‘ಗಿರಡ್ಡಿ ವಿಮರ್ಶೆ ಆಳವಾದ ಓದಿಗೆ ಪ್ರೇರಣೆ’

ಬೆಂಗಳೂರು: ‘ಪ್ರಬಂಧಗಳಲ್ಲಿ ಜೀವ ಪರವಾದ ಸೃಷ್ಟಿಶೀಲತೆ, ಕೃತಿ ನಿಷ್ಠತೆಯ ಜತೆಗೆ ಅರ್ಥ ಪರಂಪರೆಯನ್ನು ಶೋಧಿಸುವ ನಂಬಿಕೆ ಮತ್ತು ಬದ್ಧತೆಯು ಗಿರಡ್ಡಿ ಗೋವಿಂದರಾಜ ಅವರ ಬರವಣಿಗೆಯಲ್ಲಿ ಕಂಡುಬರುತ್ತದೆ’ ಎಂದು ವಿಮರ್ಶಕಿ ಎಂ.ಎಸ್.ಆಶಾದೇವಿ ಹೇಳಿದರು.
ಡಾ.ಜಿ.ಎಸ್ಸೆಸ್ ವಿಶ್ವಸ್ತ ಮಂಡಲಿಯು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶುಕ್ರವಾರ ಆಯೋಜಿಸಿದ್ದ ಗಿರಡ್ಡಿ ಗೋವಿಂದರಾಜ ಅವರಿಗೆ ‘ಡಾ.ಜಿ.ಎಸ್ಸೆಸ್’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನಾಡಿದರು.
‘ಗಿರಡ್ಡಿ ಅವರ ವಿಮರ್ಶೆ ಇನ್ನಷ್ಟು ಆಳವಾದ ಓದಿಗೆ ಪ್ರೇರೆಪಿಸುವ ಮೂಲಕ ಹೊಸ ಹೊಳಹುಗಳನ್ನು ಪಡೆದುಕೊಳ್ಳಲು ನೆರವಾಗುತ್ತದೆ’ ಎಂದರು.
‘ಕೃತಿ ನಿಷ್ಠೆಯನ್ನು ವೃತ್ತಿ ನಿಷ್ಠೆಯಂತೆ ಪಾಲಿಸಿದ ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾದ ಗಿರಡ್ಡಿ ಅವರು ನಿದ್ದೆ ಮತ್ತು ಎಚ್ಚರದಲ್ಲಿಯೂ ಆಚೀಚೆ ಚಲಿಸದ ಬದ್ಧತೆ ಉಳ್ಳವರು’ ಎಂದು ಅಭಿಪ್ರಾಯಪಟ್ಟರು.
ಕವಿ ಚೆನ್ನವೀರ ಕಣವಿ ಮಾತನಾಡಿ, ‘ನಿಷ್ಠುರ ವಿಮರ್ಶೆಯ, ನೈತಿಕ ಧೈರ್ಯ ಇರುವ ವಿಮರ್ಶಕರಲ್ಲಿ ಗಿರಡ್ಡಿ ಗೋವಿಂದರಾಜ ಪ್ರಮುಖರು. ಸಾಂಪ್ರದಾಯಿಕ ಹಠ ಮತ್ತು ಆಧುನಿಕ ಸಿನಿಕತನ ಇಲ್ಲದ ಅವರು ವಿಮರ್ಶೆಯಲ್ಲಿ ಅಂತರ್ಮುಖತ್ವ ಮತ್ತು ಸಾಮಾಜಿಕತ್ವವನ್ನು ಎತ್ತಿ ಹಿಡಿದಿದ್ದಾರೆ’ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗಿರಡ್ಡಿ ಅವರು, ‘ಕನ್ನಡದ ವಿಮರ್ಶೆ ಸಂದಿಗ್ಧದಲ್ಲಿದೆ. ದಿನದಿಂದ ದಿನಕ್ಕೆ ಹೆಚ್ಚು ಕ್ಲಿಷ್ಟವಾಗುತ್ತಿದೆ. ಈಗ ವಿಮರ್ಶೆಯ ಬಗೆಗೆ ಮರುವಿವೇಚನೆ ಮಾಡಬೇಕಾದ ಅಗತ್ಯವಿದೆ’ ಎಂದು ಹೇಳಿದರು. ‘ವಿಮರ್ಶೆಯ ಸೊಬಗು ಹೆಚ್ಚಿಸಿ, ಹೆಚ್ಚು ಜನರು ಓದುವಂತೆ, ಹೆಚ್ಚು ಜನರನ್ನು ತಲುಪುವಂತೆ ಮಾಡುವ ಅಗತ್ಯವಿದೆ’ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.