ಮಂಗಳವಾರ, ಜನವರಿ 21, 2020
29 °C

‘ಧವಲ’ ಅಂಗಳದಲ್ಲಿ ಸ್ಮಶಾನ ಮೌನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಬೆಳಗಾವಿ ಜಿಲ್ಲೆ ನಿಪ್ಪಾಣಿ ಬಳಿಯ ಸ್ತವನಿಧಿಯ ಕಾರ್ತಿಕೋತ್ಸವಕ್ಕೆ ಹೋಗಿ ಮರಳಿ ಬರುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ತೀರಿಕೊಂಡ ಜಿನಪ್ಪ ಸತ್ತೂರ ಅವರ ಇಲ್ಲಿಯ ಕೃಷಿ ವಿ.ವಿ. ಎದುರಿನ ಸಾಧೂನವರ ಎಸ್ಟೇಟ್‌ನ ‘ಧವಲ’ ಹೆಸರಿನ ಮನೆಯ ಮುಂಭಾಗ ಸೋಮವಾರ ಸಂಜೆ ಸ್ಮಶಾನ ಮೌನ ಆವರಿಸಿತ್ತು.ಜಿನಪ್ಪ, ಅವರ ಪತ್ನಿ ಗೌರಮ್ಮ, ಸಹೋದರ ರವಿ, ಪುತ್ರ ಚಂದ್ರಶೇಖರ ಹಾಗೂ ಅವರ ಇಬ್ಬರು ಮೊಮ್ಮಕ್ಕಳು ಇದೇ ಮನೆಯಿಂದ ತಮ್ಮ ಕಾರಿನಲ್ಲಿ ಬೆಳಿಗ್ಗೆ ಹೊರಟಿದ್ದರು. ಅಂದುಕೊಂ­ಡಂತೆ ಎಲ್ಲವೂ ಆಗಿದ್ದರೆ ಸಂಜೆ 6 ಗಂಟೆ ವೇಳೆಗೆ ಧಾರವಾಡದ ನಿವಾಸವನ್ನು ತಲುಪ­ಬೇಕಿತ್ತು. ಆದರೆ, ವಿಧಿಯಾ­ಟವೇ ಬೇರೆ­ಯಾ­ಗಿ­ದ್ದರಿಂದ ಅವರು ಮರಳಿ ಬಾರದ ಲೋಕಕ್ಕೆ ಹೋದರು. ಮನೆಯ ಪಕ್ಕದ­ವರು ಹಾಗೂ ಅವರ ಸಂಬಂಧಿಗಳು ಕೀಲಿ ಹಾಕಿದ ಮನೆಯ ಮುಂದೆ ಶವ­ಗಳು ಬರುತ್ತವೇನೋ ಎಂಬ ನಿರೀಕ್ಷೆ­ಯಲ್ಲಿ­ದ್ದರು. ಜಿನಪ್ಪ ಅವರ ತಮ್ಮನ ಹೆಂಡತಿ ಶೀಲಾ ಸತ್ತೂರ ಅವರನ್ನೂ ಪ್ರತಿ ವರ್ಷವೂ ಸ್ತವನಿಧಿಗೆ ಕರೆದುಕೊಂಡು ಹೋಗುತ್ತಿದ್ದರು. ಭಾನುವಾರ ಸಂಜೆ­ಯಷ್ಟೇ ಸ್ತವನಿಧಿಗೆ ಹೋಗುವ ವಿಚಾರ ತಿಳಿಸಿದ್ದರು. ಆದರೆ, ಕಾರಿನಲ್ಲಿ ಜಾಗ ಇಲ್ಲದ್ದರಿಂದ ಕರೆದಿರಲಿಲ್ಲ. ‘ಖಾಲಿ ಮನೆ ನೋಡಿಕೊಂಡೇ ಇರು ಎಂದು ನನ್ನನ್ನು ಬಿಟ್ಟು ಹೋದಿ­ಯೇನೋ ಚಂದ್ರು...’ ಎಂದು ಶೀಲಾ ಕಣ್ಣೀರಿಡುತ್ತಿದ್ದರು.ಮೂಲತಃ ತಾಲ್ಲೂಕಿನ ಮುಮ್ಮಿಗಟ್ಟಿ ಗ್ರಾಮದ ಜಿನಪ್ಪ ಅವರು ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸಿ ಎರಡು ವರ್ಷಗಳ ಹಿಂದಷ್ಟೇ ಸೇವಾ ನಿವೃತ್ತಿ ಹೊಂದಿದ್ದರು. ಚಂದ್ರ­ಶೇಖರ ವಕೀಲಿ ವೃತ್ತಿ ಮಾಡುತ್ತಿದ್ದರು. ಚಂದ್ರಶೇಖರ–ಅನುರಾಧಾ (ಅನುಶ್ರೀ) ಅವರ ಮದುವೆಯಾಗಿ ಎರಡು ವರ್ಷ­ಗಳಾಗಿತ್ತಷ್ಟೇ. ಇನ್ನೂ ಮಕ್ಕಳಾಗಿರಲಿಲ್ಲ. ನಗರದ ವಕೀಲ ಅರುಣ ಜೋಶಿ ಅವರ ಲಾ ಚೇಂಬರ್‌ನಲ್ಲಿ ವಕೀಲಿಕೆ ಮಾಡು­ತ್ತಿದ್ದ ಚಂದ್ರಶೇಖರ, ಜೊತೆಗೆ ಮುಮ್ಮಿ­ಗಟ್ಟಿಯ ತಮ್ಮ ಭೂಮಿಗೆ ಉತ್ತಮ ಬೆಲೆ ಬಂದಿದ್ದರಿಂದ ಕೆಲ ವರ್ಷಗಳಿಂದ ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲೂ ತೊಡಗಿದ್ದರು. ಹೈದರಾಬಾದ್‌­ನಲ್ಲಿ­ರುವ ಜಿನಪ್ಪ ಅವರ ಹಿರಿಯ ಪುತ್ರ ಅರುಣ ಅವರ ಮಗಳು ಯುಕ್ತಿ ಹಾಗೂ ಪುತ್ರಿ ಸುಜಾತಾ ಅವರ ಮಗ ವೈಭವ್‌ ಎರಡು ವರ್ಷಗಳಿಂದ ಅಜ್ಜನ ಮನೆಯಲ್ಲಿಯೇ ವಾಸವಾಗಿದ್ದರು ಎಂದು ಶೀಲಾ ತಿಳಿಸಿದರು.‘ಸಂಜೆ ಮನೆಗೆ ಬರುತ್ತೇವೆ. ಮನೆಯ ಕಡೆ ನೋಡಿಕೊಳ್ಳುತ್ತಿರು’ ಎಂದು ಚಂದ್ರಶೇಖರ ಅವರು ಮನೆಯಲ್ಲಿ ಗೌಂಡಿ ಕೆಲಸ ಮಾಡುತ್ತಿದ್ದ ತಮಗೆ ಹೇಳಿದ್ದಾಗಿ ಕಾಶೀಂ ಹೇಳಿದರು.

ಪ್ರತಿಕ್ರಿಯಿಸಿ (+)