ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15ರಿಂದ ದಕ್ಷಿಣ ವಲಯ ಬ್ಯಾಡ್ಮಿಂಟನ್ ಪಂದ್ಯಾವಳಿ

Last Updated 7 ಡಿಸೆಂಬರ್ 2013, 8:24 IST
ಅಕ್ಷರ ಗಾತ್ರ

ಉಡುಪಿ: ದಕ್ಷಿಣ ವಲಯ ವಿಶ್ವವಿದ್ಯಾಲಯಗಳ ಮಹಿಳಾ ಮತ್ತು ಪುರುಷರ ಬ್ಯಾಡ್ಮಿಂಟನ್ ಪಂದ್ಯಾವಳಿ ಇದೇ 15ರಿಂದ 19ರ ವರೆಗೆ ಮಣಿಪಾಲ ವಿಶ್ವವಿದ್ಯಾಲಯದ ಕ್ರೀಡಾ ಸಮುಚ್ಚಯ ‘ಮರೇನ’ ಮತ್ತು ಮಣಿಪಾಲ ತಾಂತ್ರಿಕ ಸಂಸ್ಥೆಯ ಬ್ಯಾಡ್ಮಿಂಟನ್‌ ಅಂಕಣದಲ್ಲಿ ನಡೆಯಲಿದೆ.

‘ಮಣಿಪಾಲ ವಿಶ್ವವಿದ್ಯಾಲಯ ಈ ಬಾರಿಯ ದಕ್ಷಿಣ ವಲಯ ಬ್ಯಾಡ್ಮಿಂಟನ್‌ ಪಂದ್ಯಾವಳಿ­ಯನ್ನು ಆಯೋಜಿಸುತ್ತಿದೆ. ಪುರುಷರ ವಿಭಾಗ­ದಲ್ಲಿ 70 ಮತ್ತು ಮಹಿಳಾ ವಿಭಾಗದಲ್ಲಿ 67 ವಿಶ್ವವಿದ್ಯಾಲಯಗಳ ತಂಡಗಳು ಈ ಪಂದ್ಯಾ­ವಳಿಯಲ್ಲಿ ಭಾಗವಹಿಸುತ್ತಿವೆ. 700 ಕ್ರೀಡಾಪಟು­ಗಳು ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಮಣಿಪಾಲ ವಿಶ್ವವಿದ್ಯಾಲಯದ ಸಹ ಕುಲಾಧಿ­ಪತಿ ಡಾ. ಎಚ್‌.ಎಸ್‌. ಬಲ್ಲಾಳ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಒಟ್ಟು ಐದು ಅಂಕಣಗಳಲ್ಲಿ ಪಂದ್ಯಾವಳಿ ನಡೆಯಲಿದೆ. ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1ರ ವರೆಗೆ ಮೊದಲ ಅವಧಿಯಲ್ಲಿ ಮತ್ತು ಮಧ್ಯಾಹ್ನ 2ರಿಂದ ರಾತ್ರಿ 11 ಗಂಟೆ ವರೆಗೆ ಎರಡನೇ ಅವಧಿಯಲ್ಲಿ ಪಂದ್ಯಗಳು ನಡೆಯಲಿವೆ. 135 ಪಂದ್ಯಗಳು ನಡೆಯಲಿದ್ದು ನುರಿತ ತೀರ್ಪುಗಾರರು ಕಾರ್ಯ ನಿರ್ವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಭಾರತೀಯ ಬ್ಯಾಡ್ಮಿಂಟನ್‌ ಅಸೋಸಿ­ಯೇಶ­ನ್‌­ನ ಅಧ್ಯಕ್ಷ ಡಾ. ಅಖಿಲೇಶ್‌ ದಾಸ್‌ ಗುಪ್ತ ಅವರು ಮಣಿಪಾಲ ವಿ.ವಿಯ ಕ್ರೀಡಾ ಸಮುಚ್ಚಯ ‘ಮರೇನ’ದಲ್ಲಿ ಡಿಸೆಂಬರ್‌ 15­ರಂದು ಸಂಜೆ 5 ಗಂಟೆಗೆ ಪಂದ್ಯಾವಳಿಯನ್ನು ಉದ್ಘಾಟನೆ ಮಾಡುವರು. ಪ್ರಧಾನ ಕಾರ್ಯ­ದರ್ಶಿ ಡಾ. ವಿಜಯ್‌ ಸಿನ್ಹಾ, ವಿ.ವಿಯ ಕುಲಪತಿ ಡಾ. ರಾಮದಾಸ್‌ ಪೈ ಮತ್ತಿತರರು ಉಪಸ್ಥಿತ­ರಿರುವರು ಎಂದರು.

ಕಳೆದ ಬಾರಿ ಸೆಮಿಫೈನಲ್‌ ವರೆಗೆ ತಲುಪಿದ ನಾಲ್ಕು ತಂಡಗಳಲ್ಲಿ ಮೂರು ವಿಶ್ವವಿದ್ಯಾಲಯ­ಗಳ ತಂಡಗಳು ನೂತನವಾಗಿ ರಚಿಸಿರುವ ಕೇಂದ್ರ ವಲಯಕ್ಕೆ ಸೇರ್ಪಡೆಯಾಗಿವೆ. ಆದ್ದರಿಂದ ಕೊಚ್ಚಿ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯ ತಂಡ ಮಾತ್ರ ಕ್ವಾರ್ಟರ್‌ ಫೈನಲ್‌ನಿಂದ ಪಂದ್ಯ ಆರಂಭಿಸಲಿವೆ. ಸೇಲಂನ ಪೆರಿಯಾರ್‌ ವಿ.ವಿ, ಅನಂತಪುರದ ಶ್ರೀಕೃಷ್ಣದೇವರಾಯ ವಿ.ವಿ, ಬೆಳಗಾವಿಯ ರಾಣಿ ಚನ್ನಮ್ಮ ವಿ.ವಿ, ತಿರುನಲ್‌ವೇಲಿಯ ಎಂ.ಎಸ್. ವಿ.ವಿ, ವೆಲ್ಲೂರಿನ ವಿಐಟಿ ವಿ.ವಿ ತಂಡಗಳು ಎರಡನೇ ರೌಂಡ್‌ನಿಂದ ಪಂದ್ಯವನ್ನು ಆಡಲಿವೆ. ಉಳಿದ ಎಲ್ಲ ತಂಡಗಳೂ ಮೊದಲ ರೌಂಡ್‌ನಿಂದ ಆಡಲಿವೆ ಎಂದರು.

ಮಣಿಪಾಲ ಮತ್ತು ಮಂಗಳೂರು ವಿ.ವಿಯ ತಂಡಗಳೂ ಭಾಗವಹಿಸಲಿವೆ. ಸಿದ್ದಾರ್ಥ ಫುಕಾನ್‌, ಪ್ರಣವ್‌ ಭಾಗ್ವಾನಾನಿ, ಗಣಪತಿ, ಸಾರ್ಥಕ್‌, ವಿನೀತ್‌ ಮತ್ತು ರವಿ ಅವರು ಮಣಿಪಾಲ ವಿ.ವಿಯ ಪುರುಷರ ತಂಡವನ್ನು ಮತ್ತು ಸಾನಿಕಾ ಕಪಾಲೆ, ರಿಷಿಕಾ, ರಕ್ಷಾ ಪೈ, ಸಂಕಲ್ಪ ಅವರು ಮಹಿಳಾ ತಂಡವನ್ನು ಪ್ರತಿನಿಧಿಸ­ಲಿದ್ದಾರೆ. ಆಗಮಿಸುತ್ತಿರುವ ಎಲ್ಲ ಕ್ರೀಡಾಪಟು­ಗಳಿಗೂ ಉಳಿದುಕೊಳ್ಳಲು ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ಬಲ್ಲಾಳ್‌ ಹೇಳಿದರು.

ಮಣಿಪಾಲ ವಿ.ವಿ.ಯ ಉಪ ಕುಲಪತಿ ಡಾ.ಕೆ.ರಾಮನಾರಾಯಣ್‌, ರಿಜಿಸ್ಟ್ರಾರ್‌ ಡಾ. ಜಿ.ಕೆ. ಪ್ರಭು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT