ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ವರ್ಷವಾದರೂ ದುರಸ್ತಿ ಕಾಣದ ಸೇತುವೆ !

Last Updated 8 ಆಗಸ್ಟ್ 2011, 10:35 IST
ಅಕ್ಷರ ಗಾತ್ರ

ಕೋಲಾರ: ಇದು ರಸ್ತೆ ಮತ್ತು ಸೇತುವೆ. ಹಾಸಿದ ಚಪ್ಪಡಿ ಕಲ್ಲುಗಳು ವರ್ಷದಿಂದ ಒಂದೊಂದಾಗಿ ಕುಸಿಯುತ್ತಿವೆ. ಈ ರಸ್ತೆ ಕೆಳಗೆ ರಾಜಕಾಲುವೆ ಇದೆ. ಹಳ್ಳಕ್ಕೆ ಬಿದ್ದರೂ ಅಪಾಯ, ರಸ್ತೆಯ ಅಂಚಿಗೆ ತಲುಪಿ ಜಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಇಬ್ಬರು ಮಾತ್ರ ಸಂಚರಿಸಲು ಸಾಧ್ಯವಿರುವ ರಸ್ತೆಯ ಒಂದು ಬದಿಯಲ್ಲಿ ಆಟೋ ರಿಕ್ಷಾಗಳು ಸಂಚರಿಸುತ್ತವೆ. ಬೃಹತ್ ವಾಹನಗಳ ಸಂಚಾರ ನಿಂತಿದೆ.

ಒಬ್ಬರು ನಡೆಯುವಷ್ಟು ಮಾತ್ರ ಸ್ಥಳವಿರುವ ಮತ್ತೊಂದು ಬದಿಯಲ್ಲಿ ಜನ ಓಡಾಡುತ್ತಾರೆ. ವಿದ್ಯಾರ್ಥಿಗಳು ಸೈಕಲ್ ತುಳಿಯುತ್ತಾರೆ. ಅಪಾಯದ ಅಂಚಿನಲ್ಲೆ ಜನ ಮತ್ತು ವಾಹನಗಳು ಎರಡು ವರ್ಷದಿಂದ ಸಂಚರಿಸುತ್ತಿದ್ದರೂ ನಗರಸಭೆ ಮಾತ್ರ ಗಮನ ಹರಿಸಿಲ್ಲ.

ದೊಡ್ಡಪೇಟೆ ವೃತ್ತ ದಾಟಿ ಎಂ.ಬಿ.ರಸ್ತೆಯನ್ನು ಮುಟ್ಟಿ ಟೋಲ್‌ಗೇಟ್ ಕಡೆಗೆ ತೆರಳಬೇಕೆನ್ನುವವರಿಗೆ ಇರುವ ಸಂಪರ್ಕ ರಸ್ತೆ ಇದು. ಟಿಪ್ಪು ರಸ್ತೆ ಎಂಬುದು ಹೆಸರು. ಈ ರಸ್ತೆಯುದ್ದಕ್ಕೂ ಮರಗೆಲಸದ ಅಂಗಡಿಗಳಿವೆ. ಮೆಕ್ಯಾನಿಕ್ ಅಂಗಡಿಗಳಿವೆ. ರಸ್ತೆಯ ಕೊನೇ ತುದಿಯಲ್ಲಿ ಲೋಕೋ ಪಯೋಗಿ ಇಲಾಖೆಯ ವಸತಿಗೃಹಗಳಿವೆ. ಮತ್ತೊಂದು ಬದಿಗೆ ಜಿಲ್ಲಾ ಪಂಚಾಯಿತಿ ಕಚೇರಿ ಇದೆ. ಗಲ್‌ಪೇಟೆಗೆ ತೆರಳಲು ಒಳ ರಸ್ತೆಗಳಿವೆ.

ಡಾಂಬರು ಕಂಡು ಎಷ್ಟೋ ವರ್ಷವಾಗಿರುವ ಈ ರಸ್ತೆಯಲ್ಲಿ ಇತ್ತೀಚೆಗಷ್ಟೆ ಚರಂಡಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿ ನಡೆಯುತ್ತಿದ್ದ ಅಷ್ಟೂ ತಿಂಗಳು, ಹಳ್ಳ-ಕೊಳ್ಳಗಳಿಂದ ಕೂಡಿರುವ ಈ ರಸ್ತೆಯಲ್ಲಿ ಜನ-ವಾಹನ ಸಂಚಾರ ಹಿಂಸೆಯ ವಿಚಾರವಾಗಿತ್ತು. ಆಗಲೂ ಸೇತುವೆ ವಿಪರೀತ ಅಪಾಯಕಾರಿಯಾಗಿರಲಿಲ್ಲ. ಒಂದೆರಡು ಚಪ್ಪಡಿ ಕಲ್ಲುಗಳು ಮಾತ್ರ ಕುಸಿದಿದ್ದವು. ಜನರೂ ಹೆಚ್ಚು ಆತಂಕ ಪಡದೆ ಸಂಚರಿಸುತ್ತಿದ್ದರು.

ಈಗ ಸನ್ನಿವೇಶ ಬದಲಾಗಿದೆ. ಈ ಸೇತುವೆ- ರಸ್ತೆಯ ಮಧ್ಯೆಯೇ ಎರಡಾಗಿ ಸೀಳಿಕೊಂಡ ಬಾವಿಯೊಂದು ಬಾಯಿ ತೆರೆದಂತಾಗಿದೆ. ಎರಡು ಬೃಹತ್ ಹಳ್ಳಗಳ ಅಕ್ಕ-ಪಕ್ಕ ಇರುವ ಅಲ್ಪ ಜಾಗವೇ ಉಳಿದ ರಸ್ತೆ ಎಂದು ಭಾವಿಸಿ ಜನ ಸಂಚರಿಸುತ್ತಿದ್ದಾರೆ.

