ಮಂಗಳವಾರ, ಜೂನ್ 15, 2021
26 °C

‘ಮೋದಿ ಪ್ರಧಾನಿಯಾಗಿಸಲು ಜನರ ಒಲವು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಮೋದಿ ಅವರನ್ನು ದೇಶದ ಪ್ರಧಾನಿಯನ್ನಾಗಿಸಲು ದೇಶದ ಜನರು ಸಂಕಲ್ಪ ಮಾಡಿದ್ದಾರೆ ಎಂದು ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್‌ ಸಿಂಹ ಸೋಮವಾರ ಹೇಳಿದರು.ಈ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ಇದೇ ಪ್ರಥಮ ಬಾರಿಗೆ ಕೊಡಗಿಗೆ ಆಗಮಿಸಿದ ಪ್ರತಾಪ್‌ ಸಿಂಹ ಅವರು, ಭಾಗಮಂಡಲ– ತಲಕಾವೇರಿ ದೇವಾಲಯಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.

ದೇಶದ ಗಡಿಕಾಯುವ ಭಾರತೀಯ ಸೇನೆಗೆ ನೂರಾರು ಸೇನಾಧಿಕಾರಿಗಳನ್ನು ನೀಡಿದ ಕೀರ್ತಿಗೆ ಪಾತ್ರವಾಗಿರುವ ಕೊಡಗು ಜಿಲ್ಲೆಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ ಎಂದರು.ಕಳೆದ 14 ವರ್ಷಗಳಿಂದ ಅಂಕಣಕಾರನಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೆ. ಸಮಾಜದಲ್ಲಿ ಇನ್ನಷ್ಟು ಬದಲಾವಣೆ ಮಾಡುವ ನಿಟ್ಟಿನಲ್ಲಿ ರಾಜಕೀಯ ರಂಗ ಪ್ರವೇಶಿಸಿದ್ದೇನೆ. ಈ ಕ್ಷೇತ್ರ ಮುಖ್ಯಮಂತ್ರಿಗಳ ತವರಾದರೂ ಕೂಡ ಮತದಾರರು ಅರ್ಹರಿಗೆ ಮತ ನೀಡುವ ವಿಶ್ವಾಸವಿದೆ ಎಂದರು.ಈ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ವಿಜಯಶಂಕರ್‌ ಹಾಗೂ ಜಿಲ್ಲೆಯ ಶಾಸಕ ಅಪ್ಪಚ್ಚು ರಂಜನ್‌ ಮತ್ತು ಕೆ.ಜಿ. ಬೋಪಯ್ಯ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದವನ್ನು ಪಡೆದಿದ್ದು, ಮತ್ತಷ್ಟು ಚೈತನ್ಯ ಬಂದಿದೆ. ಸದ್ಯ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.ಕಳೆದ 10 ವರ್ಷಗಳಿಂದ ಆಡಳಿತ ನಡೆಸಿದ ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ದೇಶವನ್ನು ಅಭಿವೃದ್ಧಿಯತ್ತ ಒಯ್ಯುವ ಯಾವ ಕೆಲಸವನ್ನು ಮಾಡಿಲ್ಲ. ದೇಶವನ್ನು ಅಭಿವೃದ್ಧಿ ಪಥದತ್ತ ಒಯ್ಯುವ ಸಮರ್ಥ ನಾಯಕ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿಸಲು ಜನರು ಸಂಕಲ್ಪ ಮಾಡಿದ್ದಾರೆ ಎಂದರು.ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್‌, ಜಿಲ್ಲಾ ಪಂಚಾಯಿತಿ ಸದಸ್ಯೆ ಬಬ್ಬೀರ ಸರಸ್ವತಿ, ಪಕ್ಷದ ಕಾರ್ಯಕಾರಿ ಸಮಿತಿಯ ಸದಸ್ಯ ಸುನಿಲ್‌ ಸುಬ್ರಮಣಿ, ಜಿಲ್ಲಾಧ್ಯಕ್ಷ ಸುಜಾ ಕುಶಾಲಪ್ಪ, ವಕ್ತಾರ ಅಡ್ಡಂಡ ಸಿ. ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿ ನಾಪಂಡ ರವಿ ಕಾಳಪ್ಪ, ಮನು ಮುತ್ತಪ್ಪ, ಪ್ರಮುಖರಾದ ಮಧು ದೇವಯ್ಯ ಇದ್ದರು.ಮಡಿಕೇರಿ ಆಗಮಿಸಿದ ಅವರು ಇಲ್ಲಿನ ಸುದರ್ಶನ ವೃತ್ತದಲ್ಲಿರುವ ಫೀ.ಮಾ. ಕೆ.ಎಂ. ಕಾರ್ಯಪ್ಪ ಹಾಗೂ ಗುಡ್ಡೆಮನೆ ಅಪ್ಪಯ್ಯಗೌಡರು ಹಾಗೂ ಜನರಲ್‌ ತಿಮ್ಮಯ್ಯ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು.ಕಾರ್ಯಕರ್ತರಿಂದ ಸ್ವಾಗತ

ಸೋಮವಾರಪೇಟೆ: 
ಸೋಮವಾರಪೇಟೆಗೆ ಬಂದ ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರನ್ನು ಇಲ್ಲಿನ ಕಕ್ಕೆಹೊಳೆ ಜಂಕ್ಷನ್ ಬಳಿ ಕಾರ್ಯಕರ್ತರು ಸೋಮವಾರ ಸ್ವಾಗತಿಸಿದರು.ಬಳಿಕ ಕೊಡವ ಸಮಾಜದಲ್ಲಿ ಸೇರಿದ್ದ ನೂರಾರು ಕಾರ್ಯಕರ್ತರೊಂದಿಗೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅರಮನೆ ನಗರಿ ಮೈಸೂರು ಹಾಗೂ ವೀರ ಸೈನಿಕರ ನಾಡು ಕೊಡಗಿನಲ್ಲಿ ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ವರಿಷ್ಠರು ಅವಕಾಶ ನೀಡಿರುವುದು ನನ್ನ ರಾಜಕೀಯ ಜೀವನಕ್ಕೆ ಪ್ರಮುಖ ಹೆಜ್ಜೆಯಾಗಿದೆ. ಕೊಡಗಿನ ಬಗ್ಗೆ ತಾನು ಹಿಂದಿನಿಂದಲೂ ಅಪಾರ ಗೌರವವನ್ನಿರಿಸಿಕೊಂಡು ಬಂದಿದ್ದೇನೆ. ಆದರೆ, ಕೊಡಗಿನ ಜನರ ಸೇವೆ ಮಾಡಲು ಉತ್ತಮ ಅವಕಾಶ ಒದಗಿ ಬಂದಿದೆ. ಇಲ್ಲಿನ ಪ್ರಜ್ಞಾವಂತ ಮತದಾರರ ಮತ ದೇಶದ ಭವಿಷ್ಯವನ್ನು ನಿರ್ಧರಿಸಲಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.