ಭಾನುವಾರ, ಜೂನ್ 20, 2021
24 °C

‘ದೇವೇಗೌಡ ಸ್ವಾರ್ಥದ ರಾಜಕಾರಣ ಮಾಡಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನರಾಯಪಟ್ಟಣ: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಸ್ವಾರ್ಥದ ರಾಜಕಾರಣ ಮಾಡಿಲ್ಲ ಎಂದು ಜೆಡಿಎಸ್‌ ಶಾಸಕ ಸಿ.ಎನ್‌. ಬಾಲಕೃಷ್ಣ ಹೇಳಿದರು.ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಸಿ.ಎಸ್‌. ಪುಟ್ಟೇಗೌಡ ಅವರು ಈ ಹಿಂದೆ ಜೆಡಿಎಸ್‌ನಿಂದ ಮೂರು ಸಲ ಶಾಸಕರಾಗಿದ್ದರು. ಆಗ ಸುಮ್ಮನಿದ್ದು ಈಗ ದೇವೇಗೌಡರದು ಕುಟುಂಬ ರಾಜಕಾರಣ ಎಂದು ಆರೋಪ ಮಾಡುತ್ತಿದ್ದಾರೆ. 2008 ರ ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕ ಸಮಾರಂಭ­ದಲ್ಲಿ ಇದೇ ಕೊನೆ ಚುನಾವಣೆ ಎಂದು ಪುಟ್ಟೇಗೌಡ ಘೋಷಿಸಿದ್ದರು. ನಂತರ ಅಧಿಕಾರದ ಆಸೆಗಾಗಿ ಜೆಡಿಎಸ್‌ ತೊರೆದು 2013ರ ಚುನಾವಣೆ ವೇಳೆ ಕಾಂಗ್ರೆಸ್‌ಗೆ ಸೇರ್ಪಡೆಯಾದರು ಎಂದು ದೂರಿದರು.ದೇವೇಗೌಡರು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿ­ದ್ದಾರೆ. ಜಿಲ್ಲೆಯಲ್ಲಿನ ರಾಜಕೀಯ ನಾಯಕರಿಗೆ ಮೋಸ ಮಾಡಿಲ್ಲ. ಹಿರೀಸಾವೆ– ಜುಟ್ಟನಹಳ್ಳಿ ಏತ ನೀರಾವರಿ ಯೋಜನೆ ಅನುಷ್ಠಾನದ ವಿಚಾರದಲ್ಲಿ ನಾನು ಹಲವು ಸಲ ಸರ್ಕಾರದ ಗಮನ ಸೆಳೆದಿದ್ದೇನೆ. ಆ ಯೋಜನೆ ಮಂಜೂರಾಗಲು ಇನ್ನೂ ಸಮಯ ಬೇಕು. ಕಲ್ಲೇಸೋಮನಹಳ್ಳಿ ಏತ ನೀರಾವರಿ ಯೋಜನೆಯ ಕೆಲಸವಾಗಿಲ್ಲ. ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇಂದಿಗೂ ಇದೆ ಎಂದರೆ ಅದಕ್ಕೆ ಮಾಜಿ ಶಾಸಕ  ಪುಟ್ಟೇಗೌಡ ಕಾರಣ ಎಂದು ಆಪಾದಿಸಿದರು.ಹಳೇ ಕೆಲಸಕ್ಕೆ ಭೂಮಿಪೂಜೆ ಮಾಡಲಾಗುತ್ತಿದೆ ಎಂಬ ಆಪಾದನೆ ಸುಳ್ಳು. ಈ ಎಲ್ಲಾ ವಿಷಯದ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚಿಸಲು ಸಿದ್ಧ ಎಂದು ಸವಾಲು ಹಾಕಿದರು.ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಗೆ ಸೇರಿದ ಐದು ಎಕರೆ ಜಮೀನನ್ನು ಶಿಕ್ಷಣ ಸಂಸ್ಥೆ ಆರಂಭಿಸುವ ನೆಪದಲ್ಲಿ ಲಪಟಾಯಿಸಲಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಟೀಕಿಸಿರುವುದರಲ್ಲಿ ಅರ್ಥವಿಲ್ಲ. ಸುಳ್ಳು ಆರೋಪ ಮಾಡಬಾರದು. ದಾಖಲೆ ಸಹಿತ ಆರೋಪ ಸಾಬೀತು ಮಾಡಬೇಕು ಎಂದರು.ಜೆಡಿಎಸ್ ಮುಖಂಡರಾದ ಪರಮದೇವರಾಜೇ­ಗೌಡ, ವಿಜಯಶಿವಲಿಂಗಪ್ಪ, ಸಿ.ಜಿ. ಮಂಜಣ್ಣ, ಬಿ.ಸಿ. ಮಂಜುನಾಥ್‌ ಇದ್ದರು.ಕಂಟ್ರೋಲ್ ರೂಂ ಸ್ಥಾಪನೆ 

ಹೊಳೆನರಸೀಪುರ:
ಲೋಕಸಭಾ ಚುನಾವಣೆಗೆ ಸಂಬಂಧಪಟ್ಟ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಕಂಟ್ರೋಲ್‌ ರೂಂ ತೆರೆಯಲಾಗಿದೆ. ಇದು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದೆ. ಸಾರ್ವಜನಿಕರು ಚುನಾವಣೆಗೆ ಸಂಬಂಧಪಟ್ಟ ಯಾವುದೇ ಮಾಹಿತಿಯನ್ನು ದೂ. 08175– 272050, ಮೊ. 93428 14076, 94800 35225, ದೂ. 08175 273261 ಸಂಖ್ಯೆಗಳಿಗೆ ಕರೆ ಮಾಡಬಹುದು ಎಂದು ಸಹಾಯಕ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.