ಮಂಗಳವಾರ, ಮಾರ್ಚ್ 9, 2021
31 °C

‘ಶ್ರೀಶ್ರುತಿ’ ಸಿನಿಮಾ ಗಾನ...

ಡಿ.ಎಂ.ಕುರ್ಕೆ ಪ್ರಶಾಂತ Updated:

ಅಕ್ಷರ ಗಾತ್ರ : | |

‘ಶ್ರೀಶ್ರುತಿ’ ಸಿನಿಮಾ ಗಾನ...

ಬಿ. ಸುರೇಶ್ ನಿರ್ದೇಶನದ ‘ಪ್ರೀತಿ ಪ್ರೇಮ’, ಎ.ಜಿ. ಶೇಷಾದ್ರಿ ಅವರ ‘ವಸುದೈವ ಕುಟುಂಬ’ ಧಾರಾವಾಹಿಗಳಲ್ಲಿ ನಯ, ವಿನಯ ಮತ್ತು ಬಿಡು ಬೀಸಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಲೇ ಕಿರುತೆರೆಯ ಪ್ರೇಕ್ಷಕ ವರ್ಗಕ್ಕೆ ಸನಿಹರಾದವರು ನಟಿ ಶ್ರೀಶ್ರುತಿ. ನಾಲ್ಕೇ ನಾಲ್ಕು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದರೂ ಅವರ ಚಹರೆ ಕಿರುತೆರೆಯಲ್ಲಿ ಮಾಸುವಂಥದ್ದಲ್ಲ. ಇಂತಿಪ್ಪ ಶ್ರೀಶ್ರುತಿ ತಮ್ಮ ಬಣ್ಣದ ಕನಸುಗಳನ್ನು ವಿಸ್ತರಿಸುವ ತುಡಿತದಲ್ಲಿದ್ದಾರೆ. ಆ ತುಡಿತದ ಈಡೇರಿಕೆಗೆ ವೇದಿಕೆಗಳು ಸಿಕ್ಕುತ್ತಿವೆ. ಸದ್ಯ ಕಿರುತೆರೆಗೆ ತಾತ್ಕಾಲಿಕ ವಿರಾಮ ಹೇಳಿರುವ ಅವರು, ‘ಈ ದಿಲ್ ಹೇಳಿದೆ ನೀ ಬೇಕಂತ’ ಎನ್ನುವ ಮೂಲಕ ಹಿರಿತೆರೆಯ ಮೇಲೆ ಪ್ರೇಮಪರಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ ‘ಈ ದಿಲ್ ಹೇಳಿದೆ ನೀ ಬೇಕಂತ’ ಅವರ ಎರಡನೇ ಚಿತ್ರ. ಶ್ರೀಶ್ರುತಿ ಕಲಾವಿದರ ಕುಟುಂಬದ ಕುಡಿ. ಅವರ ತಂದೆ ಶ್ರೀಚಂದ್ರು ಸಿನಿಮಾ ಬರಹಗಾರರು. ತಾಯಿ ನಯನಾ, ತುಳು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡವರು. ಸದ್ಯ ಕನ್ನಡ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆ. ಹೀಗೆ ಕಲಾ ಪರಂಪರೆಯ ದೃಢ ಹಿನ್ನೆಲೆ ಹೊಂದಿರುವ ಶ್ರುತಿ ಅವರಿಗೆ ಆ ಕಲಾರಾಧನೆಯನ್ನು ಮುಂದುವರಿಸುವ ಆಸಕ್ತಿ. ಕಿರುತೆರೆಯಲ್ಲಿ ತೊಡಗಿದ್ದಾಗ ಅವರಿಗೆ ಬಣ್ಣದ ಬದುಕನ್ನು ವಿಸ್ತರಿಸುವ ಆಸೆ ಪ್ರಬಲವಾಗಿಯೇ ಮೊಳೆಯಿತು. ಆ ಹೊತ್ತಿನಲ್ಲಿಯೇ ಥ್ರಿಲ್ಲರ್ ಮಂಜು ಅವರ ಮಗ ಪುನೀತ್ ನಾಯಕತ್ವದ ‘ರಾಜ್ ಬಹದ್ದೂರ್’ ಸಿನಿಮಾಕ್ಕೆ ಅವಕಾಶವೂ ಒಲಿಯಿತು. ‘ರಾಜ್ ಬಹದ್ದೂರ್’ ಚಿತ್ರೀಕರಣ ಹಂತದಲ್ಲಿದೆ.ಕನ್ನಡ ಚಿತ್ರರಂಗದಲ್ಲಿ ಇನ್ನೂ ಹೆಜ್ಜೆಯೂರುತ್ತಿರುವಾಗಲೇ ತಮಿಳು ಮತ್ತು ತೆಲುಗು ಚಿತ್ರಗಳತ್ತಲೂ ಗಮನಹರಿಸಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಶ್ರೀಶ್ರುತಿ. ಅವರು ಅಂದುಕೊಂಡಂತೆ ಎಲ್ಲವೂ ನಡೆದರೆ ಕೆಲದಿನಗಳಲ್ಲಿಯೇ ತಮಿಳು ಮತ್ತು ತೆಲುಗಿನ ನಾಯಕರೊಂದಿಗೆ ಅಭಿನಯಿಸಲಿದ್ದಾರೆ.‘ನಟಿಸಿರುವ ನಾಲ್ಕು ಧಾರಾವಾಹಿಗಳಲ್ಲೂ ನನಗೆ ಪ್ರಮುಖ ಪಾತ್ರ ಸಿಕ್ಕಿತ್ತು. ‘ಈ ದಿಲ್ ಹೇಳಿದೆ ನೀ ಬೇಕಂತ’ ಚಿತ್ರದಲ್ಲಿ ಮನೆಯವರು ತುಂಬಾ ಮುದ್ದಾಗಿ ಸಾಕಿರುವ ಸಿಂಪಲ್ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವೆ. ಬಹುತೇಕ ಚಿತ್ರೀಕರಣ ಮುಗಿದಿದ್ದು, ಹಾಡುಗಳು ಬಾಕಿ ಇವೆ. ಪ್ರೇಮಕತೆ ಆಧಾರಿತ ಚಿತ್ರ ಇದು. ನಾಯಕನ ಪಾತ್ರದಷ್ಟೇ ಪ್ರಾಮುಖ್ಯ ನನಗೂ ಇದೆ’ ಎಂದು ಚಿತ್ರಕಥೆಯ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡುತ್ತಾರೆ.ಚಿತ್ರರಂಗದ ಬಗ್ಗೆ ಸ್ಪಷ್ಟ ಮತ್ತು ತೆಳು ಸಿನಿರೇಖೆಯನ್ನೂ ಹಾಕಿಕೊಂಡಿದ್ದಾರೆ ಶ್ರೀಶ್ರುತಿ. ಆ ಸಿನಿ ರೇಖೆಗಳ ಬಗ್ಗೆ ಅವರು ಹೇಳುವ ಮಾತಿದು: ‘ನಾನು ಆಯ್ಕೆ ಮಾಡಿಕೊಳ್ಳುವ ಕಥೆಗಳು ತಂದೆ, ತಾಯಿ, ಸ್ನೇಹಿತರ ಜೊತೆ ಕುಳಿತು ನೋಡಿದರೂ ಮುಜುಗರ ಅನ್ನಿಸಬಾರದು. ಡೀಸೆಂಟ್ ಪಾತ್ರಗಳನ್ನು ಅಪೇಕ್ಷಿಸುವೆ. ಮೊದಲನೆಯದಾಗಿ, ಉಡುಗೆ ತೊಡುಗೆ ಕಡೆಗೆ ನನ್ನ ಗಮನ. ನನ್ನ ಕಾಸ್ಟ್ಯೂಮ್ ಬೇರೊಬ್ಬರಿಗೆ ವಲ್ಗರ್ ಅನ್ನಿಸಬಾರದು. ಆಗಂತ ನಾನೇನೂ ಜೀನ್ಸ್‌–ಸ್ಕರ್ಟ್‌ ತೊಡುವುದಿಲ್ಲ ಎಂದಲ್ಲ. ನಾಯಕಿ ಪ್ರಧಾನ ಚಿತ್ರಗಳಲ್ಲೂ ಅಭಿನಯಿಸುವ ಆಸಕ್ತಿ ಇದೆ’ ಎನ್ನುತ್ತ ಸಿನಿ ರೇಖೆಯ ಗುಟ್ಟು ಬಿಟ್ಟುಕೊಡುತ್ತಾರೆ. ಅನುಷ್ಕಾ ಶೆಟ್ಟಿ, ಸೌಂದರ್ಯ ಅಭಿಮಾನಿಯಾಗಿರುವ ಶ್ರುತಿ, ತಾವು ಆ ಮಟ್ಟದ ಅಭಿನಯ ಕೌಶಲ ಗಳಿಸಿಕೊಳ್ಳಬೇಕು ಎಂಬ ಕನಸನ್ನು ಇಟ್ಟುಕೊಂಡಿದ್ದಾರೆ.ಅವರ ನಟನೆಯನ್ನು ಸಾಣೆ ಹಿಡಿದಿದ್ದು ಕಿರುತೆರೆ. ಮೂರನೇ ತರಗತಿಯಲ್ಲಿರುವಾಗಲೇ ಅವರು ಬಣ್ಣದ ಬದುಕಿನೊಂದಿಗೆ ಪಯಣ ಆರಂಭಿಸಿದರು. ‘ಮೊಗ್ಗು ಆರಳುವ ಮುನ್ನ’, ‘ತ್ರಿಶಾಗ್ನಿ’, ‘ಅಭಿನೇತ್ರಿ’ ಧಾರಾವಾಹಿಗಳಲ್ಲಿ ಬಾಲಕಲಾವಿದೆಯಾಗಿ ಬಣ್ಣ ಹಚ್ಚಿದ್ದರು. ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಶ್ರೀಶ್ರುತಿ, ವಿಷ್ಣುವರ್ಧನ್ ಅಭಿನಯದ ‘ವೀರಪ್ಪ ನಾಯ್ಕ’ ಚಿತ್ರದ ಮೂಲಕ ಹಿರಿತೆರೆಗೆ ಪ್ರವೇಶಿಸಿದರು; ಅದೂ ಕಂಠದಾನ ಕಲಾವಿದೆಯಾಗಿ. ‘ಕೇಸ್ ನಂ. 18/9’, ‘ನಗೆಬಾಂಬ್’ ಮತ್ತಿತರ 17ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಂಠದಾನ ಕಲಾವಿದೆಯಾಗಿ ಗುರ್ತಿಸಿಕೊಂಡಿದ್ದಾರೆ.‘ಅಪ್ಪ ಹಾಡು ಬರೆಯುವಾಗ ನಾನು ಆ ಹಾಡುಗಳನ್ನು ಹಾಡುತ್ತಿದ್ದೆ. ಅಮ್ಮನ ಜತೆ ಡಬ್ಬಿಂಗ್‌ಗೆ ಹೋಗುತ್ತಿದ್ದೆ. ‘ವಸುದೈವ ಕುಟುಂಬ’ ಮತ್ತು ‘ಕ್ಲಾಸ್ ಮೇಟ್ಸ್’ ಧಾರಾವಾಹಿಗಳಲ್ಲಿ ನಟಿಸಿದ್ದು ಮತ್ತು ಪಾತ್ರಗಳನ್ನು ಮರೆಯಲಾಗದು. ಆ ಪಾತ್ರಗಳೂ ಅಷ್ಟೇ ಮಟ್ಟದ ಗುರುತು ನೀಡಿದವು. ಸಮಯದ ಕಾರಣಕ್ಕೆ ಕಿರುತೆರೆಯಲ್ಲಿ ತೊಡಗಲು ಸಾಧ್ಯವಾಗುತ್ತಿಲ್ಲ. ಆದರೆ ಕಿರುತೆರೆಯಲ್ಲಿ ಕೆಲಸ ಮಾಡುತ್ತೇನೆ ಎಂದು ಅಲ್ಲಿ ಭರವಸೆ ನೀಡಿದ್ದೇನೆ. ಖಂಡಿತ ಕಿರುತೆರೆಯಲ್ಲೂ ತೊಡಗುವೆ’ ಎಂದು ನಟನೆಯ ಬುನಾದಿಯ ಬಗ್ಗೆ ಹೆಮ್ಮೆಯ ಮಾತಾಡುತ್ತಾರೆ.ಕಾಲೇಜು ದಿನಗಳಿಂದಲೇ ಪೂರ್ಣವಾಗಿ ನೃತ್ಯಕ್ಕೆ ಗಮನ ಕೊಟ್ಟವರು ಶ್ರೀಶ್ರುತಿ. ತರಗತಿಗಳಿಗೆ ಚಕ್ಕರ್ ಹೊಡೆದು ನೃತ್ಯ ಅಭ್ಯಾಸಕ್ಕೆ ಹೋಗುವಷ್ಟು ಆ ಕಲೆಯನ್ನು ಪ್ರೀತಿಸುತ್ತಿದ್ದರು. ಕಂಠದಾನ ಕಲಾವಿದೆಯಾಗಿಯೂ ಗುರ್ತಿಸಿಕೊಂಡಿರುವುದರಿಂದ ವಯಸ್ಸಾದರೂ ತಮಗೆ ಚಿತ್ರರಂಗದಲ್ಲಿ ಅವಕಾಶಗಳು ಸಿಕ್ಕುತ್ತವೆ ಎನ್ನುವ ಮುಂದಾಲೋಚನೆ ಅವರಲ್ಲಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.