ಸೋಮವಾರ, ಜನವರಿ 20, 2020
20 °C

150 ಗ್ರಾಂ ಚಿನ್ನಾಭರಣ ಹಿಂದಿರುಗಿಸಿದ ಆಟೊ ಚಾಲಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ರೈಲು ನಿಲ್ದಾಣದಿಂದ ಚಿಕ್ಕಪೇಟೆಗೆ ಆಟೊ ಬಾಡಿಗೆ ದರ ₨. 30 ಹೆಚ್ಚಾಯಿತೆಂದು ಅವರು ಆ ಆಟೊ ನಿರಾಕರಿಸಿದ್ದರು. ಬಾಡಿಗೆ ಬೇಡವೆಂದು ಬಿಟ್ಟ ಆಟೊ ಚಾಲಕನೇ ಅವರ ಪಾಲಿಗೀಗ ‘ದೇವರ’ ಸಮ!–ಇದು ನಗರದ ಆಟೊ ಚಾಲಕನ ಮಾನವೀಯತೆಗೆ ಸಾಕ್ಷಿಯಾದ ಘಟನೆ­ಯೂ ಹೌದು. ಆಟೊ ನಿರಾಕರಿಸುವ ಮುನ್ನ ಆಟೊ ಒಳಗೆ ಇಟ್ಟಿದ್ದ ಬ್ಯಾಗ್‌ಅನ್ನು ದಂಪತಿ ಮರೆತು ಹೋಗಿದ್ದರು. ಆ ಬ್ಯಾಗ್‌ನಲ್ಲಿ ಮಗಳ ಮದುವೆಗಾಗಿ ಖರೀದಿಸಿದ್ದ 150 ಗ್ರಾಂ ಚಿನ್ನಾಭರಣಗಳಿದ್ದವು.ಮಗಳ ಮದುವೆ ನಿಂತೇ ಹೋಗಲಿದೆ­ಯೆಂಬ ಭಯದಲ್ಲಿದ್ದ ದಂಪತಿ ಕಣ್ಣಲ್ಲೀಗ ನಗು ಅರಳಿದೆ. ಪ್ರಾಮಾಣಿಕ ಆಟೊ ಚಾಲಕ ದೇವಣ್ಣ ಅಷ್ಟೂ  ಚಿನ್ನಾಭರಣವನ್ನು ಪೊಲೀಸರ ಮೂಲಕ ತಲುಪಿಸಿ ಪ್ರಾಮಾಣಿಕತೆ ಮರೆದವರು.ಘಟನೆ ಹಿನ್ನೆಲೆ: ಕುಂದಾಪುರ­ದವರಾದ ನಿವೃತ್ತ ಶಿಕ್ಷಕ ಚಂದ್ರಶೇಖರ್‌ಆರಾಧ್ಯ ಮತ್ತು ಶಾಮಲಾ ಮಂಗಳವಾರ ಬೆಂಗಳೂರಿನಲ್ಲಿ ಮಗಳ ಮದುವೆಗೆ ಆಭರಣ ಖರೀದಿಸಿ ಅಲ್ಲಿಂದ ರೈಲಿನ ಮೂಲಕ ನಗರದ ರೈಲು ನಿಲ್ದಾಣದಲ್ಲಿ ಬಂದಿಳಿದರು.ಚಿಕ್ಕಪೇಟೆಯ ಸಂಬಂಧಿಕರ ಮನೆಗೆ ಹೋಗಲು ದೇವಣ್ಣ ಅವರ ಆಟೊ ಬಾಡಿಗೆ  ಕೇಳಿದರು. ಆಟೊ ಒಳಗೆ ಬ್ಯಾಗ್‌ ಸಮೇತ ಕುಳಿತವರು ರೂ. 30 ಬಾಡಿಗೆ ಕೇಳಿದ್ದಕ್ಕೆ ಹೆಚ್ಚಾಯಿತೆಂದು ಹೇಳಿ ಬೇರೆ ಆಟೊ ಹಿಡಿದು ತೆರಳಿದ್ದರು. ಆದರೆ ಮನೆಯ ಬಳಿ ಹೋದಾಗ ಬ್ಯಾಗ್‌ ಇಲ್ಲದಿರುವುದು ಕಂಡು ದಿಗಿಲಾದರು.ಇತ್ತ ಆಟೊದಲ್ಲೇ ಬ್ಯಾಗ್ ಬಿಟ್ಟವರಿಗಾಗಿ ದೇವಣ್ಣ ಕೂಡ ಹುಡು­ಕಾಟ ನಡೆಸಿದರು. ರೈಲು ನಿಲ್ದಾಣದ ಬಳಿಯೇ ಕಾದು ನಿಂತರು. ಆದರೆ ಎರಡೂ ಕಡೆಯವರಿಗೂ ಮುಖ ಪರಿಚಯ ಇಲ್ಲದ ಕಾರಣ ಹುಡುಕಾಟ ಕಷ್ಟಕರವಾಯಿತು.ಬುಧವಾರ ಸಂಜೆ ಹೊರಪೇಟೆಯ ಪರಿಚಯದ ಆಟೊ ಚಾಲಕ ಚಂದ್ರು ಎಂಬುವರು ರೈಲು ನಿಲ್ದಾಣದಲ್ಲಿ ಚಿಂತಾಕ್ರಾಂತರಾಗಿ ಕುಳಿತಿದ್ದನ್ನು ಕಂಡ ದೇವಣ್ಣ ಹೀಗೇಕೆ ಚಿಂತೆಯಲ್ಲೀದ್ದೀರಿ ಎಂದು ಪ್ರಶ್ನಿಸಿದ್ದಾರೆ. ಸಂಬಂಧಿಕರಾದ ಚಂದ್ರಶೇಖರ ಆರಾಧ್ಯರು ಚಿನ್ನಾಭರಣ ಕಳೆದುಕೊಂಡ ಕಥೆ ಹೇಳಿದರು. ಆಗ ದೇವಣ್ಣ ಆಟೊದಲ್ಲೇ ಇಟ್ಟುಕೊಂಡಿದ್ದ ಬ್ಯಾಗ್‌ ತೋರಿಸಿದಾಗ ಇಬ್ಬರ ಸಂತಸ ಮೇರೆಮೀರಿತ್ತು.ಗುರುವಾರ ಆಟೊ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ವಿ.ಪ್ರತಾಪ್ ಮಾರ್ಗದರ್ಶನದಂತೆ ತಿಲಕ್‌ಪಾರ್ಕ್‌ ಪೊಲೀಸ್ ಠಾಣೆ ಪಿ.ಎಸ್.ಐ ರಾಧಾಕೃಷ್ಣ ಸಮ್ಮುಖದಲ್ಲಿ ಸಂಬಂಧಪಟ್ಟ ವಾರಸುದಾರರಿಗೆ ಒಡವೆಗಳಿದ್ದ ಬ್ಯಾಗ್‌ ಹಸ್ತಾಂತರಿಸಲಾಯಿತು.

ಪ್ರತಿಕ್ರಿಯಿಸಿ (+)