ಭಾನುವಾರ, ಜನವರಿ 19, 2020
25 °C

‘ಠಾಣೆಗೊಂದು ಸಹಾಯವಾಣಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಠಾಣೆಗೊಂದು ಸಹಾಯವಾಣಿ’

ಬೆಂಗಳೂರು: ರಾಜ್ಯದ ಪ್ರತಿ ಪೊಲೀಸ್‌ ಠಾಣೆಗಳಲ್ಲೂ ಹಿರಿಯ ನಾಗರಿಕರ, ಮಹಿಳಾ ಮತ್ತು ಮಕ್ಕಳ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ ಎಂದು ಗೃಹಸಚಿವ ಕೆ.ಜೆ.ಜಾರ್ಜ್ ಹೇಳಿದರು.ಬಸವನಗುಡಿ ಠಾಣೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸ್ಪಂದನ’ ಸಂಕೀರ್ಣದ ಉದ್ಘಾಟನಾ ಸಮಾರಂಭ­ದಲ್ಲಿ ಅವರು ಮಾತನಾಡಿದರು.‘ಪೊಲೀಸ್‌ ಕಮಿಷನರ್‌ ಕಚೇರಿ­ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಹಾಯ­ವಾಣಿಗಳ ವಿಭಾಗವನ್ನು ಮೊದಲ ಬಾರಿಗೆ ನಗರದ ದಕ್ಷಿಣ ವಿಭಾಗದಲ್ಲಿ ಸ್ಥಾಪಿಸಲಾಗಿದೆ. ಈ ವಿಕೇಂದ್ರಿಕರಣ ವ್ಯವಸ್ಥೆಯಿಂದ ಪೊಲೀಸ­ರು ಹಾಗೂ ನಾಗರಿಕರ ನಡುವೆ ಸಮನ್ವ­ಯತೆ ಹೆಚ್ಚಾಗಲಿದೆ. ಈ ಸಹಾಯವಾಣಿ­ಗಳನ್ನು ಎಲ್ಲ ಠಾಣೆಗಳ ಮಟ್ಟದಲ್ಲೂ ಆರಂಭಿಸಲು ನಿರ್ಧರಿಸ­ಲಾಗಿದ್ದು, ಪ್ರಾಥ­ಮಿಕ ಹಂತವಾಗಿ ಡಿಸಿಪಿ ಮತ್ತು ಎಸಿಪಿ ಮಟ್ಟದಲ್ಲಿ ಪ್ರಾರಂಭಿಸಲಾಗುತ್ತಿದೆ’ ಎಂದರು.‘ರಾಜ್ಯದ ಜನಸಂಖ್ಯೆಗೆ ಹೋಲಿಸಿದರೆ ಪೊಲೀಸರ ಬಲ ಕಡಿಮೆ ಇದೆ. ಹೀಗಾಗಿ ಇಲಾಖೆಗೆ ಹೊಸದಾಗಿ 8,500 ಪೊಲೀಸರು ಹಾಗೂ 7,000 ಗೃಹರಕ್ಷಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳ­ಲಾಗಿದೆ. ಇನ್ನು ಅಭಿವೃದ್ಧಿ ಕುಂಠಿತವಾಗಿ­ರುವ ರಾಜ್ಯದ ಕೆಲ ಪ್ರದೇಶಗಳಲ್ಲಿ ನಕ್ಸಲ್‌ ಸಮಸ್ಯೆ ಕಾಣಿಸಿಕೊಂಡಿದ್ದು, ಇದನ್ನು ಕೊನೆಗಾಣಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಆದಿವಾಸಿಗಳನ್ನೂ ಇಲಾಖೆಗೆ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಜಾರ್ಜ್ ತಿಳಿಸಿದರು.ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕರು, ಪಾಲಿಕೆ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಮೇಯರ್‌ ‘ಕಟ್ಟೆ’ ಪುರಾಣ

ಮೇಯರ್‌ ಬಿ.ಎಸ್‌.ಸತ್ಯನಾರಯಣ ಅವರು ತಮ್ಮ ಹೆಸರಿನ ಮುಂದೆ ‘ಕಟ್ಟೆ’ ಸೇರಿಕೊಂಡ ವಿಷಯವನ್ನು ಬಸವನಗುಡಿ ಪೊಲೀಸ್‌ ಠಾಣೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಳಿಸಿದರು.

‘80ರ ದಶಕದಲ್ಲಿ ನಡೆದ ಗೋಕಾಕ್‌ ಚಳವಳಿಯನ್ನು ಬೆಂಬಲಿಸಿ ನಾನು ಮತ್ತು ಸ್ನೇಹಿತರು ಬಸವನಗುಡಿಯ ಕಟ್ಟೆಯೊಂದರ ಮೇಲೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದೆವು. ಆಗ ಬಸವನಗುಡಿ ಪೊಲೀಸರು ನಮ್ಮನ್ನು ಬಂಧಿಸಿ ಸೆಲ್‌ನಲ್ಲಿ ಹಾಕಿದರು. ಸೆಲ್‌ನಲ್ಲೇ ಕುಳಿತು ‘ಕಟ್ಟೆ ಗೆಳೆಯರ ಬಳಗ’ವನ್ನು ಹುಟ್ಟುಹಾಕಿದೆವು. ಅಂದಿನಿಂದ ನಾನು ಕಟ್ಟೆ ಸತ್ಯನಾರಾಯಣನಾದೆ. ನಂತರ ಮೇಯರ್‌ ಆದೆ. ಈಗ ಅದೇ ಠಾಣೆಯ ನವೀಕೃತ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದೇನೆ’ ಎಂದರು.ಈ ವೇಳೆ ಜನರ ಚಪ್ಪಾಳೆಯಿಂದ ತಬ್ಬಿಬ್ಬಾದ ಮೇಯರ್‌, ‘ಪೊಲೀಸರು ಬಂಧಿಸಿದ ವ್ಯಕ್ತಿಗಳೆಲ್ಲ ಮೇಯರ್‌ ಆಗುತ್ತಾರೆ ಎಂದು ಭಾವಿಸುವುದು ಬೇಡ. ಆ ಬಂಧನ ನನ್ನ ಜೀವನಕ್ಕೆ ಮಹತ್ವದ ತಿರುವು ನೀಡಿತು’ ಎಂದು ಸಮಜಾಯಿಷಿ ಕೊಟ್ಟರು.ನಾಲ್ಕು ಎಕರೆ ಜಾಗಕ್ಕೆ ಮನವಿ

‘ದಕ್ಷಿಣ ವಿಭಾಗದ ಪೊಲೀಸರು ವಸತಿ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಸ್ಥಳೀಯ ಶಾಸಕರು ಹಾಗೂ ಪಾಲಿಕೆ ಸದಸ್ಯರು ನಾಲ್ಕು ಎಕರೆ ಜಮೀನು ಮಂಜೂರು ಮಾಡಿದರೆ ಪೊಲೀಸ್‌ ವಸತಿ ಸಮುಚ್ಚಯ ನಿರ್ಮಿಸಲು ಅನುಕೂಲವಾಗುತ್ತದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ರಾಘವೇಂದ್ರ ಔರಾದಕರ್‌ ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್‌ ಬಿ.ಎಸ್. ಸತ್ಯನಾರಾಯಣ, ‘ದಕ್ಷಿಣ ವಿಭಾಗದಲ್ಲಿ ಪಾಲಿಕೆಗೆ ಸೇರಿದ ಕಂದಾಯ ಭೂಮಿ ದೊರಕುತ್ತಿಲ್ಲ. ಆದರೆ, ಮುಜರಾಯಿ ಇಲಾಖೆಗೆ ಒಳಪಟ್ಟ ಖಾಲಿ ಜಮೀನು ಸಾಕಷ್ಟಿದೆ. ಹೀಗಾಗಿ ಪೊಲೀಸ್‌ ವಸತಿ ಸಮುಚ್ಚಯಕ್ಕೆ ಮುಜರಾಯಿ ಇಲಾಖೆಯಿಂದ ಜಮೀನು ಪಡೆಯಬಹುದು’ ಎಂದರು.

ಪ್ರತಿಕ್ರಿಯಿಸಿ (+)