ಸೋಮವಾರ, ಜೂನ್ 21, 2021
27 °C

‘ಜನಸಾಮಾನ್ಯರಿಗೇ ಎಎಪಿ ಟಿಕೆಟ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲೋಕಸಭೆ ಚುನಾವಣೆಗೆ ಆಮ್‌ ಆದ್ಮಿ ಪಕ್ಷ ಆಯ್ಕೆ ಮಾಡಿರುವ ಅಭ್ಯರ್ಥಿಗಳೆಲ್ಲರೂ ಶ್ರೀಸಾಮಾನ್ಯರನ್ನು ಪ್ರತಿನಿಧಿಸುತ್ತಿದ್ದಾರೆ. ಈ ವಾರದ ಅಂತ್ಯ­ದಲ್ಲಿ ರಾಜ್ಯದ ಉಳಿದ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪೃಥ್ವಿರೆಡ್ಡಿ  ತಿಳಿಸಿದರು.ಪ್ರಥಮ ಪಟ್ಟಿಯಲ್ಲಿನ 13 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿ­ಗಳೊಂದಿಗೆ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿ­ಯಲ್ಲಿ ಮಾತನಾ­ಡಿದ ಅವರು, ಈ ಬಾರಿಯ  ಚುನಾವಣೆಯಲ್ಲಿ ಭ್ರಷ್ಟರು ಮತ್ತು ಪ್ರಾಮಾಣಿಕರ ನಡುವೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವು­ದನ್ನು ಮತದಾರರೇ ನಿರ್ಧರಿಸಬೇಕು. ಈಗ ಆಯ್ಕೆ ಮಾಡಿರುವ 13 ಅಭ್ಯರ್ಥಿ­ಗಳು ವಿವಿಧ ರಂಗಗಳನ್ನು ಪ್ರತಿನಿಧಿಸು­ತ್ತಿದ್ದಾರೆ ಎಂದು ವಿವರಿಸಿದರು.ಆಮ್‌ ಆದ್ಮಿ ಪಕ್ಷದಿಂದ ಸ್ಪರ್ಧಿಸಲು ದೇಶದಲ್ಲಿ ಸುಮಾರು 8 ಸಾವಿರ, ಕರ್ನಾಟಕದಲ್ಲಿ 2 ಸಾವಿರ ಹಾಗೂ ಬೆಂಗ­ಳೂರು ನಗರದಲ್ಲಿ 300 ಆಕಾಂ­ಕ್ಷಿ­­ಗಳು ಅರ್ಜಿ ಸಲ್ಲಿಸಿದ್ದರು. 22–23 ವರ್ಷದ ಕೆಲವು ಯುವಕರು ಸಹ ಅರ್ಜಿ ಸಲ್ಲಿಸಿದ್ದರು. ಈ ಎಲ್ಲ ಅರ್ಜಿಗ­ಳನ್ನು ಪರಿಶೀಲಿಸಿ ಜನಸಾಮಾನ್ಯರನ್ನು ಪ್ರತಿನಿಧಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

‘ಶುದ್ಧ ರಾಜಕೀಯಕ್ಕೆ ಶುದ್ಧ ಹಣ ಬೇಕು’

ಶುದ್ಧ ರಾಜಕೀಯಕ್ಕೆ ಶುದ್ಧ­ವಾಗಿ­ರುವ ಹಣವೇ ಬೇಕು. ಪಾರ­ದ­ರ್ಶಕವಾಗಿ ಹಣ ಸಂಗ್ರಹಿಸುವ ಕಾರ್ಯಕ್ರಮ ಹಮ್ಮಿಕೊಂಡಿ­ದ್ದರೂ ಆಮ್‌ ಆದ್ಮಿ ಪಕ್ಷವನ್ನು ಟೀಕಿಸುತ್ತಿದ್ದಾರೆ ಎಂದು ಪೃಥ್ವಿರೆಡ್ಡಿ ನುಡಿದರು.

‘ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರ ಜತೆ ಮಾ.15ರಂದು ಆಯೋಜಿಸಿ­ರುವ ಭೋಜನ­ಕೂಟದಲ್ಲಿ ಪಾಲ್ಗೊ­ಳ್ಳುವ ಆಹ್ವಾನಿತರಿಂದ ₨ 20 ಸಾವಿರ ಪಡೆಯಲಾಗುತ್ತಿದೆ. ಈ ಭೋಜನ­ಕೂಟವನ್ನು ಪಕ್ಷದ ಹಿತೈಷಿ­ಗಳು ಆಯೋಜಿಸಿದ್ದಾರೆ. ಪಕ್ಷಕ್ಕೆ ಸ್ವಯಂ ಪ್ರೇರಿತರಾಗಿ ದೇಣಿಗೆ ನೀಡುವವರು ಈ ಕೂಟ­ದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನಮ್ಮ ಪಕ್ಷದ ಬ್ಯಾಂಕ್‌ ಖಾತೆಯಲ್ಲಿ ಸುಮಾರು ₨ 14 ಕೋಟಿ ಮಾತ್ರ ಇದೆ. ದೇಶದ 453 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಇಷ್ಟು ಕಡಿಮೆ ಮೊತ್ತದಲ್ಲಿ ಪ್ರಚಾರ ಕಾರ್ಯ ಮಾಡುವುದು ಹೇಗೆ’ ಎಂದು ಪ್ರಶ್ನಿಸಿದರು.

