ಭಾನುವಾರ, ಜನವರಿ 19, 2020
26 °C

‘ಪರರ ದಾಳಿಗೆ ಸಿಲುಕಿಯೂ ಉಳಿದ ಧರ್ಮ ನಮ್ಮ ದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕ್ಕಿಆಲೂರ: ಅನೇಕ ಮಹಾತ್ಮರು ಪುಣ್ಯಭೂಮಿ ಭಾರತದಲ್ಲಿ ಜನ್ಮವೆತ್ತಿ ಅಧ್ಯಾತ್ಮಿಕ ಪ್ರಪಂಚದಲ್ಲಿ ಹೊಸ ದಾರಿಯನ್ನು ತೋರಿಸಿದ್ದಾರೆ. ರಾಷ್ಟ್ರೀಯ ವಿಪತ್ತು ಮತ್ತು ಪರರ ದಬ್ಬಾಳಿಕೆಯ ಮಧ್ಯೆಯೂ ನಮ್ಮ ಧರ್ಮ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ ಎಂದು ಹರಿಹರದ ಪಂಚಮಸಾಲಿ ಪೀಠದ ಸಿದ್ಧಲಿಂಗ ಸ್ವಾಮೀಜಿ ನುಡಿದರು.ಇಲ್ಲಿಗೆ ಸಮೀಪವಿರುವ ಶಂಕ್ರಿಕೊಪ್ಪ, ಕೋಡಿಯಲ್ಲಾಪುರ, ಆಡೂರು ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಹರಿಹರದ ಪಂಚಮಸಾಲಿ ಮಹಾಪೀಠ ಕಟ್ಟಡ ನಿರ್ಮಾಣದ ಹಿನ್ನೆಲೆಯಲ್ಲಿ ವಂತಿಗೆ ಸಂಗ್ರಹ ಅಭಿಯಾನದ ಪ್ರಯುಕ್ತ ಜನಜಾಗೃತಿ ಪಾದಯಾತ್ರೆ ಕೈಗೊಂಡು ಅವರು ಮಾತನಾಡಿದರು. ಮನುಷ್ಯ ಬಯಸಬೇಕಿರುವುದು ಕೇವಲ ಭೌತಿಕ ಸುಖವನ್ನಲ್ಲ. ಅಧ್ಯಾತ್ಮಿಕತೆಯ ಗೊತ್ತು ಗುರಿ ಇಲ್ಲದ ಜೀವನ ಪರಿಪೂರ್ಣ ಎನಿಸದು. ಶಿವಾನುಭವ ಎನ್ನುವುದೊಂದು ಅಧ್ಯಾತ್ಮಿಕತೆಯ ಶಾಸ್ತ್ರ. ಅದು ನಮ್ಮ ಬಾಳ ಬಟ್ಟೆಯ ಅಕ್ಷಯ ಬುತ್ತಿಯಾಗಿದೆ.ಮಾನವ ಕುಲಕ್ಕೆ ವಿಪತ್ತು ಒದಗಿ ಬಂದಾಗ ಶಿವಾನುಭವ ಕೈಹಿಡಿದು ಮುನ್ನಡೆಸಲಿದೆ ಎಂದು ನುಡಿದ ಅವರು ಪ್ರಸ್ತುತ ಸನ್ನಿವೇಶದಲ್ಲಿ ಯುವ ಪೀಳಿಗೆಯಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯ ಹುಚ್ಚು ಹಿಡಿದಿದೆ. ಇಂತಹ ಸಂದರ್ಭದಲ್ಲಿ ದಾರಿ ತಪ್ಪಿರುವ ಯುವಕರನ್ನು ಸನ್ಮಾರ್ಗದತ್ತ ಕೊಂಡೊಯ್ಯುವಲ್ಲಿ ಮಠ, ಪೀಠಗಳು ಗಮನ ಹರಿಸಬೇಕಿದೆ ಎಂದರು.ಹರಿಹರದ ಪಂಚಮಸಾಲಿ ಮಹಾಪೀಠ ನಿರ್ಮಾಣಕ್ಕೆ ಹಾವೇರಿ ಜಿಲ್ಲೆಯಿಂದ ದೇಣಿಗೆ ಸಂಗ್ರಹಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು ಎಲ್ಲೆಡೆ ಭಕ್ತರು ಸ್ವ ಇಚ್ಛೆಯಿಂದ ದೇಣಿಗೆ ನೀಡಲು ಮುಂದೆ ಬರುತ್ತಿದ್ದಾರೆ. ₨ 25 ಸಾವಿರಕ್ಕೂ ಹೆಚ್ಚು ದೇಣಿಗೆ ನೀಡಿದ ಭಕ್ತರ ಹೆಸರನ್ನು ಅಮೃತ ಶಿಲೆಯಲ್ಲಿ ಬರೆಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ನುಡಿದ ಅವರು ಪಂಚಮಸಾಲಿ ಬಂಧುಗಳು ಮಾತ್ರವಲ್ಲದೇ ಎಲ್ಲ ಸಮಾಜ ಬಂಧುಗಳು ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡುತ್ತಿರುವುದು ಹೊಸ ಉತ್ಸಾಹ ತರಿಸಿದೆ ಎಂದರು.ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎನ್.ಬಿ.ಪೂಜಾರ ಮಾತನಾಡಿ, ಕದಡಿರುವ ಮನಸ್ಸುಗಳನ್ನು ಮತ್ತೆ ಸರಿದಾರಿಗೆ ತರುವ ನಿಟ್ಟಿನಲ್ಲಿ ಸಮಾಜದಲ್ಲಿ ನಿರಂತರ ಧಾರ್ಮಿಕ ಚಟುವಟಿಕೆಗಳು ನಡೆಯಬೇಕಿದೆ. ಮಠಮಾನ್ಯಗಳೊಂದಿಗೆ ನಿಕಟ ಒಡನಾಟ ಇಟ್ಟುಕೊಳ್ಳುವುದರಿಂದ ಮಾನಸಿಕ ಉಲ್ಲಾಸ ಲಭಿಸಲಿದೆ ಎಂದರು.ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಎಸ್.ಆರ್.ಅಂಗಡಿ, ತಾಲ್ಲೂಕಾಧ್ಯಕ್ಷ ಮಾಲತೇಶ ಸೊಪ್ಪಿನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಪಡೆಪ್ಪನವರ, ಮಾಜಿ ತಾಲ್ಲೂಕಾಧ್ಯಕ್ಷ ಚಂದ್ರಣ್ಣ ಕಳ್ಳಿ, ಜಿ.ಪಂ. ಸದಸ್ಯ ಮಹದೇವಪ್ಪ ಬಾಗಸರ, ಬಸವಣ್ಣೆಪ್ಪ ಬೆಂಚಿಹಳ್ಳಿ, ಭರಮಣ್ಣ ಶಿವೂರ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ರಾಜಣ್ಣ ಬೆಟಗೇರಿ, ಕಲವೀರಪ್ಪ ಪವಾಡಿ, ಶಾಂತಣ್ಣ ದಾನಪ್ಪನವರ, ಶಿವಣ್ಣ ಮೆಳ್ಳಳ್ಳಿ  ಹಾಜರಿದ್ದರು.

ಪ್ರತಿಕ್ರಿಯಿಸಿ (+)