ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13 ವರ್ಷದ ನಂತರ ನೌಕರಿ: ಹೀಗೂ ಉಂಟೇ!

Last Updated 20 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ಯಾವುದಾದರೂ ಹುದ್ದೆಗೆ ಪರೀಕ್ಷೆ ನಡೆಸಿದರೆ ಅದರ ಫಲಿತಾಂಶ ಹೊರಬಿದ್ದು ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಬರಲು 3-4 ವರ್ಷವಾಗುತ್ತದೆ. ಆದರೆ ಬಿ.ಎಂ.ವಿಜಯಶಂಕರ್ ಅವರು ಸುದೀರ್ಘ 13 ವರ್ಷಗಳ ಹೋರಾಟದ ನಂತರ ನೇಮಕಾತಿ ಪತ್ರವನ್ನು ಪಡೆದುಕೊಂಡಿರುವುದು ಮಾತ್ರ ವಿಶೇಷ.

1987ರಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಗೆಜೆಟೆಡ್ ಪ್ರೊಬೇಷನರಿ ಎ ಮತ್ತು ಬಿ ಸಮೂಹದ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿತು. ಬಿ.ಎಂ.ವಿಜಯಶಂಕರ್ ಅವರೂ ಅರ್ಜಿ ಸಲ್ಲಿಸಿದರು. ಮುಖ್ಯ ಪರೀಕ್ಷೆಯನ್ನೂ ಬರೆದರು. ಆದರೆ ಅವರು ಹೆಚ್ಚುವರಿ ಉತ್ತರ ಪತ್ರಿಕೆಯ ಮೇಲೆ ತಮ್ಮ ನೋಂದಣಿ ಸಂಖ್ಯೆಯನ್ನು ಬರೆದಿದ್ದರಿಂದ ಅವರ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ ಎಂದು ಕೆಪಿಎಸ್‌ಸಿ ತಿರಸ್ಕರಿಸಿತು. ಅಲ್ಲದೆ ಅವರನ್ನು ಸಂದರ್ಶನಕ್ಕೆ ಆಹ್ವಾನಿಸಲಿಲ್ಲ.

ಕೆಪಿಎಸ್‌ಸಿಯ ಈ ಕ್ರಮವನ್ನು ಪ್ರಶ್ನಿಸಿ ವಿಜಯ ಶಂಕರ್ ಅವರು ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಮೆಟ್ಟಿಲೇರಿದರು. 1990ರ ಸೆಪ್ಟೆಂಬರ್ 13ರಂದು ನ್ಯಾಯಮಂಡಳಿ ಈ ಬಗ್ಗೆ ತೀರ್ಪು ನೀಡಿ ಉತ್ತರ ಪತ್ರಿಕೆಯ ಹೆಚ್ಚುವರಿ ಕಾಗದದಲ್ಲಿ ನೋಂದಣಿ ಸಂಖ್ಯೆ ಬರೆದವರ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಬೇಕು ಹಾಗೂ ಅವರನ್ನು ಸಂದರ್ಶನಕ್ಕೂ ಆಹ್ವಾನಿಸಬೇಕು ಎಂದು ಆದೇಶಿಸಿತು.

ಸಂದರ್ಶನದ ನಂತರ ಯಾವುದೇ ಅಭ್ಯರ್ಥಿ ನೇಮಕಾತಿಗೆ ಅರ್ಹರಾದರೆ ಅವರನ್ನು ನೇಮಕಾತಿ ಪಟ್ಟಿಯಲ್ಲಿ ಸೇರಿಸಬೇಕು ಎಂದು ಲೋಕಸೇವಾ ಆಯೋಗಕ್ಕೆ ಸೂಚಿಸಿತು. ಇದರ ವಿರುದ್ಧ ಕೆಪಿಎಸ್‌ಸಿ ಮೇಲ್ಮನವಿ ಸಲ್ಲಿಸಿದರೂ ಅದನ್ನು ನ್ಯಾಯ ಮಂಡಳಿ 1990ರ ಡಿಸೆಂಬರ್ 18ರಂದು ವಜಾ ಮಾಡಿತು.
ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಆದೇಶವನ್ನು ಕೆಪಿಎಸ್‌ಸಿ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತು.

ಸುಪ್ರೀಂಕೋರ್ಟ್ 1991ರ ಮೇ 7ರಲ್ಲಿ ತನ್ನ ಮಧ್ಯಂತರ ತೀರ್ಪು ನೀಡಿ `ನ್ಯಾಯ ಮಂಡಳಿ ನೀಡಿದ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಹೆಚ್ಚುವರಿ ಉತ್ತರ ಪತ್ರಿಕೆಯಲ್ಲಿ ನೋಂದಣಿ ಸಂಖ್ಯೆ ಬರೆದ ಎಲ್ಲ 28 ಮಂದಿಯ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಬೇಕು ಹಾಗೂ ಅರ್ಹರಾದವರ ಸಂದರ್ಶನ ನಡೆಸಬೇಕು' ಎಂದು ಸೂಚಿಸಿತು.

ಸುಪ್ರೀಂಕೋರ್ಟ್ ಆದೇಶದಂತೆ ಕೆಪಿಎಸ್‌ಸಿ, ವಿಜಯಶಂಕರ್ ಮತ್ತು ಇತರರ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿತು. ವಿಜಯಶಂಕರ್ ಅವರು ಲಿಖಿತ ಪರೀಕ್ಷೆಯಲ್ಲಿ 986 ಮತ್ತು ಸಂದರ್ಶನದಲ್ಲಿ 135 ಅಂಕ ಸೇರಿದಂತೆ ಒಟ್ಟಾರೆ 1121 ಅಂಕ ಪಡೆದರು. ಇದು ಆ ಬಾರಿ ಪರೀಕ್ಷೆ ಬರೆದ ಎಲ್ಲರಿಗಿಂತ ಹೆಚ್ಚಿನ ಅಂಕವಾಗಿತ್ತು. ಆದರೆ 1992ರ ಫೆಬ್ರುವರಿ 14ರಂದು ಸುಪ್ರೀಂಕೋರ್ಟ್ ಅಂತಿಮ ತೀರ್ಪು ನೀಡಿ ಕೆಪಿಎಸ್‌ಸಿ ನಿಲುವನ್ನೇ ಎತ್ತಿ ಹಿಡಿಯಿತು. ತಮ್ಮನ್ನು ಆಯ್ಕೆಗಾಗಿ ಪರಿಗಣಿಸಬೇಕು ಎನ್ನುವ ವಿಜಯಶಂಕರ್ ನಿಲುವನ್ನು ತಿರಸ್ಕರಿಸಿತು.

ವಿಜಯಶಂಕರ್ ತಮ್ಮ ಪಟ್ಟನ್ನು ಬಿಡಲಿಲ್ಲ. ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದರು. 1993ರ ಫೆಬ್ರುವರಿ 26ರಂದು ಸುಪ್ರೀಂಕೋರ್ಟ್ ತಾನು ಈ ವಿಷಯದಲ್ಲಿ ಮತ್ತೆ ಯಾವುದೇ ಆದೇಶ ನೀಡುವುದಿಲ್ಲ. ಅಗತ್ಯವಾದರೆ ಅರ್ಜಿದಾರರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಬಹುದು ಎಂದು ಹೇಳಿತು.

ತಮಗೆ ಉದ್ಯೋಗ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುವ ಹಕ್ಕನ್ನು ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ನೀಡಿದೆ. ಇದರಿಂದಾಗಿ ತಮಗೆ ಉದ್ಯೋಗ ನೀಡುವಂತೆ ಕೋರಿ ಅವರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವಿಷಯ 1994ರ ಮಾರ್ಚ್ 30ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಯಿತು. ಈ ಬಗ್ಗೆ ಚರ್ಚೆ ನಡೆಸಿದ ಸಂಪುಟದ ಸದಸ್ಯರು, ವಿಜಯಶಂಕರ್ ಅವರಿಗೆ ಉಪ ವಿಭಾಗಾಧಿಕಾರಿ ಹುದ್ದೆ ನೀಡಲು ಒಪ್ಪಿಗೆ ಸೂಚಿಸಿದರು.

ಸಚಿವ ಸಂಪುಟದ ನಿರ್ಣಯವನ್ನು ಜಾರಿಗೆ ತರಲು ಕೆಪಿಎಸ್‌ಸಿಯಲ್ಲಿ ಇರುವ ಸಂಬಂಧಪಟ್ಟ ಕಾಗದ ಪತ್ರಗಳನ್ನು ತರಿಸಿಕೊಳ್ಳಬೇಕಾಗಿತ್ತು. ಸರ್ಕಾರ ಕೆಪಿಎಸ್‌ಸಿಗೆ ಈ ಸಂಬಂಧ ಪತ್ರ ಬರೆಯಿತು. 1994ರ ಜೂನ್ 30ರಂದು ಸರ್ಕಾರಕ್ಕೆ ಉತ್ತರ ನೀಡಿದ ಕೆಪಿಎಸ್‌ಸಿ, `ಯಾವುದೇ ಕಾರಣಕ್ಕೂ ವಿಜಯಶಂಕರ್ ಅವರಿಗೆ ನೇಮಕಾತಿ ನೀಡಬಾರದು.

ಹೆಚ್ಚುವರಿ ಉತ್ತರ ಪತ್ರಿಕೆಯಲ್ಲಿ ನೋಂದಣಿ ಸಂಖ್ಯೆ ಬರೆದ ಅಭ್ಯರ್ಥಿಯ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಬಾರದು ಎಂದು ಗೆಜೆಟೆಡ್ ಅಧಿಕಾರಿಗಳ ನೇಮಕಾತಿ ನಿಯಮದಲ್ಲಿದೆ. ಅಲ್ಲದೆ ಸುಪ್ರೀಂಕೋರ್ಟ್ ಕೂಡ ಕೆಪಿಎಸ್‌ಸಿ ವಾದವನ್ನು ಎತ್ತಿ ಹಿಡಿದಿದೆ. ವಿಜಯಶಂಕರ್ ಅವರಿಗೆ ಕೆಲಸ ನೀಡಿದರೆ ಇದೇ ರೀತಿ ತಪ್ಪು ಮಾಡಿದ ಉಳಿದವರಿಗೂ ಕೆಲಸ ನೀಡಬೇಕಾಗುತ್ತದೆ' ಎಂದು ಅಭಿಪ್ರಾಯಪಟ್ಟಿತು.

ಆಗ ರಾಜ್ಯ ಸರ್ಕಾರ ಈ ಬಗ್ಗೆ ಅಂದಿನ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಅವರ ಅಭಿಪ್ರಾಯ ಕೇಳಿತು. ರಾಜ್ಯ ಸರ್ಕಾರ ಮತ್ತೆ ಆಯೋಗಕ್ಕೆ ಪತ್ರ ಬರೆದು ಅರ್ಹತೆಯ ಆಧಾರದಲ್ಲಿ ವಿಜಯಶಂಕರ್ ಅವರಿಗೆ ನೇಮಕಾತಿ ನೀಡುವಂತೆ ಮರು ಪರಿಶೀಲನೆ ನಡೆಸಲು ಸೂಚಿಸುವುದರಲ್ಲಿ ತಪ್ಪೇನಿಲ್ಲ ಎಂದು ಕಾರ್ಯದರ್ಶಿ ಅಭಿಪ್ರಾಯಪಟ್ಟರು.

ಈ ನಡುವೆ ವಿಜಯಶಂಕರ್ ಅವರು ಸುಪ್ರೀಂಕೋರ್ಟ್‌ನಲ್ಲಿ ಮತ್ತೊಂದು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದರು. 1996ರ ಡಿಸೆಂಬರ್ 18ರಂದು ಮತ್ತೆ ತೀರ್ಪು ನೀಡಿದ ಸುಪ್ರೀಂಕೋರ್ಟ್ ತಾನು ಈಗಾಗಲೇ ನೀಡಿದ ಆದೇಶದಲ್ಲಿ ಬದಲಾವಣೆ ಮಾಡುವುದಿಲ್ಲ. ಅರ್ಜಿದಾರರಿಗೆ ಕೆಲಸ ನೀಡಲು ರಾಜ್ಯ ಸರ್ಕಾರ ಬಯಸಿದ್ದರೆ ಹಾಗೆ ಮಾಡಬಹುದು ಎಂದು ಹೇಳಿತು.

ಈ ಅಂಶವನ್ನು ರಾಜ್ಯ ಸರ್ಕಾರ ಕೆಪಿಎಸ್‌ಸಿ ಗಮನಕ್ಕೆ ತಂದಾಗ, `1997ರ ಜನವರಿ 8ರಂದು ಸರ್ಕಾರಕ್ಕೆ ಪತ್ರ ಬರೆದ ಆಯೋಗ ಈಗಾಗಲೇ ನೇಮಕಾತಿ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟಾಗಿದ್ದು ಈಗ ಅದನ್ನು ಬದಲಾಯಿಸಲು ಸಾಧ್ಯವಿಲ್ಲ' ಎಂದು ಹೇಳಿತು. ಇಷ್ಟೆಲ್ಲಾ ಆದ ಮೇಲೆ 1997ರ ಅಕ್ಟೋಬರ್ 30ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಜಯಶಂಕರ್ ಅವರಿಗೆ ನೇಮಕಾತಿ ನೀಡುವ ವಿಷಯ ಪ್ರಸ್ತಾಪವಾಗಿ, ಅವರಿಗೆ ಕೆಲಸ ನೀಡಬೇಕು ಎಂದು ಈ ಹಿಂದೆ ಸಚಿವ ಸಂಪುಟದಲ್ಲಿ ಕೈಗೊಂಡಿದ್ದ ನಿರ್ಣಯವನ್ನು ರದ್ದು ಮಾಡಲಾಯಿತು.

ಆದರೆ ಕತೆ ಇಲ್ಲಿಗೇ ಮುಗಿಯಲಿಲ್ಲ. 1999ರ ಏಪ್ರಿಲ್ 10ರಂದು ಮತ್ತೆ ಈ ವಿಷಯ ರಾಜ್ಯ ಸಚಿವ ಸಂಪುಟದ ಮುಂದೆ ಬಂತು. ಆಗ ವಿಜಯಶಂಕರ್ ಅವರಿಗೆ ನೇಮಕಾತಿ ನೀಡಲು ಸಂಪುಟ ನಿರ್ಣಯ ಕೈಗೊಂಡಿತು. ಇದಕ್ಕೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಕಾನೂನು ಕಾರ್ಯದರ್ಶಿ ಅವರ ಅಭಿಪ್ರಾಯವನ್ನು ಕೇಳಿತು.

ಆಗಿನ ಕಾನೂನು ಕಾರ್ಯದರ್ಶಿ ಅವರು, `ಸರ್ಕಾರ ವಿಜಯಶಂಕರ್ ಅವರಿಗೆ ಉದ್ಯೋಗ ನೀಡಲು ಬಯಸಿದ್ದರೆ ಕೆಪಿಎಸ್‌ಸಿ ಸಂಪರ್ಕಿಸದೆ ಹಾಗೆಯೇ ನೀಡಬಹುದು' ಎಂದು ಅಭಿಪ್ರಾಯಪಟ್ಟರು. ನಂತರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಅಡ್ವೋಕೇಟ್ ಜನರಲ್ ಮತ್ತು ಮುಖ್ಯ ಕಾರ್ಯದರ್ಶಿ ಅವರ ಅಭಿಪ್ರಾಯವನ್ನೂ ಕೇಳಿತು.

ಆಗಿನ ಮುಖ್ಯ ಕಾರ್ಯದರ್ಶಿ ಬಿ.ಕೆ.ಭಟ್ಟಾಚಾರ್ಯ ಅವರು `ವಿಜಯಶಂಕರ್ ಅವರಿಗೆ ಉದ್ಯೋಗ ನೀಡಲು ಒಪ್ಪಿಗೆ ಸೂಚಿಸಿದರೆ ಇದೇ ರೀತಿ ಹೆಚ್ಚುವರಿ ಉತ್ತರ ಪತ್ರಿಕೆಯ ಮೇಲೆ ನೋಂದಣಿ ಸಂಖ್ಯೆ ಬರೆದ ಎಲ್ಲರಿಗೂ ಕೆಲಸ ನೀಡಬೇಕಾಗುತ್ತದೆ. ಅವರಿಗೆ ಉದ್ಯೋಗ ನೀಡಲು ಸಾಧ್ಯವಿಲ್ಲ ಎಂದು ಈಗಾಗಲೇ ಸಚಿವ ಸಂಪುಟ ಒಮ್ಮೆ ನಿರ್ಧಾರ ಕೈಗೊಂಡಿದೆ. ಮತ್ತೆ ಅದೇ ವಿಷಯ ಪ್ರಸ್ತಾಪಿಸಿ ಅವರಿಗೆ ಉದ್ಯೋಗ ನೀಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಇಷ್ಟಾದರೂ 2000 ನವೆಂಬರ್ 20ರಂದು ನಡೆದ ಸಚಿವ ಸಂಪುಟದಲ್ಲಿ ಈ ವಿಷಯ ಮತ್ತೆ ಪ್ರಸ್ತಾಪವಾಯಿತು. ಆಗ ಸಚಿವ ಸಂಪುಟದ ನಿರ್ಣಯದಲ್ಲಿ `ಸುದೀರ್ಘ ಚರ್ಚೆಯ ನಂತರ ಕೆಎಎಸ್ ಗ್ರೂಪ್-ಎ (ಕಿರಿಯ ಶ್ರೇಣಿ) ಅಧಿಕಾರಿಗಳ ಕೊನೆಯ ತಂಡದಲ್ಲಿನ ಕಡೆಯ ಸ್ಥಾನವನ್ನು ನೀಡಿ ಬಿ.ಎಂ.ವಿಜಯಶಂಕರ್ ಅವರನ್ನು ಆಯ್ಕೆ ಮಾಡಲು ತೀರ್ಮಾನಿಸಲಾಯಿತು' ಎಂದು ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸಹಿ ಮಾಡಿದರು. ಅಲ್ಲಿಗೆ ವಿಜಯಶಂಕರ್ ಹೋರಾಟ ಮುಕ್ತಾಯ ವಾಗಿ ಸುಮಾರು 13 ವರ್ಷದ ನಂತರ ಅವರು ಉಪ ವಿಭಾಗಾಧಿಕಾರಿಯಾಗಿ ಆಯ್ಕೆಯಾದರು.

1987ರಲ್ಲಿ ತಪ್ಪು ಮಾಡಿದ ಅಭ್ಯರ್ಥಿಗೆ 2000ರಲ್ಲಿ ಕೆಲಸ ಸಿಕ್ಕಿತು. ಆದರೆ 1993ರಲ್ಲಿ ಇದೇ ರೀತಿ ಹೆಚ್ಚುವರಿ ಉತ್ತರ ಪತ್ರಿಕೆಯಲ್ಲಿ ನೋಂದಣಿ ಸಂಖ್ಯೆ ಬರೆದ ಶಿಗ್ಗಾವಿಯ ಷಣ್ಮುಖಪ್ಪ ಶಿಗ್ಲಿ ಸೇರಿದಂತೆ ಹಲವಾರು ಮಂದಿಗೆ ಈ ಭಾಗ್ಯ ದೊರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT