ಭಾನುವಾರ, ಮಾರ್ಚ್ 7, 2021
32 °C
ಭಾರತದ ಅತಿ ವೇಗದ ಚಾಲಕ ನಾರಾಯಣ್‌ ಕಾರ್ತಿಕೇಯನ್‌ ಮನದಾಳದ ಮಾತು

‘ರೇಸ್‌ ನನಗೆ ಬದುಕಲು ದಾರಿ ಮಾಡಿಕೊಟ್ಟಿದೆ’

ಪ್ರಜಾವಾಣಿ ವಾರ್ತೆ/ ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

‘ರೇಸ್‌ ನನಗೆ ಬದುಕಲು ದಾರಿ ಮಾಡಿಕೊಟ್ಟಿದೆ’

ಕೊಯಮತ್ತೂರು: ‘ಮೋಟಾರ್‌ ರೇಸಿಂಗ್‌ನಲ್ಲಿ ಉನ್ನತ ಸಾಧನೆ ಮಾಡಬೇಕು ಎಂಬುದು ನನ್ನ ಕನಸಾಗಿತ್ತು. ಅದರಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿದ್ದೇನೆ. ಆದರೆ ಈ ರೇಸ್‌ ನನಗೆ ಬದುಕಲು ದಾರಿ ಮಾಡಿಕೊಟ್ಟಿದೆ. ನಾಲ್ಕು ಜನ ನನ್ನನ್ನು ಗುರುತಿಸುವಂತೆ ಮಾಡಿದೆ’

–ಫಾರ್ಮುಲಾ ಒನ್‌ ರೇಸ್‌ನಲ್ಲಿ ಸ್ಪರ್ಧಿಸಿದ ಭಾರತದ ಮೊದಲ ಚಾಲಕ ನಾರಾಯಣ್‌ ಕಾರ್ತಿಕೇಯನ್‌ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಈ ಮಾತು ಹೇಳಿದ್ದಾರೆ.‘ವೇಗ ಎಂದರೆ ನನಗೆ ಪಂಚಪ್ರಾಣ. ಏನೋ ಒಂಥರ ಖುಷಿ. ನಾನಂದುಕೊಂಡಿದ್ದನ್ನು ಸಾಧಿಸಲು ಈ ವೇಗ ಕಾರಣವಾಗಿದೆ’ ಎನ್ನುತ್ತಾರೆ 37 ವರ್ಷ ವಯಸ್ಸಿನ ಕಾರ್ತಿಕೇಯನ್‌.ಕೊಯಮತ್ತೂರಿನ ‘ಕಾರಿ ಮೋಟಾರ್‌ ಸ್ಪೀಡ್‌ ವೇ ಟ್ರ್ಯಾಕ್‌’ನಲ್ಲಿ ಫಾರ್ಮುಲಾ ಸರಣಿಯ ‘ಇಂಡೆ’ ಕಾರು ಚಲಾಯಿಸಿದ ಬಳಿಕ ಅವರು ಈ ಪತ್ರಿಕೆ ಯೊಂದಿಗೆ ಹಲವು ವಿಷಯ ಹಂಚಿಕೊಂಡರು. ಕಾರ್ತಿಕೇಯನ್‌ ಸಂದರ್ಶನದ ವಿವರ ಇಲ್ಲಿದೆ.*ಭಾರತದಲ್ಲಿ ಮೋಟಾರ್‌ ರೇಸಿಂಗ್‌ ಪ್ರಗತಿ ಯಾವ ಮಟ್ಟದಲ್ಲಿದೆ?

