‘ಟೈ’ ಪಂದ್ಯದ ‘ಸೈ’ ಕ್ಷಣಗಳು...

ಜಿದ್ದಾಜಿದ್ದಿನ ಪಂದ್ಯಕ್ಕೆ ರಣಕಹಳೆಯಂತೆ ಇಡೀ ಕ್ರೀಡಾಂಗಣವೇ ಮೊಳಗುತ್ತಿತ್ತು. ಕ್ರೀಡಾಂಗಣದ ತುಂಬೆಲ್ಲಾ ಹಳದಿ ಹಾಗೂ ನೀಲಿ ಬಾವುಟಗಳದ್ದೇ ಹಾರಾಟ. ಒಂದೆಡೆ ‘ಸುದೀಪ್, ದರ್ಶನ್’ ಎಂಬ ಕೂಗು. ಮತ್ತೊಂದೆಡೆಯಿಂದ ‘ವಿಶಾಲ್, ವಿಕ್ರಾಂತ್’ ಎಂಬ ಆರ್ಭಟ. ಸಿಸಿಎಲ್ ಪಂದ್ಯದಲ್ಲಿ ‘ಕರ್ನಾಟಕ ಬುಲ್ಡೋಜರ್ಸ್’ ತಂಡದ ಪ್ರಬಲ ಪ್ರತಿಸ್ಪರ್ಧಿ ಎಂದೇ ಗುರುತಿಸಲಾಗುವ ಚೆನ್ನೈ ರೈನೋಸ್ ನಡುವಿನ ಪಂದ್ಯದಲ್ಲಿ ಕಂಡುಬಂದ ದೃಶ್ಯಗಳಿವು.
ಕನ್ನಡ ಹಾಗೂ ತಮಿಳು ಚಿತ್ರರಂಗದ ಖ್ಯಾತ ನಟ–ನಟಿಯರು ಕ್ರೀಡಾಂಗಣದ ಡಗ್ಔಟ್ಸ್ನಲ್ಲಿ ಜಮಾಯಿಸಿದ್ದರು. ಕನ್ನಡದ ಕಡೆಯಿಂದ ಅಂಬರೀಷ್, ದೊಡ್ಡಣ್ಣ, ರಾಕ್ಲೈನ್ ವೆಂಕಟೇಶ್, ಆದಿತ್ಯ, ಸೃಜನ್, ಶ್ರೀನಗರ ಕಿಟ್ಟಿ, ಸುಮನ್ ರಂಗನಾಥ್, ಪ್ರಣೀತಾ, ರಾಗಿಣಿ, ಮೇಘನಾ ಸೇರಿದಂತೆ ಸುದೀಪ್ ಹಾಗೂ ದರ್ಶನ್ ಮನೆಯವರು ತಮ್ಮ ತಂಡವನ್ನು ಪ್ರೋತ್ಸಾಹಿಸಲು ನಿಂತಿದ್ದರು.
ಮತ್ತೊಂದೆಡೆ ತಮಿಳು ಚಿತ್ರರಂಗದ ಕಡೆಯಿಂದ ತ್ರಿಷಾ, ವರಲಕ್ಷ್ಮಿ, ವಿಜಯಲಕ್ಷ್ಮಿ, ಭರತ್ ಸೇರಿದಂತೆ ವಿಶಾಲ್ ನೇತೃತ್ವದ ತಂಡದವರು ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದರು. ಈ ನಡುವೆ ಸಿಕ್ಕ ಉಭಯ ತಂಡಗಳ ನಟ–ನಟಿಯರ ಅನಿಸಿಕೆ ಎರಡೂ ತಂಡಗಳು ಪ್ರಬಲ ಪೈಪೋಟಿ ನೀಡುವುದನ್ನೇ ಸಾರುತ್ತಿದ್ದವು.
ಬೆಂಗಳೂರಿನಲ್ಲಿ ಹುಟ್ಟಿ, ಚೆನ್ನೈನಲ್ಲಿ ಬೆಳೆದವರು ನಟಿ ವರಲಕ್ಷ್ಮೀ. ತಮಿಳು ನಟ ಶರತ್ ಕುಮಾರ್ ಅವರ ಮಗಳಾದ ಇವರು ಚೆನ್ನೈ ತಂಡದ ಗೆಲುವಿಗಾಗಿ ಕೊನೆಯವರೆಗೂ ವಿಜಿಲ್ ಊದಿ ಪ್ರೋತ್ಸಾಹಿಸುತ್ತಿದ್ದರು. ‘ಚೆನ್ನೈ ಹಾಗೂ ಕರ್ನಾಟಕ ನಡುವಿನ ಕ್ರಿಕೆಟ್ ಪಂದ್ಯವೆಂದರೆ ಅದು ಭಾರತ–ಪಾಕಿಸ್ತಾನ ನಡುವಿನ ಪಂದ್ಯವಿದ್ದಂತೆ. ಹೀಗಾಗಿ ಅಲ್ಲಿ ಪಂದ್ಯದ ಕುತೂಹಲ, ಗೆಲುವಿಗಾಗಿ ಸೆಣಸಾಟ ನೋಡುಗರನ್ನು ತುದಿಗಾಲಿನ ಮೇಲೆ ನಿಲ್ಲಿಸುತ್ತದೆ. ಚೆನ್ನೈ ಈ ಬಾರಿ ಉತ್ತಮವಾಗಿ ಅಭ್ಯಾಸ ಮಾಡಿದೆ. ಗೆಲುವು ನಮ್ಮದೇ ಎನ್ನುವುದು ನನ್ನ ವಿಶ್ವಾಸ’ ಎಂದೆನ್ನುವ ವರಲಕ್ಷ್ಮೀ, ಸುದೀಪ್ ನಿರ್ದೇಶನದಲ್ಲಿ ರವಿಚಂದ್ರನ್ ಜತೆ ‘ಮಾಣಿಕ್ಯ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಮಾಣಿಕ್ಯ ಚಿತ್ರದ ಕುರಿತು ಮಾತನಾಡಿದ ಅವರು, ‘ರವಿಚಂದ್ರನ್ ಅವರಂಥ ಹಿರಿಯ ಪ್ರತಿಭಾವಂತ ಕಲಾವಿದರೊಂದಿಗೆ ನಟಿಸಲು ಅವಕಾಶ ಲಭಿಸಿದ್ದು ನನ್ನ ಅದೃಷ್ಟವೇ ಸರಿ. ಸುದೀಪ್ ಅವರ ಕುರಿತು ಎಷ್ಟು ಹೇಳಿದರೂ ಕಡಿಮೆ’ ಎನ್ನುತ್ತಾ ವಿಜಿಲ್ ಊದುತ್ತಾ ಡಗ್ಔಟ್ನತ್ತ ನಡೆದರು.
ಈ ಆವೃತ್ತಿಯ ಸಿಸಿಎಲ್ನಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿರುವ ರಾಗಿಣಿ ವಿಶೇಷವಾಗಿ ಕೇಶ ವಿನ್ಯಾಸ ಮಾಡಿಸಿಕೊಂಡಿದ್ದರು. ಚರ್ಮದಂಥ ವಿಶೇಷ ಕಪ್ಪು ಬಿಗಿ ಉಡುಪಿನ ಮೇಲೆ ಕೆಂಪು ಜಾಕೆಟ್ ತೊಟ್ಟಿದ್ದರು. ‘ಚಿತ್ರೀಕರಣಕ್ಕಾಗಿ ಉಪೇಂದ್ರ ಹಾಗೂ ಚಿತ್ರತಂಡದ ಜತೆ ಕುಂಭಕೋಣಂಗೆ ಹೋಗಿದ್ದೆ. ಹೀಗಾಗಿ ಕಳೆದ ಪಂದ್ಯದಲ್ಲಿ ಖುದ್ದು ಹಾಜರಿರಲು ಸಾಧ್ಯವಾಗಿಲ್ಲ. ಆದರೆ ಟಿವಿಯಲ್ಲಿ ಆ ಅದ್ಭುತ ಆಟ ನೋಡಿದೆ. ಸಿಸಿಎಲ್ ಪಂದ್ಯವನ್ನು ಮೈದಾನದಲ್ಲಿ ನೋಡುವುದೇ ಖುಷಿ. ನಮ್ಮ ತಂಡ ಖಂಡಿತವಾಗಿಯೂ ಈ ಬಾರಿ ಕಪ್ ಗೆಲ್ಲಲಿದೆ’ ಎಂದು ರಾಗಿಣಿ ಮುಖದ ತುಂಬಾ ನಗು ತುಂಬಿಕೊಂಡು ವಿಶ್ವಾಸದಿಂದ ನುಡಿದರು.
‘‘ಈ ಬಾರಿಯ ಸಿಸಿಎಲ್ನ ಮೊದಲ ಪಂದ್ಯದಲ್ಲೇ ಅದ್ಭುತ ಗೆಲುವು ಲಭಿಸಿದೆ. ಹೀಗಾಗಿ ನಮ್ಮಲ್ಲೂ ಆತ್ಮವಿಶ್ವಾಸ ಹೆಚ್ಚಾಗಿದೆ. ಚೆನ್ನೈ ಹಾಗೂ ಕರ್ನಾಟಕದ ಜತೆಗೆ ನಮ್ಮ ತಂಡವೂ ಫೇವರಿಟ್ ಎಂದು ಎಲ್ಲರೂ ಹೇಳುತ್ತಿದ್ದಾರೆ. ನನ್ನ ಮನಸ್ಸೂ ಅದನ್ನೇ ಹೇಳುತ್ತಿದೆ. ‘ಭೋಜಪುರಿ ದಬಂಗ್’ ಈ ಬಾರಿ ಕಪ್ ಗೆಲ್ಲುವ ಸಂಪೂರ್ಣ ಭರವಸೆ ನನಗಿದೆ’’ ಎಂದರು ಭೋಜಪುರಿ ಚಿತ್ರರಂಗದ ನಟಿ ಅಕ್ಷರಾ ಸಿಂಗ್.
ಮುಂಗಾರು ಮಳೆ ಸಿನಿಮಾದಲ್ಲಿ ನಾಯಕಿ ಸ್ನೇಹಿತೆಯಾಗಿ ನಟಿಸಿದ್ದ ಸಂಚಿತಾ ಶೆಟ್ಟಿ, ಈ ಬಾರಿ ಚೆನ್ನೈ ತಂಡದ ಪರವಾಗಿ ಡಗ್ಔಟ್ನಲ್ಲಿದ್ದರು. ತ್ರಿಷಾ ಪಕ್ಕದಲ್ಲೇ ಕೂತಿದ್ದ ಅವರು, ‘ತಮಿಳಿನಲ್ಲಿ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದೆ. ಉತ್ತಮ ಅವಕಾಶಗಳು ಅಲ್ಲಿ ದೊರೆಯುತ್ತಿವೆ. ಅಲ್ಲಿನ ತಂಡದೊಂದಿಗೆ ನಾನಿರಬೇಕು ಎನ್ನುವುದು ಅವರ ಅಪೇಕ್ಷೆಯಾಗಿತ್ತು. ಕನ್ನಡದ ಮೂಲಕವೇ ನಾನು ಚಿತ್ರರಂಗಕ್ಕೆ ಬಂದಿದ್ದು. ಇದು ಕ್ರಿಕೆಟ್ ಅಷ್ಟೇ. ಪಂದ್ಯವನ್ನು ನೋಡಿ ಆನಂದಿಸಬೇಕೇ ಹೊರತು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು’ ಎಂದಷ್ಟೇ ಹೇಳಿ ಹೊರಟರು.
