ಭಾನುವಾರ, ಜನವರಿ 26, 2020
29 °C
ವಿಜಯ ದಿವಸ ಆಚರಣೆ

‘ಯೋಧರ ತ್ಯಾಗ ಸ್ಮರಣೆ ಎಲ್ಲರ ಕರ್ತವ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ‘ದೇಶಕ್ಕಾಗಿ ಬಲಿದಾನ ಮಾಡಿದ ಸೈನಿಕರ ಸೇವೆ ಮತ್ತು ತ್ಯಾಗವನ್ನು ಸ್ಮರಿಸುವುದು ಎಲ್ಲಾ ನಾಗರಿಕರ ಕರ್ತವ್ಯವಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಮಪ್ರಸಾದ್ ಮನೋಹರ್ ತಿಳಿಸಿದರು.ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿರುವ ಯುದ್ಧ ಸ್ಮಾರಕದ ಬಳಿ ಸೋಮವಾರ ಆಯೋಜಿಸಲಾಗಿದ್ದ ವಿಜಯ ದಿವಸ ಕಾರ್ಯಕ್ರಮ ಹಾಗೂ ಮಾಜಿ ಸೈನಿಕರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘1972ರಲ್ಲಿ ಭಾರತ-– ಪಾಕಿಸ್ತಾನ ನಡುವೆ ನಡೆದ ಬಾಂಗ್ಲಾ ವಿಮೋಚನಾ ಹೋರಾಟದ ವಿಜಯದ ನೆನಪಿಗಾಗಿ ಪ್ರತಿ ವರ್ಷ ಡಿ.16ರಂದು ವಿಜಯ ದಿವಸವನ್ನಾಗಿ ಆಚರಿಸಲಾಗುತ್ತದೆ. ದೇಶದಲ್ಲಿ ಶಾಂತಿ ನೆಲೆಸಲು ಹಾಗೂ ಆ ಮೂಲಕ ಅಭಿವೃದ್ಧಿ ಸಾಧಿಸಲು ಗಡಿಯನ್ನು ಕಾಯುತ್ತಿರುವ ಸೈನಿಕರು ತಮ್ಮ ಜೀವನವನ್ನೇ ಮುಡಿಪಾಗಿ ಟ್ಟಿದ್ದಾರೆ. ಅವರೊಂದಿಗೆ ಐಕ್ಯತೆಯನ್ನು ತೋರಿಸುವುದು ನಮ್ಮೆಲ್ಲರ ಹೊಣೆ ಯಾಗಿದೆ. ದೇಶಕ್ಕಾಗಿ ಸೇವೆ ಸಲ್ಲಿಸಿ ನಿವೃತ್ತರಾಗುವ ಸೈನಿಕರಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಎಲ್ಲರೂ ಬದ್ಧರಾಗಿದ್ದೇವೆ’ ಎಂದು ಹೇಳಿದರು.ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ಮಾತನಾಡಿ, ‘ಸೈನಿಕರ ತ್ಯಾಗ ಪರಿಶ್ರಮದ ಫಲವಾಗಿ ದೇಶ ಶಾಂತವಾಗಿದ್ದು, ಸ್ವಾತಂತ್ರ್ಯದ ಸವಿ ಯನ್ನು ನಮಗೆ ಉಣ್ಣಲು ಸಾಧ್ಯ ವಾಗುತ್ತಿದೆ. ಮಾಜಿ ಸೈನಿಕರ ಕಲ್ಯಾಣ ಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಲಾಗುತ್ತಿದೆ. ಮಾಜಿ ಸೈನಿಕರಿಗೆ ಭೂಮಿಯನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಲಾಗುತ್ತಿದೆ’ ಎಂದು ತಿಳಿಸಿದರು.ನಿವೃತ್ತ ಕಮಾಂಡರ್‌ ಸಿಲಾವರ್ ಖಾನ್ ಮಾತನಾಡಿ, ‘ಸೇನೆಯಲ್ಲಿ ಎಲ್ಲರೂ ಸಮಾನರು. ಅಲ್ಲಿ ಯಾವುದೇ ಜಾತಿ, ಭಾಷೆ, ಧರ್ಮದ ವ್ಯತ್ಯಾಸವಿಲ್ಲ. ಮಾತೃಭೂಮಿಯ ರಕ್ಷಣೆ ಮಾತ್ರ ಎಲ್ಲರ ಧ್ಯೇಯವಾಗಿರುತ್ತದೆ. ಇದೇ ರೀತಿಯ ಸಮಾನತೆಯ ಭಾವ ಎಲ್ಲರಲ್ಲಿಯೂ ಮೂಡಬೇಕಾಗಿದೆ’ ಎಂದರು.ಕಮಾಂಡರ್ ಸಂಜಯ್ ನಗಾರ್ ಅವರು ವಿಜಯ ದಿವಸದ ಮಹತ್ವ ವಿವರಿಸಿದರು. ಮಾಜಿ ಸೈನಿಕ ಕಲ್ಯಾಣದ ಸ್ಟಾಂಪ್ ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.ಯುದ್ಧದಲ್ಲಿ ಮಡಿದ ಯೋಧರ ಮನೆಯವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಜಿಲ್ಲಾ ಸೈನಿಕ ಕಲ್ಯಾಣ ಅಧಿಕಾರಿ ನಿವೃತ್ತ ಕಮಾಂಡರ್ ಇಂದುಪ್ರಭಾ ಅವರು ಸ್ವಾಗತಿಸಿದರು. ಮಾಜಿ ಸೈನಿಕರ ಅಹವಾಲುಗಳನ್ನು ಸ್ವೀಕರಿಸಲಾಯಿತು.

ಪ್ರತಿಕ್ರಿಯಿಸಿ (+)