ಸೋಮವಾರ, ಜನವರಿ 20, 2020
26 °C

‘ಇತರ ಹಿಂದುಳಿದ ವರ್ಗ’ಕ್ಕೆ ಈ ಅನ್ಯಾಯವೇಕೆ?

ಬಿ. ಮುನಿವೆಂಕಟಸ್ವಾಮಯ್ಯ Updated:

ಅಕ್ಷರ ಗಾತ್ರ : | |

ಕೇಂದ್ರ ಸರ್ಕಾರವು ‘ಇತರ ಹಿಂದುಳಿದ ವರ್ಗ’ಕ್ಕೆ ಒದಗಿಸಿದ ಮೀಸಲಾತಿಯಲ್ಲಿ ಕೆನೆಪದರ (ಮೀಸಲಾತಿ ಸೌಲಭ್ಯದಿಂದ ಹೊರಗಿಡುವ) ಆದಾಯದ ಮಿತಿಯನ್ನು ಮೇ ತಿಂಗಳಲ್ಲಿರೂ6 ಲಕ್ಷಕ್ಕೆ ಹೆಚ್ಚಿಸಿದೆ. ರಾಜ್ಯದಲ್ಲಿ ಈ ಮಿತಿ ಇನ್ನೂರೂ3.50 ಲಕ್ಷದಲ್ಲೇ ಇದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅದನ್ನುರೂ4.50 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಪ್ರಕಟಿಸಿದ್ದಾರೆ.ಕೇಂದ್ರ ಸರ್ಕಾರ 2008ರಲ್ಲಿಯೇ ಕೆನೆಪದರ ಆದಾಯದ ಮಿತಿಯನ್ನುರೂ4.5 ಲಕ್ಷಕ್ಕೆ ಹೆಚ್ಚಿಸಿತ್ತು. ಆದರೆ, ಅದಕ್ಕೆ ತಕ್ಕಂತೆ ರಾಜ್ಯ ಸರ್ಕಾರ ಆದಾಯದ ಮಿತಿಯನ್ನು ಹೆಚ್ಚಿಸದೆ ನಾಲ್ಕು ವರ್ಷಗಳ ಕಾಲರೂ2 ಲಕ್ಷದಲ್ಲೇ ಉಳಿಸಿದ್ದರಿಂದ ‘ಇತರ ಹಿಂದುಳಿದ ವರ್ಗ’ಗಳ ಸಮುದಾಯದವರು ಅವಕಾಶ ವಂಚಿತರಾಗಬೇಕಾಯಿತು. ಈಗ ರಾಜ್ಯ ಸರ್ಕಾರ ಮಿತಿಯನ್ನು ಹೆಚ್ಚಿಸಲು ನಿರ್ಧರಿಸಿದರೂ ಅದು ಕೇಂದ್ರ ಸರ್ಕಾರ ನಿಗದಿಪಡಿಸಿರುವ ಪ್ರಮಾಣದಲ್ಲಿ ಇಲ್ಲದಿರುವುದು ನಿರಾಸೆಯನ್ನು ಉಂಟುಮಾಡಿದೆ.ಹಿಂದುಳಿದ ವ್ಯಕ್ತಿಯೊಬ್ಬನಿಗೆ ಅಥವಾ ಹಿಂದುಳಿದ ಸಮೂಹಕ್ಕೆ ಯಾವುದೇ ರೂಪದ ವಿಶೇಷ ಅವಕಾಶಗಳನ್ನು ಕಾಯ್ದಿರಿಸುವ ವ್ಯವಸ್ಥೆಯೇ ಮೀಸಲಾತಿ. ನಾನಾ ಕಾರಣಗಳಿಂದ ಹಿಂದುಳಿದ ವರ್ಗಗಳು ಸಮಾಜದ ಕೆಳಸ್ತರದಲ್ಲಿಯೇ ಇರುವಂತಾಗಿ ಸಮಾಜದಲ್ಲಿ ಲಭ್ಯವಿರುವ ಉತ್ತಮ ಅವಕಾಶಗಳನ್ನು ಪಡೆಯುವಲ್ಲಿ ವಂಚಿತವಾಗಿವೆ. ಈ ತಾರತಮ್ಯವನ್ನು ಹೋಗಲಾಡಿಸಲು ಮೀಸಲಾತಿ ಎಂಬುದು ಸಂವಿಧಾನ ರೂಪಿಸಿರುವ ಸೂತ್ರ ಮತ್ತು ತತ್ವವಾಗಿದೆ.ನಮ್ಮ ಸಂವಿಧಾನದ 15 (4) ವಿಧಿ ಪ್ರಕಾರ, 29 (2)ರ ವಿಧಿಯಲ್ಲಿ ನಮೂದಾಗಿರುವ ಯಾವುದೇ ವರ್ಗವು ಸಾಮಾಜಿಕ ಮತ್ತು ವಿದ್ಯಾಭ್ಯಾಸದ ಸಂಬಂಧವಾಗಿ ಹಿಂದುಳಿದ ವರ್ಗಗಳು ಅಥವಾ ಪರಿಶಿಷ್ಟ ಜಾತಿ–ಪಂಗಡಗಳ ಪುರೋಭಿವೃದ್ಧಿಗಾಗಿ ರಾಜ್ಯವು ಯಾವುದಾದರೂ ವಿಶೇಷ ಉಪಬಂಧವನ್ನು ರಚಿಸುವುದಕ್ಕೆ ಅಡ್ಡಿಯಾಗದು ಎಂದು ತಿಳಿಸುತ್ತದೆ.ಸಂವಿಧಾನದ 16 (4) ವಿಧಿ ಪ್ರಕಾರ ಯಾವುದೇ ಒಂದು ಹಿಂದುಳಿದ ನಾಗರಿಕ ವರ್ಗದವರಿಗೆ ರಾಜ್ಯದ ಅಧೀನದಲ್ಲಿರುವ ಸೇವೆಗಳಲ್ಲಿ ತಕ್ಕಷ್ಟು ಪ್ರಾತಿನಿಧ್ಯ ಇಲ್ಲವೆಂದು ರಾಜ್ಯವು ಅಭಿಪ್ರಾಯಪಟ್ಟಾಗ ಅಂಥವರಿಗಾಗಿ ನಿಯುಕ್ತಿಗಳನ್ನು ಇಲ್ಲವೇ ಹುದ್ದೆಗಳನ್ನು ಮೀಸಲಿರಿಸಲು ರಾಜ್ಯವು ಉಪಬಂಧವನ್ನು ರಚಿಸಲು ಈ ವಿಧಿಯು ಅವಕಾಶ ಕಲ್ಪಿಸುತ್ತದೆ.ಮೀಸಲಾತಿಯ ಉದ್ದೇಶ, ಕೆಳಸ್ತರದಲ್ಲಿ ಇರುವವರಿಗೆ ಸೂಕ್ತ ಪ್ರಾತಿನಿಧ್ಯವನ್ನು ದೊರಕಿಸಿಕೊಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸುವುದಾಗಿದೆ. ಮೀಸಲಾತಿಯು ಬಡತನದ ನಿರ್ಮೂಲನೆಗಾಗಿ ಇರುವ ನೀತಿಯಲ್ಲ. ನಿರುದ್ಯೋಗವನ್ನು ನಿವಾರಣೆ ಮಾಡುವ ಉಪಬಂಧ ಕೂಡ ಅಲ್ಲ. ಅಸಮಾನತೆಯನ್ನು ಇಟ್ಟುಕೊಂಡು ಸಾಧಿಸಿದ ಕ್ಷಿಪ್ರ ಪ್ರಗತಿ ಯಾವಾಗಲೂ ಅಸ್ಥಿರ. ಸಮಾನತೆಯಿಂದ ಸಾಧಿಸುವ ಸಾಮಾನ್ಯ ಪ್ರಗತಿಯೇ ಸ್ಥಿರವಾದುದು. ಅಂತಹ ಪ್ರಗತಿಯು ದೇಶಕ್ಕೆ ಭದ್ರತೆಯನ್ನು ಕೊಡುತ್ತದೆ. ಈ ದೃಷ್ಟಿಯಿಂದ ಹಿಂದುಳಿದ ವರ್ಗಗಳ ಮೀಸಲಾತಿಯು ಅಸಮಾನತೆಯನ್ನು ಹೋಗಲಾಡಿಸುವ ಒಂದು ಸಾಧನವಾಗಿದೆ.ಕೆನೆಪದರ ಮೀಸಲಾತಿ ನೀತಿ: ಕೇಂದ್ರ ಸರ್ಕಾರವು ಮಂಡಲ್‌ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಮೂಲಕ ಆಗಸ್ಟ್ 13, 1990ರಂದು ‘ಇತರ ಹಿಂದುಳಿದ ವರ್ಗ’ಗಳಿಗೆ ಮೀಸಲಾತಿಯನ್ನು ಮೊದಲ ಬಾರಿಗೆ ಜಾರಿಗೆ ತಂದಿತು. ಈ ಆದೇಶವು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಔದ್ಯೋಗಿಕವಾಗಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇಕಡ 27ರಷ್ಟು ಮೀಸಲಾತಿಯನ್ನು ಕಲ್ಪಿಸಿದೆ. ಈ ಆದೇಶಕ್ಕೆ 1991ರ ಜನವರಿ 25ರಂದು ತಿದ್ದುಪಡಿ ಮಾಡಲಾಗಿದೆ. ಈ ಎರಡೂ ಆದೇಶಗಳ ಸಿಂಧುತ್ವವನ್ನು ಸುಪ್ರೀಂ ಕೋರ್ಟಿನ ‘ಇಂದ್ರ ಸಾಹ್ನಿ ವಿರುದ್ಧ ಭಾರತದ ಒಕ್ಕೂಟ’ ಮೊಕದ್ದಮೆಯ ಸಂಬಂಧ ಪ್ರಶ್ನಿಸಲಾಯಿತು. ಸುಪ್ರೀಂ ಕೋರ್ಟ್ ಈ  ಮೊಕದ್ದಮೆಯ ತೀರ್ಪಿನಲ್ಲಿ ಕೆನೆ ಪದರ (ಕ್ರಿಮಿಲೇಯರ್‌)ವನ್ನು ಮೀಸಲಾತಿ ಯಿಂದ ಹೊರಗಿಡುವುದಕ್ಕೆ ಆಧಾರ ಯಾವುದು ಎಂಬುದನ್ನು ನಿರ್ದಿಷ್ಟವಾಗಿ ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈ ನಿರ್ದೇಶನಕ್ಕೆ ಅನುಸಾರವಾಗಿ ಕೇಂದ್ರ ಸರ್ಕಾರವು ಒಂದು ಸಮಿತಿಯನ್ನು ರಚಿಸಿತ್ತು. ಆ ಸಮಿತಿಯ ವರದಿ ಆಧಾರದ ಮೇಲೆ 1993ರ ಸೆಪ್ಟೆಂಬರ್‌ 8ರಂದು ಹೊಸ ಆದೇಶ ಹೊರಡಿಸಲಾಗಿದೆ. ಸಮಿತಿಯ ಶಿಫಾರಸುಗಳ ಪ್ರಕಾರ, ಕೆನೆ ಪದರದ ನಿಯಮಗಳನ್ನು ಆರು ಪ್ರವರ್ಗಗಳಾಗಿ ವಿಂಗಡಣೆ ಮಾಡಲಾಗಿದೆ. ಈ ಕೆಳಕಂಡ ಆರು ಪ್ರವರ್ಗಗಳಲ್ಲಿ ಸೇರಿದವರ ಮಕ್ಕಳನ್ನು ಕೆನೆಪದರ ನೀತಿಯಂತೆ ಮೀಸಲಾತಿಯಿಂದ ಹೊರಗಿಡಲಾಗಿದೆ.

