ಸೋಮವಾರ, ಜನವರಿ 20, 2020
17 °C
ಉಪ ಲೋಕಾಯುಕ್ತರ ಮುಂದೆ ಅರ್ಜಿಗಳ ಮಹಾಪೂರ: ಸ್ಥಳದಲ್ಲೇ ಪರಿಹಾರ

‘ವೈದ್ಯೆಯಾಗುವ ಕನಸು ಕಾಣುವುದೂ ತಪ್ಪೇ?’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ವೈದ್ಯೆಯಾಗುವ ಕನಸು ಕಾಣುವುದೂ ತಪ್ಪೇ?’

ಬೆಂಗಳೂರು: ‘ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ನೀಡಲು ಹೊಸಕೋಟೆಯ ಎಂವಿಜೆ ಕಾಲೇಜು ಆಡಳಿತ ಮಂಡಳಿ ₨ 48 ಲಕ್ಷ ಡೊನೇಷನ್‌ ಕೇಳಿದೆ. ನಮ್ಮಂತಹ ಬಡವರು ವೈದ್ಯರಾಗುವ ಕನಸು ಕಾಣುವುದು ತಪ್ಪೇ ಸರ್? ವೈದ್ಯೆ ಆಗಬೇಕೆಂಬ ನನ್ನ ಆಸೆ ಈಡೇರಿಸಿಕೊಳ್ಳಲು ಬೇರೆ ದಾರಿಯೇ ಇಲ್ಲವೆ?’ಕೋಲಾರದಿಂದ ಬಂದಿದ್ದ ವಿದ್ಯಾರ್ಥಿನಿ ರೋಷಿನಿ ತಾಜ್‌, ತುಸು ರೋಷದಲ್ಲೇ ಈ ಪ್ರಶ್ನೆ ಹಾಕಿದಾಗ, ಉಪ ಲೋಕಾ ಯುಕ್ತ ನ್ಯಾ. ಸುಭಾಷ್‌ ಅಡಿ ಕ್ಷಣಕಾಲ ಮೌನ ವಹಿಸಿದರು. ‘ಏನು ಮಾಡುವುದು, ದೇಶದ ಗತಿಯೇ ಹೀಗಾಗಿದೆ. ನಿಮ್ಮಂತಹ ಬಡವರಿಗೆ ಅವಕಾಶವೇ ಇಲ್ಲದಂತಾಗಿದೆ’ ಎಂದು ಉಪ ಲೋಕಾಯುಕ್ತರು ಉತ್ತರಿಸಿದರು. ‘ಹಾಗಾದರೆ ನನ್ನ ಕನಸನ್ನು ನಾನು ಇಲ್ಲಿಗೇ ಕೈಬಿಡಬೇಕೇ’ ಎಂದು ಅಳುತ್ತಲೇ ರೋಷಿನಿ ಮರು ಪ್ರಶ್ನೆ ಹಾಕಿದಾಗ, ‘ಈ ಪ್ರಶ್ನೆಯನ್ನು ನೀನು ಸರ್ಕಾರಕ್ಕೆ ಕೇಳಬೇಕಮ್ಮ’ ಎಂದು ಅವರು ಹೇಳಿದರು.ಉಪ ಲೋಕಾಯುಕ್ತರು ಹೊಸಕೋಟೆ ಮತ್ತು ನೆಲಮಂಗಲ ತಾಲ್ಲೂಕುಗಳ ಜನರಿಂದ ಅಹವಾಲು ಸ್ವೀಕರಿಸಿ, ಪರಿಹಾರ ಒದಗಿಸಲು ಮಂಗಳವಾರ ನಗರದಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ರೋಷಿನಿ ಕೇಳಿದ ಪ್ರಶ್ನೆ ಎಲ್ಲರ ಮನವನ್ನೂ ಕಲುಕುವಂತೆ ಮಾಡಿತು.

