ಬುಧವಾರ, ಜೂನ್ 23, 2021
23 °C

‘ಪ್ರತಿಭೆ, ಪ್ರಾಮಾಣಿಕತೆ ಸಂಗಮ ಜಿಎಸ್‌ಎಸ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪ್ರತಿಭೆ, ವಿದ್ವತ್‌, ದಕ್ಷತೆ ಹಾಗೂ ಪ್ರಾಮಾಣಿಕತೆ ಒಂದು ಕಡೆ ಸೇರುವುದು ಅಪ­ರೂಪ. ಜಿ.ಎಸ್‌.­ಶಿವರುದ್ರಪ್ಪ ಅವರಲ್ಲಿ ಈ ನಾಲ್ಕು ಗುಣಗಳೂ ಇದ್ದವು’ ಎಂದು ಹಿರಿಯ ವಿಮರ್ಶಕ ಡಾ.ಗಿರಡ್ಡಿ ಗೋವಿಂದ­ರಾಜ ಬಣ್ಣಿಸಿದರು.ಜಯನಗರದ ವಿಜಯ ಕಾಲೇ­ಜಿನ ಆಶ್ರ­ಯದಲ್ಲಿ ಕಾಲೇಜಿನ ಸಭಾಂ­ಗ­ಣ­ದಲ್ಲಿ ಗುರುವಾರ ನಡೆದ ಡಾ.ಜಿ.ಎಸ್‌­.­ಶಿವರುದ್ರಪ್ಪ ಅವರ ಸಾಹಿತ್ಯವನ್ನು ಕುರಿತ ರಾಜ್ಯ ಮಟ್ಟದ ವಿಚಾರ­ಸಂಕಿರಣ ‘ದೀಪಧಾರಿ’ ಉದ್ಘಾಟಿಸಿ ಅವರು ಮಾತನಾಡಿದರು.‘ಕುವೆಂಪು ಅವರ ಪ್ರಭಾವಕ್ಕೆ ಒಳಗಾ­ಗಿ­ದ್ದಾಗ ಜಿ.ಎಸ್‌.ಎಸ್‌. ಸಂಸ್ಕೃತ ಭೂ­ಯಿ­ಷ್ಟವಾದ ಭಾಷೆ ಬಳಸಿದರು. ಅವರಲ್ಲಿ ಪ್ರಕೃತಿ ಬಗ್ಗೆ ತನ್ಮಯತೆ, ಬೆರಗಿನ ಭಾವ ಇತ್ತು. ನವ್ಯದ ಸಂದರ್ಭ­ದಲ್ಲಿ ಅವರ ಬರವಣಿಗೆ ಶೈಲಿ ಬದಲಾ­ಯಿತು.­ ಅವರ ಮೇಲೆ ಇಂಗ್ಲಿಷ್‌ ನವ್ಯ ಕಾವ್ಯದ ಪ್ರಭಾವ ಸಾಕಷ್ಟು ಆಗಿದೆ’ ಎಂದರು.‘ಬಂಡಾಯ ಸಾಹಿತ್ಯ ಚಳವಳಿಗೂ ಜಿಎಸ್‌ಎಸ್‌ ಸ್ಪಂದಿಸಿದರು. ಶೋಷಣೆ, ದಬ್ಬಾಳಿಕೆ, ಭ್ರಷ್ಟಾಚಾರದ ವಿರುದ್ಧ ಲೇಖ­ನ­ಗಳನ್ನು ಬರೆದರು. ಬಳಿಕ ಅವರು ಮುಕ್ತ ಛಂದ ಬಿಟ್ಟು ಛಂದೋ­ಬದ್ಧ­ವಾಗಿ ಕಾವ್ಯಗಳನ್ನು ಬರೆದರು’ ಎಂದರು. ‘ಜಿ.ಎಸ್‌.ಎಸ್‌ ಹಾಗೂ ಚನ್ನವೀರ ಕಣವಿ ಅವರನ್ನು ಸೇರಿಸಿ ಮಾತ­ನಾಡುವ ಪದ್ಧತಿ ಕನ್ನಡ ವಿಮರ್ಶಾ ಲೋಕದಲ್ಲಿ ಇದೆ. ಇಬ್ಬರ ಕಾವ್ಯ ಪ್ರಕೃತಿ ಭಿನ್ನವಾ­ದುದು ಎಂಬುದನ್ನು ವಿಮರ್ಶಾ ಲೋಕ ಅಷ್ಟಾಗಿ ಗಮನಿ­ಸಿಲ್ಲ. ಕಣವಿ ಅವರ ಕಾವ್ಯ­ದಲ್ಲಿ ಜಾನಪದ, ಆಡು ಮಾತು ಹಾಗೂ ಹಾಸ್ಯ ಗುಣ ಕಾಣಿಸುತ್ತದೆ. ಜಿಎಸ್‌ಎಸ್ ಕಾವ್ಯದಲ್ಲಿ ಜಾನಪದ ಪ್ರಭಾವ ಕಾಣುವುದಿಲ್ಲ. ಅವರದ್ದು ದೇವರನ್ನು ನಿರಾಕರಿಸುವ ಕಾವ್ಯ’ ಎಂದು ಅವರು ತಿಳಿಸಿದರು.‘ಜಿಎಸ್ಎಸ್‌ ಅವರನ್ನು ಸಮನ್ವಯ ಕವಿ ಎಂದು ಕರೆಯ­ಲಾಗು­ತ್ತಿದೆ. ಇದನ್ನು ಬಹಳ ಮಂದಿ ಈಗ ಹೊಗಳಿಕೆ ಮಾತಾಗಿ ಬಳಸುತ್ತಿದ್ದಾರೆ. ವಿಮರ್ಶ­ಕರು ವ್ಯಂಗ್ಯವಾಗಿ, ಉಪೇಕ್ಷೆ­ಯಿಂದ ಸಮ­ನ್ವಯ ಕವಿ ಎಂದು ಹೇಳುತ್ತಿದ್ದರು. ವಾಸ್ತವ­ವೆಂದರೆ, ಎಲ್ಲ ಕವಿಗಳು, ಲೇಖ­ಕರು ಸಮನ್ವಯದ ಹಾದಿಯನ್ನು ಹಿಡಿ­ಯು­ತ್ತಾರೆ. ಸಮಾಜ­­ದಲ್ಲಾಗುವ ಬದಲಾ­ವಣೆ­ಗಳಿಗೆ ಸ್ಪಂದಿಸುತ್ತಾರೆ’ ಎಂದು ಅವರು ಪ್ರತಿಪಾದಿಸಿದರು.ಹಿರಿಯ ಕವಿ ಡಾ.ಎಚ್‌.ಎಸ್‌. ವೆಂಕಟೇಶಮೂರ್ತಿ ಮಾತನಾಡಿ, ‘ಬರಹ, ಓದು, ಅಧ್ಯಯನ, ಸಂಘಟನೆ, ಸಾಂಸ್ಕೃತಿಕ ನಾಯಕತ್ವ ಜಿಎಸ್‌ಎಸ್‌ ವ್ಯಕ್ತಿತ್ವದ ಪಂಚಮುಖ­ಗಳು. ಅವರು ಪಂಚ ದೀಪ ಸ್ತಂಭ. ಕನ್ನಡ ಸಾಹಿತ್ಯ ಲೋಕಕ್ಕೆ ಅವರು ದೀಪಧಾರಿ ಆಗಿದ್ದರು’ ಎಂದು ಬಣ್ಣಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.