ಭಾನುವಾರ, ಜನವರಿ 26, 2020
27 °C

‘ಎಲ್ಲ ಕಾಲದ ಸಾಹಿತ್ಯದಲ್ಲೂ ಸಮಾಜಚಿಂತನೆ’

ಪ್ರಜಾವಾಣಿ ವಾರ್ತೆ/ ಕೆ.ಎಸ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

ಮೂಡುಬಿದಿರೆ: ‘ಎಲ್ಲ ಕಾಲಘಟ್ಟದ ಸಾಹಿತ್ಯದಲ್ಲೂ ಸಮಾಜ ಚಿಂತನೆಯ ಅಂಶಗಳು ಇವೆ’ ಎಂದು ಖ್ಯಾತ ವಿಮರ್ಶಕ ಸಿ.ಎನ್.ರಾಮಚಂದ್ರನ್ ಅಭಿಪ್ರಾಯಪಟ್ಟರು.ಆಳ್ವಾಸ್ ವಿಶ್ವ ನುಡಿಸಿರಿಯ ರತ್ನಾಕ­ರ­ವರ್ಣಿ ವೇದಿಕೆಯಲ್ಲಿ ಭಾನುವಾರ ನಡೆದ ‘ಕನ್ನಡ ಸಾಹಿತ್ಯ ಸಮಾಜ ಚಿಂತನೆ’ ವಿಚಾರಗೋಷ್ಠಿಯಲ್ಲಿ ‘ಹೊಸಗನ್ನಡ ಸಾಹಿತ್ಯ’ ವಿಷಯ ಮೇಲೆ ಅವರು ಮಾತನಾಡಿದರು.‘ಹೊಸಗನ್ನಡ ಸಾಹಿತ್ಯದಲ್ಲಿ ಪ್ರಭುತ್ವ, ಪ್ರತಿರೋಧ ಹಾಗೂ ಅಸ್ಮಿತೆಯ ಆತಂಕಗಳು ಪರಸ್ಪರ ಮುಪ್ಪುರಿಗೊಂಡಿವೆ. ಈ ಕಾಲದ ಎಲ್ಲ ಸಾಹಿತ್ಯಕ ಚಳವಳಿಗಳಲ್ಲೂ ಪ್ರಭುತ್ವದ ಪ್ರತಿರೋಧತೆ ಕಂಡುಬಂದಿದೆ’ ಎಂದು ತಿಳಿಸಿದರು.‘ನವೋದಯದಲ್ಲಿ ಅಸ್ಮಿತೆಯು ಉಪನಿಷತ್ ತತ್ವಗಳನ್ನಾಧರಿಸಿದ್ದರೆ, ಪ್ರಗತಿಶೀಲ ಸಾಹಿತ್ಯದಲ್ಲಿ ವರ್ಗಹೀನ ಸಮಾ­ಜವನ್ನು ಕಟ್ಟುವುದು, ನವ್ಯರ ಕಾಲಘಟ್ಟದಲ್ಲಿ ವ್ಯಕ್ತಿಯ ವಿಕಸನ ಸಾಧ್ಯವಿರುವ ವ್ಯವಸ್ಥೆಯನ್ನು ಕಟ್ಟು­ವುದು ಹಾಗೂ ದಲಿತ ಬಂಡಾಯದಲ್ಲಿ ಯಾವ ಯಾವ ವಿಚಾರಗಳು ಕೇಂದ್ರದ­ಲ್ಲಿದೆಯೋ ಅವುಗಳನ್ನು ಪಲ್ಲಟಗೊಳಿ­ಸುವ ಅಸ್ಮಿತೆಗಳು ಪ್ರಧಾನವಾಗಿ ಕಂಡಿವೆ’ ಎಂದು ಅವರು ವಿಶ್ಲೇಷಿಸಿ­ದರು.‘ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ತತ್ಕಾಲದ ಸಮಾಜಕ್ಕೆ ಸ್ಪಂದಿಸುವ ಚಿತ್ರಣ ಇದೆ. ವರ್ಗಭೇದ, ವರ್ಣಭೇದ, ಲಿಂಗಭೇದ ಹಾಗೂ ರಾಜನ ಪರಮಾಧಿಕಾರ ಹೀಗೆ ಆ ಕಾಲದ ಸಮಾಜದಲ್ಲಿದ್ದ ಅಂಶಗಳನ್ನು ಕುರಿತು ಕವಿಗಳು ಹೇಳಿದ್ದಾರೆ’ ಎಂದು ವಿಮ­ರ್ಶಕ ಎನ್.