ಬುಧವಾರ, ಮೇ 12, 2021
24 °C
ದ.ಕ: ವೈಜ್ಞಾನಿಕ ತ್ಯಾಜ್ಯ ವಿಲೇವಾರಿ- 172 ಕಡೆ ಲ್ಯಾಂಡ್‌ಫಿಲ್

16 ಗ್ರಾಮಗಳ ಸಾವಯವ ಗೊಬ್ಬರ ಘಟಕ ಸಿದ್ಧ

ಪ್ರಜಾವಾಣಿ ವಾರ್ತೆ / ಪ್ರವೀಣ್‌ಕುಮಾರ್ ಪಿ.ವಿ. Updated:

ಅಕ್ಷರ ಗಾತ್ರ : | |

ಮಂಗಳೂರು: ನಿರ್ಮಲ ಗ್ರಾಮ ಪುರಸ್ಕಾರ ಪಡೆದ ದಕ್ಷಿಣ ಕನ್ನಡ ಜಿಲ್ಲೆ ಗ್ರಾಮೀಣ ಪ್ರದೇಶದಲ್ಲೂ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗಾಗಿ ಮಹತ್ವಾಕಾಂಕ್ಷಿ ಯೋಜನೆ ಹಮ್ಮಿಕೊಂಡಿದೆ. ಲಾಯಿಲ ಹಾಗೂ ಕಡಬ ಗ್ರಾಮ ಪಂಚಾಯಿತಿಯಲ್ಲಿ ಘನ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಸುವಲ್ಲಿ ಯಶಸ್ಸು ಕಂಡಿರುವ ಜಿಲ್ಲಾ ಪಂಚಾಯಿತಿ ಇದೇ ಮಾದರಿಯಲ್ಲಿ ಜಿಲ್ಲೆಯ 30 ಗ್ರಾಮಗಳಲ್ಲಿ ಸಾವಯವ ಗೊಬ್ಬರ ಘಟಕಗಳನ್ನು ನಿರ್ಮಿಸಲು ಮುಂದಾಗಿದ್ದು, ಈ ಪೈಕಿ 16 ಘಟಕಗಳು ಸಿದ್ಧವಾಗಿವೆ.`ಸಂಪೂರ್ಣ ಸ್ವಚ್ಛತಾ ಅಭಿಯಾನದಡಿ ಲಾಯಿಲ ಗ್ರಾಮದಲ್ಲಿ ಹಾಗೂ ಕಡಬ ಗ್ರಾಮದಲ್ಲಿ ಪ್ರಾಯೋಗಿಕವಾಗಿ ನಿರ್ಮಿಸಿದ ಘನತ್ಯಾಜ್ಯದಿಂದ ಸಾವಯವ ಗೊಬ್ಬರ ನಿರ್ಮಾಣ ಘಟಕ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಜಿಲ್ಲಾ ಪಂಚಾಯಿತಿಗೆ ಹೊಸ ಹುರುಪು ತಂದಿದೆ. ಕಡಬ ಘಟಕದಲ್ಲಿ ನಾವು `ಕಡಬ ಕದಂಬ' ಹೆಸರಿನಲ್ಲಿ ಪ್ರತಿ ಕೆ.ಜಿ.ಗೆ 8 ರೂಪಾಯಿಯಂತೆ ಸಾವಯವ ಗೊಬ್ಬರವನ್ನು ಮಾರಾಟ ಮಾಡುತ್ತಿದ್ದೇವೆ. ಗೊಬ್ಬರ ಮಾರಾಟದಿಂದ ಸಾವಯವ ಗೊಬ್ಬರ ತಯಾರಿ ಘಟಕದ ನಿರ್ವಹಣಾ ವೆಚ್ಚವೂ ಕ್ರೋಡೀಕರಣವಾಗುತ್ತಿದೆ. ಲಾಯಿಲದಲ್ಲಿ `ಲಾಯಿಲ ಗೋಲ್ಡ್' ಹೆಸರಿನಲ್ಲಿ ಸಾವಯವ ಗೊಬ್ಬರವನ್ನು ಮಾರುತ್ತಿದ್ದೇವೆ. ಇದೇ ಮಾದರಿಯಲ್ಲಿ ಜಿಲ್ಲೆಯ 30 ಗ್ರಾಮಗಳಲ್ಲಿ ಸಾವಯವ ಗೊಬ್ಬರ ಘಟಕ ನಿರ್ಮಿಸಲಾಗುತ್ತಿದೆ' ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ `ಪ್ರಜಾವಾಣಿ'ಗೆ ತಿಳಿಸಿದರು.`ಲಾಯಿಲ, ಕಡಬ ಅಲ್ಲದೇ ಮಂಗಳೂರು ತಾಲ್ಲೂಕಿನ ಮೆನ್ನಬೆಟ್ಟು ಮತ್ತು ಕಿನ್ನಿಗೋಳಿ, ಬಂಟ್ವಾಳ ತಾಲ್ಲೂಕಿನ ಕುರ್ನಾಡು ಮತ್ತು ಗೋಳ್ತಮಜಲು, ವಿಟ್ಲ, ಸಂಗಬೆಟ್ಟು, ಕುಕ್ಕಿಪಾಡಿ, ಸುಳ್ಯ ತಾಲ್ಲೂಕಿನ ಸುಬ್ರಹ್ಮಣ್ಯ, ಬೆಳ್ತಂಗಡಿ ತಾಲ್ಲೂಕಿನ ಕುವೆಟ್ಟು, ಅಳದಂಗಡಿ, ತಣ್ಣೀರುಪಂಥ, ಉಜಿರೆ ಹಾಗೂ ಕೊಕ್ಕಡ ಸಹಿತ ಒಟ್ಟು 16 ಗ್ರಾಮಗಳಲ್ಲಿ ಈ ಯೋಜನೆಯ ಕಾಮಗಾರಿಗಳು ಪೂರ್ಣಗೊಂಡಿದ್ದು, ಅನುಷ್ಠಾನಕ್ಕೆ ಸಿದ್ಧವಾಗಿವೆ. ಮಂಗಳೂರು ತಾಲ್ಲೂಕಿನ ಕೆಮ್ರಾಲ್, ಗಂಜಿಮಠ, ಸುಳ್ಯ ತಾಲ್ಲೂಕಿನ ಬೆಳ್ಳಾರೆ, ಬಂಟ್ವಾಳ ತಾಲ್ಲೂಕಿನ ಮಂಚಿ, ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ ಹಾಗೂ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳದಲ್ಲಿ ಸಾವಯವ ಗೊಬ್ಬರ ತಯಾರಿ ಘಟಕ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇನ್ನೂ ಏಳು ಗ್ರಾಮಗಳ ಕ್ರಿಯಾಯೋಜನೆ ಸಿದ್ಧವಾಗಿದ್ದು, ಇನ್ನಷ್ಟೇ ಅನುಷ್ಠಾನಗೊಳ್ಳಬೇಕಿದೆ' ಎಂದು ಅವರು ಹೇಳಿದರು.`ಹೆಚ್ಚು ಘನತ್ಯಾಜ್ಯ ಉತ್ಪಾದನೆ ಆಗುವ ಕಡೆಗಳಲ್ಲಿ ಮಾತ್ರ ಸಾವಯವ ಗೊಬ್ಬರ ಘಟಕಗಳನ್ನು ನಿರ್ಮಿಸಲಾಗುತ್ತಿದೆ. ಘನತ್ಯಾಜ್ಯದ ಪ್ರಮಾಣ ಕಡಿಮೆ ಇದ್ದರೆ ಸಾವಯವ ಗೊಬ್ಬರ ಉತ್ಪಾದನೆ ಘಟಕದ ನಿರ್ವಹಣೆಗೆ ಉತ್ಪತ್ತಿ ಸಾಲದು. ಹಾಗಾಗಿ ತ್ಯಾಜ್ಯ ಪ್ರಮಾಣ ಕಡಿಮೆ ಇರುವಲ್ಲಿ ಲ್ಯಾಂಡ್‌ಫಿಲ್‌ಗಳನ್ನು ನಿರ್ಮಿಸಲಾಗುತ್ತಿದೆ. ಜಿಲ್ಲೆಯ 203 ಗ್ರಾಮ ಪಂಚಾಯಿತಿಗಳ ಪೈಕಿ 172 ಕಡೆ ಲ್ಯಾಂಡ್ ಫಿಲ್ ನಿರ್ಮಿಸಲಾಗುವುದು. ಜಿಲ್ಲೆಯಲ್ಲಿ ತ್ಯಾಜ್ಯ ವಿಲೇವಾರಿ ಸಂಬಂಧ ಒಟ್ಟು 137 ಗ್ರಾಮ ಪಂಚಾಯಿತಿಗಳಲ್ಲಿ ಕ್ರಿಯಾಯೋಜನೆ ರೂಪಿಸಿದ್ದೇವೆ. ಈ ಪೈಕಿ ಲ್ಯಾಂಡ್ ಫಿಲ್ ನಿರ್ಮಾಣ ಕಾರ್ಯ 22 ಗ್ರಾಮಗಳಲ್ಲಿ ಪೂರ್ಣಗೊಂಡಿದ್ದು, 36 ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ' ಎಂದು ಅವರು ತಿಳಿಸಿದರು.`ನಿರ್ಮಲ ಗ್ರಾಮ ಪುರಸ್ಕಾರದ ಹಣ, ಪಂಚಾಯಿತಿಯ ಅನುದಾನ, ಸುವರ್ಣ ಗ್ರಾಮದ ಅನುದಾನ, ಜಿ.ಪಂ. ಅನುದಾನ ಸಹಿತ ಜಿಲ್ಲೆಯಲ್ಲಿ ಒಟ್ಟು 7.93ಕೋಟಿ ರೂಪಾಯಿಯನ್ನು ಗ್ರಾಮೀಣ ಸ್ವಚ್ಛತೆಗಾಗಿ ವಿನಿಯೋಗಿಸಲಾಗುತ್ತಿದೆ. ಸಂಪೂರ್ಣ ಸ್ವಚ್ಛತಾ ಅಭಿಯಾನದ ಯಶಸ್ಸಿಗೆ ಆಯಾ ಗ್ರಾಮದ ಜನರ ಪಾಲ್ಗೊಳ್ಳುವಿಕೆಯೂ ಅಗತ್ಯ. ಸ್ಥಳೀಯರು ಕೈಜೋಡಿಸಿದರೆ ಗ್ರಾಮಗಳನ್ನು ಸ್ವಚ್ಛವಾಗಿಡಲು ಸಾಧ್ಯ. ಗ್ರಾಮ ಪಂಚಾಯಿತಿಗಳೂ ಈ ನಿಟ್ಟಿನಲ್ಲಿ ಜವಾಬ್ದಾರಿ ನಿಭಾಯಿಸಬೇಕು' ಎನ್ನುತ್ತಾರೆ ವಿಜಯಪ್ರಕಾಶ್.ಜಿಲ್ಲೆಯ ಪ್ಲಾಸ್ಟಿಕ್ ಮರುಬಳಕೆ

`ಜಿಲ್ಲೆಯಲ್ಲಿ ಲ್ಯಾಂಡ್‌ಫಿಲ್‌ನಲ್ಲಿ ಜೈವಿಕವಾಗಿ ವಿಘಟನೆ ಆಗುವ ಕಸವನ್ನು ಮಾತ್ರ ವಿಲೇವಾರಿ ಮಾಡಲಾಗುತ್ತದೆ. ಪ್ಲಾಸ್ಟಿಕ್, ಗಾಜಿನಂತಹ ಜೈವಿಕ ವಿಘಟನೆ ಆಗದ ಕಸದ ವಿಲೇವಾರಿಗೆ ಪ್ರತ್ಯೇಕ ವ್ಯವಸ್ಥೆ ಇದೆ. ಜಿಲ್ಲೆಯ 130 ಗ್ರಾ.ಪಂ.ಗಳಲ್ಲಿ 198 ಕಡೆ ಜೈವಿಕ ವಿಘಟನೆಯಾದ ಕಸ ಸಂಗ್ರಹಿಸುವ ಘಟಕಗಳಿವೆ. ಇನ್ನೂ 150 ಕಡೆ ಇಂತಹ ಘಟಕಗಳನ್ನು ನಿರ್ಮಿಸಲಾಗುತ್ತಿದೆ.ಜಿಲ್ಲೆಯಲ್ಲಿ ಸಂಗ್ರಹವಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಮೈಸೂರು ಮೂಲದ ಪ್ಲಾಸ್ಟಿಕ್ ಪುನರ್ಬಳಕೆ ಸಂಸ್ಥೆಯೊಂದು ಸ್ವೀಕರಿಸುತ್ತದೆ. ನಮ್ಮಲ್ಲಿ ಮನೆ ಮನೆಯಲ್ಲಿ ಪ್ಲಾಸ್ಟಿಕ್ ಕಸ ಬೇರ್ಪಡಿಸುವ ಪ್ರಕ್ರಿಯೆ ಸಮರ್ಪಕವಾಗಿ ನಡೆದರೆ, ಪ್ರತಿ ಕೆ.ಜಿ.ಗೆ 4 ರೂಪಾಯಿಯಂತೆ ಪ್ಲಾಸ್ಟಿಕ್ ತ್ಯಾಜ್ಯ ಖರೀದಿಸಲು ಸಂಸ್ಥೆ ಸಿದ್ಧವಿದೆ' ಎಂದು ಜಿ.ಪಂ. ಅಧಿಕಾರಿಯೊಬ್ಬರು ತಿಳಿಸಿದರು.ಆರೇ ವಾರದಲ್ಲಿ ಕೊಳೆಯುತ್ತದೆ ಕಸ

`ಸಾವಯವ ಗೊಬ್ಬರ ಘಟಕಗಳಲ್ಲಿ ತ್ಯಾಜ್ಯ ಬೇಗನೆ ಕೊಳೆಯುವಂತಾಗಲು ಸಾವಯವ ದ್ರಾವಣವನ್ನು (ಆರ್ಗ್ಯಾನಿಕ್ ಸೊಲ್ಯೂಷನ್) ಬಳಸಲಾಗುತ್ತದೆ. ಈ ದ್ರಾವಣವನ್ನು ನೀರಿನಲ್ಲಿ ಕರಗಿಸಿ ಬಳಸಿದಾಗ ಅದರಲ್ಲಿರುವ ಬ್ಯಾಕ್ಟೀರಿಯಾಗಳು ಕಸವನ್ನು ಕೊಳೆಯುವ ಪ್ರಕ್ರಿಯೆಯ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತವೆ. ಅಲ್ಲದೇ ದುರ್ವಾಸನೆ ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ಅವು ನಾಶಪಡಿಸುತ್ತವೆ. ಆರು ತಿಂಗಳಲ್ಲಿ ಕೊಳೆಯುವ ಕಸ ಕೇವಲ ಆರೇ ವಾರದಲ್ಲಿ ಸಂಪೂರ್ಣ ಕೊಳೆಯುತ್ತದೆ.ದ್ರಾವಣ ರೂಪದ ಬದಲು ಈಗ ಬ್ಯಾಕ್ಟೀರಿಯಾದ ಹುಡಿಯನ್ನು ಬಳಸಲಾಗುತ್ತಿದೆ. ದ್ರಾವಣ ಆರು ತಿಂಗಳವರೆಗೆ ಮಾತ್ರ ಸಂಗ್ರಹಿಸಿಡಲು ಸಾಧ್ಯವಾಗುತ್ತಿತ್ತು. ಹುಡಿಯನ್ನು ಮೂರು ವರ್ಷ ಕಾಲ ಸಂಗ್ರಹಿಸಿಡಬಹುದು. ಹುಡಿಯನ್ನು ಬಳಸಿ ದ್ರಾವಣವನ್ನು ತಯಾರಿಸಬಹುದು' ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.