ಸೋಮವಾರ, ಏಪ್ರಿಲ್ 19, 2021
25 °C

21ರಿಂದ ರಾಜ್ಯಕ್ಕೆ ಬರ ಅಧ್ಯಯನ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ:  ಕಳೆದ ನಲವತ್ತು ವರ್ಷಗಳಿಂದ ಕಂಡರಿಯದ ಬರಗಾಲಕ್ಕೆ ಸಿಕ್ಕಿರುವ ರಾಜ್ಯದ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರ ಸರ್ಕಾರ ಹತ್ತು ಮಂದಿ ಪರಿಣತರ ತಂಡ ಕಳುಹಿಸಲು ನಿರ್ಧರಿಸಿದೆ.`ಸಣ್ಣ ರೈತರ ಕೃಷಿ ವ್ಯಾಪಾರ ಒಕ್ಕೂಟ~ದ ವ್ಯವಸ್ಥಾಪಕ ನಿರ್ದೇಶಕ ಪ್ರವೇಶ ಶರ್ಮ ನೇತೃತ್ವದ ಪರಿಣತರ ತಂಡ ಈ ತಿಂಗಳ 21ರಿಂದ 5 ದಿನ  ಪ್ರವಾಸ ಕೈಗೊಂಡು ಬರ ಸ್ಥಿತಿ ಕುರಿತು ಪರಿಶೀಲನೆ ನಡೆಸಲಿದೆ.ಕೇಂದ್ರದ ಪರಿಣತರು ಎರಡು ಗುಂಪಿನಲ್ಲಿ  ಬರಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಮೊದಲ ಗುಂಪು ಚಾಮರಾಜ ನಗರ, ಚಿತ್ರದುರ್ಗ, ತುಮಕೂರು, ಎರಡನೇ ಗುಂಪು ಗದಗ, ಕೊಪ್ಪಳ ಹಾಗೂ ವಿಜಾಪುರ ಜಿಲ್ಲೆಗಳಿಗೆ ಭೇಟಿ ನೀಡಲಿದೆ. ಅನಂತರ ದೆಹಲಿಗೆ ಹಿಂತಿರುಗಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

 

ತಂಡದ ವರದಿ ಆಧರಿಸಿ ಕೃಷಿ ಸಚಿವ ಶರದ್ ಪವಾರ್ ನೇತೃತ್ವದ ಸಚಿವರ ಉನ್ನತಾಧಿಕಾರ ಸಮಿತಿ ಹಣ ಬಿಡುಗಡೆ ತೀರ್ಮಾನ ಕೈಗೊಳ್ಳಲಿದೆ. ಪರಿಣತರ ತಂಡಕ್ಕೆ ಅಗತ್ಯವಿರುವ ಮಾಹಿತಿ ಒದಗಿಸಲು ಕಂದಾಯ (ವಿಪತ್ತು ನಿರ್ವಹಣೆ) ಕಾರ್ಯದರ್ಶಿ ಅಮರ ನಾರಾಯಣ ದೆಹಲಿಗೆ ಆಗಮಿಸಿದ್ದಾರೆ. ಗುರುವಾರ ತಂಡದ ಮುಖ್ಯಸ್ಥ ಹಾಗೂ ಸದಸ್ಯರನ್ನು ಅವರನ್ನು ಭೇಟಿ ಮಾಡಲಿದ್ದಾರೆ.ರಾಜ್ಯದಲ್ಲಿ ಮಳೆ ಅಭಾವವಾಗಿದ್ದು ಶೇ 43ರಷ್ಟು ಕೃಷಿ ಭೂಮಿಯಲ್ಲಿ ಬಿತ್ತನೆ ಆಗಿಲ್ಲ. ಮೇವು ಹಾಗೂ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ರೂ 11,489 ಕೋಟಿ ಹಣವನ್ನು ರಾಜ್ಯಕ್ಕೆ ಬಿಡುಗಡೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಮನವಿ ಸಲ್ಲಿಸಿದೆ. ಈ ಹಣದಲ್ಲಿ ತುರ್ತು ಕೆಲಸಗಳಿಗೆ ರೂ 7672 ಕೋಟಿ ಹಾಗೂ ದೀರ್ಘಾವಧಿ ಯೋಜನೆಗಳಿಗೆ ರೂ 3817 ಕೋಟಿ ರೂಪಾಯಿ ನೆರವು ನೀಡುವಂತೆ ಕೇಂದ್ರಕ್ಕೆ ರಾಜ್ಯ ಮನವಿ ಮಾಡಿದೆ.ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡ ತಕ್ಷಣ ಬರಗಾಲ ಪರಿಸ್ಥಿತಿಗೆ ಎರಡು ಸಾವಿರ ಕೋಟಿ ರೂಪಾಯಿ ಮಧ್ಯಂತರ ಪರಿಹಾರ ಬಿಡುಗಡೆ ಮಾಡಬೇಕೆಂದು ಪ್ರಧಾನಿ ಮನಮೋಹನ್‌ಸಿಂಗ್ ಅವರಿಗೆ ಮನವಿ ಸಲ್ಲಿಸಿದರು. ಅನಂತರ ಸಭೆ ಸೇರಿದ್ದ ಸಚಿವರ ಉನ್ನತಾಧಿಕಾರ ಸಮಿತಿ ವಿವಿಧ ಯೋಜನೆಗಳಡಿ ರಾಜ್ಯಕ್ಕೆ ರೂ 224 ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ.ಕೃಷಿ ಸಚಿವ ಶರದ್ ಪವಾರ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್ ರಾಜ್ಯಕ್ಕೆ ಭೇಟಿ ನೀಡಿ ಬರಗಾಲ ಪರಿಸ್ಥಿತಿ ಕುರಿತು ಶೆಟ್ಟರ್ ಜತೆ ಚರ್ಚೆ ನಡೆಸಿದ್ದರು. ಬರಗಾಲ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಈಗಾಗಲೇ ಕೇಂದ್ರ ಸರ್ಕಾರ ಹೇಳಿದೆ. ಮುಖ್ಯಮಂತ್ರಿ ದೆಹಲಿಗೆ ಧಾವಿಸುತ್ತಿದ್ದು ಶುಕ್ರವಾರ ಸಂಸತ್ ಸದಸ್ಯರನ್ನು ಭೇಟಿ ಮಾಡಿ ಬರಗಾಲ ಮತ್ತಿತರ ವಿಷಯಗಳನ್ನು ಕುರಿತು ಚರ್ಚೆ ನಡೆಸಲಿದ್ದಾರೆ.

3ನೇ ಪರಿಣತರ ತಂಡ

ಎರಡು ವರ್ಷಗಳಲ್ಲಿ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಮೂರನೇ ಪರಿಣತರ ತಂಡ ಇದು. ಕಳೆದ ವರ್ಷ ಎರಡು ಸಲ ತಜ್ಞರ ತಂಡ ರಾಜ್ಯಕ್ಕೆ ಭೇಟಿ ನೀಡಿತ್ತು. ಮೊದಲ ಸಲ ರೂ 70 ಕೋಟಿ ಹಾಗೂ ಎರಡನೇ ಸಲ ರೂ 284 ಕೋಟಿ ರೂಪಾಯಿ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿತ್ತು.

  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.