ಭಾನುವಾರ, ಜೂನ್ 20, 2021
24 °C

14 ಸಲ ಕಾಂಗ್ರೆಸ್‌ , ಒಂದೇ ಬಾರಿ ಜನತಾ

ಕೆ.ನರಸಿಂಹಮೂರ್ತಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: 1951ರಿಂದ ಇದುವರೆಗೆ ಲೋಕಸಭೆಗೆ ನಡೆದಿ­ರುವ 15 ಚುನಾವಣೆಗಳಲ್ಲಿ ಯಾವುದೇ ಪಕ್ಷ ಎಷ್ಟು ಬಾರಿ ಗೆಲ್ಲಬಹುದು? ಒಂದು ಬಾರಿ? ಎರಡು ಬಾರಿ? ಐದು ಬಾರಿ? ಹತ್ತು ಬಾರಿ? ಇದು ಊಹೆಗೂ ಮೀರಿದ ಲೆಕ್ಕಾಚಾರ. ಏಕೆಂದರೆ, ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಭರ್ತಿ 14 ಚುನಾವಣೆ­ಗಳಲ್ಲಿ ಗೆಲುವು ಸಾಧಿಸಿದೆ. ಐದು ದಶಕಕ್ಕೂ ಹೆಚ್ಚು ಕಾಲ ಮತದಾರರು ಕಾಂಗ್ರೆಸ್ಸನ್ನೇ ಆಯ್ಕೆ ಮಾಡಿದ್ದಾರೆ.ಹೀಗೆ, ಒಂದೇ ಪಕ್ಷವನ್ನೇ ಇಲ್ಲಿನ ಮತದಾರರು ನಿರಂತರ­ವಾಗಿ ಆಯ್ಕೆ ಮಾಡಿರುವುದು ವಿಶೇಷ. ಅಷ್ಟೇ ಅಲ್ಲ. ಅದೇ ಪಕ್ಷದ ಒಬ್ಬರೇ ಆರು ಚುನಾವಣೆಗಳಲ್ಲಿ ಸತತವಾಗಿ ಸ್ಪರ್ಧಿಸಿ ಗೆದ್ದು ಮೂರು ಬಾರಿ ಕೇಂದ್ರದಲ್ಲಿ ಸಚಿವರೂ ಆಗಿದ್ದಾರೆ. ಅವರೇ ಕೆ.ಎಚ್‌. ಮುನಿಯಪ್ಪ.1991ರಲ್ಲಿ ಚುನಾವಣೆಗೆ ಮೊದಲ ಬಾರಿಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಅಷ್ಟೇನೂ ಪ್ರಭಾವಶಾಲಿಯಾಗಿರದ ಮುನಿಯಪ್ಪ ನಂತರದ ಐದು (1996, 1998, 1999, 2004 ಮತ್ತು 2009) ಚುನಾವಣೆಗಳ ಹೊತ್ತಿಗೆ ಪ್ರಭಾವಿ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ. ಏಳನೇ ಬಾರಿಗೆ ಚುನಾವಣೆ ಕಣಕ್ಕೆ ಇಳಿದಿದ್ದಾರೆ.ದ್ವಿಸದಸ್ಯ ಕ್ಷೇತ್ರವಾಗಿತ್ತು..: 1951 ಮತ್ತು 57ರಲ್ಲಿ ನಡೆದ ಚುನಾವಣೆ­ಗಳಲ್ಲಿ ಕೋಲಾರ ದ್ವಿಸದಸ್ಯ ಕ್ಷೇತ್ರವಾಗಿತ್ತು. ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ ದೊಡ್ಡತಿಮ್ಮಯ್ಯ ಮತ್ತು ಎಂ.ವಿ.ಕೃಷ್ಣಪ್ಪ ಆಯ್ಕೆಯಾಗಿದ್ದರು. ಎರಡನೇ ಚುನಾವ­ಣೆ­ಯಲ್ಲಿ ಮತ್ತೆ ದೊಡ್ಡತಿಮ್ಮಯ್ಯ ಮತ್ತು ಕೆ.ಚಂಗಲ­ರಾಯರೆಡ್ಡಿ ಆಯ್ಕೆಯಾಗಿದ್ದರು. ಇವರೆಲ್ಲರೂ ಕಾಂಗ್ರೆಸ್ಸಿಗರು.1962ರಲ್ಲಿ ಕೋಲಾರವನ್ನು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಘೋಷಿಸಿದಾಗಲೂ ಕಾಂಗ್ರೆಸ್‌ನ ದೊಡ್ಡತಿಮ್ಮಯ್ಯ ಮೂರನೇ ಬಾರಿಗೆ ಆಯ್ಕೆಯಾಗಿದ್ದರು. ನಂತರ ನಡೆದ ನಾಲ್ಕು ಚುನಾವಣೆಗಳಲ್ಲೂ ಕಾಂಗ್ರೆಸ್‌ನ ಜಿ.ವೈ.ಕೃಷ್ಣನ್‌ ಗೆದ್ದರು. 1989ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ವೈ.ರಾಮಕೃಷ್ಣ, ಅದಕ್ಕೂ ಮುನ್ನ 1977ರ ಚುನಾವಣೆಯಲ್ಲಿ ಭಾರತೀಯ ಲೋಕದಳ ಪಕ್ಷದಿಂದ ಸ್ಪರ್ಧಿಸಿ ಕಾಂಗ್ರೆಸ್‌ ವಿರುದ್ಧವೇ ಸೋತಿದ್ದರು. ಅವರ ಬಳಿಕ 6 ಚುನಾವಣೆಗಳಲ್ಲಿ ಮುನಿಯಪ್ಪ ಗೆದ್ದಿದ್ದಾರೆ.ಪೈಪೋಟಿ: ಸ್ವಾತಂತ್ರ್ಯ ಹೋರಾಟ ಮತ್ತು ಮಹಾತ್ಮ ಗಾಂಧೀಜಿ ಅಲೆಯಲ್ಲಿ ತನ್ನ ಪ್ರಭಾವವನ್ನು ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಿ ವಿಸ್ತರಿಸಿ­ಕೊಂಡ ಕಾಂಗ್ರೆಸ್‌ಗೆ ಜನತಾ ಪಕ್ಷ, ಜನತಾದಳ, ಜೆಡಿಎಸ್‌, ಬಿಜೆಪಿ ಜೊತೆಗೆ ಸಿಪಿಎಂ ಮತ್ತು ಪಕ್ಷೇತರರೂ ಪ್ರಬಲ ಪೈಪೋಟಿಯನ್ನು ನೀಡಿರುವುದು ವಿಶೇಷ.1962ರಲ್ಲಿ ನಡೆದ ಮೂರನೇ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಜಿ.ನಾರಾಯಣಸ್ವಾಮಿ, 1967ರಲ್ಲಿ ಪಕ್ಷೇತರ ಅಭ್ಯರ್ಥಿ ತಿರುಮಲಪ್ಪ ಸಮೀಪ ಸ್ಪರ್ಧಿಗಳಾಗಿ ಪ್ರಬಲ ಪೈಪೋಟಿ ನೀಡಿದ್ದರು. 1971ರಲ್ಲಿ ಜಿ.ನಾರಾಯಣಸ್ವಾಮಿ ಸಿಪಿಎಂ­ನಿಂದ ಸ್ಪರ್ಧಿಸಿ ಮತ್ತೆ ಪೈಪೋಟಿ ನೀಡಿದ್ದರು. ಹಲವು ವರ್ಷ­ಗಳಿಂದ ಕ್ಷೇತ್ರದಲ್ಲಿ ಸಂಘಟನೆಯ ಬಲದ ಕೊರತೆಯನ್ನು ಎದುರಿಸು­ತ್ತಿದ್ದರೂ, ಕಳೆದ ಎರಡು ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬಿಜೆಪಿಯೇ ಸಮೀಪ ಸ್ಪರ್ಧಿಯಾಗಿದೆ.ತನ್ನದು ಬಲವಾದ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್‌ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಹೆಚ್ಚು ಸದಸ್ಯರ ಬಲವನ್ನು ಹೊಂದಿ­ದ್ದರೂ ಲೋಕಸಭಾ ಕ್ಷೇತ್ರದ ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿಗೆ ಸಮೀಪ ಸ್ಪರ್ಧೆಯನ್ನೂ ನೀಡಲು ಸಾಧ್ಯವಾಗಿಲ್ಲ. ಅದಕ್ಕಿರುವ ಒಂದೇ ಹೆಗ್ಗಳಿಕೆ ಎಂದರೆ, 1984­ರ ಚುನಾವಣೆಯಲ್ಲಿ ಜನತಾಪಕ್ಷದ ವಿ.ವೆಂಕಟೇಶ್‌ ಲೋಕ­ಸಭೆಗೆ ಆಯ್ಕೆಯಾಗಿದ್ದರು ಎಂಬುದು.ಜಿ.ಪಂ ಸ್ಥಾನಕ್ಕಷ್ಟೇ ತೃಪ್ತಿ: ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಜಿಲ್ಲಾ ಪಂಚಾಯತಿ ಸದಸ್ಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿರುವ­ವರೂ ಕ್ಷೇತ್ರದಲ್ಲಿದ್ದಾರೆ. ಈಗ ಸದಸ್ಯರಾಗಿರುವ ಜಿ.ಮಂಗಮ್ಮ ಮುನಿಸ್ವಾಮಿ ಮತ್ತು ಮಾಜಿ ಸದಸ್ಯ ಬಾಲಾಜಿ ಚೆನ್ನಯ್ಯ ಮಹಾಚುನಾವಣೆಯಲ್ಲಿ ಸ್ಪರ್ಧಿಸಿದ್ದವರು.1996 ಮತ್ತು 1998ರ ಚುನಾವಣೆಯಲ್ಲಿ ಜನತಾದಳ­ದಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ಟಿ.ಚೆನ್ನಯ್ಯ ಅವರ ಮಗ ಬಾಲಾಜಿ ಚೆನ್ನಯ್ಯ, 1999ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಜಿ.ಮಂಗಮ್ಮ ಮುನಿಯಪ್ಪಗೆ ಸಮೀಪ ಸ್ಪರ್ಧಿಯಾಗಿದ್ದರು. ನಂತರ ಈ ಇಬ್ಬರೂ ಜಿಲ್ಲಾ ಪಂಚಾಯತಿ ಚುನಾವಣೆಗಳಲ್ಲಿ ಸ್ಪರ್ಧಿಸಿ ಆಯ್ಕೆಯಾದರು.ಸತತ ಬರಗಾಲ, ಕುಡಿಯುವ ನೀರಿನ ಕೊರತೆ, ಬೆಳೆನಷ್ಟ –ಇವು ಕ್ಷೇತ್ರದಲ್ಲಿ ಯಾವತ್ತಿನ ಚಿತ್ರಗಳು. ಜಿಲ್ಲೆಯ ರಾಜ­ಕಾರಣದ ‘ಜೀವಜಲ’ವೂ ಇವೇ ಆಗಿವೆ. ಹಲವು ಚುನಾವಣೆ­ಗಳು ಬಂದರೂ, ಈ ಮೀಸಲು ಕ್ಷೇತ್ರದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಮಾತ್ರ ನಿರಂತ­ರ­ವಾಗಿ ನಡೆಯುತ್ತಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.