ಮಂಗಳವಾರ, ಜನವರಿ 21, 2020
19 °C
ಹಂಪಿ ಉತ್ಸವ–2014: ಉನ್ನತ ಮಟ್ಟದ ಸಭೆಯಲ್ಲಿ ಸಚಿವರ ಸೂಚನೆ

‘ವ್ಯವಸ್ಥಿತ ಸಂಘಟನೆಗೆ ಒತ್ತು ನೀಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ವ್ಯವಸ್ಥಿತ ಸಂಘಟನೆಗೆ ಒತ್ತು ನೀಡಿ’

ಹೊಸಪೇಟೆ: ‘ಹಂಪಿ ಉತ್ಸವ ಕೇವಲ ಸರ್ಕಾರಿ ಅಧಿಕಾರಿಗಳ ಉತ್ಸವ ಆಗಬಾರದು. ಅದು ಜನಸಾಮಾನ್ಯರ ಉತ್ಸವವಾಗಬೇಕು. ಈ ಹಿನ್ನೆಲೆಯಲ್ಲಿ ಲಭ್ಯವಿರುವ ಅನುದಾನ ಬಳಸಿಕೊಂಡು ಉತ್ಸವವನ್ನು ಅಚ್ಚುಕಟ್ಟಾಗಿ ಸಂಘಟಿಸಬೇಕು’ ಎಂದು ಪ್ರವಾಸೋದ್ಯಮ ಖಾತೆ ಸಚಿವ ಆರ್‌.ವಿ.ದೇಶಪಾಂಡೆ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ನಗರದ ಅಮರಾವತಿ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಹಂಪಿ ಉತ್ಸವದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.‘ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪ್ರತಿಷ್ಠೆ ಬದಿಗೊತ್ತಿ ಉತ್ಸವದ ಯಶಸ್ಸಿಗೆ ಶ್ರಮಿಸ­ಬೇಕು. ಕಲಾವಿದರಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳಬೇಕು. ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ದೇಶೀಯ ಕಲೆ ಬೆಳವಣಿಗೆಗೆ ಉತ್ಸವ ಒತ್ತು ನೀಡಬೇಕು’ ಎಂದು ಹೇಳಿದರು.‘ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು. ಉತ್ಸವದ ಆದಾಯ ಹೆಚ್ಚಳಕ್ಕೆ ಜಿಲ್ಲಾಡಳಿತ ಯತ್ನಿಸಬೇಕು’ ಎಂದು ದೇಶಪಾಂಡೆ ತಿಳಿಸಿದರು.ಸಭೆಯಲ್ಲಿ ಭಾಗವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ಉಮಾಶ್ರೀ ಮಾತನಾಡಿ, ‘ಹಂಪಿ ಉತ್ಸವ ವ್ಯವಸ್ಥಿತವಾಗಿ ನಡೆಯಲು ರಾಜ್ಯದ ಮೂಲೆ ಮೂಲೆಯಲ್ಲಿರುವ ಸಾಹಿತಿಗಳ ಹಾಗೂ ಕಲಾವಿದರ ಸಲಹೆ ಪಡೆಯಬೇಕು. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕು. ಕಲಾವಿದರಿಗೆ ಚೆಕ್‌ ಮೂಲಕವೆ ಗೌರವಧನ ನೀಡಬೇಕು. ಕಲಾವಿದರೊಂದಿಗೆ ಅಧಿಕಾರಿಗಳು ಸೌಜನ್ಯ ಪೂರ್ಣ ನಡವಳಿಕೆಯಿಂದ ವರ್ತಿಸ­ಬೇಕು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.‘ಉತ್ಸವ ಸಂಘಟಿಸುವ ಸಂದರ್ಭದಲ್ಲಿ ಸಣ್ಣ ಅಸಮಾಧಾನಕ್ಕೂ ಅವಕಾಶ ನೀಡದಂತೆ ಎಚ್ಚರ­ವಹಿಸಬೇಕು. ಸಮಿತಿಗಳ ರಚನೆಯಲ್ಲಿ ಎಲ್ಲರನ್ನು ಪರಿ­ಗಣನೆಗೆ ತೆಗೆದುಕೊಳ್ಳಬೇಕು’ ಎಂದು ಹೇಳಿದರು.ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ.ಪರಮೇಶ್ವರ ನಾಯಕ ಅವರು, ‘ಹಂಪಿ ಉತ್ಸವದಲ್ಲಿ ಯಾರ ಭಾವನೆಗಳಿಗೂ ಧಕ್ಕೆಯಾಗದಂಗೆ ನಿರ್ಧಾರ ಕೈಗೊಳ್ಳಲಾ­ಗು­ವುದು. ಉತ್ಸವದ ವಿಷಯದಲ್ಲಿ ಯಾರನ್ನೂ ನಿರ್ಲಕ್ಷಿಸುವ ಉದ್ದೇಶವಿಲ್ಲ’ ಎಂದು ಸ್ಪಷ್ಟಪಡಿಸಿದರು.ಉತ್ಸವದ ಪೂರ್ವ ಸಿದ್ಧತೆ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಅಮ್ಲಾನ್‌ ಆದಿತ್ಯ ಬಿಸ್ವಾಸ್ ಅವರು, ‘ಉತ್ಸವಕ್ಕಾಗಿ ಎಂ.ಪಿ.­ಪ್ರಕಾಶ್‌ ವೇದಿಕೆ, ಶ್ರೀಕೃಷ್ಣದೇವರಾಯ ವೇದಿಕೆ ಹಾಗೂ ವಿದ್ಯಾರಣ್ಯ ವೇದಿಕೆ ಸೇರಿ ಒಟ್ಟು ಮೂರು ವೇದಿಕೆಗಳನ್ನು ನಿರ್ಮಿಸಲಾಗುವುದು. ಸ್ಥಳೀಯ ಕಲಾವಿದರಿಗಾಗಿಯೆ ಒಂದು ವೇದಿಕೆಯನ್ನು ಮೀಸಲಿರಿಸಲಾಗುವುದು.ಪ್ರತಿ ವೇದಿಕೆಗೆ ₨ 35 ರಿಂದ 40 ಲಕ್ಷ ಖರ್ಚಾಗಲಿದೆ’ ಎಂದು ಅವರು ಮಾಹಿತಿ ನೀಡಿದರು. ‘ಉತ್ಸವಕ್ಕೆ ಅನುದಾನ ಕೊರತೆ ನೀಗಿಸಲು ಪ್ರಾಯೋಜಕರ ಅಗತ್ಯವಿದೆ’ ಎಂದರು.

ಪ್ರತಿಕ್ರಿಯಿಸಿ (+)