ಸೋಮವಾರ, ಜನವರಿ 20, 2020
20 °C

‘ಮೂಲ ವಿಜ್ಞಾನದ ಅರಿವಿಲ್ಲದ ರಾಜಕಾರಣಿಗಳು ಈಡಿಯಟ್‌ಗಳು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮೂಲ ವಿಜ್ಞಾನದ ಅರಿ­ವಿಲ್ಲದ ಭಾರತದ ರಾಜಕಾರಣಿಗಳು ಮತ್ತು ಹೊಸತನ್ನು ಸಂಶೋಧಿಸದೆ  ಹೊರದೇಶಗಳ ಅನ್ವೇಷಣೆಗಳನ್ನೇ ಅನು­ಕ­ರಿ­ಸುವ ವಿಜ್ಞಾನಿಗಳು  ಇಬ್ಬರೂ ಈಡಿಯಟ್‌ಗಳು’ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ.ಯು.ಆರ್.ರಾವ್ ಬೇಸರ­ದಿಂದ ನುಡಿದರು.ಕರ್ನಾಟಕ ವಿಜ್ಞಾನ ಮತ್ತು ತಂತ್ರ­ಜ್ಞಾನ ಅಕಾಡೆಮಿ ಹಾಗೂ ಕ್ರೈಸ್ಟ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಏರ್ಪಡಿಸಲಾಗಿರುವ ಅಕಾಡೆಮಿಯ 6ನೇ ಸಮ್ಮೇಳನದಲ್ಲಿ ಅವರು ಮಾತನಾಡಿದರು.‘ಸಾವಿರಾರು ವಿದ್ಯಾರ್ಥಿಗಳನ್ನು ರೂಪಿ­ಸುವ ಒಬ್ಬ ವಿಜ್ಞಾನದ ಶಿಕ್ಷಕನಿಗೆ ವಿಶೇಷ ತರಬೇತಿ ನೀಡುವ ವ್ಯವಸ್ಥೆ ನಮ್ಮಲ್ಲಿಲ್ಲ. ಶಾಲೆಗಳಲ್ಲಿ ಪ್ರಯೋ­ಗಾ­ಲಯಗಳಿಲ್ಲ. ಹೀಗಿದ್ದಾಗ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಹೆಚ್ಚಿನದನ್ನು ನಿರೀಕ್ಷಿಸುವುದಾದರೂ ಹೇಗೆ? ಮೂಲ ವಿಜ್ಞಾನವನ್ನು ಸರ್ಕಾರ  ಕಡೆಗ­ಣಿಸು-­ತ್ತಿರುವುದರಿಂದ ನಾವು ಬಹಳ ಹಿಂದೆ ಬಿದ್ದಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.‘ಮೂಲ ವಿಜ್ಞಾನಕ್ಕೆ ಆದ್ಯತೆ ನೀಡಿದ ಚೀನಾ ಕೇವಲ ಒಂದು ದಶಕದಲ್ಲಿ ವಿಶ್ವದ 2ನೇ ದೊಡ್ಡ ತಾಂತ್ರಿಕ ರಾಷ್ಟ್ರ­ವಾಗಿ ಬೆಳೆದಿದೆ. ವಿಜ್ಞಾನ ಮತ್ತು ತಂತ್ರ­ಜ್ಞಾನದ ನೆರವಿಲ್ಲದೆ ದೇಶ ಮುಂದುವ­ರಿಯಲು ಸಾಧ್ಯವಿಲ್ಲ ಎಂಬುದನ್ನು ಸರ್ಕಾರಗಳು ಅರಿತುಕೊಳ್ಳಬೇಕು’ ಎಂದರು.ಮಾಹಿತಿ ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ್ ಮಾತನಾಡಿ, ‘ತಂತ್ರಜ್ಞಾನವು ವಿಜ್ಞಾನದ ಉಪ ಉತ್ಪಾದನೆ ಅಷ್ಟೆ. ವಿದ್ಯಾರ್ಥಿಗಳಾಗಲಿ, ಪೋಷಕರಾಗಲಿ ಮೂಲ ವಿಜ್ಞಾನದ ಮಹತ್ವವನ್ನು ಅರಿತುಕೊಳ್ಳಬೇಕು.  ಈ ಕ್ಷೇತ್ರಕ್ಕೆ ಆದ್ಯತೆ ನೀಡುವ ಸಲುವಾಗಿ ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನು­ದಾನವನ್ನು ನೀಡುತ್ತೇವೆ’ ಎಂದರು.‘ರಾಜ್ಯದ ವಿವಿಧೆಡೆ ಹತ್ತು ಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಮಂಗಳೂರು ಸಮೀಪದ ಪಿಲಿಕುಳದಲ್ಲಿ ₨ 24.5 ಕೋಟಿ ವೆಚ್ಚದಲ್ಲಿ ದೇಶದ  ಮೊದಲ  3ಡಿ ತಾರಾಲಯವನ್ನು ನಿರ್ಮಿಸಲಾಗುತ್ತಿದೆ’ ಎಂದು ಅವರು ನುಡಿದರು.ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸದಸ್ಯ ಕಾರ್ಯದರ್ಶಿ ಡಾ.ಎಚ್.ಹೊನ್ನೇಗೌಡ, ಕ್ರೈಸ್ಟ್ ವಿಶ್ವವಿದ್ಯಾಲಯದ ಕುಲಪತಿ ಥಾಮಸ್ ಮಾಥ್ಯೂ, ಕುಲಸಚಿವ ಡಾ.ಅನಿಲ್ ಜೋಸೆಫ್ ಪಿಂಟೋ ಮೊದಲಾದವರು  ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)