‘ಕಪ್ಪು ಬಟ್ಟೆ ಇಷ್ಟಪಟ್ಟೆ’

7
ಥಳುಕು ಬಳುಕು

‘ಕಪ್ಪು ಬಟ್ಟೆ ಇಷ್ಟಪಟ್ಟೆ’

Published:
Updated:

ಲಿಯಾನ ಡಿಕ್ರೂಸ್‌ ವಾರ್ಡ್‌ರೋಬ್‌ ತೆಗೆದರೆ ಕಾಣುವ ಬಟ್ಟೆಗಳಲ್ಲಿ ಕಪ್ಪು ಬಣ್ಣದವೇ ಹೆಚ್ಚು. ಆದರೆ ಒಂದು ಉಡುಗೆಯಂತೆ ಇನ್ನೊಂದು ಇಲ್ಲ. ಯಾವುದಾದರೂ ಪಾರ್ಟಿಗೋ, ಮಳಿಗೆ ಇತ್ಯಾದಿ ಸಮಾರಂಭಕ್ಕೋ ಹೊರಡಬೇಕೆಂದರೆ ಅವರ ಕೈ ಸಹಜವಾಗಿಯೇ ಎತ್ತಿಕೊಳ್ಳುವುದು ಕಪ್ಪು ಉಡುಗೆಯನ್ನೇ.ಕಪ್ಪು ಬಣ್ಣಕ್ಕೂ ಇಲಿಯಾನಾಗೂ ಅವಿನಾಭಾವ ಸಂಬಂಧ. ಅವರ ಅಮ್ಮ ಗೋವಾದ ಹೋಟೆಲ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಅದರ ಮ್ಯಾನೇಜರ್‌ ಒಂದೊಮ್ಮೆ ಪ್ರೌಢ ವಯಸ್ಸಿನ ಇಲಿಯಾನಾ ಅವರನ್ನು ನೋಡಿದ್ದೇ ಬಿಟ್ಟ ಕಣ್ಣು ಬಿಟ್ಟಹಾಗೇ ನಿಂತರು. ಸುಂದರ ಮೊಗದ, ನಿಷ್ಕಲ್ಮಶ ನಗೆಯ ಹುಡುಗಿಯನ್ನು ಮಾಡೆಲ್‌ ಮಾಡಿ, ರ್‍್ಯಾಂಪ್‌ ಹತ್ತಿಸಿ ಎಂದು ಸಲಹೆ ಕೊಟ್ಟಿದ್ದೇ ಆ ಮ್ಯಾನೇಜರ್‌. ಆ ದಿನ ಇಲಿಯಾನಾ ತೊಟ್ಟಿದ್ದು ಕಪ್ಪು ಉಡುಗೆ.2003ನೇ ಇಸವಿಯಲ್ಲಿ ಮೊದಲ ಸಲ ಪೋರ್ಟ್‌ಫೋಲಿಯೋಗೆಂದು ಫೋಟೊ ಶೂಟ್‌ಗೆ ಹೊರಟಾಗ ಒಯ್ದ ಬಟ್ಟೆ ಬ್ಯಾಗಿನಲ್ಲೂ ಕಪ್ಪು ವಸ್ತ್ರಗಳಿದ್ದವು. ‘ಕಪ್ಪು ಬಣ್ಣ ಎಂಥವರಿಗೂ ಒಪ್ಪುತ್ತದೆ. ತುಂಬಾ ಬೆಳ್ಳಗಿದ್ದವರು ಆ ಬಣ್ಣದ ಬಟ್ಟೆ ತೊಟ್ಟರೆ ಹೊಳೆಯುತ್ತಾರೆ. ಕಪ್ಪಗಿರುವವರಿಗೆ ತಮಗಿಂತ ಕಪ್ಪಾದದ್ದು ಇದೆ ಎಂಬ ಸಮಾಧಾನವನ್ನು ಆ ಬಣ್ಣದ ಬಟ್ಟೆ ಕೊಡುತ್ತದೆ’ ಹೀಗೆನ್ನುವ ಇಲಿಯಾನಾ, ತಮ್ಮ ಕೊಳ್ಳುಬಾಕತನದ ದಿಕ್ಕುದೆಸೆಯನ್ನು ತುಸು ರಂಜಿತವಾಗಿಯೇ ಹೇಳಿಕೊಳ್ಳುತ್ತಾರೆ. ಫುಟ್‌ಪಾತ್‌ ಮೇಲೆ ವ್ಯಾಪಾರ ಮಾಡುವುದು ಅವರಿಗಿಷ್ಟ.