‘ಸಿಇಟಿಯಲ್ಲಿ ನನಗೆ 22,765ನೇ ರ್‌್ಯಾಂಕ್‌ ಬಂದಿತ್ತು. ಎಂವಿಜೆ ಕಾಲೇಜಿನಲ್ಲಿ ಮ್ಯಾನೇಜ್‌ಮೆಂಟ್‌ ಸೀಟು ಕೇಳಲು ಹೋದಾಗ ₨ 48 ಲಕ್ಷ ನೀಡುವಂತೆ ಬೇಡಿಕೆ ಇಟ್ಟರು. ಬಡ ಕುಟುಂಬದಿಂದ ಬಂದ ನನ್ನಂತಹ ವಿದ್ಯಾರ್ಥಿನಿಯರು ಅಷ್ಟೊಂದು ಹಣ ಹೊಂದಿಸುವುದು ಹೇಗೆ’ ಎಂದು ಕೇಳಿದಳು.‘ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ಮೀಸಲಿಟ್ಟ ಸೀಟುಗಳಲ್ಲಿ ರೋಷಿನಿಗೆ ಅವಕಾಶ ನೀಡಲು ಉದ್ದೇಶಿಸಿದ್ದೆವು. ಕಾಲೇಜಿನ ವೆಚ್ಚ ಸರಿದೂಗಿಸಲು ಎನ್‌ಆರ್‌ಐಗೆ ಮೀಸಲಿಟ್ಟ ಸೀಟುಗಳಿಂದ ಡೊನೇಷನ್‌ ಪಡೆಯುವುದು ಅನಿವಾರ್ಯ. ಅವರು ಕೇಳಿದಾಗ ₨ 48 ಲಕ್ಷ ಹೇಳಿದ್ದೆವು. ಈಗಾದರೆ ₨ 76 ಲಕ್ಷಕ್ಕಿಂತ ಕಡಿಮೆ ಆಗುವುದಿಲ್ಲ’ ಎಂದು ಎಂವಿಜೆ ಕಾಲೇಜಿನ ಪ್ರತಿನಿಧಿಗಳು ತಿಳಿಸಿದರು.‘ಸಿಇಟಿ ಮೂಲಕ ಬರುವ ವಿದ್ಯಾರ್ಥಿಗಳಿಗೆ ಶೇ 25ರಷ್ಟು ಸೀಟುಗಳನ್ನು ಮೀಸಲು ಇಡಲಾಗಿದೆ. ಒಳ್ಳೆಯ ರ್‌್ಯಾಂಕ್‌ ಸಿಕ್ಕರೆ ಸರ್ಕಾರಿ ಸೀಟನ್ನೇ ಪಡೆಯಬಹುದು. ಇಲ್ಲದಿದ್ದರೆ ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ’ ಎಂದು ಅವರು ವಾದಿಸಿದರು. ‘ನಮ್ಮ ಆಸೆ ಈಡೇರಲು ದಾರಿಯೇ ಇಲ್ಲ. ಕೊಟ್ಟ ದೂರನ್ನು ವಾಪಸು ಪಡೆಯುತ್ತೇವೆ’ ಎಂದು ರೋಷಿನಿ ತಂದೆ ಅಳುತ್ತಲೇ ಹೇಳಿದರು. ‘ಮುಂದಿನ ವರ್ಷ ಸಿಇಟಿಯಲ್ಲಿ ಉತ್ತಮ ರ್‌್ಯಾಂಕ್‌ ಪಡೆದು ಸರ್ಕಾರಿ ಸೀಟು ಪಡೆಯಲು ಯತ್ನಿಸು’ ಎಂದು ರೋಷಿ ನಿಗೆ ಸೂಚಿಸಿದ ಉಪ ಲೋಕಾಯುಕ್ತರು ಅರ್ಜಿ ವಿಲೇವಾರಿ ಮಾಡಿದರು.ಅಪಘಾತವಲ್ಲ; ಕೊಲೆ:  ಕೆ.ಆರ್‌. ಪುರದಿಂದ ಬಂದಿದ್ದ ರಿಜ್ವಾನ್‌ ಪಾಷಾ ತಮ್ಮ ಸಹೋದರ ಸಲ್ಮಾನ್‌ ಪಾಷಾ ಕೊಲೆಯಾಗಿದ್ದರೂ ಆನುಗೊಂಡನಹಳ್ಳಿ ಪೊಲೀಸರು ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸದೆ ವೈದ್ಯಾಧಿಕಾರಿಗಳು ವರದಿ ನೀಡಿದ್ದಾರೆ. ತಹಶೀಲ್ದಾರರು ಸಹ ಲೋಪ ಎಸಗಿದ್ದಾರೆ ಎಂದು ದೂರಿದರು.

ಮರಣೋತ್ತರ ಪರೀಕ್ಷೆ ವರದಿ ಪರಿಶೀಲಿಸಿದ ಉಪ ಲೋಕಾಯುಕ್ತರು ಅದರಲ್ಲಿ ದೋಷ ಇರುವುದನ್ನು ಪತ್ತೆ ಮಾಡಿದರು. ಪ್ರಕರಣದ ಕುರಿತಂತೆ ಎರಡು ತಿಂಗಳಲ್ಲಿ ಸಮಗ್ರವಾದ ತನಿಖೆ ನಡೆಸಿ, ಸತ್ಯಾಂಶವನ್ನು ಬಯಲಿಗೆ ಎಳೆಯಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಆದೇಶ ನೀಡಿದರು.ನೀಲಗಿರಿ ತೋಪಿಗೆ ಬೆಂಕಿ: ಹೊಸಕೋಟೆ ತಾಲ್ಲೂಕು ಮುತ್ಕೂರಿನ ಎಂ.ಸಿ. ಕೃಷ್ಣಪ್ಪ ವಿಭಿನ್ನವಾದ ದೂರು ತಂದಿದ್ದರು. ‘ನನ್ನ 3 ಎಕರೆ ಜಮೀನಿನಲ್ಲಿ ಅರ್ಧದಷ್ಟು ನೀಲಗಿರಿ ಬೆಳೆದಿದ್ದೆ. ಗಿಡಗಳು ಬೆಳೆದು ದೊಡ್ಡವಾಗಿದ್ದವು. ಕೆಲವು ದುಷ್ಕರ್ಮಿಗಳು ಅವುಗಳನ್ನು ಕಡಿದು ಬೆಂಕಿ ಇಟ್ಟಿದ್ದರು. ಹಾನಗೊಂಡನಹಳ್ಳಿ ಠಾಣೆ ಪೊಲೀಸ್‌ ಅಧಿಕಾರಿಗಳ ಸಹಾಯವೂ ಅವರಿಗಿತ್ತು. ನನಗೆ ₨ 3 ಲಕ್ಷ ನಷ್ಟವಾಗಿದೆ’ ಎಂದು ದೂರಿದರು.ಪ್ರತಿವಾದಿಗಳ ವಾದವನ್ನೂ ಆಲಿಸಿದ ಉಪ ಲೋಕಾಯುಕ್ತರು, ಕೃಷ್ಣಪ್ಪ ಅವರಿಗೆ ನಷ್ಟ ಆಗಿರುವುದು ದೃಢಪಟ್ಟಿದೆ. ದುಡ್ಡನ್ನು ಯಾರು ಭರಿಸುವಿರೋ ಗೊತ್ತಿಲ್ಲ, 15 ದಿನದಲ್ಲಿ ಪರಿಹಾರ ಕೊಟ್ಟು, ವರದಿ ಸಲ್ಲಿಸಬೇಕು ಪೊಲೀಸರಿಗೆ ಎಂದು ತಾಕೀತು ಮಾಡಿದರು.

ರಸ್ತೆಯೇ ನಾಪತ್ತೆ:  ಹೊಸಕೋಟೆಯ ಬಡಾವಣೆಯೊಂದರಲ್ಲಿ ರಸ್ತೆಯನ್ನೇ ನಿವೇಶನವಾಗಿ ಪರಿವರ್ತಿಸಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುನಿರಾಜು ಎನ್ನುವವರು ದೂರು ತಂದಿದ್ದರು. ನಕ್ಷೆ ಮತ್ತಿತರ ದಾಖಲೆ ಪರಾಮರ್ಶಿಸಿದ ಉಪ ಲೋಕಾಯುಕ್ತರು, ‘ರಸ್ತೆಯನ್ನು ನಿವೇಶನವನ್ನಾಗಿ ಪರಿವರ್ತಿಸಿದ್ದು ನಿಜವಲ್ಲವೇ’ ಎಂದು ಹೊಸಕೋಟೆ ಪುರಸಭೆ ಅಧಿಕಾರಿಗಳನ್ನು ಕೇಳಿದರು. ‘ಹೌದು’ ಎಂಬ ಉತ್ತರ ಅವರಿಂದ ಬಂತು.‘ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಬೇಕು’ ಎಂದು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದರು.ಗೋಮಾಳ ಭೂಮಿ ಪರಭಾರೆ: ಹೊಸಕೋಟೆ ತಾಲ್ಲೂಕಿನ ಗ್ರಾಮವೊಂದರಿಂದ ಬಂದಿದ್ದ ತಿಮ್ಮಪ್ಪ, ‘ನಮ್ಮೂರಿನ ಗೋಮಾಳ ಭೂಮಿಯಲ್ಲಿ ಕೆಲವರಿಗೆ ಮನೆ ಕಟ್ಟಿಕೊಳ್ಳಲು ನಿವೇಶನ ನೀಡಲಾಗಿದೆ. ನನಗೂ ನಿವೇಶನ ಬೇಕು. ಇಲ್ಲದಿದ್ದರೆ ಉಳಿದವರಿಗೆ ಕೊಟ್ಟ ನಿವೇಶನವನ್ನು ವಾಪಸು ಪಡೆಯಬೇಕು’ ಎಂದು ಮನವಿ ಮಾಡಿದರು.‘ಸರ್ಕಾರಿ ಭೂಮಿಯನ್ನು ಪರಭಾರೆ ಮಾಡಿದ್ದೇಕೆ’ ಎಂದು ಕೇಳಿದ ಉಪ ಲೋಕಾಯುಕ್ತರು, ‘ಕೊಟ್ಟ ನಿವೇಶನವನ್ನು ವಾಪಸು ಪಡೆಯಬೇಕು’ ಎಂದು ಆದೇಶಿಸಿದರು. ಸುಮಾರು 100 ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು. ಖಾತೆ ಬದಲಾವಣೆಗೆ ಸಂಬಂಧಿಸಿದ ದೂರುಗಳೇ ಹೆಚ್ಚಾಗಿದ್ದವು.

ಪ್ರತಿಕ್ರಿಯಿಸಿ (+)