‘ಸ್ವಾವಲಂಬನೆ’ ಯೋಜನೆ ‘ಶೂನ್ಯ ಸಾಧನೆ’!
ಕಲಬುರ್ಗಿ: ‘ಮೇಕ್ ಇನ್ ಇಂಡಿಯಾ’, ‘ಸ್ಟಾರ್ಟ್ ಅಪ್’ ಮಾತು ಈಗ ಎಲ್ಲೆಡೆ ಚಾಲ್ತಿಯಲ್ಲಿದೆ. ಇನ್ನೊಂದೆಡೆ ನೂತನ ಉದ್ದಿಮೆ ಸ್ಥಾಪಿಸಲಿಕ್ಕಾಗಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರ 2015–16ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ ‘ಸ್ವಾವಲಂಬನೆ’ ಯೋಜನೆಗೆ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಇನ್ನೂ ‘ಚಾಲನೆಯೇ ದೊರೆತಿಲ್ಲ’ ಎಂಬ ಮಾಹಿತಿ ಲಭ್ಯವಾಗಿದೆ.
ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಪ್ರೋತ್ಸಾಹಿಸಲು ಹೊಸ ಉದ್ದಿಮೆಗಳನ್ನು ಹುಟ್ಟು ಹಾಕುವ ವಿದ್ಯಾರ್ಥಿಗಳು ಯಾವುದೇ ರಾಷ್ಟ್ರೀಕೃತ ಬ್ಯಾಂಕಿನಿಂದ ಪಡೆಯುವ ವಾರ್ಷಿಕ ₹10 ಲಕ್ಷ ವರೆಗಿನ ಸಾಲದ ಮೇಲಿನ ಬಡ್ಡಿಯನ್ನು ಮೂರು ವರ್ಷಗಳ ವರೆಗೆ ಸರ್ಕಾರವೇ ಭರಿಸುವ ಯೋಜನೆ ಇದು.
‘ಹೈದರಾಬಾದ್ ಕರ್ನಾಟಕದ ಕಾಲೇಜುಗಳಲ್ಲಿ ಈ ಯೋಜನೆಯ ಅನುಷ್ಠಾನ ಬಿಡಿ, ಯೋಜನೆಯ ಬಗೆಗೆ ಸಂಬಂಧಿಸಿದವರಿಗೆ ಮಾಹಿತಿ ಇಲ್ಲ. ಇನ್ನು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಯಾವುದೇ ಚಟುವಟಿಕೆ ಇಲ್ಲಿ ನಡೆದಿಲ್ಲ’ ಎಂಬುದು ಸಮಾಜ ಸೇವಕರೊಬ್ಬರ ದೂರು.
ಯೋಜನೆ ಬಗ್ಗೆ ಒಂದಿಷ್ಟು:
ಕರ್ನಾಟಕ ರಾಜ್ಯದ ಯಾವುದೇ ವಿಶ್ವವಿದ್ಯಾಲಯದ ಸಂಯೋಜನೆ ಪಡೆದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಹರು. ಅವರು ಪ್ರಥಮ ಮತ್ತು ದ್ವಿತೀಯ ಪದವಿ ಪರೀಕ್ಷೆಯಲ್ಲಿ ಕನಿಷ್ಠ ಶೇ 50ರಷ್ಟು ಅಂಕ ಪಡೆದು ಪ್ರಥಮ ಯತ್ನದಲ್ಲೇ ತೇರ್ಗಡೆ ಹೊಂದಿರಬೇಕು.
ವಿದ್ಯಾರ್ಥಿಗಳು ಯಾವ ಉದ್ದಿಮೆ ಪ್ರಾರಂಭಿಸುತ್ತಾರೋ ಅದರ ಯೋಜನಾ ವರದಿ (Project Report) ಅನ್ನು ಪ್ರಸ್ತಾವದೊಂದಿಗೆ ಸಲ್ಲಿಸಬೇಕು. ಯೋಜನಾ ವರದಿ ಮತ್ತು ಪ್ರಸ್ತಾವವನ್ನು ಪ್ರಾಂಶುಪಾಲರು ಸ್ವೀಕರಿಸಿದ ನಂತರ ತಮ್ಮ ಅಭಿಪ್ರಾಯದೊಂದಿಗೆ ಕಾಲೇಜು ಶಿಕ್ಷಣ ಇಲಾಖೆಯ ಕೇಂದ್ರ ಕಚೇರಿಗೆ ಸಲ್ಲಿಸಬೇಕು.
ಬೆಂಗಳೂರು ನಗರ ಕಾಲೇಜು ಗಳಿಂದ ಸಲ್ಲಿಸುವ ಪ್ರಸ್ತಾವಗಳು ಎಫ್‌ಕೆಸಿಸಿಐ ಮತ್ತು ಇತರೆ ಕೈಗಾರಿಕಾ ಸಂಸ್ಥೆಗಳಿಂದ ಯೋಜನಾ ವರದಿ ದೃಢೀಕರಣಗೊಂಡಿರಬೇಕು. ಜಿಲ್ಲಾ ಮಟ್ಟದ ಕಾಲೇಜುಗಳಿಂದ ಸಲ್ಲಿಸುವ ಯೋಜನಾ ವರದಿಗಳು ಜಿಲ್ಲಾ ಕೈಗಾರಿಕಾ ಸಂಸ್ಥೆಗಳಿಂದ ದೃಢೀಕರಣಗೊಂಡಿರ ಬೇಕು ಎಂಬುದು ಷರತ್ತು.
ಈ ಯೋಜನೆಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಾಗ ಗ್ರಾಮೀಣ, ಪಟ್ಟಣ ಹಾಗೂ ನಗರ ಪ್ರದೇಶದವರನ್ನು ಒಳಗೊಂಡಂತೆ ಆಯ್ಕೆ ಮಾಡುವುದು. ಆಯ್ಕೆ ಮಾಡುವಾಗ ಅರ್ಹ ವಿದ್ಯಾರ್ಥಿಗಳಿಗೆ ಅವಕಾಶ ನೀಡಿ ಪಾರದರ್ಶಕವಾಗಿ ಆಯ್ಕೆ ಮಾಡಬೇಕು.
ಈ ಯೋಜನೆಗೆ ಆಯ್ಕೆ ಮಾಡುವ ಮುನ್ನ ಯೋಜನೆ ಬಗ್ಗೆ ಸ್ಥಳೀಯ ಪತ್ರಿಕೆಗಳಲ್ಲಿ/ಮಾಧ್ಯಮಗಳಲ್ಲಿ ಸೂಕ್ತ ಪ್ರಚಾರ ನೀಡಿ ಆಸಕ್ತಿಯುಳ್ಳ ವಿದ್ಯಾರ್ಥಿಗಳ ಗಮನಕ್ಕೆ ತರಬೇಕು.
ಈ ಯೋಜನೆಯಡಿ ಆಯ್ಕೆಗೊಂಡ ವಿದ್ಯಾರ್ಥಿಗಳು ಬ್ಯಾಂಕ್ ಸಾಲ ಪಡೆಯಲು ಪೋಷಕರ ಜಾಮೀನು ನೀಡಬೇಕು. ಕುಟುಂಬದ ವಾರ್ಷಿಕ ಆದಾಯ ₹3 ಲಕ್ಷ ಮಿತಿಯೊಳಗಿರಬೇಕು.
ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ₹10 ಲಕ್ಷ ವರೆಗೆ ಸಾಲ ಪಡೆದವರು ಮಾತ್ರ ಈ ಕಾರ್ಯಕ್ರಮದ ಸೌಲಭ್ಯಕ್ಕೆ ಅರ್ಹರು. ಬ್ಯಾಂಕ್‌ನಿಂದ ಸಾಲ ಪಡೆದ ವಿದ್ಯಾರ್ಥಿಗಳಿಗೆ ಸಾಲದ ಮೇಲಿನ ಬಡ್ಡಿಯನ್ನು ಮೂರು ವರ್ಷಗಳವರೆಗೆ ಮಾತ್ರ ಸರ್ಕಾರ ಭರಿಸುವುದು ಎಂದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಅಕ್ಟೋಬರ್ 5, 2015ರಂದು ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರು, ಜಂಟಿ ನಿರ್ದೇಶಕರಿಗೆ ಸುತ್ತೋಲೆ ಹೊರಡಿಸಿದ್ದರು.
