ಶನಿವಾರ, ಮಾರ್ಚ್ 6, 2021
21 °C

‘ಸಂಪ್ರದಾಯ ಉಳಿಯಲಿ, ಮೌಢ್ಯ ದೂರವಾಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಂಪ್ರದಾಯ ಉಳಿಯಲಿ, ಮೌಢ್ಯ ದೂರವಾಗಲಿ’

ಸಿಂದಗಿ: ದೇವಸ್ಥಾನ, ಸಂಪ್ರದಾಯ  ಉಳಿಯಲಿ, ಆದರೆ ಮೌಢ್ಯತೆ ದೂರಾಗಲಿ, ಪಂಕ್ತಿ ಬೇಧ, ಮಡೆಸ್ನಾನ ಎಂಜಲು ಎಲೆಗಳ ಮೇಲೆ ಉರುಳು ಸೇವೆಯಂಥ ಕೆಟ್ಟ ಆಚರಣೆಗಳನ್ನು ಕಿತ್ತು ಹಾಕುವ ಮೂಲಕ ಸಮಾನತೆ ತರುವ ಮನುಷ್ಯ ಧರ್ಮ ಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ತಾಲ್ಲೂಕಿನ ಬಳಗಾನೂರ ಗ್ರಾಮದಲ್ಲಿ ಮಂಗಳವಾರ ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಗ್ರಾಮದೇವತೆ ಕೆಂಚರಾಯ ದೇವರ ಪಲ್ಲಕ್ಕಿ ಮನೆ, ₨ 65 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ದೀಪಸ್ಥಂಭಗಳನ್ನು ಉದ್ಘಾಟಿಸಿದ ನಂತರ ಧರ್ಮಸಭೆಯಲ್ಲಿ ಮಾತನಾಡಿದರು.ವೇದಿಕೆಯಲ್ಲಿ ನಿಂತು “ಇವನಾರವ, ಇವನಾ­ವರ’, ಎಂಬ ಬಸವಣ್ಣನವರ ವಚನ ಹೇಳಿದರೆ ಜಾತಿ ಹೋಗಲ್ಲಾ, 800 ವರ್ಷಗಳಿಂದ ಇದೇ ವಚನವನ್ನು ಹೇಳುತ್ತಲೇ ಹೊರಟಿದ್ದಾರೆ. ಜಾತಿ­ಯತೆ ದೂರಾಗಿದೆಯಾ ಎಂದು ಪ್ರಶ್ನಿಸಿದರು.ಧರ್ಮವೆಂದರೆ ಜಾತಿಯನ್ನು ವಿಭಜಿಸುವುದಲ್ಲ. ಶೋಷಣೆ ಮಾಡುವುದಲ್ಲ. ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಶೋಷಣೆ ನಡೆಯುತ್ತರುವುದಕ್ಕೆ ಬಸವಾದಿ ಶಿವಶರಣರು ಮೌನ ಪ್ರತಿಭಟನೆ ನಡೆಸಿದರು ಎಂದರು.ಕೆಳ ಸಮುದಾಯದ ಜನರು, ಬಡವರು, ಶೋಷಿತರು ವಿದ್ಯಾವಂತರಾಗಬೇಕು. ಹಾಗಾ­ದಾಗ ಮಾತ್ರ ಸ್ವಾಭಿಮಾನಿಗಳಾಗಿ ಬಾಳಲು ಸಾಧ್ಯ. ಶಿಕ್ಷಣದಿಂದ ಮಾತ್ರ ಶೋಷಣೆಯ ವಿರುದ್ಧ ಧ್ವನಿ ಎತ್ತಿದರೆ ಶಕ್ತಿ ಬರುತ್ತದೆ ಎಂದು ತಿಳಿಸಿದರು.ಕುರುಬ ಸಮುದಾಯಕ್ಕೆ ಧಾರ್ಮಿಕ ಭಾವನೆ­ಗಳು ತುಂಬಾ ಇದೆ. ಈ ಸಮುದಾಯದಲ್ಲಿ ಇರಬಹುದಾದ ದೇವಸ್ಥಾನಗಳು ಬೇರಾವ ಸಮುದಾಯದಲ್ಲೂ ಇಲ್ಲ. ಕುರುಬರಲ್ಲಿ ಕುಲಕ್ಕೊಂದು ದೇವಸ್ಥಾನ. ದೇವಸ್ಥಾನ ವಿರೋಧಿ ನಾನಲ್ಲ. ಶೂದ್ರರಿಗೆ ದೇವಸ್ಥಾನಗಳಲ್ಲಿ ಪ್ರವೇಶವಿರಲಿಲ್ಲ. ಅಷ್ಟೇ ಯಾಕೆ ಕನಕದಾಸರಂಥ ಶ್ರೇಷ್ಠ ಸಂತನಿಗೂ ದೇವಾಲಯದಲ್ಲಿ ಪ್ರವೇಶ ನೀಡಿರಲಿಲ್ಲ. ಹೀಗಾಗಿ ಕೆಳ ಸಮುದಾಯಗಳಲ್ಲಿ ದೇವಾಲಯಗಳು ಇದ್ದುದು ಸರಿಯಾದುದೇ ಎಂದು ಸಮರ್ಥಿಸಿಕೊಂಡರು.13 ನೇ ದಿನಾಂಕ ಕಾಕತಾಳೀಯ: ತಮಗೆ 13ನೇ ದಿನಾಂಕ ಕಾಕತಾಳೀಯವಾಗಿದೆ. ಕಳೆದ ವರ್ಷ 13ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದೆ. ಕಾಕತಾಳೀಯ ಎಂಬಂತೆ ಅಂದು ಬಸವ ಜಯಂತಿ ಇತ್ತು. ಅಂದು ಬಸವ ಜಯಂತಿ ಇದೆ ಅನ್ನೋದು ಕೂಡ ತಮಗೆ ತಿಳಿದಿರಲಿಲ್ಲ. ಇಂದಿಗೆ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿತು. ಬಳಗಾನೂರ ಗ್ರಾಮದಲ್ಲಿ ನಡೆದ ಈ ವರ್ಷಾಚರಣೆ ಕೂಡ ಸಾವಿರಾರು ಜನರ ದರ್ಶನದ ಮಧ್ಯೆ ಇದು ಕೂಡ 13 ನೇ ದಿನಾಂಕರಂದೇ ಇದೆ ಎಂದು ತಿಳಿಸಿದರು.ಒಂದೇ ದಿನದಲ್ಲಿ ಆರು ಯೋಜನೆ ಜಾರಿಗೆ:

ತಾವು ಪ್ರಮಾಣ ವಚನ ಸ್ವೀಕಾರ ಮಾಡಿದ ಕೇವಲ ಅರ್ಧ ಗಂಟೆಯಲ್ಲಿಯೇ ಬಡವರ ಪರ ಆರು ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ಕಾರ್ಯಾಚರಣೆ ತರಲಾಗಿದೆ. ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟು ಬಡವರಿಗೆ ಆರ್ಥಿಕವಾಗಿ ಶಕ್ತಿ ಕೊಡುವ ಕಾರ್ಯ ಅಪಾರ ತೃಪ್ತಿ ತಂದು ಕೊಟ್ಟಿದೆ ಎಂದರು.ಸತ್ತ ಕುರಿಗಾಗಿ ಪರಿಹಾರ: ಕುರಿಗಳು ರೋಗಕ್ಕೆ ತುತ್ತಾಗಿ, ಮಳೆಯಲ್ಲಿ ಸತ್ತರೆ ತಾವು ಆರಂಭಿಸಿರುವ ಪರಿಹಾರ ಹಣವನ್ನು ಮೂರು ಸಾವಿರದಿಂದ ಐದು ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು.ಅನ್ನಭಾಗ್ಯ ಯೋಜನೆಗಾಗಿ ₨ 4500 ಕೋಟಿ ಖರ್ಚು ಮಾಡಲಾಗುತ್ತಿದೆ. ಕೇವಲ ಒಂದೇ ವರ್ಷದಲ್ಲಿ ಸರ್ಕಾರ ಸಾಧನೆ ಅಪಾರ. ಮುಂಬರುವ ನಾಲ್ಕು ವರ್ಷದಲ್ಲಿ ಇನ್ನೂ ಬಡವರ ಪರ ಯೋಜನೆಗಳನ್ನು ರೂಪಿಸ­ಲಾಗುತ್ತದೆ. ಪ್ರಸ್ತುತ ಚುನಾವಣಾ ಫಲಿತಾಂಶ ಹೊರ ಬಿದ್ದ ನಂತರವೂ ತಾವೇ ಅವಧಿ ಮುಗಿಯುವವರೆಗೂ ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಭರವಸೆ ನೀಡಿದರು.ಸಮಾರಂಭದ ಸಾನಿಧ್ಯ ವಹಿಸಿದ್ದ ಕನಕಗುರುಪೀಠ ಕಾಗಿನೆಲೆ ಶಾಖಾ ಮಠದ ಸಿದ್ದರಾಮನಂದ ಪುರಿ ಸ್ವಾಮೀಜಿ ಭೇದಭಾವ ಹೆಚ್ಚಿಸುವ ದೇವಸ್ಥಾನಗಳ ವಿರುದ್ಧ ಮುಖ್ಯಮಂತ್ರಿಗಳು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶರಣಪ್ಪ ಸುಣಗಾರ, ಜಿಪಂ ಅಧ್ಯಕ್ಷೆ ಕಾವ್ಯಾ ದೇಸಾಯಿ, ಶಾಸಕರಾದ ಎಚ್.ವೈ. ಮೇಟಿ, ಶಿವಾನಂದ ಪಾಟೀಲ, ಸಿ.ಎಸ್. ನಾಡಗೌಡ, ಎ.ಎಸ್. ಪಾಟೀಲ ನಡಹಳ್ಳಿ, ಯಶವಂತರಾಯಗೌಡ ಪಾಟೀಲ, ಡಾ. ಮಕ್ಬೂಲ್‌ ಬಾಗವಾನ, ರಮೇಶ ಭೂಸನೂರ, ಅರುಣ ಶಹಾಪುರ, ಮಾಜಿ ಸಚಿವ ಎಂ.ಸಿ. ಮನಗೂಳಿ, ಪ್ರಕಾಶ ರಾಠೋಡ, ಅಶೋಕ ಶಾಬಾದಿ ಉಪಸ್ಥಿತರಿದ್ದರು.ಸ್ವಾಗತ ಸಮಿತಿ ಅಧ್ಯಕ್ಷ ರಮೇಶ ಭಂಟನೂರ ಸ್ವಾಗತಿಸಿದರು. ನಿಂಗಣ್ಣ ಜೇರಟಗಿ ಪ್ರಾಸ್ತಾವಿಕ­ವಾಗಿ ಮಾತನಾಡಿದರು. ಶ್ರೀಶೈಲ ಮಠಪತಿ, ಶಿವೂ ಗುಂದಗಿ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.