ಪ್ರವರ್ಗ 1: ಸಂವಿಧಾನಾತ್ಮಕ ಹುದ್ದೆಗಳನ್ನು ಹೊಂದಿರುವವರ ಮಕ್ಕಳು.ಪ್ರವರ್ಗ 2: ಸೇವಾ ಪ್ರವರ್ಗ– ರಾಜ್ಯದ ಮತ್ತು ಕೇಂದ್ರದ ಸೇವೆಗಳ ಉದ್ಯೋಗಿಗಳ ಮಕ್ಕಳು. ಕೇಂದ್ರ ಮತ್ತು ರಾಜ್ಯದ ಅಧೀನದಲ್ಲಿರುವ ಸಾರ್ವಜನಿಕ ಉದ್ಯಮಗಳ 1 ಮತ್ತು 2ನೇ ದರ್ಜೆ ಉದ್ಯೋಗಿಗಳ ಮಕ್ಕಳು.ಪ್ರವರ್ಗ 3: ಭಾರತ ದೇಶದ ಸೇವೆ, ನೌಕಾದಳ ಮತ್ತು ವಾಯುಸೇನೆ ಹಾಗೂ ಭಾರತ ದೇಶದ ಅರೆಸೇನಾ ಪಡೆಗಳಲ್ಲಿ (ಬಿಎಸ್‌ಎಫ್‌, ಸಿಆರ್‌ಪಿಎಫ್‌ ಇತ್ಯಾದಿ)  ಕರ್ನಲ್‌ ಸಮಾನಾಂತರ ದರ್ಜೆಯ ಅಧಿಕಾರಿಗಳ ಮಕ್ಕಳು.ಪ್ರವರ್ಗ 4: ಉದ್ಯೋಗನಿರತ ವರ್ಗ ಮತ್ತು ಕೈಗಾರಿಕಾ ವಲಯದಲ್ಲಿ ಉದ್ಯೋಗದಲ್ಲಿರುವವರ ಮಕ್ಕಳು.ಪ್ರವರ್ಗ 5: ಆಸ್ತಿಗಳ ಮಾಲೀಕರು.ಪ್ರವರ್ಗ 6: ‘ಇತರ ಹಿಂದುಳಿದ ವರ್ಗ’ಗಳಲ್ಲಿ ಕೆನೆಪದರವನ್ನು ಹೊರಗಿಡುವ ಮೀಸಲಾತಿ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರವು ಕಾಲ ಕಾಲಕ್ಕೆ ನಿಗದಿಪಡಿಸಿದ ವಾರ್ಷಿಕ ಆದಾಯದ ಮಿತಿ ದಾಟಿದವರ ಮಕ್ಕಳು.‘ಇತರ ಹಿಂದುಳಿದ ವರ್ಗ’ಗಳಲ್ಲಿ ಕೆನೆಪದರವನ್ನು ಹೊರಗಿಡುವ ಉದ್ದೇಶಕ್ಕಾಗಿ ವಾರ್ಷಿಕ ಆದಾಯದ ಮಿತಿಯನ್ನು ಕೇಂದ್ರ ಸರ್ಕಾರರೂ1 ಲಕ್ಷಕ್ಕೆ ನಿಗದಿಪಡಿಸಿತ್ತು. ನಂತರದ ದಿನಗಳಲ್ಲಿ ಆದಾಯದ ಮಿತಿಯನ್ನುರೂ1 ಲಕ್ಷದಿಂದರೂ2.50 ಲಕ್ಷಕ್ಕೆ,