ಇಂಧನ ಮತ್ತು ಸಮಯ ಉಳಿಸುವ ಲೆಕ್ಕಾಚಾರ ಪ್ರಜ್ಞೆ ವಾಹನ ಸವಾರರಿಗೆ ಧೈರ್ಯ ಕೊಟ್ಟಿರುವ ಪರಿಣಾಮ ಆಟೊ ರಿಕ್ಷಾ ಚಾಲಕರು, ದ್ವಿಚಕ್ರ ವಾಹನ ಸವಾರರೂ ಸಾಹಸ ಮೆರೆಯುತ್ತಿದ್ದಾರೆ. ಶಾಲಾ ಬಾಲಕ-ಬಾಲಕಿಯರಲ್ಲಿ ಹೆಚ್ಚಿನವರು ಧೈರ್ಯ ಸಾಲದೆ ಈ ಹಳ್ಳ ಬಂದಾಗ ಸೈಕಲ್‌ನಿಂದ ಇಳಿದು ನಡೆದು ಹೋಗುತ್ತಾರೆ. ನಗರಸಭೆಯ ಆಡಳಿತಕ್ಕೆ ಕನ್ನಡಿ ಹಿಡಿದಂತೆ ಇಲ್ಲಿ ಕಲ್ಲುಗಳು ಉದುರುತ್ತಿವೆ.

ಪ್ರತಿಭಟನೆ: ಈ ರಸ್ತೆಯ ಅವ್ಯವಸ್ಥೆಯ ಬಗ್ಗೆ ರೋಸಿ ಹೋಗಿದ್ದ ಸುತ್ತಮುತ್ತಲಿನ ಅಂಗಡಿಗಳ ಮಾಲಿಕರು, ನಿವಾಸಿಗಳು ಎರಡು ವರ್ಷದ ಹಿಂದೆಯೇ ದಿಢೀರನೆ ರಸ್ತೆ ತಡೆ ಮಾಡಿ ಪ್ರತಿಭಟಿಸಿದ್ದರು. ನಗರಸಭೆ ಸದಸ್ಯರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಧರಣಿ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಸೇತುವೆ ಮತ್ತು ಆ ಮಾರ್ಗದ ರಸ್ತೆಗಳ ದುರಸ್ತಿ  ಕೂಡಲೇ ಮಾಡುವುದಾಗಿ ಭರವಸೆ ನೀಡಿ ಹೋಗಿದ್ದರು.

ಸೇತುವೆ ಸಮೀಪದ ರಸ್ತೆ ಬದಿಯಲ್ಲಿ ಬಾಯ್ತೆರೆದ ಚರಂಡಿ ಯನ್ನು ಮುಚ್ಚಿದ್ದು ಹೊರತುಪಡಿಸಿದರೆ, ಸೇತುವೆ ರಿಪೇರಿ ಕೆಲಸ ನಡೆಯಲೇ ಇಲ್ಲ. ಆಗ ಒಂದೇ ಕಲ್ಲು ಕುಸಿದು ಚಿಕ್ಕ ಹಳ್ಳ ಏರ್ಪಟ್ಟಿತ್ತು. ಆದರೆ ಜನ ಮತ್ತು ವಾಹನ ಸಂಚಾರ ಹೆಚ್ಚಾ ದಂತೆ ಸೇತುವೆಯ ಭಾರ ತಡೆಯುವ ಸಾಮರ್ಥ್ಯವೂ ಕಡಿಮೆ ಯಾಗಿ ಈಗ ಮೂರ‌್ನಾಲ್ಕು ಕಲ್ಲುಗಳು ಕುಸಿದಿರುವುದರಿಂದ ಆತಂಕದಿಂದ ಓಡಾಡುವಂತಾಗಿದೆ ಎನ್ನುತ್ತಾರೆ ನಿವಾಸಿ ಅಬ್ದುಲ್ಲಾ.

ಲಕ್ಷಾಂತರ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಕಟ್ಟಡಗಳ ಮಾಲಿಕರಿಂದ ಕಟ್ಟುನಿಟ್ಟಾಗಿ ತೆರಿಗೆ ಸಂಗ್ರ ಹಿಸುತ್ತಿರುವ ನಗರಸಭೆಯ ನೂತನ ಆಯುಕ್ತೆ ಶಾಲಿನಿ ಯವರು ಈ ರಸ್ತೆ-ಸೇತುವೆಯನ್ನು ದುರಸ್ತಿಗೊಳಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂಬುದು ನಾಜಿರ್ ಅವರ ಮನವಿ.  ಎರಡೂವರೆ ವರ್ಷದಿಂದ ರಸ್ತೆ ಮತ್ತು ಒಳಚರಂಡಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಲೇ ಇದ್ದರೂ ಈ ರಸ್ತೆಯ ಅಭಿವೃದ್ಧಿಗೆ ಯಾರೊಬ್ಬರೂ ಮನಸು ಮಾಡದಿರುವುದು ವಿಷಾದನೀಯ ಎಂಬುದು ಅನ್ಸರ್ ಅವರ ನುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT