ಶನಿವಾರ, ಜನವರಿ 18, 2020
20 °C
ರಣಜಿ ಕ್ರಿಕೆಟ್‌: ಮಿಂಚಿದ ಮಿಥುನ್‌, ಶರತ್‌; ಸೇಡು ತೀರಿಸಿಕೊಂಡ ಕರ್ನಾಟಕ

‘ಡ್ರೀಮ್ಸ್’ನಲ್ಲಿ ಜಯದ ‘ಕನಸು’ ನನಸು

ಗಿರೀಶ ದೊಡ್ಡಮನಿ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಟಕ್: ಮಹಾನದಿ ತೀರದಲ್ಲಿರುವ ‘ಡ್ರೀಮ್ಸ್‌’ ಮೈದಾನದಲ್ಲಿ ಭಾನುವಾರ ಕರ್ನಾಟಕ ತಂಡಕ್ಕೆ ರಣಜಿ ಋತುವಿನ ಮೊಟ್ಟಮೊದಲ ಗೆಲುವಿನ ‘ಕನಸು‘ ನನಸಾಯಿತು. ‘ಎ‘ ಗುಂಪಿನ ಮೊದಲ ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದ ಕರ್ನಾಟಕ ತಂಡವು ಒಡಿಶಾ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ 4 ವಿಕೆಟ್‌ಗಳ ಜಯ ಸಾಧಿಸಿತು. ಕಳೆದ ಬಾರಿ ಬೆಂಗಳೂರಿನಲ್ಲಿ ಗೆದ್ದಿದ್ದ ಒಡಿಶಾ ತಂಡವನ್ನು ಅವರ ಅಂಗಳದಲ್ಲಿಯೇ ಸೋಲಿಸಿ ಸೇಡು ತೀರಿಸಿಕೊಂಡಿತು. ಇದರೊಂದಿಗೆ ಸಂಪೂರ್ಣ 6 ಅಂಕ ಗಳಿಸಿದ ತಂಡವು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿತು.ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್‌ ಪಡೆದು ಮಿಂಚಿದ್ದ ಅಭಿಮನ್ಯು ಮಿಥುನ್ (22–6–58–5) ಭಾನುವಾರ ಬೆಳಿಗ್ಗೆಯೂ ಕೈಚಳಕ ತೋರಿ  5 ವಿಕೆಟ್‌ಗಳ ಗೊಂಚಲು ಗಳಿಸಿದರು. ‘ಪಂದ್ಯಶ್ರೇಷ್ಠ’ ನಾದ ಮಿಥುನ್‌ಗೆ  ತಕ್ಕ ಸಾಥ್ ನೀಡಿದ ‘ಮಂಡ್ಯ’ ಎಚ್‌.ಎಸ್. ಶರತ್ (25.3–7–80–5) ಐದು ವಿಕೆಟ್ ಗೊಂಚಲು ಗಳಿಸಿದರು.ನಾಯಕ ವಿಪ್ಲವ್ ಸಾಮಂತ್ರೆ (106; 215ಎ, 313ನಿ, 6ಬೌ, 1ಸಿ) ಶತಕದ ನೆರವಿನಿಂದ ಎರ ಡನೇ ಇನಿಂಗ್ಸ್‌ನಲ್ಲಿ 127 ರನ್ನುಗಳ ಗುರಿಯನ್ನು ಒಡಿಶಾ ನೀಡಿತ್ತು. ಸಣ್ಣ ಮೊತ್ತವಾದರೂ ಕಠಿಣ ಹಾದಿಯನ್ನೇ ಸವೆಸಿದ ಕರ್ನಾಟಕವು ಒಡಿಶಾ ವೇಗಿಗಳ   ತೀಕ್ಷ್ಣ ದಾಳಿಯನ್ನು ಎದುರಿಸಿ 6 ವಿಕೆಟ್‌ ಕಳೆದುಕೊಂಡು 130 ರನ್ ಗಳಿಸಿತು. ಆಗ ದಿನ ದಾಟದ 17 ಓವರುಗಳು ಇನ್ನೂ ಬಾಕಿಯಿದ್ದವು.ಗೆಲುವಿಗೆ ಬೇಕಾಗಿದ್ದ ಕೊನೆಯ ರನ್‌, ಎಡಗೈ ಆಲ್‌ರೌಂಡರ್ ಅಬ್ರಾರ್ ಖಾಜಿ ಎಕ್ಸಟ್ರಾ ಕವರ್‌ಗೆ ಬಾರಿಸಿದ ಬೌಂಡರಿ ಮೂಲಕ ಒಲಿಯಿತು. ಸಿ.ಎಂ. ಗೌತಮ್ ಬಳಗದಲ್ಲಿ ಹರ್ಷದ ಹೊನಲು ಹರಿಯಿತು. ಪರಸ್ಪರ ಆಲಂಗಿಸಿಕೊಂಡು ಅಭಿನಂದಿಸಿದರು. ಕಠಿಣವಾದ ಸರಳ ಹಾದಿ:  ಊಟದ ವಿರಾಮಕ್ಕೆ  ಮುನ್ನವೇ ಒಡಿಶಾದ ಇನಿಂಗ್ಸ್‌ಗೆ ಮಿಥುನ್ ಮತ್ತು ಶರತ್ ಇತಿಶ್ರೀ ಹಾಡಿದ ನಂತರ  ಗಾಯಾಳು ರಾಬಿನ್ ಉತ್ತಪ್ಪ ಬದಲಿಗೆ ಕೆ.ಎಲ್. ರಾಹುಲ್ ಮತ್ತು ಮಯಂಕ್ ಅಗರವಾಲ್ ಇನಿಂಗ್ಸ್ ಆರಂಭಿಸಿದರು. ವಿರಾಮದ ನಂತರ ಒಡಿಶಾ ಬೌಲರ್‌ಗಳು ಕರ್ನಾಟಕದ ಬಲಾಢ್ಯ ಬ್ಯಾಟಿಂಗ್ ಶಕ್ತಿಯನ್ನೂ ನಡುಗಿಸಿಬಿಟ್ಟರು.ಇದರಿಂದ ಎಚ್ಚರಿಕೆಯ ಆಟಕ್ಕೆ ಮೊರೆಹೋದ ಕರ್ನಾಟಕ ತಂಡವು 50 ರನ್ ಗಳಿಸಲು 17 ಓವರ್ ತೆಗೆದುಕೊಂಡರೆ, 100ರ ಗಡಿ ದಾಟಲು ತೆಗೆದುಕೊಂಡಿದ್ದು 28.1 ಓವರುಗಳು. ಆದರೆ ನಂತರದ ಕೇವಲ 27 ರನ್ನುಗಳ ಗಡಿ ದಾಟಲು ತೆಗೆದುಕೊಂಡಿದ್ದು 13.1 ಓವರುಗಳನ್ನು!  

ತಂಡದ ಮೊತ್ತ 7 ರನ್ ಆಗಿದ್ದಾಗ ಮಯಂಕ್ ಅಗರವಾಲ್ ಪದಾರ್ಪಣೆ ಪಂದ್ಯ ಆಡುತ್ತಿರುವ ಸೂರ್ಯಕಾಂತ್ ಪ್ರಧಾನ್‌ಗೆ ಮೊದಲ ಬಲಿಯಾದರು.  ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ಗಣೇಶ್ ಸತೀಶ್ ಮತ್ತು ರಾಹುಲ್ ಒಂದು ಮತ್ತು ಎರಡು ರನ್ ಪಡೆಯುತ್ತ, ಅವಕಾಶ ಸಿಕ್ಕಾಗ ಬೌಂಡರಿ ಗಳಿಸಿದರು.  ಇವರಿಬ್ಬರೂ ಎರಡನೇ ವಿಕೆಟ್‌ಗೆ 58 ರನ್ ಸೇರಿಸಿದ್ದಾಗ, ರಾಹುಲ್ ಕಣ್ತಪ್ಪಿಸಿ ಒಳಗೆ ನುಗ್ಗಿದ ದೀಪಕ್ ಬೆಹರಾ ಎಸೆತ ಸ್ಟಂಪ್ ಎಗರಿಸಿತು.

ನಂತರ ಬಂದ ಗೌತಮ್ ಜೊತೆಗೆ ಗಣೇಶ್ 18 ರನ್ ಸೇರಿಸಿದ್ದರು. ಇನ್ನೇನು ಪಂದ್ಯವನ್ನು ಇವರಿಬ್ಬರೇ ಮುಗಿಸುತ್ತಾರೆ ಎಂದುಕೊಳ್ಳುವಷ್ಟರಲ್ಲಿ ಬಸಂತ್ ಮೊಹಾಂತಿಯ ಹೊರಹೋಗುತ್ತಿದ್ದ ಎಸೆತವನ್ನು ಕೆಣಕಿದ ಗಣೇಶ್ ದಂಡ ತೆತ್ತರು. ಗೌತಮ್ ಮತ್ತು ಮನೀಶ್ ಪಾಂಡೆ ನೂರರ ಗಡಿ ದಾಟಿಸಿದರು.

ಮೊಹಾಂತಿ ಓವರ್‌ನಲ್ಲಿ ಪಾಂಡೆ ಅನಗತ್ಯ ಹೊಡೆತಕ್ಕೆ ಯತ್ನಿಸಿ ವಿಕೆಟ್‌ಕೀಪರ್‌ಗೆ ಕ್ಯಾಚಿತ್ತರು. ಮತ್ತೆ ನಾಲ್ಕು ರನ್ನುಗಳು ಸೇರುವಷ್ಟರಲ್ಲಿ ಆಕಸ್ಮಿಕವಾಗಿ ಪುಟಿದೆದ್ದ ಪ್ರಧಾನ್ ಎಸೆತವನ್ನು ಆಡಿ ಗೌತಮ್ ನಿರ್ಗಮಿಸಿದರು. ನಂತರ ಬಂದ  ರಾಬಿನ್ ಉತ್ತಪ್ಪ  ಪ್ರಧಾನ್‌ಗೆ ವಿಕೆಟ್‌ ಒಪ್ಪಿಸಿದರು. ಇನ್ನೊಂದೆಡೆ ಎಚ್ಚರಿಕೆಯ ಆಟವಾಡುತ್ತಿದ್ದ ಕುನಾಲ್ ಕಪೂರ್ ಜೊತೆಗೆ ಸೇರಿದ ಅಬ್ರಾರ್ ಖಾಜಿ ಸಮಾಧಾನಚಿತ್ತದಿಂದ ತಂಡವನ್ನು ಗೆಲುವಿನ ದಡ ಸೇರಿಸಿದರು. ಜಯಕ್ಕೆ ಎರಡು ರನ್ ಬೇಕಿದ್ದ ಸಂದರ್ಭದಲ್ಲಿ ಪ್ರಧಾನ್ ಶಾಟ್‌ಪಿಚ್‌ ಎಸೆತದಲ್ಲಿ ಖಾಜಿ ಬಲಗೈಗೆ ಪೆಟ್ಟು ತಿಂದಿದ್ದರು.ಮಿಥುನ್ ಮಿಂಚು: ಶನಿವಾರವೇ ಒಡಿಶಾ ತಂಡದ ಸರ್ವಪತನಕ್ಕೆ ಪ್ರಯತ್ನಿಸಿದ್ದ ಕರ್ನಾಟಕಕ್ಕೆ ಅಡ್ಡಿಯಾಗಿದ್ದ ವಿಪ್ಲವ್ ಸಾಮಂತ್ರೆ ಮತ್ತು ಅಭಿಲಾಶ್ ಮಲೀಕ್ ಜೋಡಿಯನ್ನು, ದಿನದಾಟದ 5ನೇ ಓವರ್‌ನಲ್ಲಿ ಮಿಥುನ್ ಬೇರ್ಪಡಿಸಿದರು. ಅರ್ಧಶತಕ ಪೂರೈಸಿದ್ದ ಮಲೀಕ್ (50; 89ಎಸೆತ, 125ನಿ, 6ಬೌ, 1ಸಿ) ಎದೆಮಟ್ಟಕ್ಕೆ ಪುಟಿದ ಚೆಂಡನ್ನು ಪುಲ್‌ ಮಾಡಿ, ಸ್ಕ್ವೇರ್‌ಲೆಗ್‌ನಲ್ಲಿದ್ದ ಕುನಾಲ್‌ಗೆ ಕ್ಯಾಚಿತ್ತರು. ಮಿಥುನ್ ತಮ್ಮ ನಂತರದ ಓವರ್‌ನಲ್ಲಿ ಸುಬ್ರಜೀತ್ ಸಾಹುವನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು.81ನೇ ಓವರ್‌ನಲ್ಲಿ ಹೊಸ ಚೆಂಡಿನೊಂದಿಗೆ  ಎರಡನೇ ಸ್ಪೆಲ್ ಆರಂಭಿಸಿದ ಮಿಥುನ್ ಎಸೆತದ ವೇಗವನ್ನು ಅರಿಯದ ಅಲೋಕ್  ಸಾಹು ಬ್ಯಾಟ್ ಬೀಸಿದರು. ಅಂಚು ಸವರಿದ ಚೆಂಡು ಗೌತಮ್ ಕೈಸೇರಿತು. ತಮ್ಮ ಇನ್ನೊಂದು ಓವರ್‌ನಲ್ಲಿ ಸಾಹು ರೀತಿಯಲ್ಲಿಯೇ ದೀಪಕ್ ಬೆಹರಾ ಅವರೂ ಮಿಥುನ್‌ಗೆ ಶರಣಾದರು.ಸಾಮಂತ್ರೆ –ಶರತ್ ಹಣಾಹಣಿ: ಶರತ್ ಎಸೆತಗಳನ್ನು ಎಚ್ಚರಿಕೆಯಿಂದ ಆಡುತ್ತ, ಅವರ ಶಾಟ್‌ಪಿಚ್‌ ಎಸೆತಗಳಿಂದ ಪೆಟ್ಟು ತಿಂದಿದ್ದ ವಿಪ್ಲವ್ ಸಾಮಂತ್ರೆ   ಶತಕ ಪೂರೈಸಿದ್ದೂ ಶರತ್ ಬೌನ್ಸರ್‌ ಅನ್ನು ಪುಲ್ ಮಾಡಿ ಬೌಂಡರಿಗೆ ಗಳಿಸುವುದರೊಂದಿಗೆ.  ಇದಕ್ಕೂ ಮುನ್ನ ಎಡಗೈ ಸ್ಪಿನ್ನರ್ ಅಬ್ರಾರ್ ಖಾಜಿ ಎಸೆತವನ್ನು ಅವರು ಸಿಕ್ಸರ್‌ಗೆ ಎತ್ತಿದ್ದರು. ಅಲೋಕ್ ಸಾಹು ಜೊತೆಗೆ ಎಂಟನೇ ವಿಕೆಟ್‌ಗೆ 50 ರನ್ ಸೇರಿಸಿದ್ದರು. ಪೆವಿಲಿಯನ್ ತುದಿಯಿಂದ ಮಿಥುನ್ ಬದಲಿಗೆ ಬೌಲಿಂಗ್ ಆರಂಭಿಸಿದ ಶರತ್  ಸಾಮಂತ್ರೆಯನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಅದರ  ನಂತರದ ಎಸೆತದಲ್ಲಿಯೇ ಸೂರ್ಯಕಾಂತ್ ಪ್ರಧಾನ್್ ನಿರ್ಗಮಿಸಿದರು.

ಪ್ರತಿಕ್ರಿಯಿಸಿ (+)