ರೂ2.5 ಲಕ್ಷದಿಂದರೂ4.50 ಲಕ್ಷಕ್ಕೆ,ರೂ4.50 ಲಕ್ಷದಿಂದರೂ6 ಲಕ್ಷಕ್ಕೆ ಹೆಚ್ಚಿಸಿರುತ್ತದೆ.ಕೆನೆಪದರವನ್ನು ಮೀಸಲಾತಿಯಿಂದ ಹೊರಗಿಡುವ ಮೀಸಲಾತಿಯ ಸಾಮಾನ್ಯ ನಿಯಮಗಳು ‘ಇತರ ಹಿಂದುಳಿದ ವರ್ಗ’ಗಳಿಗೆ ಮಾತ್ರ ಅನ್ವಯಿಸುತ್ತವೆ. ಉಳಿದ ಯಾವ ಮೀಸಲಾತಿಗಳಿಗೆ ಅನ್ವಯಿಸುವುದಿಲ್ಲ. ಪ್ರಜಾಸತ್ತಾತ್ಮಕವಾಗಿ ನ್ಯಾಯ ಸಮ್ಮತ ಕ್ರಮ ಇದಲ್ಲ.ಕೇಂದ್ರ ಸರ್ಕಾರವು 2008ರ ಅಕ್ಟೋಬರ್‌ 14ರಂದು ಆದೇಶವನ್ನು  ಹೊರಡಿಸಿ, ‘ಇತರ ಹಿಂದುಳಿದ ವರ್ಗ’ಗಳಲ್ಲಿ ಕೆನೆಪದರವನ್ನು ಹೊರಗಿಡುವ ಮೀಸಲಾತಿ ಸಲುವಾಗಿ ವಾರ್ಷಿಕ ಆದಾಯದ ಮಿತಿಯನ್ನುರೂ4.50 ಲಕ್ಷಕ್ಕೆ ನಿಗದಿಪಡಿಸಿತ್ತು. ಸದರಿ ಆದೇಶವನ್ನು ಆಧಾರವಾಗಿ ಇಟ್ಟುಕೊಂಡು ಡಾ. ಸಿ.ಎಸ್‌. ದ್ವಾರಕಾನಾಥ್‌ ನೇತೃತ್ವದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು 2009ರ ಜನವರಿ 1ರಂದು  ರಾಜ್ಯ ಸರ್ಕಾರಕ್ಕೆ ವಿಶೇಷ ವರದಿ ಸಲ್ಲಿಸಿದೆ. ಆ ವರದಿಯಲ್ಲಿ ಆಯೋಗವು ‘ಇತರ ಹಿಂದುಳಿದ ವರ್ಗ’ಗಳಲ್ಲಿ ಕೆನೆಪದರವನ್ನು ಹೊರಗಿಡುವ ವಾರ್ಷಿಕ ಆದಾಯದ ಮಿತಿಯನ್ನುರೂ4.50 ಲಕ್ಷಕ್ಕೆ ನಿಗದಿಪಡಿಸಿ ಸೂಕ್ತ ಸರ್ಕಾರಿ ಆದೇಶವನ್ನು ಹೊರಡಿಸುವಂತೆ ಸರ್ವಾನುಮತದ ಸಲಹೆ ನೀಡಿದೆ. ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರ 2009ರ ಅಕ್ಟೋಬರ್‌ 8ರಂದು ನಡೆದ ಸಂಪುಟ ಸಭೆಯಲ್ಲಿ ಪ್ರಸ್ತಾವವನ್ನು ಅನಿರ್ದಿಷ್ಟ ಕಾಲ ಮುಂದೂಡಿತ್ತು. ತದನಂತರ ಅಧಿಕಾರಕ್ಕೆ ಬಂದ ಡಿ.ವಿ. ಸದಾನಂದಗೌಡರ ಸರ್ಕಾರವು ವಾರ್ಷಿಕ ಆದಾಯದ ಮಿತಿಯನ್ನುರೂ2 ಲಕ್ಷದಿಂದರೂ3.50 ಲಕ್ಷಕ್ಕೆ ಮಾತ್ರ ಹೆಚ್ಚಿಸಿರುತ್ತದೆ. ಆಂಧ್ರಪ್ರದೇಶ ರಾಜ್ಯದಲ್ಲಿ 2006 ಏಪ್ರಿಲ್‌ 4ರಂದೇ ‘ಇತರ ಹಿಂದುಳಿದ ವರ್ಗ’ಗಳಲ್ಲಿ ಕೆನೆಪದರವನ್ನು ಹೊರಗಿಡುವ ಉದ್ದೇಶಕ್ಕಾಗಿ ವಾರ್ಷಿಕ ಆದಾಯದ ಮಿತಿಯನ್ನುರೂ4 ಲಕ್ಷಕ್ಕೆ ನಿಗದಿ ಮಾಡಲಾಗಿದೆ.ಕೇಂದ್ರ ಸರ್ಕಾರವು ‘ಇತರ ಹಿಂದುಳಿದ ವರ್ಗ’ಗಳಲ್ಲಿ ಕೆನೆಪದರವನ್ನು ಹೊರಗಿಡಲು ವಾರ್ಷಿಕ ಆದಾಯದ ಮಿತಿಯನ್ನುರೂ4.50 ಲಕ್ಷಕ್ಕೆ ನಿಗದಿಪಡಿಸಿದ 4 ವರ್ಷ 8 ತಿಂಗಳ ನಂತರ ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆದಾಯದ ಮಿತಿಯನ್ನು ಪ್ರಸ್ತುತ ಚಾಲ್ತಿಯಲ್ಲಿರುವರೂ3.50 ಲಕ್ಷದಿಂದರೂ4.50 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ.‘ಇತರ ಹಿಂದುಳಿದ ವರ್ಗ’ಗಳಲ್ಲಿ ಆದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ, ಹೆಚ್ಚುತ್ತಿರುವ ಜಿಡಿಪಿ ಮತ್ತು ವ್ಯಕ್ತಿಗತ ಆದಾಯ, ಕುಸಿಯುತ್ತಿರುವ ರೂಪಾಯಿ ಮೌಲ್ಯ, ಉದ್ಯೋಗಿಗಳಿಗೆ ಈ  ಅವಧಿಯಲ್ಲಿ ಏರಿಕೆಯಾದ ಸಂಬಳ ಮತ್ತಿತರ ಅಂಶಗಳನ್ನು ಪರಿಗಣಿಸಬೇಕಿದೆ. ಕೇಂದ್ರ ಸರ್ಕಾರವು ಇದೇ ವರ್ಷ ‘ಇತರ ಹಿಂದುಳಿದ ವರ್ಗ’ಗಳಲ್ಲಿ ಕೆನೆಪದರವನ್ನು ಹೊರಗಿಡಲು ವಾರ್ಷಿಕ ಆದಾಯದ ಮಿತಿಯನ್ನುರೂ4.50 ಲಕ್ಷದಿಂದರೂ6 ಲಕ್ಷಕ್ಕೆ ಹೆಚ್ಚಿಸಿರುವುದನ್ನು ಸಿದ್ದರಾಮಯ್ಯ ಪರಾಮರ್ಶಿಸಬೇಕು. ರಾಜ್ಯದಲ್ಲೂ ಈ ಸೌಲಭ್ಯ ಪಡೆಯಲು ಆದಾಯದ ಮಿತಿಯನ್ನುರೂ6 ಲಕ್ಷಕ್ಕೆ ಹೆಚ್ಚಿಸಬೇಕು.

ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 52ರಷ್ಟಿರುವ ಇತರ ಹಿಂದುಳಿದ ವರ್ಗಗಳ ಸಮೂಹದ ಪರವಾಗಿ ಈ ಮನವಿ.

 

ಪ್ರತಿಕ್ರಿಯಿಸಿ (+)