ಭಾರತದ ಬಹುತೇಕ ಸಿನಿಮಾ ಅಭಿಮಾನಿಗಳಿಗೆ ಅವರ ಮುಖ ಪರಿಚಿತವಾಗಿರುವುದರಿಂದ ಅದು ಇಲ್ಲಿ ಕಷ್ಟ. ಹಾಗಾಗಿ ಅಮೆರಿಕದಲ್ಲೋ, ನ್ಯೂಯಾರ್ಕ್‌ನಲ್ಲೋ ಅದರ ಸಾಧ್ಯತೆಯನ್ನು ಅವರು ಹುಡುಕುತ್ತಾರೆ. ಕ್ಲಿಯರೆನ್ಸ್‌ ಸೇಲ್‌ ಕೂಡ ಅವರ ಖರೀದಿಯ ತಾಣವಂತೆ. ಐನೂರು ರೂಪಾಯಿಯ ಮಾಲನ್ನೇ ಹೋಲುವಂಥದ್ದು ಐವತ್ತು ರೂಪಾಯಿಗೆ ಸಿಕ್ಕರೆ ಯಾಕೆ ಬಿಡಬೇಕು ಎಂಬುದು ಅವರ ಕಿವಿಮಾತು. ಗುಣಮಟ್ಟದ ವಿಷಯದಲ್ಲಿ ಮಾತ್ರ ಅವರು ರಾಜಿಯಾಗುವುದಿಲ್ಲ. ಬ್ರಾಂಡ್‌ಗಳ ಹಂಗು ಇದ್ದರೂ ಅದರ ಮೋಹಿ ಅವರಲ್ಲ.ತೊಟ್ಟರೆ ಹಿತವಾದ ಅನುಭವ ನೀಡುವಂಥ ಕಪ್ಪು ಬಣ್ಣದ ಪ್ಯಾಂಟೊಂದು ಅವರ ಬಳಿ ಇದೆ. ಅದನ್ನು ಅತಿ ಹೆಚ್ಚಾಗಿ ತೊಟ್ಟಿರುವ ಅವರು ವೇಷಭೂಷಣ ಪೂರ್ತಿಯಾಗುವುದು ತೊಡುವ ಬೂಟು ಅಥವಾ ಚಪ್ಪಲಿಯಿಂದ ಎಂದು ನಂಬಿದ್ದಾರೆ. ಮಂಡಿಗಿಂತ ಉದ್ದದ ಬಟ್ಟೆಗಳೇ ತಮಗೆ ಒಪ್ಪುವುದು ಎಂದು ಫ್ಯಾಷನ್‌ ಪಂಡಿತರಿಂದ ಕೇಳಿ ತಿಳಿದಿರುವ ಇಲಿಯಾನಾ, ಉಡುಗೆ ವಿಷಯದಲ್ಲಿ ವಿನ್ಯಾಸಕರನ್ನೇನೂ ಹೆಚ್ಚಾಗಿ ನೆಚ್ಚಿಕೊಂಡಿಲ್ಲ. ಬಿಡುವಿದ್ದಾಗ ತಮಗೆ ಬೇಕಾದದ್ದನ್ನು ತಾವೇ ಕೊಳ್ಳುವುದು ಅವರ ಅಭ್ಯಾಸ. ಅವರ ಅಮ್ಮನಿಗೂ ಮಗಳ ಅಭಿರುಚಿ ಗೊತ್ತಿರುವುದರಿಂದ ಸಮಸ್ಯೆಯೇನೂ ಆಗುವುದಿಲ್ಲ. ಈಗೀಗ ಆನ್‌ಲೈನ್‌ ಶಾಪಿಂಗ್‌ ಮಾಡುತ್ತಿದ್ದರೂ ಹೊರಗೆ ಹೋಗಿ ಖರೀದಿಸುವುದೇ ಮಜಾ ಎಂಬುದು ಅನುಭವದ ಮಾತು.ಉಡುಗೆಗಳ ವಾರ್ಡ್‌ರೋಬ್‌ನ ಮಾತಾಯಿತು. ಇನ್ನು ಇಲಿಯಾನಾ ಸಂಗ್ರಹದ ಚಪ್ಪಲಿಗಳದ್ದು ಬೇರೆಯದೇ ಲೋಕ. ಕಳೆದ ಕೆಲವು ವರ್ಷಗಳಲ್ಲಿ ಯಾವುದೇ ಸಂದರ್ಭದಲ್ಲಿ ನೋಡಿದರೂ ಇಲಿಯಾನಾ ಬಳಿ ಎಪ್ಪತ್ತು ಜೊತೆ ಚಪ್ಪಲಿ ಅಥವಾ ಬೂಟುಗಳಿರುತ್ತವೆ. ಅವುಗಳಲ್ಲೂ ಕಪ್ಪು ಬಣ್ಣದವೇ ಹೆಚ್ಚು. ತಮಗೆ ಸಾಕೆನಿಸಿದ ಚಪ್ಪಲಿ ಅಥವಾ ಬೂಟುಗಳನ್ನು ದಾನ ಮಾಡುತ್ತಾರೆ. ಅವನ್ನು ತೊಡುವ ಕಾಲುಗಳನ್ನು ನೋಡಿದಾಗ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದಷ್ಟೇ ಸಂತೋಷವಾಗುತ್ತದಂತೆ.ಯಾವುದೇ ಸಮಾರಂಭದಲ್ಲಿ ಸಿನಿಮಾ ತಾರೆಯರ ದಂಡು ನೆರೆದರೆ ಇಲಿಯಾನಾ ಕಣ್ಣು ಸೋನಂ ಕಪೂರ್‌ ಮೇಲೆ ನೆಡುತ್ತದೆ. ಪ್ರತಿ ಸಮಾರಂಭದಲ್ಲೂ ಭಿನ್ನ ರೀತಿಯಲ್ಲಿ ಕಾಣಲೇಬೇಕೆಂದು ಸೋನಂ ಅಣಿಯಾಗಿ ಬರುವ ರೀತಿ ಕಂಡು ಅವರು ಬೆರಗುಗೊಂಡಿದ್ದಾರೆ. ಅಷ್ಟರ ಮಟ್ಟಿಗೆ ಪ್ರತಿದಿನವೂ ಭಿನ್ನವಾಗಿ ಕಾಣುವುದು ಸಾಧ್ಯವೇ ಎಂಬುದು ಅವರ ಪ್ರಶ್ನೆ. ಈ ವಿಷಯದಲ್ಲಿ ಸೋನಂ ಜೊತೆ ಅವರು ಚರ್ಚೆಯನ್ನೂ ನಡೆಸಿದ್ದಾರೆ. ‘ಮನಸ್ಸು ಬೆಳ್ಳಗಿರಬೇಕು, ತೊಡುವ ಉಡುಗೆ ಮಾತ್ರ ಕಪ್ಪಗಿರಬೇಕು’ ಎಂಬ ಇಲಿಯಾನಾ ಮಾತು ಅರ್ಥಪೂರ್ಣವಾದದ್ದು.

–ಎನ್ವಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry