಶೋಧನೆಗಳು ರೈತರ ಹೊಲ ತಲುಪುವಂತಾಗಬೇಕು ಎಂದರು.ಕೃಷಿ ಕೈಪಿಡಿ:ಸಚಿವ ಎಚ್‌.ಕೆ.ಪಾಟೀಲ ಮಾತನಾಡಿ, ರೈತರ ಬದುಕಿನ ಬದಲಾವಣೆಗೆ ಟ್ಯಾಬ್ಲೆಟ್‌ ಅತ್ಯದ್ಬುತವಾದ ಕೃಷಿ ಕೈಪಿಡಿಯಾಗಿದೆ, ಟ್ಯಾಬ್ಲೆಟ್‌ ಬಳಕೆ ವಿಷಯದಲ್ಲಿ ದೇಶದ ಪ್ರಧಾನಮಂತ್ರಿ, ಕೇಂದ್ರ ಕೃಷಿ ಸಚಿವರು, ವಿವಿಧ ರಾಜ್ಯ ಸರ್ಕಾರಗಳ ಕಣ್ಣು ತೆರೆಸಬೇಕಾದ ಅಗತ್ಯವಿದೆ ಎಂದರು.ಇಂದು ಒಕ್ಕಲತನ ಲಾಭದಾಯಕ ವೃತ್ತಿಯಾಗಿ ಉಳಿದಿಲ್ಲ, ಎಷ್ಟೇ ಶ್ರಮಪಟ್ಟರೂ ರೈತರಿಗೆ ತಕ್ಕ ಪ್ರತಿಫಲ ಸರಿಯಾಗಿ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.ಜಗತ್ತಿನ 65 ರಾಷ್ಟ್ರಗಳಲ್ಲಿ ಮೋಡಬಿತ್ತನೆ ಯಶಸ್ವಿಯಾಗಿ ನಡೆಸಲಾಗುತ್ತಿದೆ. ಆದರೂ ನಮ್ಮ ದೇಶದಲ್ಲಿ ಮೋಡ ಬಿತ್ತನೆ ವಿಷಯದಲ್ಲಿ ಸರ್ಕಾರಗಳು ಮತ್ತು ವಿಜ್ಞಾನಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದರು.ರಾಜ್ಯದಲ್ಲಿ ಉಳ್ಳವರು, ಸರ್ಕಾರಿ ಅಧಿಕಾರಿಗಳು ಮಾತ್ರ ಶುದ್ಧ ನೀರನ್ನು ಕುಡಿಯುತ್ತಿದ್ದಾರೆ. ಬಹುತೇಕ ಹಳ್ಳಿಗಳಲ್ಲಿ ಜನ ಕಲುಷಿತ ನೀರನ್ನೇ ಸೇವನೆ ಮಾಡುತ್ತಿದ್ದಾರೆ, ಇದನ್ನು ಹೋಗಲಾಡಿಸುವ ಉದ್ದೇಶದಿಂದ ಒಂದು ಸಾವಿರ ಹಳ್ಳಿಗಳಲ್ಲಿ ರಾಜ್ಯ ಸರ್ಕಾರವು ಶುದ್ಧ ಕುಡಿಯುವ ನೀರನ ಘಟಕಗಳನ್ನು ಆರಂಭಿಸುತ್ತಿದೆ ಎಂದು ಹೇಳಿದರು.ಕಲುಷಿತ ನೀರು ಸೇವನೆಯಿಂದ ದೇಶದಲ್ಲಿ ಪ್ರತಿ 20 ನಿಮಿಷಕ್ಕೆ ಒಂದು ಮಗು ಸಾಯುತ್ತಿದೆ, ಇಷ್ಟಾದರೂ ಜನ ಕಲುಷಿತ ನೀರನ್ನೇ ಸೇವಿಸುತ್ತಿದ್ದಾರೆ. ಹಳ್ಳಿ ಜನರ ವಸ್ತುಸ್ಥಿತಿ ಅರಿಯುವಲ್ಲಿ ಸರ್ಕಾರಿ ಅಧಿಕಾರಿಗಳು ವಿಫಲರಾಗಿದ್ದಾರೆ. ಅವರಿಗೆ ಅರ್ಥ ಮಾಡಿಸಲು ಕಷ್ಟಪಡಬೇಕಾಗಿದೆ ಎಂದರು.ರಾಜ್ಯದ ಗ್ರಾಮೀಣ ಭಾಗದಲ್ಲಿ ನೀರಿನ ಕೊರತೆಯಿಂದ ಜನರು ಬಯಲು ಶೌಚಾಲಯ ಅವಲಂಭಿಸಿದ್ದಾರೆ. ನೀರಿನ ಕೊರತೆ ಇರುವುದರಿಂದ ವಿಮಾನಗಳಲ್ಲಿ ಬಳಕೆಯಾಗುವ ನೀರು ರಹಿತ ಶೌಚಾಲಯ ತಂತ್ರಜ್ಞಾನವನ್ನು ಗ್ರಾಮೀಣ ಪ್ರದೇಶಕ್ಕೆ ತರಬೇಕಾದ ಅಗತ್ಯವಿದೆ, ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದು ಹೇಳಿದರು.‘ನಮ್ಮ ರೈತ’ ತಂತ್ರಾಂಶ ಅಭಿವೃದ್ಧಿ ಪಡಿಸಿದ ಅಮೆರಿಕಾದಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಗೌರಿಶಂಕರ ತಮ್ಮ ಅನಿಸಿಕೆ ಹಂಚಿಕೊಂಡರು. ಬಾಗಲಕೋಟೆ ಮತ್ತು ವಿಜಾಪುರ ಜಿಲ್ಲೆಯ 13 ರೈತರಿಗೆ ಸಾಂಕೇತಿಕವಾಗಿ ಟ್ಯಾಬ್ಲೆಟ್‌ ವಿತರಿಸಲಾಯಿತು.ಶಾಸಕ ಎಚ್‌.ವೈ.ಮೇಟಿ, ಮಾಜಿ ಸಚಿವ ಅಜಯಕುಮಾರ ಸರನಾಯಕ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶಾಂತವ್ವ ಭೂಷಣ್ಣವರ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ.ಸೌದಾಗರ, ಮಾಜಿ ಶಾಸಕ ಪಿ.ಎಚ್‌.ಪೂಜಾರ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ.ಎಲ್‌.ಕೃಷ್ಣಾ ನಾಯಕ್‌, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಪಿ.ಎಸ್‌.ಜಾನಗೌಡರ, ಪ್ರಾಧ್ಯಾಪಕ ಡಾ.ಎ. ಪ್ರಭುರಾಜ್‌, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ.ಎ.ಬಿ.ಪಾಟೀಲ, ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ ಡಾ.ವೈ.ಕೆ.ಕೋಟೆಕಲ್‌, ವಿಜಾಪುರ ಕೃಷಿ ವಿಶ್ವವಿದ್ಯಾಲಯದ ಡೀನ್‌ ಡಾ.ಜೆ.ಎಸ್‌.ಅವಕ್ಕನವರ, ಪ್ರಗತಿಪರ ರೈತರಾದ ಮಲ್ಲಣ್ಣ ನಾಗರಾಳ, ನಂದಬಸಪ್ಪ ಸಂಗಪ್ಪ ಚೌದರಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.