ಭಾನುವಾರ, ಜನವರಿ 19, 2020
20 °C
ಅದಿರು ಕಳ್ಳಸಾಗಣೆ ಹಗರಣ

22 ಮೊಕದ್ದಮೆಗೆ ಸಿಬಿಐ ಸಿದ್ಧತೆ

ಪ್ರಜಾವಾಣಿ ವಾರ್ತೆ/ವಿ.ಎಸ್.ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಅರಣ್ಯ ಪ್ರದೇಶಗಳಿಂದ 50.79 ಲಕ್ಷ ಟನ್ ಕಬ್ಬಿಣದ ಅದಿರನ್ನು ಕಳ್ಳಸಾಗಣೆ ಮಾಡಿ, ಅಕ್ರಮವಾಗಿ ರಫ್ತು ಮಾಡಿದ ಆರೋಪದ ಮೇಲೆ 22 ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿ ತನಿಖೆ ನಡೆಸಬೇಕಿದೆ ಎಂದು ಸಿಬಿಐ ಸುಪ್ರೀಂಕೋರ್ಟ್‌ಗೆ ಇತ್ತೀಚೆಗೆ ವರದಿ ಸಲ್ಲಿಸಿದೆ. ತನಿಖಾ ಸಂಸ್ಥೆ ನಡೆಸಿದ ಪ್ರಾಥಮಿಕ ವಿಚಾರಣೆಯಲ್ಲಿ ಪತ್ತೆಯಾದ ಅಂಶಗಳನ್ನು ಆಧರಿಸಿ ಈ ವರದಿ ಸಲ್ಲಿಸಲಾಗಿದೆ.2009ರ ಜನವರಿ 1ರಿಂದ 2010ರ ಮೇ 31ರ ಅವಧಿಯಲ್ಲಿ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಅರಣ್ಯ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ವಿದೇಶಕ್ಕೆ ಅದಿರು ರಫ್ತು ಮಾಡಿರುವ ಕುರಿತು ಪ್ರಾಥಮಿಕ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಪ್ರಾಥಮಿಕ ವಿಚಾರಣೆ ಪೂರ್ಣಗೊಳಿಸಿರುವ ಸಿಬಿಐ ಬೆಂಗಳೂರು ಭ್ರಷ್ಟಾಚಾರ ನಿಯಂತ್ರಣ ಘಟಕದ ಅಧಿಕಾರಿಗಳು, 22 ಹೊಸ ಮೊಕದ್ದಮೆಗಳನ್ನು ದಾಖಲಿಸಲು ಸಿದ್ಧತೆ ನಡೆಸಿದ್ದಾರೆ.ಒಂದೂವರೆ ವರ್ಷದ ಅವಧಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಸಾಗಣೆ ಪರವಾನಗಿ ಪಡೆಯದೇ 50.79 ಲಕ್ಷ ಟನ್ ಕಬ್ಬಿಣದ ಅದಿರನ್ನು ಬೇಲೆಕೇರಿ ಬಂದರಿಗೆ ಸಾಗಿಸಲಾಗಿತ್ತು. ನಂತರ ವಿವಿಧ ರಾಷ್ಟ್ರಗಳಿಗೆ ಈ ಅದಿರನ್ನು ಅಕ್ರಮವಾಗಿ ರಫ್ತು ಮಾಡಲಾಗಿತ್ತು ಎಂಬುದು ಲೋಕಾಯುಕ್ತ ತನಿಖೆಯಲ್ಲಿ ಪತ್ತೆಯಾಗಿತ್ತು. ಈ ಕುರಿತು ಸಿಬಿಐ ತನಿಖೆಗೆ ಆದೇಶಿಸುವಂತೆ ಕೋರಿ ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.ಹಿರೇಮಠ ಅವರ ಅರ್ಜಿಯಲ್ಲಿನ ಅಂಶಗಳ ಕುರಿತು ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಉನ್ನತಾಧಿಕಾರ ಸಮಿತಿಗೆ (ಸಿಇಸಿ) ಆದೇಶಿಸಿತ್ತು. ವಿಚಾರಣೆ ನಡೆಸಿದ ಸಮಿತಿ 2012ರ ಏಪ್ರಿಲ್ 27 ಮತ್ತು ಸೆಪ್ಟೆಂಬರ್ 5ರಂದು ಎರಡು ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಈ ವರದಿಗಳನ್ನು ಮಾನ್ಯ ಮಾಡಿದ್ದ ನ್ಯಾಯಾಲಯ, ಸಿಬಿಐ ತನಿಖೆಗೆ ಆದೇಶಿಸಿತ್ತು.ಐದು ಲಕ್ಷ ಟನ್‌ಗಿಂತಲೂ ಹೆಚ್ಚು ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ್ದ ಐಎಲ್‌ಸಿ ಇಂಡಸ್ಟ್ರೀಸ್, ಡ್ರೀಮ್ ಲಾಜಿಸ್ಟಿಕ್ಸ್, ಎಸ್.ಬಿ.ಲಾಜಿಸ್ಟಿಕ್ಸ್ ಮತ್ತು ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪೆನಿ ವಿರುದ್ಧ ನೇರವಾಗಿ ಪ್ರಥಮ ಮಾಹಿತಿ ವರದಿ ದಾಖಲು ಮಾಡಿ ತನಿಖೆ ಆರಂಭಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಅದರಂತೆ ನಾಲ್ಕು ಮೊಕದ್ದಮೆ ದಾಖಲಿಸಿ ತನಿಖೆ ಆರಂಭಿಸಿದ್ದ ಸಿಬಿಐ, ಎಸ್.