ಭಾನುವಾರ, ಜೂನ್ 20, 2021
21 °C
ಸೇವಾ ಕ್ಷೇತ್ರ; ರೂ. 9,858 ಕೋಟಿ ಹೂಡಿಕೆ

‘ಎಫ್‌ಡಿಐ’ ಶೇ 60 ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಪ್ರಸಕ್ತ ಹಣ­ಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಸೇವಾ ಕ್ಷೇತ್ರಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಹರಿವು ಶೇ 60ರಷ್ಟು ತಗ್ಗಿದೆ. ಏಪ್ರಿಲ್‌–ಡಿಸೆಂಬರ್‌ ಅವಧಿಯಲ್ಲಿ 159 ಕೋಟಿ ಡಾಲರ್‌ಗಳಿಗೆ (ರೂ. 9,858 ಕೋಟಿ) ಇಳಿಕೆ ಕಂಡಿದೆ.ವಿಮೆ, ಬ್ಯಾಂಕಿಂಗ್‌, ಸಂಶೋಧನೆ ಮತ್ತು ಅಭಿವೃದ್ಧಿ, ಹೊರಗುತ್ತಿಗೆ, ಕೊರಿಯರ್‌ ಸಹ ಸೇವಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. 2012ನೇ ಸಾಲಿನ ಏಪ್ರಿಲ್‌–ಡಿಸೆಂಬರ್‌ ಅವಧಿಯಲ್ಲಿ ಸೇವಾ ವಲಯ 404 ಕೋಟಿ ಡಾಲರ್‌ಗಳಷ್ಟು (ರೂ. 25,048 ಕೋಟಿ) ‘ಎಫ್‌ಡಿಐ’ ಆಕರ್ಷಿಸಿತ್ತು.‘ವಿದೇಶಿ ಹೂಡಿಕೆದಾರರು ಭಾರತದಲ್ಲಿ ಹೊಸ ಸರ್ಕಾರ ರಚನೆ  ಎದುರು ನೋಡು­ತ್ತಿದ್ದಾರೆ. ಹಾಗಾಗಿ ಕಳೆದ ನಾಲ್ಕೈದು ತಿಂಗಳಿಂದ ಹೂಡಿಕೆ ಪ್ರಮಾಣ ಇಳಿಮುಖವಾಗಿದೆ. ಚುನಾವಣೆ ಸಂದರ್ಭ­ದಲ್ಲಿ ಹೊಸ ಹೂಡಿಕೆ ಪ್ರಮಾಣ ಸಹಜ­ವಾ­ಗಿಯೇ ಕಡಿಮೆ ಇರುತ್ತದೆ. ಇನ್ನೇನಿ­ದ್ದರೂ ಹೊಸ ಸರ್ಕಾರ ರಚನೆಯಾದ ಮೇಲೆಯೇ ‘ಎಫ್‌ಡಿಐ’ ಹರಿವು ಹೆಚ್ಚಬಹುದು’ ಎಂದು ಕಾರ್ಪೊರೇಟ್‌ ಕಾನೂನು ಸಲಹಾ ಸಂಸ್ಥೆ ಅಮರ್‌­ಚಂದ್‌ ಅಂಡ್‌ ಮಂಗಳದಾಸ್‌ನ ತೆರಿಗೆ ವಿಭಾಗದ ಮುಖ್ಯಸ್ಥ ಕೃಷ್ಣನ್‌ ಮಲ್ಹೋತ್ರಾ ಅಭಿಪ್ರಾಯಪಟ್ಟಿದ್ದಾರೆ.‘ಸೇವಾ ಕ್ಷೇತ್ರ ಮಾತ್ರವಲ್ಲ, ಕಾಮ­ಗಾರಿ, ಲೋಹ ಉದ್ಯಮ, ಹೋಟೆಲ್‌, ಪ್ರವಾಸೋದ್ಯಮ ಸೇರಿದಂತೆ ಉಳಿದ ವಲಯಗಳಿಗೂ ‘ಎಫ್‌ಡಿಐ’ ಹರಿವು ತಗ್ಗಿದೆ. ಪ್ರಸಕ್ತ ಏಪ್ರಿಲ್‌–ಡಿಸೆಂಬರ್‌ ಅವಧಿಯಲ್ಲಿ ಎಲ್ಲ ವಲಯಗಳು ಸೇರಿ ಒಟ್ಟಾರೆ 2200 ಕೋಟಿ ಡಾಲರ್‌­ಗಳಷ್ಟು (ರೂ. 1.36 ಲಕ್ಷ ಕೋಟಿ) ‘ಎಫ್‌ಡಿಐ’ ಆಕರ್ಷಿಸಿವೆ. 2012ನೇ ಸಾಲಿಗೆ ಹೋಲಿಸಿದರೆ ಇದು ಶೇ 3ರಷ್ಟು ಕಡಿಮೆ ಇದೆ’ ಎಂದು ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆ (ಡಿಐಪಿಪಿ) ಹೇಳಿದೆ.ಸೇವಾ ಕ್ಷೇತ್ರ ದೇಶದ ಒಟ್ಟಾರೆ ಆರ್ಥಿಕ ಪ್ರಗತಿಗೆ (ಜಿಡಿಪಿ) ಶೇ 60ರಷ್ಟು ಕೊಡುಗೆ ನೀಡುತ್ತದೆ. ‘ಎಫ್‌ಡಿಐ’ ತಗ್ಗಿ ರು­ವುದು ವಿದೇಶಿ ವಿನಿಮಯ ಮೀಸಲಿನ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.