ಎಸ್.ತಾರಾನಾಥ್ ತಿಳಿಸಿ­ದರು.ಅವರು ‘ಹಳೆಗನ್ನಡ ಸಾಹಿತ್ಯದಲ್ಲಿ ಸಮಾಜ ಚಿಂತನೆ’ ಕುರಿತು ಮಾತನಾಡಿ, ‘ಓಲಗಿಸಿ ಬಾಳ್ವುದೇ ಕಷ್ಟಂ ಇಳಾದಿ­ನಾಥರಂ’ ಎಂದು ಪಂಪ ಹೇಳುವ ಮೂಲಕ ರಾಜನನ್ನು ವಿಡಂಬಿಸಿದ್ದಾನೆ. ಹಾಗೆಯೇ, ಆದಿಪುರಾಣದಲ್ಲಿ ಭರತ ಭೂಮಂಡಲ ಗೆದ್ದು ತನ್ನ ಹೆಸರನ್ನು ವೃಷಭಾಚಲದಲ್ಲಿ ಬರೆಸಲು ಹೋದಾ­ಗ ಅಲ್ಲಿ ಎಲ್ಲ ಕಡೆಯೂ ಪೂರ್ವ ಅರಸರ ಹೆಸರಿದ್ದು ತನ್ನ ಹೆಸರಿಗೆ ಜಾಗವಿಲ್ಲದ್ದನ್ನು ಕಂಡು “ಕೊಳಕೊಂಡ ಗರ್ವರಸಂ ಸೋರ್ದುದು’ ಎಂದು ಹೇಳುವ ಮೂಲಕ ರಾಜನ ಅಧಿಕಾರ­ವನ್ನು ತಗ್ಗಿಸುವ ಘಟನೆಗಳನ್ನು ಸಾಂಕೇ­ತಿ­ಕ­ವಾಗಿ ಚಿತ್ರಿಸುತ್ತಾನೆ. ಆದಿಪುರಾಣದ­ಲ್ಲಂತೂ ಆ ಕಾಲಘಟ್ಟದ ಸಮಾಜದ ಜ್ಞಾನದ ವಿವಿಧ ಶಾಖೆಗಳು, ಸಂಗತಿ­ಗಳನ್ನು ಅವನು ಅಭಿವ್ಯಕ್ತಿಸಿದ್ದಾನೆ’ ಎಂದರು.ಇದೇ ರೀತಿಯ ವಿಚಾರಗಳು ವಡ್ಡಾರಾಧನೆ, ರನ್ನನ ಕೃತಿಗಳು ಇಲ್ಲೆಲ್ಲ ಕಾಣಬಹುದಾಗಿದೆ. ಅದರಲ್ಲೂ ರನ್ನನ ಕೃತಿಗಳಲ್ಲಿ ಯುದ್ದದಿಂದಾಗುವ ಹಾನಿಯ ಕುರಿತಾದ ಹಲವು ಸನ್ನಿವೇಶ­ಗಳು ಮೂಡಿ ಬಂದಿವೆ. ಪತಿ ಮೃತಪ­ಟ್ಟಾಗಲೂ ಚಾರಿತ್ರಿಕ ಶುದ್ಧತೆಯನ್ನು ಕಾಯ್ದುಕೊಂಡು, ಮಹಾನ್ ಸಾಧನೆ ಮಾಡುವ ಅತ್ತಿಮಬ್ಬೆಯ ಚಿತ್ರಣವನ್ನು ಕಟ್ಟಿಕೊಡುತ್ತಾನೆ. ವಡ್ಡಾರಾಧನೆಯಲ್ಲಿ ಸುಕುಮಾರಸ್ವಾಮಿಯ ಕಥೆಯಲ್ಲಿ ದಲಿತ ಸ್ತ್ರೀಗೆ ದೀಕ್ಷೆ ಕೊಡುವ ಮೂಲಕ ವರ್ಣಭೇದಕ್ಕೆ ಪ್ರತಿಕ್ರಿಯೆಯನ್ನು ಅದರಲ್ಲಿ ಕಾಣಬಹುದು’ ಎಂದು ವಿಶ್ಲೇಷಿಸಿದರು.

ಪ್ರತಿಕ್ರಿಯಿಸಿ (+)