ಅಭ್ಯರ್ಥಿಗಳ ಪ್ರತಿಪಾದನೆ

*ಜೆಪಿ ಚಳವಳಿ ಮಾದರಿಯಲ್ಲಿ ಆಮ್‌ ಆದ್ಮಿ ಪಕ್ಷ ಜನಸಾಮಾನ್ಯ­ರನ್ನು ಸಂಘಟಿಸಿ ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುತ್ತಿದೆ.

– ಬಿ.ಟಿ. ಲಲಿತಾ ನಾಯಕ್‌ ಗುಲ್ಬರ್ಗ ಕ್ಷೇತ್ರದ ಅಭ್ಯರ್ಥಿ

*ಪ್ರಸ್ತುತ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳಿಗೆ ಶೇಕಡ 70ರಿಂದ 75ರಷ್ಟು ನಿಧಿ ಅನಾಮಧೇಯ ಮೂಲಗಳಿಂದಲೇ ಹರಿದು ಬರುತ್ತದೆ. ಇದೇ ಭ್ರಷ್ಟಾಚಾರದ ಬೇರು. ಶುದ್ಧ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡುವುದು ನಮ್ಮ ಗುರಿ. ಎಎಪಿ ಮೂಲಕ ಬದಲಾವಣೆ ತರಲು ಸಾಧ್ಯ.

– ವಿ. ಬಾಲಕೃಷ್ಣನ್‌, ಬೆಂಗಳೂರು ಕೇಂದ್ರದ ಅಭ್ಯರ್ಥಿ

*ಒಟ್ಟು ಜನಸಂಖ್ಯೆಯಲ್ಲಿ ಶೇಕಡ 40ರಷ್ಟು ಮಕ್ಕಳಿದ್ದಾರೆ. ಆದರೆ,  ಇವರಿಗೆ ಯೋಜನೆಗಳೇ ತಲುಪುತ್ತಿಲ್ಲ. ಅಧಿಕಾರಶಾಹಿ ವ್ಯವಸ್ಥೆ ಅನುದಾನವನ್ನು ಸಹ ಖರ್ಚು ಮಾಡುವುದಿಲ್ಲ.

– ನೀನಾ ಪಿ. ನಾಯಕ್‌, ಬೆಂಗಳೂರು ದಕ್ಷಿಣ ಅಭ್ಯರ್ಥಿ*ಪ್ರಸ್ತುತ ಪರಿಸ್ಥಿತಿಯಲ್ಲಿ ಸಂವಿಧಾನ ರಕ್ಷಣೆ ಮಾಡಬೇಕಾಗಿದೆ. ಸುಪ್ರೀಂಕೋರ್ಟ್‌ ಸೇರಿದಂತೆ ವ್ಯವಸ್ಥೆಯ ಎಲ್ಲ ಅಂಗಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ.

– ಪ್ರೊ. ಬಾಬು ಮ್ಯಾಥ್ಯೂ ಬೆಂಗಳೂರು ಉತ್ತರ ಅಭ್ಯರ್ಥಿ

*ಈಗ ರಾಜಕೀಯ ಕ್ರಾಂತಿಯ ಅಗತ್ಯವಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಬೆಲೆ ಇಲ್ಲದಂತಾಗಿದೆ.

– ರವಿಕೃಷ್ಣಾ ರೆಡ್ಡಿ, ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ

*ರೈತ ಚಳವಳಿಗಳ ಹಿನ್ನೆಲೆಯಿಂದ ಬಂದಿದ್ದೇನೆ. ರಾಜಕೀಯ ವ್ಯವಸ್ಥೆ ಬದಲಾಯಿಸಿ ಹೊಸ ಪೀಳಿಗೆಗೆ ಹೊಸತನದ ಸಂದೇಶ ನೀಡಬೇಕಾಗಿದೆ.

– ಹೇಮಂತಕುಮಾರ್‌, ಹುಬ್ಬಳ್ಳಿ-ಧಾರವಾಡ ಅಭ್ಯರ್ಥಿ

*ನವ ಆರ್ಥಿಕತೆ ದೇಶವನ್ನು ಹಾಳು ಮಾಡಿದೆ. ಪರಿವರ್ತನೆ ತರುವುದೇ ನನ್ನ ಧ್ಯೇಯ.

– ಕೋಟಗಾನಹಳ್ಳಿ ರಾಮಯ್ಯ, ಕೋಲಾರ ಅಭ್ಯರ್ಥಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.