ಸೋಮವಾರ, ಜನವರಿ 20, 2020
19 °C
ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಬಂಧನ

‘ಗೌರವದಿಂದ ನಡೆಸಿಕೊಂಡಿದ್ದೇವೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌ (ಪಿಟಿಐ): ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಬಂಧನ ಮತ್ತು ಅವರನ್ನು ವಿವಸ್ತ್ರಗೊಳಿಸಿ ತಪಾ­ಸಣೆ ಮಾಡಿದ ಕ್ರಮವನ್ನು ಭಾರತ ಮೂಲದ ಅಮೆರಿಕದ ಸರ್ಕಾರಿ ಪ್ರಾಸಿಕ್ಯೂಟರ್‌ ಪ್ರೀತ್‌ ಬರಾರ ಗುರುವಾರ ಸಮರ್ಥಿಸಿಕೊಂಡಿದ್ದಾರೆ.ಜೊತೆಗೆ, ದೇವಯಾನಿ  ಅವರ ಮನೆ­ಗೆಲಸದ ಸಹಾಯಕಿಯಾಗಿದ್ದ ಸಂಗೀತಾ ರಿಚರ್ಡ್ಸ್ ಅವರ ಕುಟುಂಬ ಭಾರತದಿಂದ ಸ್ಥಳಾಂತರ ಮಾಡಿರುವು­ದನ್ನೂ ಖಚಿತ ಪಡಿಸಿದ್ದಾರೆ. ‘ಅವರನ್ನು (ದೇವಯಾನಿ) ಅವರ ಮಕ್ಕಳ ಮುಂದೆ ಬಂಧಿಸಿಲ್ಲ ಮತ್ತು ಕೈಕೋಳ ತೊಡಿಸಿಲ್ಲ. ಬಂಧಿಸುವ ಸಂದರ್ಭದಲ್ಲಿ ಗೌರವವಾಗಿಯೇ ನಡೆದುಕೊಳ್ಳಲಾಗಿದೆ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.‘ಮಹಿಳೆಯನ್ನು ಬಂಧಿಸಿದ ಸಂದರ್ಭ­ದಲ್ಲಿ ಅವರು ಬಡವರಾ­ಗಿರಲಿ–  ಶ್ರೀಮಂತರರಾಗಿರಲಿ, ಸ್ವದೇಶಿ­ಯಾಗಿರಲಿ–ವಿದೇಶಿಯರಾಗಿಲಿ ಅವ­ರನ್ನು ನಿಯಮಾನುಸರ ಸಂಪೂರ್ಣ­ವಾಗಿ ಮಹಿಳಾ ಸಿಬ್ಬಂದಿ   ತಪಾಸಣೆ ಮಾಡುತ್ತಾರೆ’ ಎಂದು  ಬರಾರ ಹೇಳಿದ್ದಾರೆ. ಅಮೆರಿಕದ ನ್ಯಾಯಾಂಗ ಇಲಾಖೆ ಕೂಡ ದೇವಯಾನಿ ಅವರನ್ನು ವಿವಸ್ತ್ರಗೊಳಿಸಿ ತಪಾಸಣೆ ಮಾಡಿದ್ದನ್ನು ಖಚಿತ ಪಡಿಸಿದೆ.ಆದರೆ, ವಿಚಾರಣೆ ವೇಳೆ ಜನ­ನಾಂಗ ಪರೀಕ್ಷಿಸಲಾಯಿತು ಎಂಬ ಆರೋಪ­ವನ್ನು ಅಮೆರಿಕದ ಮಾರ್ಷಲ್‌ ಸೇವೆ (ಯುಎಸ್‌­ಎಂಎಸ್‌) ವಕ್ತಾರರು ಅಲ್ಲಗಳೆದಿದ್ದಾರೆ. ‘ಸಾಮಾನ್ಯವಾಗಿ ಯಾರನ್ನೇ ಬಂಧಿಸಿದರೂ ಅವರ ಮೊಬೈಲ್ ದೂರವಾಣಿಯನ್ನು ತನಿಖಾ­ಧಿಕಾರಿ­ಗಳು ವಶ ಪಡಿಸಿಕೊಳ್ಳತ್ತಾರೆ ಆದರೆ, ದೇವಯಾನಿ ಅವರಲ್ಲಿದ್ದ ಮೊಬೈಲ್‌ ಅನ್ನು ವಶ ಪಡಿಸಿಕೊಂಡಿಲ್ಲ. ಬದಲಿಗೆ ಅವರಿಗೆ ಕರೆ ಮಾಡಲು ಅವಕಾಶ ನೀಡಿದ್ದಾರೆ. ಜೊತೆಗೆ, ಮಕ್ಕಳ ಪಾಲನೆಗೆ ಸೂಕ್ತ ವ್ಯವಸ್ಥೆ ಮಾಡಲು ಅವಕಾಶ ಕಲ್ಪಿಸಿದ್ದರು. ಅವರಿಗೆ ಕುಡಿಯಲು ಕಾಫಿಯನ್ನು ನೀಡಿದ್ದರು’ ಎಂದು ಬರಾರ ಹೇಳಿದ್ದಾರೆ.‘ಈ ಪ್ರಕರಣದಲ್ಲಿ ಅನ್ಯಾಯಕ್ಕೆ ಒಳಗಾದ ಮನೆಗೆಲಸದಾಕೆಗಿಂತ ಹೆಚ್ಚಿನ ಅನುಕಂಪವನ್ನು ಆರೋಪಿ ಬಗ್ಗೆ ತೋರುತ್ತಿರುವುದೇಕೆ’ ಎಂದು ಪ್ರಶ್ನಿಸಿದ್ದಾರೆ. ‘ಕಾನೂನು ಉಲ್ಲಂಘಿಸಿದವರು ಯಾರೇ ಆಗಿರಲಿ ಅವರ ಸಾಮಾಜಿಕ ಸ್ಥಾನಮಾನ, ಪ್ರಭಾವ, ಸಿರಿವಂತಿಕೆ ಇದಾವುದನ್ನು ಲೆಕ್ಕಿಸದೆ ಸಂತ್ರಸ್ತರಿಗೆ ನ್ಯಾಯ ಕೊಡಿಸುವುದಷ್ಟೆ ನ್ಯಾಯಾಂಗ  ಇಲಾಖೆಯ ಗುರಿ’ ಎಂದು ಬರಾರ ತಿಳಿಸಿದ್ದಾರೆ.ಸಂಗೀತಾ ಕುಟುಂಬ ಅಮೆರಿಕಕ್ಕೆ ಬಂದಿರುವುದು ನಿಜ: ‘ಭಾರತವು ಕಾನೂನು ಕ್ರಮದ ಮೂಲಕ ಸಂಗೀತಾ ಅವರನ್ನು ತೆಪ್ಪಗಿರಿಸುವ ಪ್ರಯತ್ನ ಆರಂಭಿಸಿತು. ಜೊತೆಗೆ ಆಕೆಯನ್ನು ಸ್ವದೇಶಕ್ಕೆ ಕರೆಸಿಕೊಳ್ಳುವ ಪ್ರಯತ್ನ­ವನ್ನೂ ಮಾಡಿತು. ಆದ್ದರಿಂದ ಅವರ ಕುಟುಂಬವನ್ನು ಅಮೆರಿಕಕ್ಕೆ ಕರೆಯಿಸಿ­ಕೊಳ್ಳಬೇಕಾಯಿತು’ ಎಂದು ಬರಾರ ಹೇಳಿದ್ದಾರೆ.‘ಸಂಗೀತಾ ಅವರ ಕುಟುಂಬವು ಒಂದಲ್ಲಾ ಒಂದು ರೀತಿಯಲ್ಲಿ ಈ ಪ್ರಕರಣದ  ಪರಿಣಾಮಕ್ಕೆ ತುತ್ತಾಗುವ ಸಾಧ್ಯತೆ ಇತ್ತು. ಆದ್ದರಿಂದ ಅವರ ಕುಟುಂಬವನ್ನು ಇಲ್ಲಿಗೆ ಸ್ಥಳಾಂತರಿಸಬೇಕಾದ ಅನಿವಾರ್ಯತೆ ಉಂಟಾಯಿತು. ನ್ಯಾಯಾಂಗ ಇಲಾಖೆ ಕೂಡ ಪ್ರಕರಣ ಇತ್ಯರ್ಥವಾ­ಗುವವರೆಗೆ ಸಂಗೀತಾ ಕುಟುಂಬದವರ ಮತ್ತು ಸಾಕ್ಷಿಗಳ ಭದ್ರತೆಗೆ ಕಾಳಜಿ ವ್ಯಕ್ತಪಡಿಸಿದೆ’ ಎಂದು ಅವರು ತಿಳಿಸಿದ್ದಾರೆ.ಅಮೆರಿಕ ವಿದೇಶಾಂಗ ಇಲಾಖೆ ಪ್ರತಿಕ್ರಿಯೆ: ದೇವಯಾನಿ ಅವರ ಮನೆಯಿಂದ ಕಳೆದ ಜೂನ್‌ನಲ್ಲಿ ನಾಪತ್ತೆಯಾದ ಸಂಗೀತಾ ಅವರನ್ನು ಪತ್ತೆಹಚ್ಚುವಂತೆ ಕೋರಿ ಬರೆದ ಹಲವು ಪತ್ರಗಳಿಗೆ ಅಮೆರಿಕ ಸರ್ಕಾರ ಸ್ಪಂದಿಸಿಲ್ಲ ಎಂಬ ಭಾರತದ ಆರೋಪವನ್ನು ಅಮೆರಿಕ ಅಲ್ಲಗಳೆದಿದೆ.

ಶಿಷ್ಟಾಚಾರ ಬದಿಗೊತ್ತಿ ಸ್ಪಂದಿಸಿದ ಕೆರಿ

ನ್ಯೂಯಾರ್ಕ್‌ (ಪಿಟಿಐ):
ಈ ಪ್ರಕರಣ ವಿಷಯದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್‌ ಕೆರಿ ಅವರು ಶಿಷ್ಟಾಚಾರ  ಬದಿಗೊತ್ತಿ, ತುರ್ತಾಗಿ ಸ್ಪಂದಿಸಿದ್ದಾರೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ಮೂಲಗಳು ಹೇಳಿವೆ. ಏಷ್ಯಾ– ಪೆಸಿಫಿಕ್‌ ಪ್ರವಾಸದಿಂದ ಅಮೆರಿಕಕ್ಕೆ ವಾಪಸು ತೆರಳುತ್ತಿದ್ದ ಕೆರಿ ಅವರು ವಿವಾದಕ್ಕೆ ಕಾರಣವಾಗಿರುವ ದೇವಯಾನಿ ಅವರ ಬಂಧನ ಮತ್ತು ಅವರನ್ನು  ವಿವಸ್ತ್ರಗೊಳಿಸಿ ತಪಾಸಣೆ ಮಾಡಿರುವ ಕುರಿತು ಚರ್ಚಿಸಲು ಭಾರತದ ವಿದೇಶಾಂಗ ಸಚಿವ ಸಲ್ಮಾನ್‌ ಖುರ್ಷಿದ್‌ ಅವರಿಗೆ ಬುಧವಾರ ವಿಮಾನದಿಂದಲೇ ತುರ್ತಾಗಿ ಕರೆ ಮಾಡಿದ್ದರು.

ಆದರೆ, ಆ ಸಮಯದಲ್ಲಿ ಖುರ್ಷಿದ್‌ ಅವರು ಸಂಸತ್‌ ಕಲಾಪದಲ್ಲಿದ್ದರು. ಖುರ್ಷಿದ್‌ ಅವರಿಗೆ ಬಿಡುವು ಸಿಗುವುದನ್ನು ಕಾಯದ ಕೆರಿ ಅವರು, ಶಿಷ್ಟಾಚಾರ ಬದಿಗೊತ್ತಿ ಆ ಕ್ಷಣಕ್ಕೆ ಲಭ್ಯರಿದ್ದ ಭಾರತದ ಭದ್ರತಾ ಸಲಹೆಗಾರ ಶಿವಶಂಕರ್‌ ಮೆನನ್‌ ಅವರೊಂದಿಗೆ ಮಾತನಾಡಿ, ಈ ಪ್ರಕರಣದ ಬಗ್ಗೆ ವಿಷಾದ ವ್ಯಕ್ತಪಡಿಸಿದರು ಎಂದು ಮೂಲಗಳು ಹೇಳಿಕೊಂಡಿವೆ.

ಸಂಗೀತಾ ವಿರುದ್ಧ ಕಳ್ಳತನದ ಆರೋಪ

ನ್ಯೂಯಾರ್ಕ್‌:
ಸಂಗೀತಾ ರಿಚರ್ಡ್ಸ್‌ ಅವರು ತಮ್ಮ ಪಾಸ್‌ಪೋರ್ಟ್‌ ಮತ್ತು ವೀಸಾವನ್ನು ಬೇರೆಡೆ ಉದ್ಯೋಗ ಮಾಡುವಂತೆ ಮಾರ್ಪಡಿಸಿಕೊಡಬೇಕು ಎಂದು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದರು ಎಂದು ವಾಷಿಂಗ್ಟನ್‌ನಲ್ಲಿರುವ ಭಾರತದ ದೂತಾವಾಸ ಕಚೇರಿ ಆಪಾದಿಸಿದೆ. ದೇವಯಾನಿ ಅವರ ಮೊಬೈಲ್‌ ದೂರವಾಣಿ, ನಗದು ಮತ್ತು ದಾಖಲೆಪತ್ರಗಳನ್ನು ಕಳವು ಮಾಡಿರುವ ಸಂಗೀತಾ ಅವರನ್ನು ಬಂಧಿಸಬೇಕು ಎಂದೂ ಹೇಳಿಕೆಯಲ್ಲಿ ಒತ್ತಾಯಿಸಿದೆ.

ಪ್ರತಿಕ್ರಿಯಿಸಿ (+)