ಬುಧವಾರ, ಜನವರಿ 22, 2020
17 °C

‘‘ನಿರ್ಮಾಪಕರು ಗೆದ್ದಿದ್ದಾರೆ ನನ್ನ ಗೆಲುವು ಬಾಕಿಯಿದೆ...

ಸಂದರ್ಶನ: ಡಿ.ಎಂ. ಕುರ್ಕೆ ಪ್ರಶಾಂತ Updated:

ಅಕ್ಷರ ಗಾತ್ರ : | |

‘‘ನಿರ್ಮಾಪಕರು ಗೆದ್ದಿದ್ದಾರೆ ನನ್ನ ಗೆಲುವು ಬಾಕಿಯಿದೆ...

* ‘ಭಜರಂಗಿ’ ಚಿತ್ರದ ಕಥೆ ರೂಪುಗೊಂಡಿದ್ದು ಯಾವಾಗ?

ನಾನು ‘ಚಿಂಗಾರಿ’ ಚಿತ್ರ ನಿರ್ದೇಶಿಸುವಾಗ, ‘ಭಜರಂಗಿ’ ಚಿತ್ರದ ಕಥೆ ಮನಸ್ಸಿನಲ್ಲಿ ಮೂಡಿತ್ತು. ಆನಂತರ ಸುಮಾರು ಹತ್ತು ತಿಂಗಳು ಕಥೆಯ ಮೇಲೆ ಕೆಲಸ ಮಾಡಿದೆ.

* ನಿರ್ದೇಶಕನಾಗಿ ‘ಭಜರಂಗಿ’ ನಿಮ್ಮ ಪಾಲಿಗೆ ತಿರುವು ನೀಡುವ ಚಿತ್ರವೇ?

ಚಿತ್ರ ಗೆಲ್ಲುವ ಭರವಸೆ ಇದೆ. ಆದರೆ ಪೂರ್ಣವಾಗಿ ನನ್ನ ವೃತ್ತಿಜೀವನಕ್ಕೇ ತಿರುವು ನೀಡುತ್ತದೆ ಎಂದು ನಾನು ಪರಿಗಣಿಸಿಲ್ಲ. ಅತಿಯಾದ ಆತ್ಮವಿಶ್ವಾಸ ಒಳಿತಲ್ಲ. ಹೂಡಿಕೆ ವಾಪಸು ವಿಷಯದಲ್ಲಿ ನಿರ್ಮಾಪಕರು ಗೆದ್ದಿದ್ದಾರೆ. ನನ್ನ ಪಾಲಿನ ಗೆಲುವು ಬಾಕಿ ಇದೆ. ಜನರು ಚಿತ್ರವನ್ನು ಯಾವ ಮಟ್ಟದಲ್ಲಿ ಸ್ವೀಕರಿಸುತ್ತಾರೆ ಎನ್ನುವುದೇ ನನ್ನ ಮುಂದಿರುವ ಯೋಚನೆ ಮತ್ತು ಗೆಲುವು. ಇಲ್ಲಿಯವರೆಗೂ ನಾನು ಸಿನಿಮಾದ ಬಗ್ಗೆ ಮುಕ್ತವಾಗಿ ಭಾವನೆಗಳನ್ನು ಹಂಚಿಕೊಂಡಿಲ್ಲ. ಆದರೂ ಸಿನಿಮಾದ ನಿರೀಕ್ಷೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗಿವೆ. ನನ್ನ ಸಿನಿಮಾದ ಬಗ್ಗೆ ನಾನು ಮಾತನಾಡುವುದಕ್ಕಿಂತ ಜನರು ಮಾತನಾಡಲಿ ಅಂದುಕೊಂಡಿದ್ದೇನೆ.  * ‘ಭಜರಂಗಿ’ ಚಿತ್ರದ ಕಥೆ ಏನು?

ಎರಡು ತಲೆಮಾರಿನ ಕಥೆ. ಒಂದು ಮುಖ್ಯಕಥೆಗೆ ಎರಡು ಉಪಕಥೆಗಳು ಸೇರುತ್ತವೆ. ಇದು ಪ್ಯಾಂಟಸಿ ಕಥೆ. ಮೊದಲ ದೃಶ್ಯದಿಂದ ಕೊನೆಯವರೆಗೂ ಎರಡೂ ಉಪಕಥೆಗಳೂ ಒಗ್ಗೂಡಿಯೇ ಸಾಗುತ್ತವೆ. ಕಥೆಯನ್ನು ಹೇಳುವುದಕ್ಕಿಂತ ತೆರೆಯ ಮೇಲೆ ನೋಡಿದರೆ ಚೆನ್ನ.

* ಸಿನಿಮಾದ ವಿಶೇಷಗಳೇನು?

ಇಡೀ ಚಿತ್ರ ಅದ್ದೂರಿಯಾಗಿ ಬಂದಿದೆ. ಹಳ್ಳಿಯ ಸೆಟ್‌ಗಳಲ್ಲಿ ಗ್ರಾಫಿಕ್ ಕೆಲಸವಿಲ್ಲ. ಆದಷ್ಟೂ ರಿಯಲ್ ಸೆಟ್‌ಗಳನ್ನು ಬಳಕೆಗೆ ಆದ್ಯತೆ ನೀಡಲಾಗಿದೆ. ಗುಹೆ, ಆಕಾಶವನ್ನು ಗ್ರಾಫಿಕ್‌ನಲ್ಲಿ ತೋರಿಸಿರುವುದು ಚಿತ್ರದ ಮುಖ್ಯ ಹೈಲೆಟ್‌. ಚಿತ್ರದಲ್ಲಿ ಕಾರ್ಟೂನ್‌ಗಳೂ ಬರುತ್ತವೆ. ಶಿವರಾಜ್‌ಕುಮಾರ್‌ ಅವರ ಸಿಕ್ಸ್‌ಪ್ಯಾಕ್‌ ಸಿನಿಮಾದ ಇನ್ನೊಂದು ವಿಶೇಷ. ಈ ವಯಸ್ಸಿನಲ್ಲೂ ಅವರು ದೇಹ ಹುರಿಗಟ್ಟಿಸಿದ್ದಾರೆ. ಆ ಸಿಕ್ಸ್‌ಪ್ಯಾಕ್ ಕಣ್ತುಂಬಿಕೊಳ್ಳಲಾದರೂ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ ಎನ್ನುವ ವಿಶ್ವಾಸವಿದೆ.    

* ಮುಂದಿನ ನಿಮ್ಮ ಚಿತ್ರ ನಿರ್ದೇಶನದ ಯೋಜನೆಗಳು?

ಕೆಲವು ಐತಿಹಾಸಿಕ ಕಥೆಗಳು ಮನಸ್ಸಿನಲ್ಲಿವೆ. ಮುಂದಿನ ಕಾರ್ಯಯೋಜನೆಗಳು ಈ ಕಥೆಗಳತ್ತ. 

* ನಿರ್ದೇಶನದತ್ತ ಗಮನ ಕೇಂದ್ರೀಕರಿಸಿದ್ದರಿಂದ ನೃತ್ಯ ನಿರ್ದೇಶನದ ಕೆಲಸ ಹೇಗಿದೆ?

ಭಜರಂಗಿಯಲ್ಲಿ ತೊಡಗಿದ್ದರಿಂದ  ನೃತ್ಯ ನಿರ್ದೇಶನಕ್ಕೆ ಪೂರ್ಣ ವಿರಾಮ ನೀಡಿದ್ದೆ. ‘ನಿನ್ನಿಂದಲೇ’, ‘ಗಜಕೇಸರಿ’, ‘ರಾಟೆ’, ‘ಬಹದ್ದೂರ್‌’ ಮತ್ತಿತರ ಚಿತ್ರಗಳು ನೃತ್ಯ ನಿರ್ದೇಶಕನಾಗಿ ಕೈಯಲ್ಲಿವೆ.* ನಿಮ್ಮ ನಿರ್ದೇಶನದ ಪರಿಭಾಷೆ ಯಾವ ರೀತಿಯದ್ದು?

ನಿರ್ದಿಷ್ಟವಾಗಿ ಪರಿಭಾಷೆ ಎಂದು ಗುರುತಿಸಿಕೊಂಡಿಲ್ಲ. ಜನರ ಮನಸ್ಥಿತಿ ಅರಿಯುವುದು ಕಷ್ಟ. ಟ್ರೆಂಡ್‌ಗಳು ಬದಲಾಗುತ್ತಾ ಸಾಗುತ್ತದೆ. ಅದಕ್ಕೆ ತಕ್ಕಂತೆ ನಾವೂ ಕೆಲಸ ಮಾಡಬೇಕು. ಆದರೆ ಹಾಸ್ಯ ಮತ್ತು ಭಾವುಕತೆ ಎಲ್ಲ ಕಾಲಕ್ಕೂ ಸಲ್ಲುತ್ತವೆ. ಜನರು ನಗುವನ್ನು ಸದಾ ಇಷ್ಟಪಡುತ್ತಾರೆ. ಭಾವನೆಗಳಿಗೆ ಪ್ರಾಧಾನ್ಯ ಎಲ್ಲಿರುತ್ತದೆಯೋ ಆ ಚಿತ್ರ ಗಟ್ಟಿಯಾಗಿ ಉಳಿಯುತ್ತದೆ, ಜನರೂ ಸ್ಪಂದಿಸುತ್ತಾರೆ. ಪ್ರತಿ ಚಿತ್ರದಿಂದ ಚಿತ್ರಕ್ಕೆ ನಾನು ಕಲಿಯುತ್ತಿದ್ದೇವೆ. ‘ಚಿಂಗಾರಿ’ ಚಿತ್ರದಲ್ಲಿನ ಅನುಭವ ಮತ್ತು ಕಲಿಕೆ ಭಜರಂಗಿಯಲ್ಲಿ ಬಳಕೆಯಾಗಿದೆ. ಭಜರಂಗಿಯಲ್ಲಿನ ಹೊಸ ಕಲಿಕೆ ಮುಂದಿನ ಚಿತ್ರಕ್ಕೆ ಬಳಕೆಯಾಗುತ್ತದೆ.

ಪ್ರತಿಕ್ರಿಯಿಸಿ (+)