ಬಿ.ಲಾಜಿಸ್ಟಿಕ್ಸ್ ವಿರುದ್ಧದ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಆರೋಪಪಟ್ಟಿ ಸಲ್ಲಿಸಿದೆ.ಒಂದು ಲಕ್ಷ ಟನ್‌ನಿಂದ ಐದು ಲಕ್ಷ ಟನ್‌ವರೆಗೆ ಅಕ್ರಮ ರಫ್ತು ಮಾಡಿದ್ದ 18 ಕಂಪೆನಿಗಳು ಹಾಗೂ ಒಂದು ಲಕ್ಷ ಟನ್‌ಗಿಂತ ಕಡಿಮೆ ಪ್ರಮಾಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ್ದ 51 ಕಂಪೆನಿಗಳ ವಿರುದ್ಧ ಪ್ರಾಥಮಿಕ ವಿಚಾರಣೆ ನಡೆಸುವಂತೆ ನ್ಯಾಯಾಲಯ ಆದೇಶದಲ್ಲಿ ತಿಳಿಸಿತ್ತು. ಅಗತ್ಯ ಕಂಡುಬಂದಲ್ಲಿ 2009ರ ಜನವರಿ 1ಕ್ಕಿಂತಲೂ ಹಿಂದೆ ನಡೆದ ಅಕ್ರಮ ಅದಿರು ರಫ್ತಿನ ಬಗ್ಗೆಯೂ ತನಿಖೆಯನ್ನು ವಿಸ್ತರಿಸಲು ಮುಕ್ತ ಅವಕಾಶ ನೀಡಿತ್ತು.ಸಿಬಿಐ ಬೆಂಗಳೂರು ಭ್ರಷ್ಟಾಚಾರ ನಿಯಂತ್ರಣ ಘಟಕದ ಮುಖ್ಯಸ್ಥರಾಗಿರುವ ಡಿಐಜಿ ಆರ್. ಹಿತೇಂದ್ರ ನೇತೃತ್ವದ ತನಿಖಾ ತಂಡ ಪ್ರಾಥಮಿಕ ತನಿಖೆ ಪೂರ್ಣಗೊಳಿಸಿ, ಮುಚ್ಚಿದ ಲಕೋಟೆಯಲ್ಲಿ ಇತ್ತೀಚೆಗೆ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಿದೆ. 22 ಕಂಪೆನಿಗಳು ಗಂಭೀರ ಸ್ವರೂಪದ ಅಕ್ರಮ ಎಸಗಿರುವ ಕುರಿತು ಪ್ರಾಥಮಿಕ ವಿಚಾರಣೆ ವೇಳೆ ದಾಖಲೆಗಳು ಲಭ್ಯವಾಗಿವೆ. ಈ ಎಲ್ಲ ಕಂಪೆನಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಲು ಸಿಬಿಐ ನಿರ್ಧರಿಸಿದೆ ಎಂದು ಮೂಲ ತಿಳಿಸಿವೆ.ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿರುವುದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪರವಾನಗಿ ಇಲ್ಲದೆ ಅದಿರನ್ನು ಬೇಲೆಕೇರಿ ಬಂದರಿಗೆ ಸಾಗಿಸಿರುವುದು, ಅಲ್ಲಿಂದ ವಿದೇಶಗಳಿಗೆ ಕಳ್ಳಸಾಗಣೆ ಮಾಡಿರುವ ಬಗ್ಗೆ ಪ್ರಾಥಮಿಕ ವಿಚಾರಣೆ ವೇಳೆ ಸಿಬಿಐ ಅಧಿಕಾರಿಗಳು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ. ಕೆಲವು ಪ್ರಭಾವಿ ವ್ಯಕ್ತಿಗಳು ಅದಿರಿನ ಕಳ್ಳಸಾಗಣೆಯಿಂದ ಭಾರಿ ಪ್ರಮಾಣದ ಆರ್ಥಿಕ ಲಾಭ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಸಿಬಿಐ ಕಲೆಹಾಕಿದೆ. ಈ ಸಾಕ್ಷ್ಯಗಳನ್ನು ಆಧರಿಸಿ ಎಫ್‌ಐಆರ್ ದಾಖಲಿಸಲು ಭರದ ಸಿದ್ಧತೆ ನಡೆದಿದೆ.ಅದಿರು ಕಳ್ಳ ಸಾಗಣೆಯಲ್ಲಿ ಭಾಗಿಯಾದ ಬಹುತೇಕ ಕಂಪೆನಿಗಳನ್ನು ಸುಳ್ಳು ವಿಳಾಸ ನೀಡಿ ನೋಂದಣಿ ಮಾಡಲಾಗಿತ್ತು. ಅಲ್ಲದೇ ಕಾರ್ಮಿಕರು, ಚಾಲಕರು, ಸಣ್ಣಪುಟ್ಟ ಉದ್ಯೋಗ ಮಾಡುವವರ ಹೆಸರಿನಲ್ಲಿ ಈ ಕಂಪೆನಿಗಳನ್ನು ಅಸ್ತಿತ್ವಕ್ಕೆ ತರಲಾಗಿತ್ತು. ಈ ಕುರಿತು ಲೋಕಾಯುಕ್ತ ತನಿಖೆ ಚುರುಕಾಗುತ್ತಿದ್ದಂತೆ ಕಂಪೆನಿಗಳ ಬಾಗಿಲು ಮುಚ್ಚಲಾಗಿತ್ತು ಎಂಬುದು ಸಿಬಿಐ ಪ್ರಾಥಮಿಕ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಪ್ರತಿಕ್ರಿಯಿಸಿ (+)