ಏತನ್ಮಧ್ಯೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಜೂನ್ 17, 2016ರಂದು ಮತ್ತೊಂದು ಸುತ್ತೋಲೆ ಹೊರಡಿಸಿ ಈ ಕಾರ್ಯಕ್ರಮದ ಪ್ರಗತಿ ವರದಿ ನೀಡುವಂತೆ ಕೋರಿದ್ದಾರೆ. ಈ ಕಾರ್ಯಕ್ರಮ ಅನುಷ್ಠಾನಗೊಳ್ಳದಿದ್ದಲ್ಲಿ ನಿಗದಿತ ನಮೂನೆಯಲ್ಲೇ ಶೂನ್ಯ ವರದಿ ನೀಡುವಂತೆಯೂ ಅವರು ಸೂಚಿಸಿದ್ದಾರೆ!
‘ನಿಯಮಗಳೇ ಅಡ್ಡಿ’
‘ಹೈದರಾಬಾದ್ ಕರ್ನಾಟಕದಲ್ಲಿ 71 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. ಕಲಾ, ವಾಣಿಜ್ಯ, ವಿಜ್ಞಾನ ವಿಷಯದ ಪದವಿ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್ ವರ್ಕ್ ಇರಲ್ಲ. ಹೀಗಾಗಿ ಪದವಿ ಕಾಲೇಜುಗಳಲ್ಲಿ ಈ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುವವರಿಗೆ ಈ ಯೋಜನೆಯಿಂದ ಪ್ರಯೋಜನವಿಲ್ಲ.
ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ (ಬಿಸಿಎ), ಬ್ಯಾಚುಲರ್ ಆಫ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ (ಬಿಬಿಎಂ) ಕೋರ್ಸ್‌ಗಳ ಅಂತಿಮ ವಿದ್ಯಾರ್ಥಿಗಳಿಗೆ ಮಾತ್ರ ಪ್ರಾಜೆಕ್ಟ್ ವರ್ಕ್ ಇರುತ್ತದೆ. ಅಂತಹವರಿಗೆ ಮಾತ್ರ ಅದು ಪ್ರಯೋಜನ ಆಗಬಹುದು’ ಎನ್ನುವುದು ಕಾಲೇಜು ಶಿಕ್ಷಣ ಇಲಾಖೆಯ ಸ್ಥಳೀಯ ಜಂಟಿ ನಿರ್ದೇಶಕರ ಕಚೇರಿಯ ಅಧಿಕಾರಿಗಳು ಹೇಳುವ ಮಾತು.
‘ಎಂಜಿನಿಯರಿಂಗ್, ಎಂಬಿಎ ವಿದ್ಯಾರ್ಥಿಗಳಿಗೆ ಈ ಯೋಜನೆ ವಿಸ್ತರಿಸಿದರೆ ಅನುಕೂಲವಾಗಬಹುದು’ ಎನ್ನುತ್ತಾರೆ ಅವರು.
***
ಈ ಯೋಜನೆ ಪ್ರಗತಿ ವರದಿ ನೀಡುವಂತೆ ಸರ್ಕಾರದಿಂದ ಬಂದ ಸುತ್ತೋಲೆಯನ್ನು ಪ್ರಾಚಾರ್ಯರಿಗೆ ಕಳಿಸಲಾಗಿದೆ. ವರದಿ ತರಿಸಿಕೊಳ್ಳಲಾಗುತ್ತಿದ್ದು, ಆ ನಂತರವೇ ಪ್ರಗತಿಯ ಮಾಹಿತಿ ಲಭ್ಯವಾಗಲಿದೆ.
-ಮಲ್ಲಿಕಾರ್ಜುನರೆಡ್ಡಿ, ಪ್ರಭಾರ ಜಂಟಿ ನಿರ್ದೇಶಕ, ಕಾಲೇಜು ಶಿಕ್ಷಣ ಇಲಾಖೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.