ಗುರುವಾರ , ಫೆಬ್ರವರಿ 25, 2021
24 °C
ಸಾಧುಕೋಕಿಲ ತಂಡದಿಂದ ಹಾಸ್ಯ, ಸಂಗೀತ

‘ಕಾರವಾರ ಉತ್ಸವ’ ಇಂದಿನಿಂದ

undefined Updated:

ಅಕ್ಷರ ಗಾತ್ರ : | |

‘ಕಾರವಾರ ಉತ್ಸವ’ ಇಂದಿನಿಂದ

ಕಾರವಾರ: ತಾಲ್ಲೂಕಿನಲ್ಲಿ ಮೊದಲ ಬಾರಿಗೆ ಆಯೋಜಿಸಿರುವ ಕಾರವಾರ ಉತ್ಸವಕ್ಕೆ ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿರುವ ಮಯೂರವರ್ಮ ವೇದಿಕೆ ಸಿದ್ಧಗೊಂಡಿದೆ.ಮೇ 2 ರಿಂದ ಮೇ 5 ರ ವರೆಗೆ ಸತತ ನಾಲ್ಕು ದಿನ ನಡೆಯುವ ಈ ಉತ್ಸವದಲ್ಲಿ, ಸ್ಥಳೀಯ ಹಾಗೂ ಸ್ಟಾರ್‌ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಪ್ರೇಕ್ಷಕರಿಗಾಗಿ ವೇದಿಕೆ ಮುಂಭಾಗದಲ್ಲಿ ಐದು ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ವಿಶೇಷ ವ್ಯಕ್ತಿಗಳು, ಉತ್ಸವ ಸಮಿತಿ ಸದಸ್ಯರ ಕುಟುಂಬ, ಸ್ಥಳೀಯ ಕಲಾವಿದರ ಕುಟುಂಬ ಹಾಗೂ ಮಾಧ್ಯಮದವರಿಗಾಗಿ ವೇದಿಕೆ ಎದುರು ಪ್ರತ್ಯೇಕ ವಿಭಾಗದಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ.ಕಡಲತೀರದ ಮತ್ತೊಂದು ಭಾಗದಲ್ಲಿ ಅಂಗಡಿ ಹಾಗು ವಿವಿಧ ಆಟಿಕೆಗಳ ವ್ಯವಸ್ಥೆ ಮಾಡಲಾಗಿದೆ. ಸುಮಾರು 140 ಮಳಿಗೆಗಳಿಗೆ ವ್ಯವಸ್ಥೆ ಮಾಡಲಾಗಿದ್ದು, ಸ್ಥಳೀಯ ಹಾಗೂ ಪಾಶ್ಚಾತ್ಯ ತಿಂಡಿ, ತಿನಿಸುಗಳು ಸೇರಿದಂತೆ ವಿವಿಧ ಸಾಮಗ್ರಿಗಳ ಮಾರಾಟ ಮಳಿಗೆಗಳು ತೆರೆದುಕೊಳ್ಳಲಿದೆ. ಮರಣ ಬಾವಿಯಲ್ಲಿ ಸರ್ಕಸ್‌, ತಿರುಗು ಬಂಡಿಯಂತಹ ಆಟಿಕೆ ಯಂತ್ರಗಳು ಸಾರ್ವಜನಿಕರಿಗೆ ಮನರಂಜನೆ ನೀಡಲು ಸನ್ನದ್ಧಗೊಂಡಿವೆ.ಉದ್ಘಾಟನೆ: ಬೆಂಗಳೂರಿನ ಯುನಿಟಿ ಇನ್‌ಫ್ರಾ ಪ್ರಾಜೆಕ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಕಿಶೋರ ಕೆ. ಅವರ್ಸೇಕರ ಕಾರವಾರ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಗೋವಾದ ಸ್ಮಾರ್ಟ್‌ಲಿಂಕ್‌ ನೆಟ್‌ವರ್ಕ್‌ ಲಿಮಿಟೆಡ್‌ನ ಉಪಾಧ್ಯಕ್ಷೆ ಕಮಲಾ ಆರ್‌. ನಾಯ್ಕ ಹಾಗೂ ಕಾರವಾರದ ಫಾದರ್‌ ಡಾ. ಡೆರಿಕ್‌ ಫರ್ನಾಂಡಿಸ್‌ ಉಪಸ್ಥಿತರಿರುವರು.‘ಕಾರವಾರ ಉತ್ಸವದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಕಾರ್ಯಕ್ರಮ ನಡೆಯುವಾಗ ರಾಷ್ಟ್ರೀಯ ಹೆದ್ದಾರಿ 17 ಮಾರ್ಗವನ್ನು ಬಿಲ್ಟ್‌ ವೃತ್ತದಿಂದ ಮಯೂರ ವರ್ಮ ವೇದಿಕೆವರೆಗೆ ತಾತ್ಕಾಲಿಕವಾಗಿ ಬದಲಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ದಿಲೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.ಕಾರವಾರ ಉತ್ಸವದಲ್ಲಿ ಇಂದು...

ಸಂಜೆ 5.30 ಕ್ಕೆ ಸ್ಥಳೀಯ ಕಲಾವಿದರ ಡೊಳ್ಳು ಕುಣಿತದಿಂದ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗಲಿದೆ. ನಂತರ ಕೊಂಕಣಿ ಖೇಳ್, ತಬಲಾ ಸೋಲೋ, ದೀಪಮಾಳ್ ನಾಚ್ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 10.30 ಕ್ಕೆ ಕನ್ನಡ ಚಲನಚಿತ್ರ ನಿರ್ದೇಶಕ, ಹಾಸ್ಯ ಕಲಾವಿದ ಸಾಧು ಕೋಕಿಲ ಮತ್ತು ತಂಡದಿಂದ ಹಾಸ್ಯ, ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಮಧ್ಯೆ ಉತ್ಸವದ ಉದ್ಘಾಟನೆ ಕಾರ್ಯಕ್ರಮವೂ ನಡೆಯಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.