ಗುರುವಾರ , ಏಪ್ರಿಲ್ 22, 2021
30 °C

20 ದಿನಗಳಾದರೂ ಗದಗಿಗೆ ನೀರಿಲ್ಲ

ಆರ್.ವೀರೇಂದ್ರ ಪ್ರಸಾದ್ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಒಂದೂವರೆ ಟಿಎಂಸಿ ನೀರು ಬಿಟ್ಟಿದ್ದಾರೆ. ಆ ನೀರು ಅರ್ಧ ದಾರಿಯಷ್ಟು ಕ್ರಮಿಸಿದೆ. ಕೊರ್ಲಹಳ್ಳಿಯ ಜ್ಯಾಕ್‌ವೆಲ್ ಹತ್ತಿರಕ್ಕೆ ಬಂದ ತಕ್ಷಣ ಪಂಪಿಂಗ್ ಪ್ರಾರಂಭವಾಗುತ್ತದೆ. ನಾಳೆಯೊಳಗೆ ಗದಗ-ಬೆಟಗೇರಿ ಅವಳಿ ನಗರಕ್ಕೆ ನೀರು ಖಂಡಿತ ಪೂರೈಕೆಯಾಗುತ್ತದೆ. - ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಕೆಯುಡಬ್ಲ್ಯೂಎಸ್ ಅಧಿಕಾರಿಗಳು ಈ ರೀತಿಯಾಗಿ ಹೇಳುವುದಕ್ಕೆ ಪ್ರಾರಂಭಿಸಿ ಆಗಲೇ 10 ದಿನಗಳ ಮೇಲಾಯಿತು ಹೊರತು ಗದಗ-ಬೆಟಗೇರಿ ನಗರಕ್ಕೆ ಒಂದು ಹನಿ ನೀರು ಬಂದಿಲ್ಲ.ತುಂಗಭದ್ರಾ ನದಿಯ ನೀರನ್ನು ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಬಳಿ ಜ್ಯಾಕ್‌ವೆಲ್ ಮೂಲಕ ಅವಳಿ ನಗರಕ್ಕೆ ಪೂರೈಕೆ ಮಾಡಲಾಗುತ್ತಿದೆ. ಬೇಸಿಗೆಯಾದ್ದರಿಂದ ನದಿಯಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿದೆ. ಅಲ್ಲಲ್ಲಿ ಗುಂಡಿಯಲ್ಲಿ ನಿಂತಿರುವ ನೀರು ಗಬ್ಬು ನಾರುತ್ತಿದೆ. ಈ ಕಾರಣದಿಂದಾಗಿ ನೀರು ಪೂರೈಕೆ ಸ್ಥಗಿತಗೊಂಡು 20 ದಿನಗಳ ಮೇಲಾಯಿತು.ಈಗಂತೂ ನಗರದ ಜನರೆಲ್ಲರೂ ದಿನದ ಬಹುಪಾಲು ಸಮಯವನ್ನು ಮೈಲುಗಟ್ಟಲೆ ದೂರದಿಂದ ನೀರನ್ನು ತರುವ ಕೆಲಸಕ್ಕೆ ವಿನಿಯೋಗ ಮಾಡುತ್ತಿದ್ದಾರೆ. ‘ಕುಂಭಕರ್ಣ’ನ ನಿದ್ದೆಯಿಂದ ಎದ್ದಿರುವ ನಗರಸಭೆ 35 ವಾರ್ಡ್‌ಗೆ ತಲಾ ಒಂದು ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡುತ್ತಿದೆ. ಇದು ‘ರಾವಣನ ಹೊಟ್ಟೆಗೆ ಆರು ಕಾಸಿನ ಮಜ್ಜಿಗೆ’ ಎಂಬಂತೆ ಆಗಿದೆ. ಇರುವ ಬೋರ್‌ವೆಲ್‌ಗಳ ಮುಂದೆ ನೂರಾರು ಜನ ಸರದಿಯಲ್ಲಿ ನಿಂತಿರುತ್ತಾರೆ. ಎರಡು ಕೊಡ ನೀರು ತಗೆದುಕೊಂಡು ಹೋಗಲು ಮುರ್ನಾಲ್ಕು ಗಂಟೆ ಬಿಸಿಲಿನಲ್ಲಿ ನಿಲ್ಲುವಂತಹ ಪರಿಸ್ಥಿತಿ ತಲೆದೂರಿದೆ.ಗದಗ-ಬೆಟಗೇರಿ, ಮುಂಡರಗಿ ಸೇರಿದಂತೆ ಸುಮಾರು 18ಕ್ಕೂ ಹೆಚ್ಚು ಗ್ರಾಮಗಳಿಗೆ ತುಂಗಭದ್ರಾ ನದಿಯ ನೀರು ಪೂರೈಕೆಯಾಗುತ್ತದೆ. ಕಳೆದ ವರ್ಷ ಹಾಗೂ ಅದರ ಹಿಂದಿನ ವರ್ಷಗಳಲ್ಲಿ ಫೆಬ್ರುವರಿ ತಿಂಗಳಲ್ಲಿ ಜಲಾಶಯದಿಂದ ನದಿಗೆ ನೀರನ್ನು ಬಿಡಿಸಲಾಗಿತ್ತು. ಆಗ ನದಿಯಲ್ಲಿ ತಕ್ಕ ಮಟ್ಟಿಗೆ ನೀರು ಇದ್ದ ಕಾರಣ ಸರಾಗವಾಗಿ ಹರಿದುಬಂದು ಕೊರ್ಲಹಳ್ಳಿಗೆ ಸೇರಿತ್ತು. ಆದರೆ ಈಗ ನದಿಯಲ್ಲ ಬತ್ತಿ ಹೋದ ನಂತರ ಜಲಾಶಯದಿಂದ ನೀರನ್ನು ಬಿಡಿಸಿದ್ದಾರೆ. ಇದರಿಂದಾಗಿ ನೀರಿನ ಸಮಸ್ಯೆ ಉಲ್ಬಣಿಸಿದೆ ಎನ್ನುತ್ತಾರೆ ನಗರಸಭೆ ವಿರೋಧ ಪಕ್ಷದ ನಾಯಕ ಎಂ.ಎಂ. ಹಿರೇಮಠ.ಭದ್ರಾ ಜಲಾಶಯದಿಂದ ಬಿಡುಗಡೆಯಾಗಿರುವ ಒಂದೂವರೆ ಟಿಎಂಸಿ ನೀರನ್ನು ಸಂಗ್ರಹಿಸಿಕೊಳ್ಳಲು ಕೊರ್ಲಹಳ್ಳಿಯಲ್ಲಿ ಉಸುಕಿನ ಬ್ಯಾರೇಜ್ ನಿರ್ಮಾಣ ಮಾಡಿಕೊಂಡು ಕೆಯುಡಬ್ಲ್ಯುಎಸ್ ಸಿಬ್ಬಂದಿ ಕಾಯುತ್ತಿದ್ದಾರೆ. ಆದರೆ ನೀರು ಮಾತ್ರ ಇನ್ನು ಮುಖ ತೋರಿಲ್ಲ. ಯುಗಾದಿ ಹಬ್ಬಕ್ಕೂ ಮುನ್ನಾ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ‘ಯುಗಾದಿ ಹಬ್ಬಕ್ಕೆ ಗದಗ-ಬೆಟಗೇರಿ ನಗರಕ್ಕೆ ತುಂಗಭದ್ರಾ ನದಿ ನೀರು ಗ್ಯಾರಂಟಿ’ ಎಂದಿದ್ದರು. ಹಬ್ಬವಾಗಿ ಮೂರು ದಿನವಾಯಿತು.ನೀರು ಹಮ್ಮಿಗಿ ಬ್ಯಾರೇಜ್ ಹತ್ತಿರಕ್ಕೆ ಬಂದಿದೆ. ಗುರುವಾರ ರಾತ್ರಿ ಕೊರ್ಲಹಳ್ಳಿಗೆ ಬರುತ್ತದೆ. ಏಳೆಂಟು ಗಂಟೆ ಪಂಪಿಂಗ್ ಮಾಡಿದ ತರುವಾಯ ನೀರು ಪೂರೈಕೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಶಂಕರನಾರಾಯಣ ಪುನರ್ಚುರಿಸಿದ್ದಾರೆ. ಆದರೆ ಗದುಗಿಗೆ ನೀರು ಮಾತ್ರ ‘ನಾಳೆ ಬರುತ್ತೆ’ ಎನ್ನುವಂತಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.