ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16ಕ್ಕೆ ರೈತರ ಹೆದ್ದಾರಿ ತಡೆ

Last Updated 11 ಡಿಸೆಂಬರ್ 2013, 8:55 IST
ಅಕ್ಷರ ಗಾತ್ರ

ಕೋಲಾರ: ರೈತರು ಮತ್ತು ಕೃಷಿ ಕೂಲಿಕಾರರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಜಿಲ್ಲೆಯಾದ್ಯಂತ ಡಿ.16ರಂದು ಹೆದ್ದಾರಿ ತಡೆ ಚಳವಳಿ ನಡೆಸಲಾಗು­ವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಸಿ.­ಬೈಯ್ಯಾರೆಡ್ಡಿ ತಿಳಿಸಿದರು.

ನಗರದಲ್ಲಿರುವ ಸಂಘದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು ಅಂದು ರಾಜ್ಯದಾದ್ಯಂತ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಮೂಲಕ ಚಳವಳಿ ನಡೆಸಲಿದೆ ಎಂದರು. ಬಗರ್ ಹುಕುಂ ಸಾಗುವಳಿದಾರರಿಗೆ, ನಿವೇಶನ ರಹಿತರಿಗೆ ಮನೆ ಹಂಚಿಕೆ, ಉದ್ಯೋಗ ಖಾತರಿ ಯೋಜನೆ ಸಮರ್ಪಕ ಜಾರಿ, ಬ್ಯಾಂಕ್‌ಗಳಲ್ಲಿ ಕೃಷಿ ಸಾಲ ನೀಡಿಕೆ, ಕಾಲುಬಾಯಿ ಜ್ವರ ರೋಗಕ್ಕೆ ಸಾವನ್ನಪ್ಪಿದ ಜಾನುವಾರು  ಮಾಲೀಕರಿಗೆ ಶೀಘ್ರ ಪರಿಹಾರ ವಿತರಣೆ ಹಾಗೂ ಗ್ರಾಮೀಣ ಭಾಗದ ಸಾರಿಗೆ ವ್ಯವಸ್ಥೆ ಉತ್ತಮ ಪಡಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಚಳವಳಿಯಿಂದ ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ತೊಂದರೆಯಾದರೂ ಹೋರಾಟ ಅನಿವಾರ್ಯವಾಗಿರುವುದರಿಂದ ಎಲ್ಲರೂ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು. ಕೃಷಿಯನ್ನು ಅವಲಂಬಿಸಿ ಸುಮಾರು 20 ಲಕ್ಷ ಬಡ ಕುಟುಂಬಗಳು ಅನುಭವಿ­ಸುತ್ತಿರುವ ಜಮೀನು ಸಕ್ರಮಗೊಳಿಸಲು ಅನೇಕ ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ, ಮುಖ್ಯಮಂತ್ರಿಗಳು ಈ ಕುರಿತು ಸಭೆ ಕರೆದು ಚರ್ಚಿಸು­ವುದಾಗಿ ನೀಡಿದ ಭರವಸೆ ಈಡೇರಿಸಿಲ್ಲ. ಕೂಡಲೇ ಬಗರ್ ಹುಕುಂ ಸಾಗುವಳಿ ಸಕ್ರಮ ಮತ್ತು ಮನೆ ನಿವೇಶನ ಸಮಸ್ಯೆ ಇತ್ಯರ್ಥ ಪಡಿಸಬೇಕು ಎಂದು ಆಗ್ರಹಿಸಿ­ದರು.

ದೇಶದಲ್ಲಿ ಸುಮಾರು 9 ಲಕ್ಷ ಕೋಟಿ ರೂಪಾಯಿಯಷ್ಟು ಕೃಷಿ ಸಾಲವನ್ನು ಶೇ 6ರ ಬಡ್ಡಿದರದಲ್ಲಿ ರೈತರಿಗೆ ಮತ್ತು ಕೃಷಿ ಕೂಲಿಕಾರರಿಗೆ ನೀಡಬೇಕೆಂದು ಕೇಂದ್ರ ಸರ್ಕಾರದ ನಿರ್ದೇಶನವಿದ್ದರೂ  ಜಾರಿಗೆ ತರುವಲ್ಲಿ ಜಿಲ್ಲೆಯ ಬಹುತೇಕ ಬ್ಯಾಂಕ್‌ ಗಳು ವಿಫಲವಾಗುತ್ತಿವೆ ಎಂದು ಆರೋಪಿಸಿದರು.

ಬಂಗಾರಪೇಟೆ ಸೇರಿದಂತೆ ವಿವಿಧ ಕಡೆಗಳಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಸಾರ್ವಜನಿಕರಿಗೆ ಸಾರಿಗೆ ಸೌಲಭ್ಯಗಳಿಲ್ಲದೆ ಅವ್ಯವಸ್ಥೆಗಳಾಗಿವೆ. ಈವರೆಗೆ ಜಿಲ್ಲಾ ಸಾರಿಗೆ ಅಧಿಕಾರಿಗಳಿಗೆ ಅನೇಕ ಮನವಿ ಪತ್ರಗಳನ್ನು ಸಲ್ಲಿಸಿದ್ದರೂ ಪರಿಹರಿಸಿಲ್ಲ. ಕೂಡಲೇ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು.

ಕಾಲುಬಾಯಿ ರೋಗದಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಜಾನುವಾರು ಸಾವನ್ನಪ್ಪಿವೆ. ಲಕ್ಷಾಂತರ ಜಾನುವಾರು ರೋಗಗ್ರಸ್ತವಾಗಿವೆ. ರಾಜ್ಯ ಸರ್ಕಾರದ ಪರಿಹಾರದ ಜೊತೆಗೆ ಕೇಂದ್ರ ಸರ್ಕಾರವೂ ಪರಿಹಾರ ನೀಡಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದರು. ಮುಖಂಡರಾದ ಟಿ.ಎಂ.ವೆಂಕಟೇಶ್, ಕುರ್ಕಿ ದೇವರಾಜ್, ಪಿ.ಆರ್. ನವೀನ್ ಕುಮಾರ್, ಗಂಗಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT