ಸೋಮವಾರ, ಜನವರಿ 27, 2020
24 °C
ತಾಲ್ಲೂಕು ‘ಕೃಷಿ ಉತ್ಸವ’ ಸಮಾರೋಪ

‘ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಗ್ಗಾವಿ: ‘ಭಾರತೀಯರ ನಿತ್ಯದ ಬದುಕು ಕೃಷಿ ಚಟುವಟಿಕೆಗಳ ತಳಹದಿ ಮೇಲೆ ಸಾಗುತ್ತಿದ್ದು, ಹೀಗಾಗಿ ಕೃಷಿಕರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮೂಲಕ ದೇಶದ ಆರ್ಥಿಕ ಗುಣಮಟ್ಟ ಹೆಚ್ಚಿಸಲು ಮುಂದಾಗಬೇಕು’ ಎಂದು ಭಾರತೀಯ ಕೃಷಿಕ ಸಮಾಜದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಪ್ರೊ.ಸುರೇಶ ಕುನ್ನೂರ ಹೇಳಿದರು.ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ  ನಡೆದ ‘ಕೃಷಿ ಉತ್ಸವ’ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ರೈತನ ನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ರೈತ ಸಮೂಹ ಸಂಪೂರ್ಣ ತತ್ತರಿಸಿ ಹೋಗಿದೆ. ಆದರೂ ಸರ್ಕಾರ ರೈತನ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಅದಕ್ಕೆ ಯುವರೈತರ ಪ್ರಬಲ ಸಂಘಟನೆಗಳಿಂದ ಹೋರಾಟ ಅನಿವಾರ್ಯವಾಗಿದೆ. ಇಂದು ಪ್ರತಿಯೊಂದು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೋರಾಟ ಅಸ್ತ್ರವಾಗಿದೆ ಎಂದ ಅವರು ಸರ್ಕಾರ ಆಡಳಿತದಲ್ಲಿ ವಿಫಲವಾಗಿದ ಕಾರಣ ಮಹಿಳಾ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ ಎಂದರು.ವಿರಕ್ತಮಠದ ಸಂಗನಬಸವ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ನಾಡಿಗೆ ಅನ್ನ ನೀಡುವ ರೈತ ಸರ್ಕಾರದ ಮುಂದೆ ಕೈಚಾಚುವುದು ಸರಿಯಲ್ಲ. ರೈತ ಸ್ವಾವಲಂಬನೆ ಜೀವನ ನಡೆಸಲು ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸಬೇಕು. ಮಕ್ಕಳನ್ನು ಡಾಕ್ಟರ್‌, ಎಂಜಿನಿಯರ್‌ ಮಾಡುತ್ತೇವೆ ಎಂಬ ಒಣ ಪ್ರತಿಷ್ಠೆ ಬಿಟ್ಟು ಮಕ್ಕಳನ್ನು ಒಳ್ಳೆಯ ಕೃಷಿಕರನ್ನಾಗಿ ಮಾಡುತ್ತೇವೆ ಎಂದು ಹೆಮ್ಮೆಯಿಂದ ಹೇಳಬೇಕು ಎಂದರು.ಭಾರತೀಯ ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಮಾಹಾರುದ್ರಪ್ಪ ವಡವಟ್ಟಿ ಮಾತನಾಡಿ, ಆಡಳಿತ ಪಕ್ಷಗಳು ರೈತನಿಗೆ ಯಾವುದೆ ಬೆಂಬಲ ನೀಡದೆ ವಂಚನೆ ಮಾಡುತ್ತಾ ಬಂದಿವೆ. ಹೀಗಾಗಿ ಕೃಷಿಕರಿಗೆ ಕೃಷಿಕರೇ ಆಧಾರವಾಗಿದ್ದಾರೆ ಎಂಬುದನ್ನು ಮರೆಯುವಂತಿಲ್ಲ ಎಂದರು.ಧರ್ಮಸ್ಥಳ ಸಂಘದ ಜಿಲ್ಲಾ ನಿರ್ದೇಶಕ ವಸಂತ ಸಾಲಿಯಾನ,ಕೃಷಿ ಉತ್ಸವ ಸಮಿತಿ ಅಧ್ಯಕ್ಷ ಬಸಣ್ಣ ಹೆಸರೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗುಜರಾತ್‌ ಅಂಬುಜಾ ಕಂಪೆನಿ ಅಧ್ಯಕ್ಷ ಉಮೇಶ ಪಾಂಡೆ, ಮುಖ್ಯ ಕಾರ್ಯನಿರ್ವಾಹಕ ಬಸು ಟಿಬ್ರೇವಾಲ, ನಾಗರಾಜ ಹಂಚಿನಮನಿ, ಹುತ್ತನಗೌಡ್ರ, ಧರ್ಮಸ್ಥಳ ಸಂಘದ ಯೋಜನಾಧಿಕಾರಿ ಗಣೇಶ ಮಾಳಂಜಿ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕ್ರೀಡಾ ಕೂಟಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು. ಕೃಷಿ ಮೇಲ್ವಿಚಾರಕಿ ಗಂಗಮ್ಮಾ ಸ್ವಾಗತಿಸಿದರು. ಮಹಾದೇವ ನಿರೂಪಿಸಿದರು. ಮಾರುತಿ ವಂದಿಸಿದರು.

ಪ್ರತಿಕ್ರಿಯಿಸಿ (+)