ಬುಧವಾರ, ಜೂನ್ 16, 2021
23 °C
ಆಶಾ ಕಾರ್ಯಕರ್ತರ ಜಿಲ್ಲಾ ಮಟ್ಟದ ಸಮ್ಮೇಳನ

‘ಗಂಭೀರ ವಿಷಯಗಳ ಚರ್ಚೆ ನಡೆಯಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಗಂಭೀರ ಸಮಸ್ಯೆಗಳಿಗೆ ಕಾರಣ­ವಾಗಿರುವ ಜಾಗತೀಕರಣ, -ಉದಾರೀಕರಣ, -ಖಾಸಗೀಕರಣ ನೀತಿಗಳ ಬಗ್ಗೆ ಚರ್ಚಿಸುವ ಬದಲು, ಪ್ರಪಂಚದ ದೊಡ್ಡ ಪ್ರಜಾತಂತ್ರ ದೇಶದ ಚುನಾವಣೆ ಪ್ರಚಾರದಲ್ಲಿ ‘ಚಾಯ್ ಪೇ ಚರ್ಚಾ’ದಂತಹ ವಿಷಯವನ್ನು ಚರ್ಚೆಗೆ ಎತ್ತಿಕೊಂಡಿ­ರುವ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳ ಧೋರಣೆ ನಾಚಿಕೆಗೇಡಿನದು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ. ಸೋಮಶೇಖರ್ ಯಾದಗಿರಿ ಹೇಳಿದರು.ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ನಗರದ ವಿದ್ಯಾ ಮಂಗಲ ಕಾರ್ಯಾಲ­ಯದಲ್ಲಿ ಆಯೋಜಿಸಿದ್ದ ಆಶಾ ಕಾರ್ಯ­­ಕರ್ತೆಯರ ಜಿಲ್ಲಾ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.-ದೇಶದ ದುಡಿಯುವ ಜನರಲ್ಲಿ ಶೇ94 ರಷ್ಟಿರುವ ಅಸಂಘಟಿತ ಕಾರ್ಮಿಕರ ಬದುಕು ಶೋಚನೀಯವಾಗಿದೆ. ಈ ವಿಭಾಗಕ್ಕೆ ಸೇರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ನೌಕರರ ಸ್ಥಾನಮಾನವನ್ನೇ ನಿರಾಕರಿಸ­ಲಾಗಿದ್ದು, ದೇಶದಾದ್ಯಂತ ಲಕ್ಷಾಂತರ ಮಹಿಳೆಯರನ್ನು ಕನಿಷ್ಠ ವೇತನವೂ ಇಲ್ಲದೇ ಗೌರವ ಧನ, ಪ್ರೋತ್ಸಾಹ ಧನ ಇತ್ಯಾದಿಗಳ ಹೆಸರಿನಲ್ಲಿ ಅನಾಗರಿ­ಕವಾಗಿ ದುಡಿಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಡಿ. ಉಮಾದೇವಿ ಮಾತನಾಡಿ-, ಸಂಘದ ನೇತೃತ್ವದಲ್ಲಿ ಸತತವಾಗಿ ರಾಜಿರಹಿತ ಹೋರಾಟದ ಮೂಲಕ ಹಲವಾರು ನ್ಯಾಯಯುತ -ಸೌಲಭ್ಯ­ಗಳನ್ನೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಪಡೆದು­ಕೊಂಡಿರು­ವುದು ಸಂತೋಷದ ಸಂಗತಿ. ಈ ಹಿಂದೆ ಪಡೆದ ಹಲವು ಸೌಕರ್ಯಗಳ ಜೊತೆ­ಯಲ್ಲಿ ಆರೋಗ್ಯ ಇಲಾಖೆಯು ಇತ್ತೀಚೆಗೆ ಇನ್ನೂ ಹಲವು ಸೌಕರ್ಯ­ಗಳನ್ನು ನೀಡುವುದಾಗಿ ಘೋಷಿಸಿರು­ವುದು ಹರ್ಷದ ವಿಷಯ ಎಂದು ಹೇಳಿದರು.ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರದ ಪ್ರೋತ್ಸಾಹಧನದ ಜೊತೆಗೆ, ರಾಜ್ಯ ಸರ್ಕಾರದಿಂದ ಕೇಂದ್ರ­ದಷ್ಟೇ ಸರಿಸಮವಾಗಿ ಮ್ಯಾಚಿಂಗ್ ಗ್ರ್ಯಾಂಟ್ ಪ್ರೋತ್ಸಾಹ ಧನವನ್ನು 2013 ರ ಅಕ್ಟೋಬರ್‌ 28 ರಿಂದ ನೀಡಲಾ­ಗುವುದು. ರಾಜ್ಯದ 35­ಸಾವಿರ ಆಶಾ ಕಾರ್ಯಕರ್ತೆ­ಯರಿಗೆ ಉಚಿತ ಮೊಬೈಲ್ ಮತ್ತು ಸಿಮ್‌­ಕಾರ್ಡ್‌ ಸೌಲಭ್ಯವನ್ನು 2ತಿಂಗಳಲ್ಲಿ ನೀಡಲು ಕ್ರಮ ಕೈಗೊಳ್ಳ­ಲಾಗುವುದು. ಪಿಯು ತೇರ್ಗಡೆ­ಯಾದ ಕಾರ್ಯಕರ್ತೆ­ಯರಿಗೆ ಪ್ರತಿ ವರ್ಷ ನರ್ಸಿಂಗ್‌ ತರಬೇತಿ­ಯಲ್ಲಿ ಶೇ 10ರಷ್ಟು ಕೋಟಾ­ದಡಿ ಉಚಿತ ತರಬೇತಿ ಹಾಗೂ ಉನ್ನತ ವ್ಯಾಸಂಗಕ್ಕೆ ಸಹಾಯಧನ ನೀಡಲಾಗು­ವುದು.

ತೀವ್ರವಾದ, ಮಾರಣಾಂತಿಕ ಕಾಯಿ­ಲೆಗೆ ತುತ್ತಾದ ಆಶಾ ಕಾರ್ಯ­ಕರ್ತೆ­ಯರಿಗೆ ಸರ್ಕಾರದಿಂದ ಸಂಪೂರ್ಣ ಉಚಿತ ಚಿಕಿತ್ಸೆ, ಆರ್ಥಿಕ  ನೆರವು ನೀಡಲು ಕ್ರಮ ಕೈಗೊಳ್ಳಲಾ­ಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿ­ಗಳು ಭರವಸೆ ನೀಡಿದ್ದಾರೆ ಎಂದರು.ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷೆ ಮಹಾದೇವಿ, ಸರಸ್ವತಿ, ರೇಣುಕಾ, ಬಸಲಿಂಗಮ್ಮ, ಸಿದ್ದಮ್ಮ, ಅನಿತಾ, ವೇದಿಕೆಯಲ್ಲಿದ್ದರು. ಜಿಲ್ಲೆಯ ವಿವಿಧೆಡೆಗಳಿಂದ ಅಪಾರ ಸಂಖ್ಯೆಯಲ್ಲಿ ಆಶಾ ಕಾರ್ಯಕರ್ತೆಯರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.