ಬುಧವಾರ, ಜೂನ್ 16, 2021
22 °C

‘ಮಾತಿಗೆ ಮಾತು ತಾಗಿಸಿದರೆ ಸಂಸಾರ ಖಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳೆನರಸೀಪುರ: ಮಾತಿಗೆ ಮಾತು ಸೇರಿಸಿದರೆ ಸಂಸಾರದಲ್ಲಿ ಸಾರ ಇರುತ್ತೆ. ಮಾತನ್ನು ತಾಗಿಸಿದರೆ ಸಂಸಾರದಲ್ಲಿ ಖಾರ ಇರುತ್ತೆ. ಸಾರ ಬೇಕಾದವರು ಸೇರಿಸಿ, ಖಾರ ಬೇಕಾದವರು ತಾಗಿಸಿ ಎಂದು ಹಿರೇಮಗಳೂರು ಕಣ್ಣನ್‌ ಹಾಸ್ಯ ಭರಿತವಾಗಿ ನುಡಿದು ಸಭಿಕರನ್ನು ನಗೆಗಡಲಲ್ಲಿ ಮುಳುಗಿಸಿದರು.ಭಕ್ತಿವರ್ಧನ ಪ್ರತಿಷ್ಠಾನದ ವತಿಯಿಂದ ಗುರವಾರ ಇಲ್ಲಿನ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಸಂಕ್ರಾತಿ ಮಂಟಪದಲ್ಲಿ ಆಯೋಜಿಸಿದ್ದ ‘ಸಂಸಾರ – ಸಂಸ್ಕಾರ’ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿ­ದರು. ಸಂಸಾರದಲ್ಲಿ ಸಂಸ್ಕಾರ ಇರಬೇಕಾದರೆ ತಾಯಿ ತನ್ನ ಮಕ್ಕಳಿಗೆ ಸಂಸ್ಕಾರ ನೀಡಬೇಕು. ಆದರೆ, ಇಂದು ಗಂಡ– ಹೆಂಡತಿಯ ನಡುವೆ ಸಣ್ಣ ವಿಷಯಕ್ಕೆ ಬಿನ್ನಾಭಿಪ್ರಾಯ ಮೂಡಲು ಕೆಲಮಟ್ಟಿಗೆ ದಾರಾವಾಹಿ­ಗಳೂ ಕಾರಣವಾಗಿವೆ. ಮೇಲಿಂದ ಮೇಲೆ ಸಂಸಾರ ಒಡೆಯುವ, ಸಂಸ್ಕಾರ ಹಾಳು ಮಾಡುವಂತಹ ಕಾರ್ಯಕ್ರಮಗಳನ್ನೇ ನೋಡುವ ಮಕ್ಕಳು ಹೇಗೆ ಸಂಸ್ಕಾರವಂತರಾಗಲು ಸಾಧ್ಯ? ಎಂದು ಪ್ರಶ್ನಿಸಿದರು.ಮದುವೆ ಆದ ಹೊಸದರಲ್ಲಿ ಗಂಡ ಹೆಂಡತಿಯರಿಗೆ ಆನಂದಮಯ. ನಂತರದ ಕೆಲ ದಿನಗಳಿಗೆ ಅವರ ನಡುವೆ ಆನಂದ ಮಾಯ ಎನ್ನುವಂತಾಗಲು ಸಂಸ್ಕಾರ ಇಲ್ಲದಿರುವುದೇ ಕಾರಣ ಎಂದರು.ಪ್ರೊ.ನಟೇಶ್‌ ಮಾತನಾಡಿ, ಸಂಸಾರದಲ್ಲಿ ಯಾವಾಗಲೂ ಸುಖವೇ ಇರಲ್ಲ. ಬಹಳಷ್ಟು ಕಷ್ಟಗಳ ನಡುವೆ ಬಂದು ಹೋಗುವ ಸ್ವಲ್ಪ ಸಮಯದ ಸುಖ ನಮಗೆ ಹೆಚ್ಚಿನ ಆನಂದ ನೀಡುತ್ತದೆ. ಇದು ಮೈ ತುರಿಕೆ ಆಗಿ ಕೆರೆದುಕೊಂಡಾಗ ಆಗುವ ಸುಖದಂತೆ ಎಂದರು.ನಚಿಕೇತ್ ಮಾತನಾಡಿ, ಕುವೆಂಪು, ಡಿವಿಜಿ ಅವರು ಸಂಸಾರಕ್ಕಾಗಿ ನೀಡಿರುವ ಸಂಸ್ಕಾರಗಳ ಬಗ್ಗೆ ವಿವರಿಸಿದರು.ಪ್ರತಿಷ್ಠಾನದ ಅಧ್ಯಕ್ಷ ಎ. ತಾಂಡವೇಶ್ವರ್‌, ಸಂಚಾಲಕ ಜಯಸಿಂಹ, ಕಾರ್ಯದರ್ಶಿ ಸುಂದರ್‌, ಪ್ರತಿಷ್ಠಾನದ ಸದಸ್ಯರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.