ಪಂದ್ಯದಲ್ಲಿ ಗೆಲುವಿನ ಚಿತ್ತ ಅತ್ತ ಇತ್ತ ವಾಲುತ್ತಲೇ ಇತ್ತು. ಸುದೀಪ್ ತಮ್ಮ ಕೊರಳಿನಲ್ಲಿದ್ದ ಡಾಲರ್ ಹಿಡಿದು, ಏನೋ ಮಂತ್ರೋಚ್ಚಾರ ಮಾಡಿ, ಭಕ್ತಿಯಿಂದ ಕಣ್ಣಿಗೆ ಒತ್ತಿಕೊಂಡರು. ಸುದೀಪ್ ನೇತೃತ್ವದ ತಂಡದ ಗೆಲುವಿಗೆ ಬೇಕಿದ್ದದ್ದು 194 ರನ್. ಆರಂಭದಲ್ಲಿ ತಂಡ ವೇಗ ಕಂಡುಕೊಂಡರೂ, ಕೊನೆಯ ಹಂತದಲ್ಲಿ ಮುಗ್ಗರಿಸುವಂತೆ ಕಂಡಿತು. ಕೊನೆಯ ಓವರ್ನಲ್ಲಿ ಗಳಿಸಬೇಕಾದ ರನ್ ನಿರೀಕ್ಷೆಗೂ ಮೀರಿದ್ದರಿಂದ ಧೈರ್ಯ ಹೇಳಲು ಸುದೀಪ್ ಬಳಿ ಪತ್ನಿ ಮತ್ತು ದರ್ಶನ್ ಬಂದು ನಿಂತಿದ್ದು ದೊಡ್ಡ ಪರದೆಯ ಮೇಲೆ ಎದ್ದು ಕಾಣುತ್ತಿತ್ತು.
ಕೊನೆಯ ಮೂರು ಚೆಂಡಿಗೆ 18 ರನ್ಗಳ ಅವಶ್ಯಕತೆ ಇತ್ತು. ಮೊದಲ ಬಾಲನ್ನು ಬಾಝಿ ಅಲಿಯಾಸ್ ಭಾಸ್ಕರ್ ಬೌಂಡರಿಗೆ ಅಟ್ಟಿದರು. ಗೆದ್ದೇಬಿಟ್ಟೆವು ಎಂದು ಚೆನ್ನೈ ತಂಡದ ಬೆಂಬಲಿಗರು ಅಬ್ಬರಿಸಿದರು. ಕೇಕೆ, ಕೂಗು ಹಾಗೂ ಹಳದಿ ಬಾವುಟಗಳ ಹಾರಾಟ ಹೆಚ್ಚಾಯಿತು. ಐದನೇ ಬಾಲ್ಗೆ ಭಾಸ್ಕರ್ ಸಿಕ್ಸರ್ ಎತ್ತಿದಾಗ ಕರ್ನಾಟಕ ಬುಲ್ಡೋಜರ್ಸ್ನಲ್ಲಿ ನಿಧಾನವಾಗಿ ಸಂಚಲನ ಉಂಟಾಯಿತು. ಕೊನೆಯ ಬಾಲ್ಗೆ ಅಗತ್ಯವಿದ್ದದ್ದು ಎಂಟು ರನ್ಗಳು. ಕರ್ನಾಟಕ ತಂಡದ ಬಹುತೇಕರು ನೋ ಬಾಲ್ನ ನಿರೀಕ್ಷೆಯಲ್ಲಿದ್ದರು. ಅದು ನಿಜವಾಯಿತು. ಒಂದು ರನ್ ಜತೆಗೆ ಒಂದು ಬಾಲ್ನ ಅವಕಾಶ ಸಿಕ್ಕಿತು. ಕೊನೆಯ ಬಾಲ್ನಲ್ಲಿ ಭಾಸ್ಕರ್ ಎತ್ತಿದ ಸಿಕ್ಸರ್ ಎರಡೂ ತಂಡದ ಸ್ಕೋರ್ ಸಮವಾಗಿಸಿತು. ಕ್ರಿಕೆಟ್ನಲ್ಲಿ ಯಾವ ಬಗೆಯ ಚಮತ್ಕಾರವಾದರೂ ಸಾಧ್ಯ ಎಂಬುದಕ್ಕೆ ಸಿಸಿಎಲ್ನ ಈ ರೋಚಕ ಪಂದ್ಯ ಸಾಕ್ಷಿಯಾಯಿತು.
ಮಂಕಾಗಿದ್ದವರ ಮೊಗದಲ್ಲಿ ಒಮ್ಮೆಲೇ ಸಾವಿರ ವೋಲ್ಟ್ಗಳ ಸಂಭ್ರಮ. ಗೆದ್ದೇಬಿಟ್ಟೆವು ಎಂದವರ ಮೊಗದಲ್ಲಿ ‘ಟೈ’ ಆದ ನೀರಸ ಭಾವ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.