ಸೋಮವಾರ, ಜನವರಿ 27, 2020
26 °C

‘ಸಮಾಜವಾದಿ ನೇತೃತ್ವದಲ್ಲಿ ತೃತೀಯ ರಂಗ ಅಸ್ತಿತ್ವಕ್ಕೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಕಾಂಗ್ರೆಸ್‌, ಬಿಜೆಪಿಗೆ ಪರ್ಯಾಯವಾಗಿ ಮುಂಬರುವ ಲೋಕಸಭಾ ಚುನಾವಣಾ ವೇಳೆಗೆ ಸಮಾಜವಾದಿ ಪಕ್ಷದ ನೇತೃತ್ವದಲ್ಲಿ ತೃತೀಯ ರಂಗ ಅಸ್ತಿತ್ವಕ್ಕೆ ಬರಲಿದೆ ಎಂದು ಸಮಾಜವಾದಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಾಬಾಗೌಡ ಪಾಟೀಲ ತಿಳಿಸಿದರು.ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್‌, ಬಿಜೆಪಿಯೇತರ ರಾಜಕೀಯ ಮುಖಂಡರು ಹಲವು ಸುತ್ತಿನ ಮಾತುಕತೆ ನಡೆಸಿದ್ದು, ಇಷ್ಟರಲ್ಲಿಯೇ ತೃತೀಯ ರಂಗದ ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದರು.ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ದೇಶದ ರೈತರ, ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಸಿಕ್ಕುತ್ತಿಲ್ಲ. ದಿನದಿಂದ ದಿನಕ್ಕೆ ಸಮಸ್ಯೆಗಳು ಹೆಚ್ಚಾಗಿ ಅಭಿವೃದ್ಧಿ ಮರೀಚಿಕೆಯಾಗಿದೆ. ಅಭಿವೃದ್ಧಿಯ ಜತೆಗೆ ರೈತರ, ಜನರ ಸಮಸ್ಯೆಗಳ ಅರಿವು ಹೊಂದಿರುವ ಜನರು ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂಬ ಉದ್ದೇಶದಿಂದಲೇ ಸಮಾನ ಮನಸ್ಕರೆಲ್ಲ ಸೇರಿ ತೃತೀಯ ರಂಗವನ್ನು ಅಸ್ತಿತ್ವಕ್ಕೆ ತರಲಾಗುತ್ತಿದೆ ಎಂದು ಹೇಳಿದರು.ಸದ್ಯ ಯುಪಿಎ ಸರ್ಕಾರದಲ್ಲಿರುವ ಕೆಲ ಅಂಗ ಪಕ್ಷಗಳ ನಾಯಕರು ತೃತೀಯ ರಂಗಕ್ಕೆ ಒಲವು ಹೊಂದಿದ್ದಾರೆ. ಅವರಲ್ಲಿ ಶರದ್‌ ಪವಾರ ಪ್ರಮುಖರಾಗಿದ್ದಾರೆ ಎಂದು ಹೇಳಿದ ಅವರು, ತೃತೀಯ ರಂಗದಲ್ಲಿ ಮುಲಾಯಂ ಸಿಂಗ್‌ ಯಾದವ, ಜಯಲಲಿತಾ, ನವೀನ್‌ ಪಾಟ್ನಾಯಕ್‌ ಸೇರಿದಂತೆ ಅನೇಕ ನಾಯಕರಿದ್ದಾರೆ ಎಂದು ತಿಳಿಸಿದರು.ದೇಶದಲ್ಲಿ ಇಂದು ರೈತರ ಪರಿಸ್ಥಿತಿ ಗಂಭೀರವಾಗಿದೆ. ರೈತರ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ರೈತರ ಆತ್ಮಹತ್ಯೆ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡ ಕಾರ್ಯಕ್ರಮಗಳು ರೈತರ ಪ್ರಯೋಜನಕ್ಕೆ ಬಾರದ ಹಿನ್ನೆಲೆಯಲ್ಲಿ ಕೃಷಿ ಉತ್ಪಾದನೆ ಕುಸಿತಗೊಳ್ಳುತ್ತಿದೆ. ಪ್ರತಿವರ್ಷ ₨೩೬ಸಾವಿರ ಕೋಟಿ ಫಾಮ್ ಎಣ್ಣೆ ಭಾರತಕ್ಕೆ ಆಮದು ಮಾಡಿಕೊಳ್ಳುತ್ತಿರುವುದು ನಾಚಿಗೇಡಿನ ಸಂಗತಿ ಎಂದರು.ರೈತ ಸಂಘದ ಚಳವಳಿಯೊಂದಿಗೆ ಬಂದಿರುವ ನಾನು ಚಳವಳಿಯಲ್ಲಿ ಕೆಲಸ ಮಾಡಿದವರನ್ನು ಹಾಗೂ ರೈತ ಸಂಘದ ಎಲ್ಲ ಪಂಗಡಳನ್ನು ಒಗ್ಗೂಡಿಸಿ ಪಕ್ಷದ ತತ್ವ ಸಿದ್ಧಾಂತಗಳ ಅಡಿಯಲ್ಲಿ ಸಮಾಜವಾದಿ ಪಕ್ಷದತ್ತ ಕರೆತರಲು ರಾಜಕೀಯ ಆಂದೋಲನ ನಡೆಸುವುದಾಗಿ ತಿಳಿಸಿದರು.ಕಬ್ಬಿಗೆ ದರ ನಿಗದಿ ಮಾಡುವ ವಿಷಯದಲ್ಲಿ ಸರ್ಕಾರವು ಆತುರದ ನಿರ್ಧಾರ ತೆಗೆದುಕೊಂಡಿದ್ದು, ತಾನು ನಿಗದಿ ಮಾಡುವ ದರಕ್ಕೆ ಕಾರ್ಖಾನೆಗಳು ಒಪ್ಪಿಕೊಳ್ಳುತ್ತವೇಯೋ ಇಲ್ಲವೋ, ಇಲ್ಲದಿದ್ದರೆ, ಮುಂದೇನು ಮಾಡಬೇಕು ಎಂಬ ಚಿಂತನೆ ನಡೆಸದೇ ಕೈಗೊಂಡ ನಿರ್ಧಾರದಿಂದ ಸರ್ಕಾರ ಮುಖಭಂಗ ಅನುಭವಿಸಬೇಕಾಯಿತು ಎಂದರು.ಆಯ್ದ ಕ್ಷೇತ್ರಗಳಲ್ಲಿ ಅಭ್ಯರ್ಥಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಆಯ್ದ ಕೆಲ ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ನಿಲ್ಲಿಸಲಾಗುವುದು ಎಂದು ಪಾಟೀಲ ತಿಳಿಸಿದರು.ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವಣ್ಣೆಪ್ಪ ನೆಲವಾಗಲಿ, ಅಶೋಕ ಭದ್ರಮ್ಮನವರ, ಎ.ಸಿ.ಗುಡಗೇರಿ ಅಲ್ಲದೇ ಅನೇಕರು ಗೋಷಿ್ಠಯಲ್ಲಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)