ಭಾರತದಲ್ಲಿ ಹೆಚ್ಚು ಸ್ಪರ್ಧೆಗಳು ನಡೆಯುತ್ತಿಲ್ಲ. ಜೊತೆಗೆ ಈ ವರ್ಷ ನವದೆಹಲಿಯಲ್ಲಿ ನಡೆಯಬೇಕಿದ್ದ ಫಾರ್ಮುಲಾ ಒನ್ ರೇಸ್‌ ಕೂಡ ರದ್ದಾಗಿದೆ. ಇದು ದುರದೃಷ್ಟಕರ ಬೆಳವಣಿಗೆ. ಆದರೆ ಹೆಚ್ಚಿನ ಯುವ ಸ್ಪರ್ಧಿಗಳಿಗೆ  ರೇಸ್‌ ಮೇಲೆ ತುಂಬಾ ಆಸಕ್ತಿ ಇದೆ. ತಮ್ಮ ಸ್ವಂತ ಪ್ರಯತ್ನ ಹಾಕಿ ವಿವಿಧ ದೇಶಗಳಲ್ಲಿ ನಡೆಯುತ್ತಿರುವ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹಾಗಾಗಿ ಭವಿಷ್ಯದ ಬಗ್ಗೆ ಭರವಸೆ ಇಟ್ಟುಕೊಳ್ಳಬಹುದು. ಕಾರ್ಪೊರೇಟ್‌ ಕಂಪೆನಿಗಳು ಪ್ರಾಯೋಜಕತ್ವ ವಹಿಸಲು ಮುಂದೆ ಬರುತ್ತಿವೆ.*ಫಾರ್ಮುಲಾ ಒನ್‌ ರದ್ದಾಗಲು ಹಿಂದಿನ ಸರ್ಕಾರ ವಿಧಿಸಿದ್ದ ಕೆಲವು ಷರತ್ತುಗಳು ಕಾರಣ ಎನ್ನಲಾಗುತ್ತಿದೆ. ಹೊಸ ಸರ್ಕಾರದಿಂದ ನಿಮ್ಮ ನಿರೀಕ್ಷೆಗಳೇನು?

ಮೋಟಾರ್‌ ರೇಸಿಂಗ್‌ ಕ್ರೀಡೆಯ ಅಭಿವೃದ್ಧಿಗೆ ಹೊಸ ಸರ್ಕಾರ ಸಹಕಾರ ನೀಡಲಿದೆ ಎಂಬ ಭರವಸೆಯಲ್ಲಿ ನಾವಿದ್ದೇವೆ. ಫಾರ್ಮುಲಾ ಒನ್‌ ಆಯೋಜನೆಯಿಂದ ಭಾರತದ ಆರ್ಥಿಕ ವ್ಯವಸ್ಥೆಗೆ ಒಳ್ಳೆಯದಾಗಲಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ವಿಶ್ವದ ಪ್ರಮುಖ ಚಾಲಕರು ಭಾರತವನ್ನು ತುಂಬಾ ಇಷ್ಟಪಡುತ್ತಾರೆ.*ಸದ್ಯ ಎಫ್‌-1ನಲ್ಲಿ ಸ್ಪರ್ಧಿಸಲು ಅವಕಾಶ ಲಭಿಸಿಲ್ಲ. ಇದರಿಂದ ಬೇಸರವಾಗಿದೆಯೇ?

ಹಾಗೇನಿಲ್ಲ. ನಾನು ಫಾರ್ಮುಲಾ ಸರಣಿಯ ಚಾಂಪಿಯನ್‌ಷಿಪ್‌ಗಳಲ್ಲಿ ಸ್ಪರ್ಧಿಸಿ ಉತ್ತಮ ಪ್ರದರ್ಶನ ನೀಡುತ್ತಿದ್ದೇನೆ. ಅದು ನನಗೆ ಖುಷಿ ನೀಡಿದೆ. ಸದ್ಯ ಎಫ್‌-1ನಲ್ಲಿ ನನಗೆ ಅವಕಾಶ ಸಿಕ್ಕಿಲ್ಲ. ಆದರೆ ಎಫ್‌-1ನಲ್ಲಿ ಸ್ಪರ್ಧಿಸಿದ ಭಾರತದ ಮೊದಲ ಚಾಲಕ ಎಂಬ ಹೆಮ್ಮೆ ಇದೆ.*ಸೂಪರ್‌ ಫಾರ್ಮುಲಾ ಸರಣಿ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸುತ್ತಿದ್ದೀರಿ. ಹೇಗಿದೆ ಅನುಭವ?

