ಮಂಗಳವಾರ, ಜನವರಿ 28, 2020
19 °C

‘ನೆಲ್ಸನ್ ಮಂಡೇಲಾ ಆಫ್ರಿಕಾದ ಅಂಬೇಡ್ಕರ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೆಲ್ಸನ್ ಮಂಡೇಲಾ ಅವರು ಆಫ್ರಿಕಾದ ಗಾಂಧಿ ಮಾತ್ರವಲ್ಲದೆ ಆಫ್ರಿಕಾದ ಅಂಬೇಡ್ಕರ್ ಸಹ ಆಗಿದ್ದರು ಎಂದು ಸಮಾಜ ಕಲ್ಯಾಣ  ಸಚಿವ ಎಚ್.ಆಂಜನೇಯ ಅವರು ಹೇಳಿದರು.ಗಾಂಧಿ ಭವನದ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ರಾಜ್ಯ ದಲಿತ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಏರ್ಪಡಿಸಿದ್ದ ನೆಲ್ಸನ್ ಮಂಡೇಲಾ ಶ್ರದ್ಧಾಂಜಲಿ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿದರು.‘ಮಂಡೇಲಾ ಅವರ ಸ್ಥಾನದಲ್ಲಿ ಬೇರೆ ನಾಯಕರಿದ್ದಿದ್ದರೆ ವಿಮೋಚನೆಯ ನಂತರ ಆಫ್ರಿಕಾ ರಕ್ತಸಿಕ್ತವಾಗುತ್ತಿತ್ತು. ಶೋಷಕರನ್ನು ಶೋಷಿತರು ಪ್ರೀತಿಸುವಂತೆ ಮಾಡಿದ ಅವರು ಮಾನವತಾವಾದಿ. ಸಹಬಾಳ್ವೆಯಿಂದ ಎಲ್ಲಾ ಜನಾಂಗಗಳ ಅಭ್ಯುದಯ ಸಾಧ್ಯ ಎಂಬುದನ್ನು ಅವರು ತೋರಿಸಿದ್ದಾರೆ’ ಎಂದರು.ಕವಿ ಡಾ.ಸಿದ್ದಲಿಂಗಯ್ಯ, ‘ಬಿಳಿಯರ ಒಂದು ಹನಿ ರಕ್ತ ಬಿದ್ದರೂ ನಮಗೆ ಕಳಂಕ ಎಂದು ಮಂಡೇಲಾ ಅವರು ನಂಬಿದ್ದರು, ಪ್ರತಿಪಾದಿಸಿದರು ಮತ್ತು ಹಾಗೇ ಬದುಕಿದರು. ಭಾರತವನ್ನು ಆದರ್ಶವಾಗಿ ಸ್ವೀಕರಿಸಿದ್ದ ಅವರ ವಿಚಾರ­ಧಾರೆಗಳ ನಿಟ್ಟಿನಲ್ಲಿ ಭಾರತವನ್ನು ನಾವು ಮತ್ತೆ ಕಟ್ಟಬೇಕಿದೆ’ ಎಂದರು.

ಗಾಂಧಿ ಭವನದ ಅಧ್ಯಕ್ಷ ಡಾ.ಹೊ.ಶ್ರೀನಿವಾಸಯ್ಯ ಅವರು ಮಾತನಾಡಿ, ‘ಬಿಳಿಯರ ದೃಷ್ಠಿಯಲ್ಲಿ ಕ್ರಿಮಿನಲ್ ಆಗಿದ್ದ ವ್ಯಕ್ತಿ ಬಿಳಿಯರ ಪಾಲಿಗೂ ಪ್ರೀತಿಪಾತ್ರರಾದ ರೀತಿ ಮಂಡೇಲಾರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ’ ಎಂದರು.ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷ ಅಶ್ವತನಾರಾಯಣ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)