ಭಾನುವಾರ, ಜನವರಿ 26, 2020
29 °C

‘ಶಾಂತಿಗಾಗಿ ಸಾಹಿತ್ಯ’ ಪುಸ್ತಕ ಮೇಳ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಶಾಂತಿಗಾಗಿ ಸಾಹಿತ್ಯ’ ಪುಸ್ತಕ ಮೇಳ ಆರಂಭ

ಬೆಳಗಾವಿ: ಜಮಾತ್‌– ಎ– ಇಸ್ಲಾಮಿ ಹಿಂದ್‌ನ ಶಾಂತಿ ಪ್ರಕಾಶನದ ರಜತ ಮಹೋತ್ಸವ ಅಂಗವಾಗಿ ಆರು ದಿನಗಳ ಕಾಲ ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿರುವ ‘ಶಾಂತಿಗಾಗಿ ಸಾಹಿತ್ಯ’ ಪುಸ್ತಕ ಮೇಳ ಹಾಗೂ ‘ವಿಜನ್‌ ಎಕ್ಸ್‌ಪೊ’ ಪ್ರದರ್ಶನವು ಮಂಗಳವಾರ ಆರಂಭಗೊಂಡಿತು.ಕಳೆದ 25 ವರ್ಷಗಳ ಅವಧಿಯಲ್ಲಿ ಶಾಂತಿ ಪ್ರಕಾಶನವು ಕುರಾನ್‌, ಪ್ರವಾದಿ ಮಹಮ್ಮದ್‌ ಜೀವನ ಚರಿತ್ರೆ, ಇಸ್ಲಾಂ ಧರ್ಮದ ಇತಿಹಾಸ ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಕಟಿಸಿದ 250 ಕನ್ನಡ ಭಾಷೆಯ ಪುಸ್ತಕಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ. ಜೊತೆಗೆ ಇಸ್ಲಾಂ ಧರ್ಮ ಹಾಗೂ ಮಹಮ್ಮದ ಪೈಗಂಬ­ರರ ಸಂದೇಶಗಳ ಕುರಿತು ಇಂಗ್ಲಿಷ್‌, ಹಿಂದಿ, ಮರಾಠಿ ಹಾಗೂ ಉರ್ದು ಭಾಷೆಗಳ ಪುಸ್ತಕಗಳು ಮತ್ತು ಚಾರ್ಟ್‌ಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.ಗಮನ ಸೆಳೆದ ಪ್ರದರ್ಶನ:  ಭ್ರಷ್ಟಾ­ಚಾರ, ಅಪ್ರಮಾಣಿಕತೆ, ಸ್ತ್ರೀ ಶೋಷಣೆ, ಕೋಮುವಾದ, ಪರಿಸರ ಅಸಮ­ತೋಲನ ಸೇರಿದಂತೆ ಹಲವು ಗಂಭೀರ ಸಮಸ್ಯೆಗ ಕುರಿತು ‘ಎಕ್ಸ್‌ಪೋ ವಿಜನ್‌’ ಪ್ರದರ್ಶನದಲ್ಲಿ ಬೆಳಕು ಚೆಲ್ಲಲಾಗಿದೆ. ಗುಟ್ಕಾ, ತಂಬಾಕು ಸೇವನೆಯಿಂದ ಕ್ಯಾನ್ಸರ್‌ ರೋಗ ಬರುತ್ತದೆ, ಮದ್ಯದ ದಾಸರಾದರೆ ಅದು ಶಾಂತಿ ಕಸಿದು­ಕೊಳ್ಳುತ್ತದೆ ಎಂಬ ಮಾದರಿ ಗಮನ ಸೆಳೆಯುತ್ತದೆ. ಪೃಕೃತಿ ಸಂರಕ್ಷಣೆ ಮಾಡ­ಬೇಕು, ಕಾರ್ಬೈಡ್‌ ಬಳಸಿ ಹಣ್ಣು ಮಾಗಿಸುವುದರಿಂದ ಏನಾಗುತ್ತದೆ, ನೆರೆ ಮನೆಯವರೊಂದಿಗೆ ಸದ್ವರ್ತನೆ ತೋರಬೇಕು ಎಂಬ ಸಂದೇಶವನ್ನು ಸಾರಲಾಗಿದೆ.

ಹಿಂದೂ ಮುಸ್ಲಿಂ ಹಾಗೂ ಕ್ರಿಶ್ಚನ್‌ ಪರಸ್ಪರ ಕೈ ಹಿಡಿದುಕೊಂಡಿರುವು ಮಾದರಿಯು ಧರ್ಮ ಸಹಿಷ್ಣುತೆಯನ್ನು ಸಾರಿ ಹೇಳುತ್ತಿದೆ. ರಾಜಕಾರಣಿಗಳ ಎದುರು ಗಾಂಧೀಜಿ ಅವರ ಮೂರು ಮಂಗಗಳು ಕಣ್ಣು– ಕಿವಿ– ಬಾಯಿ ಮುಚ್ಚಿ-­ಕೊಂಡಿರುವ ಮಾದರಿಯು ಇಂದಿನ ರಾಜಕೀಯ ಸ್ಥಿತಿಯನ್ನು ತೆರೆದಿಟ್ಟಿದೆ. ಭ್ರೂಣ ಹತ್ಯೆ, ಕಾರ್ಮಿಕ ಶೋಷಣೆ, ಮಹಿಳಾ ದೌರ್ಜನ್ಯಗಳನ್ನು ಬಿಂಬಿಸುವ ಮಾದರಿಗಳು ಮನ ಮುಟ್ಟುವಂತಿದೆ.‘ಎಕ್ಸ್‌ಪೋ ವಿಜನ್‌’ ಅನ್ನು ಉದ್ಘಾಟಿಸಿದ ಶೇಖ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಶನ್‌ನ ಅಧ್ಯಕ್ಷ ಅಬು ಶೇಖ್‌, ‘ಪುಸ್ತಕವು ಒಳ್ಳೆಯ ಸ್ನೇಹಿತ­ನಾಗಿದ್ದಾನೆ. ಸಾಹಿತ್ಯವು ಜೀವನವನ್ನು ಉತ್ಕೃಷ್ಟಗೊಳಿಸುತ್ತದೆ. ಇದರಿಂದಾಗಿ ಬಹು ಸಂಸ್ಕೃತಿ, ಧರ್ಮಗಳನ್ನು ಅರಿಯಲು ಸಾಧ್ಯವಾಗುತ್ತಿದೆ’ ಎಂದು ಹೇಳಿದರು.‘ಸಾಹಿತ್ಯಕ್ಕೆ ಯಾವುದೇ ಧರ್ಮ, ಜಾತಿಯ ಕಟ್ಟುಪಾಡು ಇಲ್ಲ. ಇದು ಎಲ್ಲವನ್ನೂ ಒಳಗೊಂಡಿರುತ್ತದೆ. ಇಲ್ಲಿ ಹಮ್ಮಿಕೊಂಡಿರುವ ಪ್ರದರ್ಶನವು ಜನರಿಗೆ ಸಂಸ್ಕೃತಿ, ಧರ್ಮವನ್ನು ಅರಿಯಲು ಸಹಕಾರಿಯಾಗಿದೆ’ ಎಂದು ಹೇಳಿದರು. ಪುಸ್ತಕ ಮೇಳವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಯ.ರು. ಪಾಟೀಲ, ‘ಪುಸ್ತಕ ಜ್ಞಾನವನ್ನು ನೀಡುತ್ತದೆ. ಭಾಷೆ ಇರುವುದು ಕೇವಲ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಇದೆ.

ಗಡಿ ಪ್ರದೇಶದಲ್ಲಿ ಪುಸ್ತಕ ಪ್ರೀತಿಯ ಬಳ್ಳಿ ಹಬ್ಬಬೇಕು ಎಂಬ ಕಸಾಪ ಆಶಯಕ್ಕೆ ಪೂರಕವಾಗಿ ಪುಸ್ತಕ ಪ್ರದರ್ಶನ ಹಮ್ಮಿಕೊಂಡಿರುವುದು ಶ್ಲಾಘನೀಯ. ಶಾಂತಿ ಪ್ರಕಾಶನವು 250 ಪುಸ್ತಕಗಳನ್ನು ಕನ್ನಡದಲ್ಲಿ ಪ್ರಕಟಿಸಿರುವುದು ಯಾವುದೇ ವಿಶ್ವವಿದ್ಯಾಲಯವು ಮಾಡಿದ ಕೆಲಸಕ್ಕಿಂತ ಕಡಿಮೆ ಇಲ್ಲ’ ಎಂದು ಅಭಿಪ್ರಾಯಪಟ್ಟರು.ಶಾಂತಿ ಪ್ರಕಾಶನ ರಜತ ಮಹೋತ್ಸವದ ಸಂಚಾಲಕ ಶಾಹೀದ್‌ ಮೇಮನ್‌, ‘ತಿರಸ್ಕಾರ, ಶತ್ರುತ್ವದಿಂದ ಕ್ಷಣಿಕ ಸಂತೋಷ ಲಭಿಸಬಹುದು. ಆದರೆ, ಪ್ರೇಮದಿಂದ ದೀರ್ಘಕಾಲಿಕ ಸಂತೋಷ ಲಭಿಸುತ್ತದೆ. ಇಂಥ ಪ್ರದರ್ಶನ­ದಿಂದ ಜನರ ಮನಸ್ಸು ಬದಲಾಯಿಸಲು ಸಾಧ್ಯವಿದೆ. ದೌರ್ಜನ್ಯಗಳು ಕಡಿಮೆ ಆಗಲಿದೆ’ ಎಂದರು.‘ಬೇರೆ ಬೇರೆ ಧರ್ಮಿಯರು ಸಮೀಪಕ್ಕೆ ಬರಬೇಕು. ಇನ್ನೊಂದು ಧರ್ಮ­ವನ್ನು ಅರಿತುಕೊಂಡು ಪರಸ್ಪರರನ್ನು ಗೌರವಿಸಬೇಕು. ಹೃದಯ­ಗಳ ಸಮ್ಮಿಲನವಾದಾಗ ಸಹಜವಾಗಿ ಪರಸ್ಪರ ಕೈ ಕುಲುಕುತ್ತಾರೆ’ ಎಂದು ಹೇಳಿದರು. ಅಂಜುಮನ್‌ ಕಾಲೇಜಿನ ಪ್ರಾಚಾರ್ಯ ಎಚ್‌.ಐ. ತಿಮ್ಮಾಪುರ, ‘ಧರ್ಮ ಗ್ರಂಥವು ದೇವ – ಮಾನವ ಮತ್ತು ಮಾನವ– ಮಾನವ ನಡುವಿನ ಸಂಬಂಧ ಹೇಗಿರಬೇಕು ಎಂಬುದನ್ನು ಬೋಧಿಸುತ್ತವೆ. ಇದನ್ನು ಸರಿಯಾಗಿ ನಾವು ಅರ್ಥ ಮಾಡಿಕೊಳ್ಳಬೇಕು’ ಎಂದರು.ಜಮಾತ್‌– ಎ– ಇಸ್ಲಾಮಿ ಹಿಂದ್‌ನ ಅಧ್ಯಕ್ಷ ರಿಯಾಜ್‌ ಅಹ್ಮದ್‌ ಅವಟಿ ನಿರೂಪಿಸಿದರು. ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಡಾ. ಬಸವರಾಜ ಜಗಜಂಪಿ, ಪ್ರಾಧ್ಯಾಪಕ ಡಾ. ಎಚ್‌.ಬಿ. ಕೋಲಕಾರ, ಮೌಲಾನಾ ಮೊಹಮ್ಮದ್‌ ಸಲೀಮ್‌ ಉಮರಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)