ಇದೊಂದು ವಿಶೇಷ ಅನುಭವ. ಈ ರೇಸ್‌ನಲ್ಲೂ ವಿಶ್ವದ ಪ್ರಮುಖ ಚಾಲಕರು ಸ್ಪರ್ಧಿಸುತ್ತಿದ್ದಾರೆ. ನನ್ನ ಪ್ರತಿನಿಧಿಸುತ್ತಿರುವ ತಂಡ ಸದ್ಯ ಎರಡನೇ ಸ್ಥಾನದಲ್ಲಿದೆ. ಮೂರನೇ ಸುತ್ತಿನಿಂದ ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಈ ರೇಸ್‌ ನೇರ ಪ್ರಸಾರವಾಗಲಿದೆ. ಆಗ ಎಲ್ಲರೂ ವೀಕ್ಷಿಸಬಹುದು. ಮತ್ತಷ್ಟು ಪ್ರಚಾರ ಸಿಗಲಿದೆ.*ಭಾರತದ ಯುವ ಚಾಲಕರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಯುವ ಚಾಲಕರು ಭರವಸೆ ಮೂಡಿಸಿದ್ದಾರೆ. ವಿದೇಶದಲ್ಲಿ ನಡೆಯುತ್ತಿರುವ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇನ್ನು ನಾಲ್ಕೈದು ವರ್ಷ ಗಳಲ್ಲಿ ಅವರಿಂದ ಉನ್ನತ  ಸಾಧನೆ ನಿರೀಕ್ಷಿಸಬಹುದು. *ವಿಶ್ವ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ಬೆಂಗಳೂರಿನ ಮೈನಿ ಸಹೋದರರ ಬಗ್ಗೆ ಹೇಳಿ?

ಅರ್ಜುನ್‌ ಮೈನಿ ಫಾರ್ಮುಲಾ–*ರಲ್ಲಿ ಸ್ಪರ್ಧಿಸುತ್ತಿದ್ದಾನೆ. ಪುಟ್ಟ ವಯಸ್ಸಿನಲ್ಲಿಯೇ ಭರವಸೆ ಮೂಡಿಸಿದ್ದಾನೆ. ಇದು ಉನ್ನತ ಸಾಧನೆಯತ್ತ ಮೊದಲ ಮೆಟ್ಟಿಲು ಎನ್ನಬಹುದು. *ಭಾರತದಲ್ಲಿ ಮೋಟಾರ್‌ ರೇಸಿಂಗ್‌ ಯಶಸ್ಸಿಗೆ ಬೇಕಾದ ಹಣಕಾಸು ನೆರವು ಹಾಗೂ ಸೌಲಭ್ಯಗಳ ಬಗ್ಗೆ ನಿಮ್ಮ ಅಭಿಪ್ರಾಯ?

ಹೇಳಿಕೊಳ್ಳುವಂಥ ಮಟ್ಟದಲ್ಲಿಲ್ಲ. ಸರ್ಕಾರಕ್ಕಿಂತ ಕಾರ್ಪೊರೇಟ್‌ ವಲಯದಿಂದ ಉತ್ತಮ ಬೆಂಬಲ ದೊರೆಯುತ್ತಿದೆ. ನನ್ನ ಹುಟ್ಟೂರು ಕೊಯಮತ್ತೂ ರು ನಗರಿಯನ್ನೇ ಉದಾಹರಣೆಗೆ ತೆಗೆದುಕೊಳ್ಳಿ. ಉತ್ತಮ ರೇಸ್‌ ಟ್ರ್ಯಾಕ್‌ ಇದೆ. ಇಂಥ ಟ್ರ್ಯಾಕ್‌ಗಳು ಪ್ರಮುಖ ನಗರಗಳಲ್ಲಿ ಇದ್ದರೆ ಸಹಜ ವಾಗಿ ಅಲ್ಲಿನ ಮಕ್ಕಳು ರೇಸ್‌ ಮೇಲೆ ಆಸಕ್ತಿ ಬೆಳೆಸಿಕೊಳ್ಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.