ಸೋಮವಾರ, ಜನವರಿ 27, 2020
14 °C

‘ವಾಜಪೇಯಿ ಸ್ಥಾನ ತುಂಬಬಲ್ಲ ವ್ಯಕ್ತಿ ಮೋದಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ‘ಸುವರ್ಣ ಚತುಷ್ಪಥ ರಸ್ತೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಹಾಗೂ ರೈತರಿಗೆ ಕಿಸಾನ್ ಕಾರ್ಡ್‌ನಂತಹ ಉತ್ತಮ ಯೋಜನೆಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಈಗ ಅವರ ಸ್ಥಾನ ತುಂಬಬಲ್ಲ ಮತ್ತೊಬ್ಬ ಸಮರ್ಥ ನಾಯಕ ನರೇಂದ್ರ ಮೋದಿ’ ಎಂದು ಮಾಜಿ ಸಚಿವ ಸುರೇಶ್‌ ಕುಮಾರ್‌ ಅಭಿಪ್ರಾಯಪಟ್ಟರು.ನಗರದ ಮೋತಿ ಚನ್ನಬಸಪ್ಪ ಕಲ್ಯಾಣಮಂಟಪದಲ್ಲಿ ಭಾನುವಾರ ಬಿಜೆಪಿ ಗೆಳೆಯರು ಹಮ್ಮಿಕೊಂಡಿದ್ದ ‘ಔಟ್‌ರೀಚ್‌’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕಾಂಗ್ರೆಸ್‌ ಆಡಳಿತದಿಂದ ಜನರು ಬೇಸತ್ತಿದ್ದು, ಬದಲಾವಣೆಗೆ ಹಾತೊರೆಯುತ್ತಿದ್ದಾರೆ. ಇದಕ್ಕೆ ಇತ್ತೀಚಿನ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶವೇ ಸಾಕ್ಷಿ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಗದ್ದುಗೆ ಹಿಡಿಯುವುದು ಖಚಿತ. ನರೇಂದ್ರ ಮೋದಿ ಪ್ರಧಾನಮಂತ್ರಿಯಾಗುವುದು ನಿಶ್ಚಿತ ಎಂದರು.ಬೆಲೆ ಏರಿಕೆ, ರೂಪಾಯಿ ಅಪಮೌಲ್ಯ ತಡೆಯಲು ಯುಪಿಎ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಗಡಿ ವಿಚಾರದಲ್ಲಿ ಚೀನಾ ಮತ್ತು ಪಾಕಿಸ್ತಾನ ರಾಷ್ಟ್ರಗಳು ಆಗಾಗ ಸಮಸ್ಯೆ ಉಂಟು ಮಾಡುತ್ತಿದ್ದರೂ ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ ಅವರು, ಈ ನಿಟ್ಟಿನಲ್ಲಿ ದೇಶಕ್ಕೆ ಸಮರ್ಥ ನಾಯಕತ್ವದ ಅವಶ್ಯಕತೆ ಇದ್ದು, ಆ ಸ್ಥಾನವನ್ನು ನರೇಂದ್ರ ಮೋದಿ ತುಂಬಲಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಮೋದಿ ಕುರಿತ 10 ನಿಮಿಷಯಗಳ ವಿಡಿಯೋ ಪ್ರದರ್ಶಿಸಲಾಯಿತು. ನಂತರ ಸುಗಮ ಸಂಗೀತ ಕಲಾವಿದರು ಗೀತಗಾಯನ ನಡೆಸಿಕೊಟ್ಟರು.ಆರ್‌.ಬಸವರಾಜ್‌, ಶ್ರೀವಾಸ್ತವ ಸುಬ್ರಹ್ಮಣ್ಯ, ಧರ್ಮೇಂದ್ರ, ವಿನಯ್‌ ಕುಮಾರ್‌, ರಂಗನಾಥ ಸ್ವಾಮಿ ಇದ್ದರು.ಏನಿದು ‘ಔಟ್‌ ರೀಚ್‌’?

ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಪ್ರತಿ ಹಳ್ಳಿಹಳ್ಳಿಗಳಲ್ಲೂ ಬಿಜೆಪಿಯನ್ನು ಸಂಘಟಿಸುವ ಸಲುವಾಗಿ ಬಿಜೆಪಿ ಗೆಳೆಯರು ಹುಟ್ಟಿಹಾಕಿರುವ ಸಂಸ್ಥೆಯೇ ಔಟ್‌ರೀಚ್‌. ಈ ಸಂಘಟನೆ ರಾಜ್ಯದ ಪ್ರತಿಯೊಂದು ಹಳ್ಳಿಗಳಲ್ಲೂ ಬಿಜೆಪಿ ಬೆಂಬಲಿಗರನ್ನು ಗುರುತಿಸಿ ಅವರ ಬಿಡುವಿನ ಸಮಯವನ್ನು ಬಿಜೆಪಿ ಪ್ರಚಾರಕ್ಕೆ ಬಳಸುವ ಕುರಿತು ಕಾರ್ಯ ಯೋಜನೆ ಸಿದ್ಧಪಡಿಸುತ್ತದೆ. ಅದಕ್ಕಾಗಿ ನೋಂದಣಿ ಕಾರ್ಯ ಸಹ ಆರಂಭವಾಗಿದೆ.

ಪ್ರತಿಕ್ರಿಯಿಸಿ (+)