ಮಂಗಳವಾರ, ಜನವರಿ 28, 2020
24 °C

‘ಬಾಲಕ ನಡೆಯಲು ಸಹಾಯಹಸ್ತ ನೀಡಿ’

ಪ್ರಜಾವಾಣಿ ವಾರ್ತೆ/ –ಎನ್‌. ಪುಟ್ಟಸ್ವಾಮಾರಾಧ್ಯ Updated:

ಅಕ್ಷರ ಗಾತ್ರ : | |

ಮಳವಳ್ಳಿ: ನಡೆಯಲು ಸಾಧ್ಯವಾಗದಿದ್ದರೂ ಸಾಧನೆ ಮಾಡಬೇಕೆಂಬುದು ಅವನ ಗುರಿ, ಏನಾದರೂ ಆಗಲಿ ಮಗ ಎಲ್ಲ ಬಾಲಕರಂತೆ ನಡೆಯುವಂತಾಗಬೇಕು ಎಂಬುದು  ತಂದೆಯ ಆಶಾಭಾವನೆ, ನಡೆಯಲು ಸಾಧ್ಯ ಮಾಡುತ್ತೇವೆ ಎಂಬುದು ವೈದ್ಯರ ಭರವಸೆ.ಐದು ವರ್ಷದವನಾಗುವವರೆಗೂ ಎಲ್ಲರಂತೆ ಓಡಾಡಿಕೊಂಡಿದ್ದ ಪಟ್ಟಣ ಹೊರವಲಯದ ತಮ್ಮಡಹಳ್ಳಿ ನಿವಾಸಿ ಸೋಮಸುಂದರ್‌ ಅವರ ಪುತ್ರ ಟಿ.ಎಸ್‌. ಪಾರ್ಥನು ನಡೆಯಲು ಸಾಧ್ಯವಾಗದ ಸ್ಥಿತಿಗೆ ತಲುಪಿದ. ಅವನನ್ನು ಎತ್ತಿಕೊಂಡು ವಿವಿಧ ಆಸ್ಪತ್ರೆಗಳಲ್ಲಿ ತೋರಿಸಿದ್ದಾರೆ. ಈಗ ಬೆಂಗಳೂರಿನ ಕೀಲು ಮೂಳೆ ತಜ್ಞರಾದ ಡಾ.ಶ್ರೀನಿವಾಸನ್‌, ಡಾ.ಕಾಮಿನಿ ಕುರುಪಾಡ್‌ ಅವರ ಬಳಿ ತೋರಿಸುತ್ತಿದ್ದಾರೆ. ವೈದ್ಯರು ಪಾರ್ಥನ ಈ ಸ್ಥಿತಿಗೆ ‘ಅಸ್ಟ್ರಿಯೋ ಜೆನಿಸಸ್‌ ಇಂಪರ್ಫೆಕ್ಟ್‌’ ಎಂಬ ಕಾಯಿಲೆ ಇದೆ ಎಂದು ತಿಳಿಸಿದ್ದಾರೆ.ಈ ಕಾಯಿಲೆ ಇದ್ದರೆ, ಮೂಳೆ ಗಟ್ಟಿಯಾಗಿರುವುದಿಲ್ಲ. ಪರಿಣಾಮ ಕೆಳಗೆ ಬಿದ್ದರೂ ಮೂಳೆ ಮುರಿಯುತ್ತದೆ. ಈಗಾಗಲೇ ಎರಡು ಬಾರಿ ಆಪರೇಷನ್‌ ಮಾಡಿದ್ದು, 16 ವರ್ಷದವನಾದಾಗ (ಈಗ 14 ವರ್ಷ) ಶಸ್ತ್ರಚಿಕಿತ್ಸೆ ಮಾಡಿದರೆ ಸಾಮಾನ್ಯನಾಗುತ್ತಾನೆ ಎಂದು ಭರವಸೆ ನೀಡಿದ್ದಾರೆ.ಪ್ರತಿ ಮೂರು ತಿಂಗಳಿಗೊಮ್ಮೆ ತಪಾಸಣೆ ಮಾಡಿಸುತ್ತಿದ್ದು, ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ.

ಶಾಲೆಯಲ್ಲಿ ಉತ್ತಮವಾಗಿ ಓದುತ್ತಿರುವ ಪಾರ್ಥನು, ಎನ್‌ಎಂಎಂಎಸ್‌್ (ನ್ಯಾಶನಲ್‌ ಮಿನ್ಸ್‌ ಕಮ್‌ ಮೆರಿಟ್‌ ವಿದ್ಯಾರ್ಥಿ ವೇತನ) ಪರೀಕ್ಷೆಯಲ್ಲಿ ತಾಲ್ಲೂಕಿಗೆ ಅತೀ ಹೆಚ್ಚು ಅಂಕ ಗಳಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾನೆ.ಉನ್ನತ ವ್ಯಾಸಂಗ ಮಾಡುವ ಗುರಿ ಹೊಂದಿರುವ ಬಾಲಕನು ಕಷ್ಟಪಟ್ಟು ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾನೆ.ಪ್ರಾಥಮಿಕ ಶಾಲೆಯಿಂದ ಈಗ ಕ್ಯಾತೇಗೌಡನದೊಡ್ಡಿಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾನೆ. ಪ್ರತಿ ದಿನ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಬಂದು, ಬಿಡುವ ಕೆಲಸವನ್ನು ಮಾಡುತ್ತಿದ್ದಾರೆ.ಇದಕ್ಕಾಗಿ ಈಚೆಗೆ ತಾಲ್ಲೂಕು ಆಡಳಿತ ವತಿಯಿಂದ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಯಿತು.ಪಟ್ಟಣದಲ್ಲಿ ಕೀರ್ತಿ ಅಂಗವಿಕಲ ಕ್ಷೇಮಾಭಿವೃದ್ಧಿ ಸಂಸ್ಥೆಯಲ್ಲಿರುವ ಅಂಗವಿಕಲರಾದ ಎಂ. ಕೃಷ್ಣಮೂರ್ತಿ  ಅವರಿಂದ ಕಂಪ್ಯೂಟರ್‌ ತರಬೇತಿಯನ್ನೂ ಪಡೆದುಕೊಂಡಿದ್ದಾನೆ.ಇನ್ನೂ ಒಂದೂವರೆ ವರ್ಷಕ್ಕೆ ಬಾಲಕನಿಗೆ 16 ವರ್ಷ ತುಂಬುತ್ತದೆ. ಆಗ ವೈದ್ಯರ ಭರವಸೆ ಪ್ರಕಾರ ಕಾಲುಗಳು ಬಂದು ಎಲ್ಲರಂತೆ ನಡೆದಾಡುತ್ತಾನೆ ಎಂಬುದು ಅವರ ಪೋಷಕರ ಹಾಗೂ ಶಿಕ್ಷಕರ ಅಭಿಲಾಷೆ. ನೆರವು ನೀಡಲು ಇಚ್ಛಿಸುವವರು ಸೋಮಸುಂದರ್‌ (97432 97613)ಸಂಪರ್ಕಿಸಿ.

ಪ್ರತಿಕ್ರಿಯಿಸಿ (+)