ಶನಿವಾರ, ಜನವರಿ 18, 2020
26 °C
ಕೆಳಹಾಂದಿ: ಉಚಿತ ವಿದ್ಯಾರ್ಥಿ ವಸತಿ ನಿಲಯ ಕಟ್ಟಡ ಉದ್ಘಾಟನೆ

‘ಸಂಸ್ಕಾರ ನೀಡುವ ಶಕ್ತಿಯಾಗಿ ವ್ಯಕ್ತಿ ಬೆಳೆಯಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಂದಿ (ಮೂಡಿಗೆರೆ): ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಸಂಸ್ಕಾರವನ್ನು ನೀಡುವ ಮೂಲಕ, ಆ ವ್ಯಕ್ತಿಯನ್ನು ಸಮಾಜದ ಶಕ್ತಿಯನ್ನಾಗಿ ರೂಪಿಸಬೇಕು ಎಂದು ಹೊರನಾಡು ಆದಿಶಕ್ತಿ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತ ಭೀಮೇಶ್ವರ ಜೋಶಿ ಕರೆನೀಡಿದರು.ಗ್ರಾಮದ ಕೆಳ ಹಾಂದಿಯಲ್ಲಿ ಭಾನು­ವಾರ ನೂತನವಾಗಿ ಸ್ಥಾಪನೆ­ಗೊಂಡಿ­ರುವ ಅಖಿಲಭಾರತ ಸೇವಾ ಅಭಿಯಾ­ನದ ಉಚಿತ ವಿದ್ಯಾರ್ಥಿ ವಸತಿ ನಿಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗ­ವಹಿಸಿ ಮಾತನಾಡಿದರು. ಸಮಾಜದಲ್ಲಿ ಸಂಸ್ಕಾರವಿಲ್ಲದವರು ಮಾನವರಾಗಲು ಸಾಧ್ಯವಿಲ್ಲ, ಬದುಕಿನ ಉದ್ದೇಶ ಸಾರ್ಥಕ­ವಾಗಬೇಕಾದರೆ ಪ್ರತಿಯೊ­ಬ್ಬರೂ ಪರೋ­ಪ­ಕಾರ ಗುಣವನ್ನು ಅಳವಡಿಸಿ­ಕೊಳ್ಳಬೇಕು, ಅಂತಹ ಪರೋಪಕಾರ ಗುಣವನ್ನು ಮಗುವಿಗೆ ಬಾಲ್ಯದಲ್ಲಿಯೇ ಸಂಸ್ಕಾರದ ರೂಪದಲ್ಲಿ  ನೀಡಬೇಕು ಎಂದರು.ಹಿರಿಯರಲ್ಲಿನ ಸಂಸ್ಕಾರದ ಕೊರತೆ, ಕಿರಿಯರನ್ನು ದಾರಿ ತಪ್ಪಿಸಲು ಕಾರಣ­ವಾಗುತ್ತಿದೆ, ತಮ್ಮಲ್ಲಿ ಅಳವಡಿಸಿಕೊಳ್ಳದ ಅಥವಾ ತಮ್ಮಲ್ಲಿ ಕಾಣಲಾಗದ ಸಂಸ್ಕಾರ­ಗಳನ್ನು ಕಿರಿಯರಲ್ಲಿ ಬಯಸು­ವುದರಲ್ಲಿ ಅರ್ಥವಿಲ್ಲ, ಪ್ರತಿಯೊಬ್ಬ ಪೋಷಕರು ತಾವೂ ಬದುಕಿ ಇತರರೂ ತಮ್ಮಷ್ಟೇ ಸಂತೋಷಯುಕ್ತ ಬದುಕನ್ನು ನಡೆಸಬೇಕು ಎಂಬ ಭಾವನೆಯನ್ನು ಮೈಗೂಡಿಸಿಕೊಂಡರೆ ಮಾತ್ರ ಸಮಾಜ­ದಲ್ಲಿ ಸುಧಾರಣೆಯನ್ನು ನಿರೀಕ್ಷಿಸ ಬಹುದಾಗಿದೆ ಎಂದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಖಿಲ ಭಾರತ ಸೇವಾ ಅಭಿಯಾನದ ಪ್ರಾದೇಶಿಕ ಸಂಯೋಜಕಿ ಸ್ವಾಮಿನಿ ಸ್ವಾತ್ಮನಿಷ್ಠಾನಂದ ಸರಸ್ವತಿ ಮಾತನಾಡಿ, ಸಂಸ್ಥೆಯ ವತಿಯಿಂದ ಸ್ಥಾಪಿತ­ಗೊಂಡಿರುವ 100 ನೇ ಛಾತ್ರಾಲಯ ಇದಾಗಿದ್ದು, ಸ್ಥಳೀಯ ದಾನಿಗಳ ನೆರವಿನಿಂದ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ಕೇಂದ್ರದಲ್ಲಿ ಮೇಘಾ­ಲಯದ 50 ವಿದ್ಯಾರ್ಥಿಗಳಿಗೆ ಆಶ್ರಯ ನೀಡಿ, ಶಿಕ್ಷಣ ಮತ್ತು ಸಂಸ್ಕಾರಗಳನ್ನು ನೀಡುವ ಉದ್ದೇಶವನ್ನು ಹೊಂದಲಾಗಿದ್ದು, ಭಾರತಕ್ಕೆ ಸಮರ್ಥ ಪ್ರಜೆಯನ್ನು ನಿರ್ಮಾಣಮಾಡುವ ಗುರಿ ಹೊಂದಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಶೀಲಾ ಬಾಲಾಜಿ ಮಾತನಾಡಿ, ಶಿಕ್ಷಣವೆಂದರೆ ಮಾನವೀಯ ಮೌಲ್ಯಗಳನ್ನು ಬೆಳೆಸುವು­ದಾಗಿದ್ದು, ದೇಶದ ಹಿಂದುಳಿದ ರಾಜ್ಯ­ಗಳ ಬುಡಕಟ್ಟು ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು, ಬಾಲ್ಯದಿಂದಿಡಿದು, ಯೌವ್ವನದವರೆಗೂ ಎಲ್ಲ ರೀತಿಯ ಸೌಕರ್ಯ­ಗಳನ್ನು ಒದಗಿಸಿ ಯುಕ್ತ ಭಾರತೀಯ ಸಂಸ್ಕಾರವನ್ನು ನೀಡುವುದು ಸಂಸ್ಥೆಯ ಉದ್ದೇಶವಾಗಿದೆ ಎಂದರು. ಕಾರ್ಯಕ್ರಮದ ನಂತರ ಸಂಸ್ಥೆಯ ವಿವಿಧ ಕೇಂದ್ರಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.ಸಂಸ್ಥೆಯ ಸ್ವಾಮಿನಿ ಸ್ವಾತ್ಮಬೋಧಾ­ನಂದ ಸರಸ್ವತಿ, ಸ್ವಾಮಿನಿ ವರದಾನಂದ ಸರಸ್ವತಿ, ಸ್ವಾಮಿನಿ ಸ್ವಾತ್ಮನಿಷ್ಠಾನಂದ ಸರಸ್ವತಿ ಮಾತನಾಡಿದರು, ಕೇಂದ್ರದ ಅಬ್ಬಾಸ್‌, ಆಶಾ ಮುಂತಾದವರಿದ್ದರು.

ಪ್ರತಿಕ್ರಿಯಿಸಿ (+)