ಗುರುವಾರ , ಫೆಬ್ರವರಿ 25, 2021
29 °C
ಕಲಘಟಗಿ ತಾಲ್ಲೂಕು ಸಾಹಿತ್ಯ ಸಮ್ಮೇಳನ

‘ಕನ್ನಡ ತಂತ್ರಾಂಶ ಅಭಿವೃದ್ಧಿ ಹೊಂದಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕನ್ನಡ ತಂತ್ರಾಂಶ ಅಭಿವೃದ್ಧಿ ಹೊಂದಲಿ’

ಕಲಘಟಗಿ: ‘ಕನ್ನಡ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳು ವಂತಾಗಲು ಕನ್ನಡದ ತಂತ್ರಾಂಶಗಳು ಅಭಿವೃದ್ಧಿ ಹೊಂದ ಬೇಕು ಎಂದು ಮೈಸೂರಿನ ಭಾರತೀಯ ಭಾಷಾ ಸಂಸ್ಥೆಯ ಹಿರಿಯ ಪ್ರಾಧ್ಯಾಪಕ ಡಾ.ಎಚ್. ಎಂ. ಮಹೇಶ್ವರಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಮಾದರಿ ಸರಕಾರಿ ಪ್ರಾಥಮಿಕ ಶಾಲೆಯ ಆವರಣದ ಮಡಿವಾಳ ಶಿವಾಚಾರ್ಯ ಮಹಾ ವೇದಿಕೆಯಲ್ಲಿ ತಾಲ್ಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ  ಅವರು  ಮಾತನಾಡಿದರು. ‘ಕನ್ನಡವು ಶ್ರೀಮಂತ ಭಾಷೆಯಾಗಿದ್ದು, ಭಾಷೆಯ ಶ್ರೀಮಂತಿಕೆ ಜಗತ್ತಿನ ಮೂಲೆ ಮೂಲೆಗಳಲ್ಲಿರುವ ಕನ್ನಡಿಗರನ್ನು ಅಂತರ್ಜಾಲದ ಮೂಲಕ ತಲುಪುವ ಸಾಧ್ಯತೆಯನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ತಂತ್ರಾಂಶ ಅಭಿವೃದ್ಧಿ ಹೊಂದಬೇಕಿದೆ’ ಎಂದರು.‘ಇಂಗ್ಲಿಷ್‌ನ ಷೇಕ್ಸ್ ಪಿಯರ್‌ನ ಸಾಹಿತ್ಯವು ಅಂತರ್ಜಾಲದಲ್ಲಿ ಸಾವಿರಾರು ಪುಟಗಳಷ್ಟು ದೊರೆ ಯುತ್ತಿದೆ. ಇದು ಕನ್ನಡಕ್ಕೂ ಸಾಧ್ಯವಾಗಬೇಕು. ಜ್ಞಾನಪೀಠ ಪ್ರಶಸ್ತಿಯನ್ನು ಪಡೆಯುವ ಇನ್ನೂ ಹಲವು ಸಾಹಿತಿಗಳು ನಮ್ಮಲ್ಲಿದ್ದಾರೆ’ ಎಂದರು.‘ಭಾಷೆಗಳ ಪರಿಧಿ ಮೀರಿ, ಉತ್ತಮ ಸಾಹಿತ್ಯವು ಭಾಷಾಂತರಗೊಂಡು ಜನರನ್ನು ತಲುಪುವಂತಹ ಕೆಲಸವನ್ನು ಸಾಹಿತಿಗಳು ಮಾಡಬೇಕಿದೆ’ಎಂದ ಅವರು,  ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪ ಅವರ ದಾಟು ಕಾದಂಬರಿ ಫ್ರೆಂಚ್ ಭಾಷೆಗೆ ಅನುವಾದ ಗೊಂಡಿರುವುದನ್ನು ಉದಾಹರಿಸಿದರು.ಪ್ರಾಸ್ತಾವಿಕ ಮಾತುಗಳನ್ನಾಡಿದ  ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಂಪುರದನಗೌಡ್ರ ಮಾತನಾಡಿ, ‘ಸರ್ಕಾರದ ಪ್ರೋತ್ಸಾಹದಿಂದ ತಾಲ್ಲೂಕು ಕೇಂದ್ರ ದಲ್ಲಿಯೂ ಸಾಹಿತ್ಯಿಕ ಚಟುವಟಿಕೆಗಳು ನಡೆಯು ವಂತಾದುದು ಉತ್ತಮ ಬೆಳವಣಿಗೆ’ ಎಂದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಮಾತನಾಡಿ, ‘ಮುಂಬರುವ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಸಮಾರಂಭಕ್ಕೆ ಸರ್ಕಾರ ₨ 5ಕೋಟಿ ನೀಡಿರುವುದು ಪರಿಷತ್ತಿನ ಕೆಲಸಗಳಿಗೆ ಹೊಳಪು ತುಂಬಲಿದೆ’ ಎಂದರು.ನಿಕಟಪೂರ್ವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಂ.ಆರ್. ತೋಟಗಂಟಿ, ಜಿ.ಪಂ.ಅಧ್ಯಕ್ಷ ಶಂಕ್ರಣ್ಣ ಅಗಡಿ ಮಾತನಾಡಿದರು. ಕೆ.ಬಿ.ಪಾಟೀಲ ಕುಲಕರ್ಣಿ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ರೇವಣ ಸಿದ್ಧಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು.

ವೇದಿಕೆಯಲ್ಲಿ ತಾ.ಪಂ.ಅಧ್ಯಕ್ಷ ಎಂ.ಎಫ್‌.ಜಾವೂರ, ಜಿ.ಪಂ.ಸದಸ್ಯ ರಾದ ಬಸವರಾಜ ಕರಡಿಕೊಪ್ಪ, ವೈ.ಬಿ. ದಾಸನಕೊಪ್ಪ, ಕಸ್ತೂರಿ ಧಾರವಾಡ, ಸಾಹಿತಿಗಳಾದ ಸಂಗಮೇಶ ಹಂಡಗಿ, ಜಗದೀಶ ಮಂಗಳೂರಮಠ, ಬಿ.ಪಿ.ಸಿದ್ಧಾಶ್ರಮ, ಡಾ.ಹೆಚ್‌.ಬಿ.ಪಾಟೀಲ, ಕೆ.ಆರ್‌. ಕುಲಕರ್ಣಿ, ಎನ್‌.ಸ್‌.ಬೆಳ್ಳಿವಾಲೆ, ನೌಕರ ಸಂಘದ ತಾಲ್ಲೂಕು ಅಧ್ಯಕ್ಷ ಐ.ವಿ.ಜವಳಿ, ಕ್ಷೇತ್ರಶಿಕ್ಷಣಾಧಿಕಾರಿ ವಿ.ಜಿ.ಪೋಳ, ಬಿ.ಜಿ.ಬಿದರಿ, ಕೆ.ಜೆ.ರಪಾಟಿ, ಪ್ರಭು ರಂಗಾಪೂರ, ರಮೇಶ ಸೋಲಾರಗೊಪ್ಪ, ಅನಿಲ ದೇಸಾಯಿ, ಕೆ.ಸಿ.ಮಲ್ಲಿಗವಾಡ ಇದ್ದರು.ನಾಡದೇವಿ ಭುವನೇಶ್ವರಿ ದೇವಿಯ ಭಾವಚಿತ್ರ ಮತ್ತು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ .ಬಿ.ಪಾಟೀಲಕುಲಕರ್ಣಿಯವರ ಭವ್ಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡು ಮೆರುಗು ನೀಡಿದರು. ಜಗ್ಗಲಿಗೆ ಮೇಳ, ಮರಗಾಲು ಕುಣಿತ, ಜಾನಪದ ಕುಣಿತಗಳು ಪಾಲ್ಗೊಂಡು ರಂಜಿಸಿದವು.ಜನಪ್ರತಿನಿಧಿಗಳ ಗೈರು; ತಾಲ್ಲೂಕು ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ಯನ್ನು ವಹಿಸಿಕೊಳ್ಳಬೇಕಿದ್ದ ಶಾಸಕ ಸಂತೋಷ ಲಾಡ್‌ ಸಮಾರಂಭಕ್ಕೆ ಹಾಜರಾಗದೇ ಉಳಿದರು. ಅದರಂತೆ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಆಹ್ವಾನಿತ ಅತಿಥಿಗಳಲ್ಲಿ ಸಂಸದರು, ವಿಧಾನಪರಿಷತ್‌ ಸದಸ್ಯರು ಹಾಜರಾಗದೇ ಇರುವುದು ಸಾಹಿತ್ಯಾಸಕ್ತರು ಮತ್ತು ಪಾಲ್ಗೊಂಡಿದ್ದ ನಾಗರಿಕರಿಗೆ ಬೇಸರ ಮೂಡಿಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.